ಬೆಂಗಳೂರಿನಲ್ಲಿ ದಂಪತಿ ಆತ್ಮಹತ್ಯೆ: ಪತಿ ನೇಣಿಗೆ ಶರಣಾದ ಬೆನ್ನಲ್ಲೇ, 17ನೇ ಮಹಡಿಯಿಂದ ಜಿಗಿದ ಪತ್ನಿ! | Couple Suicide

Couple Suicide
Couple Suicide
Published on
ಬೆಂಗಳೂರು: ಪತಿ ನೇಣಿಗೆ ಶರಣಾಗಿರುವುದನ್ನು ಕಂಡು ಆಘಾತಕ್ಕೊಳಗಾದ ಪತ್ನಿ, ಕೆಲವೇ ನಿಮಿಷಗಳಲ್ಲಿ ಅಪಾರ್ಟ್‌ಮೆಂಟ್‌ನ 17ನೇ ಮಹಡಿಯಿಂದ ಜಿಗಿದು ಪ್ರಾಣ ಬಿಟ್ಟ(Couple Suicide) ಘಟನೆ ಸಿಲಿಕಾನ್ ಸಿಟಿಯಲ್ಲಿ ಮಂಗಳವಾರ ನಡೆದಿದೆ.
ತೆಲಂಗಾಣದ ಸಿದ್ದಿಪೇಟೆ ಮೂಲದ ಭಾನು ಚಂದರ್ ರೆಡ್ಡಿ ಕುಂಟಾ (32) ಮತ್ತು ಬಿಬಿ ಶಾಜಿಯಾ ಸಿರಾಜ್ (31) ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿದ್ದರು. ಸೋಮವಾರ ಭಾನು ಚಂದರ್ ತಮ್ಮ ಮನೆಯ ಕೊಠಡಿಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೊಠಡಿಯ ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ಗಮನಿಸಿದ ಶಾಜಿಯಾ, ಎಷ್ಟು ಬಾರಿ ಕೂಗಿದರೂ ಪತಿ ಸ್ಪಂದಿಸದಿದ್ದಾಗ ಗಾಬರಿಗೊಂಡಿದ್ದಾರೆ. ತಕ್ಷಣ ನೆರೆಹೊರೆಯವರು ಮತ್ತು ಸೆಕ್ಯೂರಿಟಿ ಸಿಬ್ಬಂದಿಯನ್ನು ಸಹಾಯಕ್ಕೆ ಕರೆದಿದ್ದಾರೆ. ಎಲ್ಲರೂ ಸೇರಿ ಬಾಗಿಲು ಒಡೆದು ಒಳಗೆ ಹೋದಾಗ ಭಾನು ಚಂದರ್ ಶವವಾಗಿ ಪತ್ತೆಯಾಗಿದ್ದಾರೆ.

ಪತಿಯ ಸಾವು ಕಂಡು ಪತ್ನಿ ನಲುಗಿದ ಕ್ಷಣ

ಪತಿಯ ಮೃತದೇಹವನ್ನು ಕಂಡ ಶಾಜಿಯಾ ಅತೀವ ಆಘಾತಕ್ಕೆ ಒಳಗಾಗಿದ್ದಾರೆ. ಮನೆಯಲ್ಲಿದ್ದವರು ಅಳುತ್ತಿದ್ದ ಶಾಜಿಯಾರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾಗಲೇ, ಅವರು ದಿಢೀರನೆ ಅಪಾರ್ಟ್‌ಮೆಂಟ್‌ನ 17ನೇ ಮಹಡಿಯಿಂದ ಕೆಳಗೆ ಜಿಗಿದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಶಾಜಿಯಾ ಅವರು ಪ್ರತಿಷ್ಠಿತ ಐಬಿಎಂ (IBM) ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.

ತನಿಖೆ ಚುರುಕು

ದಂಪತಿಯ ಈ ವಿಪರೀತ ನಿರ್ಧಾರಕ್ಕೆ ನಿಖರ ಕಾರಣವೇನು ಎಂಬುದು ಇನ್ನು ತಿಳಿದುಬಂದಿಲ್ಲ. ಕುಟುಂಬ ಸದಸ್ಯರು ನೀಡಿದ ದೂರಿನ ಮೇರೆಗೆ ಪೊಲೀಸರು ಎರಡು ಪ್ರತ್ಯೇಕ ಅಸಹಜ ಸಾವು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಆರೋಗ್ಯ ಸಮಸ್ಯೆ, ದಾಂಪತ್ಯ ಕಲಹ ಅಥವಾ ಮಾನಸಿಕ ಒತ್ತಡವೇನಾದರೂ ಇತ್ತೇ ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net