ಭಾರತ ವಿರುದ್ಧ ಪಾಕಿಸ್ತಾನ ಆಡುವುದಿಲ್ಲವೇ? ಪಾಕ್​ ವರದಿಗಾರನ ಪ್ರಶ್ನೆಗೆ ಮಿಚೆಲ್​ ಮಾರ್ಷ್​ ಕೊಟ್ಟ ಉತ್ತರ ವೈರಲ್​! Mitchell Marsh

ಪಾಕ್​ ವರದಿಗಾರನ ಪ್ರಶ್ನೆಗೆ ಮಿಚೆಲ್​ ಮಾರ್ಷ್​ ಕೊಟ್ಟ ಉತ್ತರ ವೈರಲ್​
ಪಾಕ್​ ವರದಿಗಾರನ ಪ್ರಶ್ನೆಗೆ ಮಿಚೆಲ್​ ಮಾರ್ಷ್​ ಕೊಟ್ಟ ಉತ್ತರ ವೈರಲ್​
Published on

ಪ್ರಮುಖ ಮುಖ್ಯಾಂಶಗಳು

  • ಫೆಬ್ರವರಿ 7ರಂದು ಆರಂಭವಾಗಲಿರುವ ಟಿ20 ವಿಶ್ವಕಪ್​ ಮೆಗಾ ಟೂರ್ನಿಗೆ ದಿನಗಣನೆ ಆರಂಭ
  • ಕ್ರಿಕೆಟ್​ ಪ್ರೇಮಿಗಳು ಬಹಳ ಕಾತರದಿಂದ ಈ ಐತಿಹಾಸಿಕ ಟೂರ್ನಿಗಾಗಿ ಎದುರು ನೋಡುತ್ತಿದ್ದಾರೆ
  • ಭಾರತದ ವಿರುದ್ಧ ಗ್ರೂಪ್​ ಪಂದ್ಯವನ್ನು ಪಾಕ್​ ಬಹಿಷ್ಕರಿಸಿರುವುದು ಕ್ರೀಡಾ ಪ್ರೇಮಿಗಳಿಗೆ ಬೇಸರ ತರಿಸಿದೆ
  • ಆಸ್ಟ್ರೇಲಿಯಾದ ನಾಯಕ ಮಿಚೆಲ್ ಮಾರ್ಷ್ ಇಂಡೋ-ಪಾಕ್​ ಪಂದ್ಯದ ಬಗ್ಗೆ ಹೇಳಿರುವ ಮಾತು ವೈರಲ್ ಆಗಿದೆ
ನವದೆಹಲಿ: ಫೆ.7ರಂದು ಆರಂಭವಾಗಲಿರುವ ಟಿ20 ವಿಶ್ವಕಪ್ ( T20 World Cup 2026 )​ ಮೆಗಾ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಎಲ್ಲ ಕ್ರಿಕೆಟ್​ ಪ್ರೇಮಿಗಳು ಬಹಳ ಕಾತರದಿಂದ ಈ ಐತಿಹಾಸಿಕ ಟೂರ್ನಿಗಾಗಿ ಎದುರು ನೋಡುತ್ತಿದ್ದಾರೆ. ಅದರಲ್ಲೂ, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್​ ಪಂದ್ಯಕ್ಕೆ ಇಡೀ ಕ್ರೀಡಾ ಜಗತ್ತು ಕಾಯುತ್ತಿದೆ. ಆದರೆ, ಬೇಸರ ಸುದ್ದಿ ಏನೆಂದರೆ, ಭಾರತದ ವಿರುದ್ಧ ನಾವು ಆಡಲ್ಲ ಎಂದು ಪಾಕಿಸ್ತಾನ ಹೇಳುತ್ತಿದೆ. ಭಾರತದ ವಿರುದ್ಧದ ಗ್ರೂಪ್​ ಪಂದ್ಯವನ್ನು ಪಾಕ್​ ಬಹಿಷ್ಕರಿಸಿದೆ. ಇದು ಪಾಕಿಸ್ತಾನಕ್ಕೆ ನಷ್ಟವೇ ಹೊರತು ಭಾರತಕ್ಕೆ ಯಾವುದೇ ನಷ್ಟವಿಲ್ಲ. ಆದರೆ, ಇಂಡೋ-ಪಾಕ್​ ಪಂದ್ಯಕ್ಕಾಗಿ ಕಾಯುತ್ತಿದ್ದವರಿಗೆ ಭಾರಿ ನಿರಾಶೆಯಾಗುವುದಂತೂ ಖಚಿತ. ಇದರ ನಡುವೆ, ಆಸ್ಟ್ರೇಲಿಯಾದ ನಾಯಕ ಮಿಚೆಲ್ ಮಾರ್ಷ್ ಅವರಿಗೆ ಈ ವಿಷಯದ ಬಗ್ಗೆ ಪ್ರಶ್ನಿಸಲಾಗಿಯಿತು. ಈ ವೇಳೆ ಅವರು ಕೊಟ್ಟ ಉತ್ತರ ವೈರಲ್​ ಆಗಿದೆ.
ಆಸ್ಟ್ರೇಲಿಯಾ ತಂಡ ಪ್ರಸ್ತುತ ಪಾಕಿಸ್ತಾನ ಪ್ರವಾಸದಲ್ಲಿದೆ. ಇದರ ಭಾಗವಾಗಿ, ಮೂರು ಪಂದ್ಯಗಳ ಟಿ20 ಸರಣಿಯ ಕೊನೆಯ ಟಿ20 ಪಂದ್ಯ ಭಾನುವಾರ ನಡೆಯಿತು. ಇದರಲ್ಲಿ ಆಸಿಸ್​​ ತಂಡ ಹೀನಾಯವಾಗಿ ಸೋಲುಂಡಿತು. ಪಂದ್ಯದ ನಂತರ, ಮಿಚೆಲ್ ಮಾರ್ಷ್ ಪತ್ರಿಕಾಗೋಷ್ಠಿಯಲ್ಲಿ ತಮ್ಮ ತಂಡದ ಸೋಲಿನ ಬಗ್ಗೆ ಮಾತನಾಡಿದರು. ಈ ಸಮಯದಲ್ಲಿ, ವರದಿಗಾರರೊಬ್ಬರು ಮಿಚೆಲ್ ಮಾರ್ಷ್ ಅವರನ್ನು ಮುಜುಗರಕ್ಕೀಡುಮಾಡುವ ರೀತಿಯಲ್ಲಿ ಎರಡು ಪ್ರಶ್ನೆಗಳನ್ನು ಕೇಳಿದರು. ಮೊದಲನೆಯದು ಭಾರತ vs ಪಾಕಿಸ್ತಾನ ಪಂದ್ಯದ ಬಗ್ಗೆ ಮತ್ತು ಎರಡನೆಯದು ಬಾಂಗ್ಲಾದೇಶ ಬಹಿಷ್ಕಾರದ ಬಗ್ಗೆ. ಆ ಪ್ರಶ್ನೆಗಳು ಏನು? ಮತ್ತು ಮಿಚೆಲ್​ ಮಾರ್ಷ್​ ಕೊಟ್ಟ ಉತ್ತರ ಹೇಗಿತ್ತು ಅನ್ನೋದನ್ನು ನಾವೀಗ ತಿಳಿದುಕೊಳ್ಳೋಣ.
ವರದಿಗಾರ: ಫೆಬ್ರವರಿ 15 ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಬಗ್ಗೆ ನಾವು ಇದೀಗಷ್ಟೇ ಒಂದು ಸುದ್ದಿ ಕೇಳಿದ್ದೇವೆ. ಪಾಕಿಸ್ತಾನ ಸರ್ಕಾರ ಈ ಪಂದ್ಯವನ್ನು ಬಹಿಷ್ಕರಿಸಲು ಆದೇಶಿಸಿದೆ? ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಮಿಚೆಲ್​ ಮಾರ್ಷ್​: ಈ ಸಮಯದಲ್ಲಿ ನಾನು ಅದರ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ. ನಿಮಗೆ ಗೊತ್ತಾ, ನಾವು ವಿಶ್ವಕಪ್ ಮಾತ್ರ ಆಡಲಿದ್ದೇವೆ. ನಮ್ಮ ಗಮನವೆಲ್ಲ ವಿಶ್ವಕಪ್​ ಮೇಲಿದೆ ಅಷ್ಟೇ. ಉಳಿದ ವಿಚಾರ ಬಗ್ಗೆ ನಾವು ಚಿಂತಿಸುವುದಿಲ್ಲ.
ವರದಿಗಾರ: ಐಸಿಸಿಯ ಪೂರ್ಣ ಸದಸ್ಯ ರಾಷ್ಟ್ರವಾಗಿರುವ ಬಾಂಗ್ಲಾದೇಶ, ಭದ್ರತಾ ಕಾರಣಗಳಿಂದಾಗಿ ಈ ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿಲ್ಲವೇ? ಒಬ್ಬ ಆಟಗಾರನಾಗಿ, ಐಸಿಸಿಯ ಪೂರ್ಣ ಸದಸ್ಯ ರಾಷ್ಟ್ರವು ಈ ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿಲ್ಲ ಎಂಬುದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
ಮಿಚೆಲ್​ ಮಾರ್ಷ್​: ಈ ಹಿಂದಿನ ಉತ್ತರವೂ ಇದಕ್ಕೆ ಅನ್ವಯಿಸುತ್ತದೆ. ನಾವು ವಿಶ್ವಕಪ್ ಗೆಲ್ಲಲು ಮಾತ್ರ ಪ್ರಯತ್ನಿಸುತ್ತಿದ್ದೇವೆ. ಆಸ್ಟ್ರೇಲಿಯಾ ಒಂದು ತಂಡವಾಗಿ, ವಿಶ್ವಕಪ್​ ಟ್ರೋಫಿ ಮೇಲೆ ಮಾತ್ರ ಕೇಂದ್ರೀಕರಿಸಿದ್ದೇವೆ. ನಮ್ಮ ಐಸಿಸಿ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ನಮ್ಮನ್ನು ಸುರಕ್ಷಿತವಾಗಿ ಇಡಲು ಅವರು ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾರೆ. ನಾನು ನಿಮಗೆ ಇಷ್ಟನ್ನು ಮಾತ್ರ ಹೇಳಬಲ್ಲೆ ಅಷ್ಟೇ.
ವಿಶ್ವಕಪ್ ಮೇಲೆ ತಮ್ಮ ಗಮನ ಕೇಂದ್ರೀಕರಿಸಿದ್ದು, ಬೇರೆ ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿಲ್ಲ ಎಂದು ಮಿಚೆಲ್ ಮಾರ್ಷ್ ಸ್ಪಷ್ಟಪಡಿಸಿದ್ದಾರೆ. ಭದ್ರತಾ ಕಾಳಜಿಯನ್ನು ಮುಂದಿಟ್ಟುಕೊಂಡು ಬಾಂಗ್ಲಾದೇಶ ಭಾರತದಲ್ಲಿ ಪಂದ್ಯಗಳನ್ನು ಆಡಲು ಹಿಂಜರಿಯುತ್ತಿದೆ ಎಂದು ತಿಳಿದುಬಂದಿದೆ.
ಅಂದಹಾಗೆ, ಆಸ್ಟ್ರೇಲಿಯಾದ ಪಾಕಿಸ್ತಾನ ಪ್ರವಾಸವು ಯಾವುದೇ ಅಡೆತಡೆಯಿಲ್ಲದೆ ನಡೆಯಿತು. ಆಸೀಸ್ ತಂಡವು ಮೂರು ಪಂದ್ಯಗಳ ಟಿ20 ಸರಣಿಯನ್ನು 0-3 ಅಂತರದಿಂದ ಸೋತಿತು. ಅನೇಕ ಹಿರಿಯ ಮತ್ತು ಸ್ಫೋಟಕ ಆಟಗಾರರು ಪಾಕ್​ ಪ್ರವಾಸಕ್ಕೆ ಬರಲಿಲ್ಲ. ಅವರೆಲ್ಲರೂ 2026ರ ಟಿ20 ವಿಶ್ವಕಪ್ ಪ್ರಾರಂಭವಾಗುವ ಮೊದಲು ಆಸೀಸ್ ತಂಡವನ್ನು ಸೇರಿಕೊಳ್ಳುತ್ತಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net