ನಾಳೆಯಿಂದ ರಾಜ್ಯದಲ್ಲಿ SIR ; ಮತದಾರರ ಹೆಸರು ಡಿಲೀಟ್ ಸಾಧ್ಯತೆ; ಕಾರ್ಯಕರ್ತರು ಮತ್ತು ಬಿಎಲ್​ಓಗಳಿಗೆ ಎಚ್ಚರಿಕೆ ನೀಡಲಾಗಿದೆ : ಡಿಸಿಎಂ ಜಿ.ಪರಮೇಶ್ವರ್

ಡಿಸಿಎಂ ಜಿ.ಪರಮೇಶ್ವರ್
ಡಿಸಿಎಂ ಜಿ.ಪರಮೇಶ್ವರ್
Published on
ಬೆಂಗಳೂರು: ನಾಳೆಯಿಂದ ರಾಜ್ಯದಲ್ಲಿ ಚುನಾವಣೆಯ ಆಯೋಗ ನಡೆಸುತ್ತಿರುವ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ(SIR) ಪ್ರಕ್ರಿಯೆ ಆರಂಭವಾಗಲಿದ್ದು, ಪ್ರಕ್ರಿಯೆ ಬಗ್ಗೆ ಸುಮಾರು ಚರ್ಚೆಗಳನ್ನು ಮಾಡಲಾಗಿದೆ. ಮತದಾರರ ಹೆಸರುಗಳು ಡಿಲೀಟ್ ಆಗುವ ಸಾಧ್ಯತೆಯಿದೆ. ಈ ಬಗ್ಗೆ ಪಕ್ಷದ ಕಾರ್ಯಕರ್ತರು ಮತ್ತು ಬಿಎಲ್​ಓಗಳಿಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಡಿಸಿಎಂ ಜಿ.ಪರಮೇಶ್ವರ್ ಹೇಳಿದ್ದಾರೆ.
ಸೋಮವಾರ(ಜೂ. 29) ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಎಸ್​ಐಆರ್ ಬಗ್ಗೆ ಪಕ್ಷದಿಂದ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಎಲ್ಲಿ ಕುತಂತ್ರ ಮಾಡುವ ಸಾಧ್ಯತೆಯಿದೆ ಇದೆಯೋ ಅಲ್ಲಿ ಎಚ್ಚರಿಕೆಯಿಂದ ಇರಲು ನಮ್ಮ ಪಕ್ಷದ ಕಾರ್ಯಕರ್ತರಿಗೆ ಹಾಗೂ BLO ಗಳಿಗೆ ಸೂಚನೆ ಕೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ, ಬಿಹಾರ ಸೇರಿ ಹಲವೆಡೆ ಅನುಮಾನ ಬರುವಂತೆ ಪ್ರತಿ ಮತಕ್ಷೇತ್ರದಲ್ಲಿ 5ರಿಂದ 10 ಸಾವಿರ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಿದ್ದಾರೆ ಎನ್ನಲಾಗಿದೆ. ಕರ್ನಾಟಕದಲ್ಲೂ ಆ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕು. ಅದಕ್ಕಾಗಿ ವರ್ಕ್​ ಶಾಪ್​ಗಳನ್ನು ಮಾಡಲಾಗಿದೆ. ಪ್ರತಿಯೊಂದು ತಾಲೂಕು ಹಾಗೂ ಜಿಲ್ಲಾ ಕೇಂದ್ರದವರಿಗೆ ಸೂಚನೆ ಕೊಡಲಾಗಿದೆ ಎಂದಿದ್ದಾರೆ.
ನಾಳೆಯಿಂದ ಎಸ್​ಐಆರ್ ಪ್ರಕ್ರಿಯೆ ಫಾರ್ಮ್ ಕೊಡಲು ಪ್ರಾರಂಭ ಮಾಡುತ್ತಿದ್ದಾರೆ. 2 ಫಾರ್ಮ್​ ಕೊಡ್ತಾರೆ, ಅದರಲ್ಲಿ ಮಾಹಿತಿ ತುಂಬಿ ಒಂದು ವಾಪಸ್ ಕೊಡಬೇಕು. ಇನ್ನೊಂದು ಜನರೇ ಇಟ್ಟುಕೊಳ್ಳಬೇಕು. ಫಾರ್ಮ್​ ಸರಿಯಾಗಿ ತುಂಬಬೇಕು ಎಂದು ಸೂಚನೆ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.
ಎಸ್​ಐಆರ್ ವಿರುದ್ಧ ಪಕ್ಷದ ವತಿಯಿಂದ ಹೋರಾಟ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಒಂದು ವೇಳೆ ಪ್ರಕ್ರಿಯೆಯಲ್ಲಿ ಕುತಂತ್ರ ಮಾಡಲಾಗುತ್ತಿದೆ ಎನ್ನುವ ಅನುಮಾನ ಬಂದ್ರೆ, ಪಕ್ಷ ಆ ಬಗ್ಗೆ ತೀರ್ಮಾನ ಮಾಡಲಿದೆ. ಯಾವ ರೀತಿ ಹೋರಾಟ ಮಾಡಬೇಕು. ಆಯೋಗಕ್ಕೆ ಯಾವ ರೀತಿ ತಿಳಿಸಬೇಕು ಎಂದು ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಕೊನೆಯದಾಗಿ ಸಂಪುಟ ವಿಸ್ತರಣೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಶೀಘ್ರದಲ್ಲೇ ಈ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net