CWRC ಸಭೆಯಲ್ಲಿ ರಾಜ್ಯಕ್ಕೆ ಹಿನ್ನಡೆ! ತಮಿಳುನಾಡಿಗೆ 3500 ಕ್ಯೂಸೆಕ್​ ಕಾವೇರಿ ನೀರು ಹರಿಸಲು ಸೂಚನೆ

ಕೆಆರ್​ಎಸ್​ ಜಲಾಶಯ
ಕೆಆರ್​ಎಸ್​ ಜಲಾಶಯ
Published on

ಪ್ರಮುಖ ಮುಖ್ಯಾಂಶಗಳು

  • ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆ
  • ಮುಂದಿನ 15 ದಿನಗಳು ತಮಿಳುನಾಡಿಗೆ ನಿತ್ಯ 3500 ಕ್ಯೂಸೆಕ್​ ನೀರು ಹರಿಸಲು ಸೂಚನೆ
ಬೆಂಗಳೂರು:
ಮುಂದಿನ 15 ದಿನಗಳ ಕಾಲ ನೀರು ಬಿಡುವಂತೆ ನೀರು ನಿರ್ವಹಣಾ ಸಮಿತಿ ಆದೇಶ ಹೊರಡಿಸಿದೆ. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿರುವ ಸಚಿವ ರಾಮಲಿಂಗ ರೆಡ್ಡಿ, ಇವತ್ತು ಮೀಟಿಂಗ್ ಇತ್ತು. ಈಗ ನೋಡಿದ್ರೆ, 3500 ಕ್ಯೂಸೆಕ್ ನೀರು 15 ದಿನ ಬಿಡುವಂತೆ ಹೇಳಿದ್ದಾರೆ. 4 ಟಿಎಂಸಿ ನೀರು ನಮಗೆ ಬೇಕಾಗುತ್ತೆ. ಹೀಗಿರುವಾಗ, ನಾವು CWMAಗೆ ಅಪೀಲು ಹಾಕಬಹುದು. ಇದರ ಬಗ್ಗೆ ಖುದ್ದಾಗಿ ಸಿಎಂ ಜತೆ ಮಾತಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಈ ಕುರಿತಂತೆ ಕಳೆದ ವಾರ ಮಾತನಾಡಿದ್ದ ರಾಜ್ಯ ಜಲಸಂಪನ್ಮೂಲ ಸಚಿವರ ಕಚೇರಿ, ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸಭೆಯಲ್ಲಿ, ಕಾವೇರಿ ಜಲಾನಯನ ಪ್ರದೇಶದಲ್ಲಿ ತೀವ್ರ ಕೊರತೆ ಇರುವುದರಿಂದ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ. ಜೂನ್‌ನಲ್ಲಿ ಕೆಆರ್​ಎಸ್​ ಪ್ರದೇಶಗಳಲ್ಲಿ ಮಳೆಯಾಗಿಲ್ಲ. ಇದರಿಂದ ಜಲಾಶಯಗಳಿಗೆ ಒಳಹರಿವು ಶೂನ್ಯವಾಗಿದೆ ಎಂದು ಸಮಿತಿಗೆ ಸೂಚಿಸಿತ್ತು.


ಜುಲೈನಲ್ಲಿ ಕೆಲವೆಡೆ ಮಾತ್ರ ಸ್ವಲ್ಪ ಮಳೆಯಾಗಿದೆ ಮತ್ತು ಅಣೆಕಟ್ಟುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ. ಮತ್ತೊಂದೆಡೆ, ಮುಂಗಾರು ಮತ್ತೆ ಚುರುಕಾಗುವ ಮುನ್ಸೂಚನೆ ಕೂಡ ಇಲ್ಲದಿರುವುದು ತಮಿಳುನಾಡಿಗೆ ನೀರು ಹರಿಸುವುದು ಕಷ್ಟಸಾದ್ಯ ಎಂದು ಅಧಿಕಾರಿಗಳು ತಿಳಿಸಿದ್ದರು.ಪ್ರಸ್ತುತ ಸಂಗ್ರಹವಾಗಿರುವ ನೀರನ್ನು ಕುಡಿಯುವ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕು ಎಂದು ಕರ್ನಾಟಕ ವಾದಿಸಿದ್ದು, ನಮ್ಮ ಅಣೆಕಟ್ಟುಗಳಲ್ಲಿ ಹೆಚ್ಚಿನ ನೀರು ಸಂಗ್ರಹವಿಲ್ಲ. ಈಗ ಲಭ್ಯವಿರುವ ನೀರು ಕುಡಿಯುವುದಕ್ಕಷ್ಟೇ ಸೀಮಿತವಾಗಿದೆ ಎಂದಿತ್ತು.

ರಾಜ್ಯವು ಹಿಂದೆಂದೂ ನೋಡಿರದ ಮಳೆಯ ಕೊರತೆಯನ್ನು ಎದುರಿಸುತ್ತಿದೆ ಎಂದು ರಾಜ್ಯವು ಸಭೆಗೂ ಮುನ್ನ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ್ದರೂ ಕೂಡ ಇಂದಿನ ಸಭೆಯ ಬಳಿಕ ಪಕ್ಕದ ರಾಜ್ಯಕ್ಕೆ ಮುಂದಿನ 15 ದಿನಗಳ ಕಾಲ ನಿತ್ಯ 3500 ಕ್ಯೂಸೆಕ್​ ನೀರು ಬಿಡಲು ಆದೇಶ ನೀಡಿರುವುದು ನಿಜಕ್ಕೂ ಕಳವಳಕಾರಿಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net