ಒಳಮೀಸಲಾತಿ; ಬಲಗೈ, ಎಡಗೈ ಸಮುದಾಯಕ್ಕೆ 5.25, 5.25, 4.5... ಸಮಾನ ಹಂಚಿಕೆ; ಇಲ್ಲಿದೆ ನೋಡಿ ಕ್ಯಾಬಿನೆಟ್ ಸಭೆಯ ಸಂಪೂರ್ಣ ಮಾಹಿತಿ | SC reservation

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Published on
ಬೆಂಗಳೂರು: ರಾಜ್ಯ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದ ಪರಿಶಿಷ್ಟ ಜಾತಿಯ ಒಳಮೀಸಲಾತಿ(SC reservation) ಗೊಂದಲಕ್ಕೆ, ಇಂದು(ಏ. 24) ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸರ್ಕಾರದ ವಿಶೇಷ ಸಂಪುಟ ಸಭೆ ಅಂತ್ಯವಾಡಿದ್ದು, ಎಲ್ಲಾ ಮೂರು ಸಮುದಾಯಗಳಿಗೆ ಶೇ. 15ರಷ್ಟು ಮೀಸಲಿನಲ್ಲೇ ಸಮಾನ ಹಂಚಿಕೆಗೆ ನಿರ್ಣಯ ಕೈಗೊಂಡಿದೆ.
ಕಳೆದ ಹಲವಾರು ವರ್ಷಗಳಿಂದ ಮೀಸಲಾತಿಯಲ್ಲಿ ನ್ಯಾಯಯುತ ಪಾಲು ಸಿಗುತ್ತಿಲ್ಲ ಎಂದು ಆರೋಪಿಸಿ ಮಾದಿಗ ಸಮುದಾಯದ ನೇತೃತ್ವದಲ್ಲಿ ಎಡಗೈ ಸಮುದಾಯಗಳು ನ್ಯಾ. ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ, ಚಳುವಳಿ ಮತ್ತು ಪ್ರತಿಭಟನೆಗಳನ್ನು ನಡೆಸಿದ್ದವು. 
ಕಳೆದ ವರ್ಷ ಸುಪ್ರೀಂಕೋರ್ಟ್ ಮೀಸಲಾತಿಯಲ್ಲಿ ಒಳಮೀಸಲು ಜಾರಿ ಮಾಡಬಹುದು ಎಂದು ಮಹತ್ವ ಆದೇಶ ನೀಡಿತ್ತು. ಈ ಹಿನ್ನೆಲೆ  ರಾಜ್ಯ ಸರ್ಕಾರ ನ್ಯಾ.ನಾಗಮೋಹನ್ ದಾಸ್ ನೇತೃತ್ವದಲ್ಲಿ ಒಳಮೀಸಲು ಜಾರಿಗೆ ಆಯೋಗವನ್ನು ರಚಿಸಿತ್ತು. ಈ ಕುರಿತು ಅಧ್ಯಯನ ಮಾಡಿ ವರದಿ ನೀಡಿದ್ದ ನ್ಯಾ.ನಾಗಮೋಹನ್ ದಾಸ್ ಆಯೋಗ ಹೀಗಿರುವ ಶೇ.50ರಷ್ಟು ಮೀಸಲಾತಿ ಪ್ರಮಾಣವನ್ನು ಶೇ. 56ಕ್ಕೆ ಹೆಚ್ಚಿಸುವ ಮೂಲಕ ಒಳಮೀಸಲು ಜಾರಿ ಮಾಡುವಂತೆ ಶಿಫಾರಸು ಮಾಡಿತ್ತು. 
ಆಯೋಗದ ಶಿಫಾರಸ್ಸಿನಂತೆ ರಾಜ್ಯ ಸರ್ಕಾರ ಈ ಹಿಂದೆ ಶೇ.17 ಮೀಸಲಾತಿಯಲ್ಲಿ ಎಡಗೈ ಸಮುದಾಯಕ್ಕೆ ಶೇ. 6, ಬಲಗೈ ಸಮುದಾಯಕ್ಕೆ ಶೇ. 6 ಹಾಗೂ ಇತರೆ ಸಮುದಾಯಗಳಿಗೆ ಶೇ. 5ರಷ್ಟು ಸರ್ವಸಮ್ಮತದಿಂದ ಒಳಮೀಸಲಾತಿ ಅಳವಡಿಸುವ ಬಗ್ಗೆ ತೀರ್ಮಾನ ಮಾಡಿತ್ತು. ಆದರೆ, ಮೀಸಲಾತಿ ಪ್ರಮಾಣ ಶೇ. 50ರಷ್ಟು ಮೀರಬಾರದು ಎಂಬ ಸುಪ್ರೀಂ ಆದೇಶ ಹಿನ್ನೆಲೆ ಇಂದು ಶೇ.15 ಎಸ್‌ಸಿ ಮೀಸಲಾತಿಯಲ್ಲೇ ಬಲಗೈ ಸಮುದಾಯುಕ್ಕೆ 5, ಎಡಗೈ 5 ಮತ್ತು ಇತರ ಸಮುದಾಯಗಳಿಗೂ 5 ಮೀಸಲಾತಿ ನೀಡುವ ಮೂಲಕ ಸಮಾನ ಹಂಚಿಕೆ ಮಾಡಲಾಗಿದೆ.

ಸಿಎಂ ಸಿದ್ದರಾಮಯ್ಯ ಹೇಳಿದ್ದೇನು? 

ಕ್ಯಾಬಿನೆಟ್ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಒಳ‌ಮೀಸಲಾತಿ ಬಗ್ಗೆ ಬಹಳ ವರ್ಷಗಳಿಂದ ಹೋರಾಟ ನಡೆದಿದೆ. ನಮ್ಮ ಪಕ್ಷದ ವತಿಯಿಂದ ಚಿತ್ರದುರ್ಗದಲ್ಲಿ ಸಮಾವೇಶ ಮಾಡಿದ್ದೆವು. ಅಲ್ಲಿ ಒಳ‌ಮೀಸಲು ಮಾಡಲು ಚರ್ಚೆ ಯಾಗಿತ್ತು. ಚುನಾವಣಾ ಪ್ರಣಾಳಿಕೆಯಲ್ಲೂ ಒಳಮೀಸಲು ಜಾರಿ ಮಾಡ್ತೇವೆ ಎಂದು ಭರವಸೆ ನೀಡಿದ್ದೇವು.
ಕಳೆದ ಸುಪ್ರಿಂ‌ಕೋರ್ಟ್​ನ ಏಳು ನ್ಯಾಯಾಧೀಶರ ಪೀಠ  ಕೂಡ ಒಳ‌ಮೀಸಲು ಮಾಡಬೇಕೆಂದು ತೀರ್ಪು ನೀಡಿತ್ತು. ಈ ಹಿನ್ನೆಲೆ ನಾವು ಒಳಮೀಸಲು ಜಾರಿಗೆ ವರದಿ ನೀಡುವಂತೆ ನ್ಯಾ.ನಾಗಮೋಹನ್ ದಾಸ್ ಆಯೋಗ ರಚಿಸಿದ್ದೇವು.‌ ಆ ಆಯೋಗ 6- 5- 4-1 ಅಡಿ ಒಳಮೀಸಲಿಗೆ ಶಿಫಾರಸು ಮಾಡಿತ್ತು. ನಾವು ಬಲಗೈ ಮತ್ತು ಎಡಗೈಗೆ ತಲಾ ಶೇ.6 ಹಾಗೂ ಇತರೆ ಸಮುದಾಯಗಳಿಗೆ ಶೇ. 5ರಷ್ಟು ನೀಡಲು ತೀರ್ಮಾನಿಸಿದ್ದೇವು. ಬಳಿಕ ಕಾನೂನು ಮಾಡಲಾಯಿತು.
ಬಳಿಕ ಅಲೆಮಾರಿಗಳು ತಮಗೆ ಅನ್ಯಾಯ ಆಗಿದೆ ಎಂದು ಸುಪ್ರೀಂಕೋರ್ಟ್​ಗೆ ಹೋದರು. ಶೇ.50ರಷ್ಟು ಮೀಸಲಾತಿ ಮೀರಬಾರದೆಂದು ಕೋರ್ಟ್ ಹೇಳಿತು. ನಾವು ಮಾಡಿದ್ದ ಕಾನೂನಿಗೆ ಸುಪ್ರೀಂ ತಡೆ ನೀಡಿತು. ಕಳೆದ ತಿಂಗಳು ಈ ಕುರಿತು ಸಂಪುಟ ಸಭೆ ನಡೆಸಿದ್ದೆವು, ಆದರೆ ಯಾವುದೇ ತೀರ್ಮಾನಕ್ಕೆ ಬರಲಾಗಿರಲಿಲ್ಲ. ಇಂದು ಚರ್ಚೆ ಮಾಡಬೇಕೆಂದು ದೃಢ ನಿರ್ಧಾರ ಮಾಡಿದ್ದೆವು. ಅದರಂತೆ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ತಾಂತ್ರಿಕ‌ ಸಮಿತಿ ರಚಿಸಿ ಅವರು ನೀಡಿದ ವರದಿ ಅನ್ವಯ ಇಂದು ಸಭೆಯಲ್ಲಿ ಚರ್ಚೆ ನಡೆಸಿ ಮಹತ್ವದ ತೀರ್ಮಾನ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.
ಸುಪ್ರೀಂಕೋರ್ಟ್ ಶೇ. 50ರಷ್ಟು ಮೀಸಲಾತಿಗೆ ಮಿತಿ ಹಾಕಿರುವುದರಿಂದ ಶೇ.15 ಮೀಸಲಾತಿಯಲ್ಲಿ ಪರಿಶಿಷ್ಟರಿಗೆ ಒಳಮೀಸಲಾತಿ ನೀಡಲು ನಿರ್ಧರಿಸಿದ್ದೇವೆ. ತಾಂತ್ರಿಕ ಸಮಿತಿ ವರದಿಯೂ ಶೇ. 5.3-5.3, 4.4 ರಂತೆ ಮೀಸಲು ಹಂಚಿಕೆಗೆ ಶಿಫಾರಸು ಮಾಡಿತ್ತು. ಅಂತಿಮವಾಗಿ ನಾವು ಪರಿಶಿಷ್ಟ ಬಲಗೈ ಸಮುದಾಯಕ್ಕೆ ಶೇ. 5.25, ಅದೇ ರೀತಿ ಎಡಗೈ ಸಮುದಾಯಕ್ಕೆ ಶೇ. 5.25 ಹಾಗೂ ಇತರೆ ಸಮುದಾಗಳಿಗೆ ಶೇ. 4.5ರಷ್ಟು ಒಳಮೀಸಲಾತಿ ನೀಡಲು ಸಂಪುಟದಲ್ಲಿ ಸರ್ವಾನುಮತದಿಂದ ನಿರ್ಣಯಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net