ಆಟೋ ಮತ್ತು ಕ್ಯಾಬ್ ಚಾಲಕರಿಗೆ ಕನ್ನಡ ಕಡ್ಡಾಯಗೊಳಿಸಿ: ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ KPCC

Kannada Language Mandate
Kannada Language Mandate
Published on

ಪ್ರಮುಖ ಮುಖ್ಯಾಂಶಗಳು

  • ಹೊರರಾಜ್ಯದ ಚಾಲಕರಿಗೆ ಕನ್ನಡ ಬಾರದೆ ಸಂವಹನ ನಡೆಸಲು ಕನ್ನಡಿಗರಿಗೆ ಕಷ್ಟವಾಗುತ್ತಿದೆ
  • ಭಾಷೆಯ ಅಂತರದಿಂದಾಗಿ ಕ್ಯಾಬ್‌ಗಳಲ್ಲಿ ಕನ್ನಡಿಗರಿಗೆ ಕಿರುಕುಳ ಹೆಚ್ಚಾಗುತ್ತಿದೆ ಎಂದು ಉಲ್ಲೇಖ
  • ಕನ್ನಡ ಕಲಿಯಲು ನಿರಾಕರಿಸುವ ಚಾಲಕರ ವಾಣಿಜ್ಯ ಪರವಾನಗಿಯನ್ನು ರದ್ದುಗೊಳಿಸಲು ನಿಯಮ ರೂಪಿಸಬೇಕು
ಬೆಂಗಳೂರು: ಕೆಲಸ ಹುಡುಕಿ ಬರುವ ನೆರೆ ರಾಜ್ಯದವರು ಕನ್ನಡ ಮಾತನಾಡದೆ, ಆಟೋ ಮತ್ತು ಕ್ಯಾಬ್​ ಚಾಲಕರ ಬಳಿ ಗಲಾಟೆಗೆ ಇಳಿಯುವ ಘಟನೆಗಳು ಬಹಳಷ್ಟಿವೆ. ಜೊತೆಗೆ ಸಿಲಿಕಾನ್​ ಸಿಟಿಯಲ್ಲಿ ಉತ್ತರ ಭಾರತದ ಆಟೋ, ಕ್ಯಾಬ್ ಚಾಲಕರು ಹೆಚ್ಚಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರಯಾಣಿಕರಿಗೆ ಸಮಸ್ಯೆಯಾಗದಂತೆ ತಡೆ ಹಿಡಿಯಲು ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಬೇಕು ಎಂದು ಕೆಪಿಸಿಸಿ ವಕ್ತಾರ ಎ.ಎನ್. ನಟರಾಜ್ ಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಕರ್ನಾಟಕದ ನಗರ ಪ್ರದೇಶಗಳಲ್ಲಿ ಸೇರಿದಂತೆ ಮುಖ್ಯವಾಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಆಟೋ, ಕ್ಯಾಬ್​​ ಚಾಲಕರಿಗೆ ಕನ್ನಡ ಕಡ್ಡಾಯ ಮಾಡಬೇಕು ಎಂದು ಪತ್ರದಲ್ಲಿ ನಟರಾಜ್​ ಗೌಡರು ಉಲ್ಲೇಖಿಸಿದ್ದಾರೆ.

ಪತ್ರದಲ್ಲಿ ಏನಿದೆ? 

ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರ ಮರಾಠಿ ಭಾಷೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದರು. ಎಲ್ಲಾ ವಾಣಿಜ್ಯ ವಾಹನ ಚಾಲಕರು ಪರವಾನಗಿ ಹೊಂದಲು ಸ್ಥಳೀಯ ಭಾಷೆಯಾದ ಮರಾಠಿ ಓದಲು, ಬರೆಯಲು ಮತ್ತು ಮಾತನಾಡಲು ಬರಬೇಕು ಎಂಬ ನಿಯಮವನ್ನು   ಮೇ 1 ರಿಂದ ಜಾರಿಗೆ ತರಲಾಗುತ್ತಿದೆ ಎಂದು ಹೇಳಿತ್ತು. ಅದರಂತೆ ಕರ್ನಾಟಕದಲ್ಲೂ ಅಳವಡಿಸಿಕೊಳ್ಳಬೇಕು ಎಂದು ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು. 
 ಹೊರರಾಜ್ಯದಿಂದ ಬಂದು ಇಲ್ಲಿ ಆಟೋ ಕ್ಯಾಬ್​ ಚಾಲಕರಾಗಿ ಕೆಲಸ ಮಾಡುತ್ತಿರುವವರು ಕನ್ನಡ ಭಾಷೆ ಕಲಿಯದ ಕಾರಣ, ಕನ್ನಡಿಗರು ಅವರೊಂದಿಗೆ ಸಂವಹನ ನಡೆಸಲು ಕಷ್ಟವಾಗುತ್ತಿದೆ. ಕನ್ನಡ ಕಲಿಯಲು ನಿರಾಕರಿಸುವ ಆಟೋ ಚಾಲಕರ  ವಾಣಿಜ್ಯ ಪರವಾನಗಿಯನ್ನು ರದ್ದುಗೊಳಿಸಲು ಅಥವಾ ಅಮಾನತುಗೊಳಿಸಲು ನಿಯಮಗಳನ್ನು ರೂಪಿಸಬೇಕು.
 ಭಾಷಾ ನಿಯಮಗಳನ್ನು ಉಲ್ಲಂಘಿಸಿ ಲಂಚದ ಮೂಲಕ ಪರವಾನಗಿ ನೀಡುವ ಸಾರಿಗೆ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಶಿಸ್ತುಕ್ರಮ ಕೈಗೊಳ್ಳಬೇಕು. ಕರ್ನಾಟಕದಲ್ಲಿ ಬದುಕು ಕಟ್ಟಿಕೊಳ್ಳುವ ಪ್ರತಿಯೊಬ್ಬರೂ ಈ ನೆಲದ ಭಾಷೆ, ಜಲ ಮತ್ತು ಸಂಸ್ಕೃತಿಯನ್ನು ಗೌರವಿಸುವುದು ಮತ್ತು ಕಲಿಯುವುದು ಅವರ ಕರ್ತವ್ಯವಾಗಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ,(ಏಜೆನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net