ಮೊದಲ ಪಂದ್ಯದಲ್ಲೇ ಭರ್ಜರಿ ಪ್ರದರ್ಶನ... ಯಶಸ್ಸಿನ ಹಿಂದಿರುವ ಅಸಲಿ ರಹಸ್ಯ ಬಿಚ್ಚಿಟ್ಟ ವಿರಾಟ್​ ಕೊಹ್ಲಿ! Virat Kohli

ಮೊದಲ ಪಂದ್ಯದಲ್ಲೇ ಭರ್ಜರಿ ಪ್ರದರ್ಶನ... ಯಶಸ್ಸಿನ ಹಿಂದಿರುವ ಅಸಲಿ ರಹಸ್ಯ ಬಿಚ್ಚಿಟ್ಟ ವಿರಾಟ್​ ಕೊಹ್ಲಿ! Virat Kohli
ಮೊದಲ ಪಂದ್ಯದಲ್ಲೇ ಭರ್ಜರಿ ಪ್ರದರ್ಶನ... ಯಶಸ್ಸಿನ ಹಿಂದಿರುವ ಅಸಲಿ ರಹಸ್ಯ ಬಿಚ್ಚಿಟ್ಟ ವಿರಾಟ್​ ಕೊಹ್ಲಿ! Virat Kohli
Published on

ಪ್ರಮುಖ ಮುಖ್ಯಾಂಶಗಳು

  • ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡವು ಐಪಿಎಲ್-2026ರ ಆವೃತ್ತಿಯನ್ನು ಭರ್ಜರಿಯಾಗಿ ಆರಂಭಿಸಿದೆ
  • ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತೊಮ್ಮೆ ತಮ್ಮ ಶ್ರೇಷ್ಠತೆಯನ್ನು ಪ್ರದರ್ಶಿಸಿದ್ದಾರೆ
  • ಐಪಿಎಲ್-2026ರ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಅಜೇಯ 69 ರನ್ ಗಳಿಸಿದ ಕೊಹ್ಲಿ
  • ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, ತಮ್ಮ ಅದ್ಭುತ ಫಾರ್ಮ್‌ನ ರಹಸ್ಯವನ್ನು ಬಹಿರಂಗಪಡಿಸಿದರು
Virat Kohli : ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಪ್ರಸ್ತುತ ಒಂದೇ ಮಾದರಿಯಲ್ಲಿ ಆಡುತ್ತಿರುವುದು ನಿಮಗೆಲ್ಲರಿಗೂ ತಿಳಿದಿದೆ. 2024ರ ಟಿ20 ವಿಶ್ವಕಪ್ ಗೆಲುವಿನ ಬಳಿಕ ಟಿ20 ಸ್ವರೂಪಕ್ಕೆ ವಿದಾಯ ಹೇಳಿದ ಕೊಹ್ಲಿ, ಕೆಲವೇ ತಿಂಗಳುಗಳಲ್ಲಿ ಟೆಸ್ಟ್‌ ಮಾದರಿಗೂ ವಿದಾಯ ಘೋಷಣೆ ಮಾಡಿದರು. ಪ್ರಸ್ತುತ ಭಾರತಕ್ಕಾಗಿ ಕೇವಲ ಏಕದಿನ ಮಾದರಿಯಲ್ಲಿ ಆಡುತ್ತಿರುವ ಕೊಹ್ಲಿ, 2027ರ ಏಕದಿನ ವಿಶ್ವಕಪ್​ವರೆಗೆ ಮುಂದುವರಿಯಲಿದ್ದಾರೆ. ಏಕದಿನ ಮಾದರಿಯಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಕೊಹ್ಲಿ, ಅದೇ ಯಶಸ್ಸನ್ನು ನಿನ್ನೆಯಷ್ಟೇ (ಮಾರ್ಚ್​ 28) ಶುರುವಾಗಿರುವ 19ನೇ ಆವೃತ್ತಿಯ ಐಪಿಎಲ್​ನಲ್ಲೂ ಮುಂದುವರಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡವು ಐಪಿಎಲ್-2026ರ ಆವೃತ್ತಿಯನ್ನು ಭರ್ಜರಿಯಾಗಿ ಆರಂಭಿಸಿದೆ. ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತೊಮ್ಮೆ ತಮ್ಮ ಶ್ರೇಷ್ಠತೆಯನ್ನು ಪ್ರದರ್ಶಿಸಿದ್ದಾರೆ. ಎರಡು ತಿಂಗಳ ವಿರಾಮದ ನಂತರ ಮೈದಾನಕ್ಕೆ ಇಳಿದ ಕೊಹ್ಲಿ, ಐಪಿಎಲ್-2026ರ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಅಜೇಯ 69 ರನ್ ಗಳಿಸಿ ತಂಡಕ್ಕೆ ಆರಾಮದಾಯಕ ಗೆಲುವು ತಂದುಕೊಟ್ಟರು.
181.58ರ ಸ್ಟ್ರೈಕ್ ರೇಟ್‌ನಲ್ಲಿ 38 ಎಸೆತಗಳಲ್ಲಿ 5 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಸಿಡಿಸಿದ ಕೊಹ್ಲಿ, ತಮ್ಮ 'ಚೇಸ್ ಮಾಸ್ಟರ್' ಟ್ಯಾಗ್ ಅನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಆರ್‌ಸಿಬಿ 4.2 ಓವರ್‌ಗಳು ಬಾಕಿ ಇರುವಾಗಲೇ 202 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿತು. ಈ ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, ತಮ್ಮ ಅದ್ಭುತ ಫಾರ್ಮ್‌ನ ರಹಸ್ಯವನ್ನು ಬಹಿರಂಗಪಡಿಸಿದರು.
ನಾನು ಕೊನೆಯ ಬಾರಿಗೆ ಟಿ20 ಪಂದ್ಯವನ್ನು ಕಳೆದ ವರ್ಷ ಫೈನಲ್‌ನಲ್ಲಿ ಆಡಿದ್ದೆ. ಆದರೆ, ಇತ್ತೀಚೆಗೆ ನಾನು ಏಕದಿನ ಪಂದ್ಯಗಳಲ್ಲಿ ಆಡಿದ ರೀತಿ ನನಗೆ ಒಳ್ಳೆಯ ಲಯವನ್ನು ಕಾಯ್ದುಕೊಳ್ಳಲು ಸಹಾಯವಾಯಿತು. ಏಕದಿನ ಪಂದ್ಯದಲ್ಲಿ ನಾನು ಸರಳ ಹೊಡೆತಗಳನ್ನು ಆಡಿದೆ. ಎಲ್ಲಿಯವರೆಗೆ ನೀವು ಲಯದಲ್ಲಿ ಉಳಿಯುತ್ತೀರಿ ಮತ್ತು ನಿಮ್ಮ ಫಿಟ್‌ನೆಸ್‌ ಅನ್ನು ಕಾಯ್ದುಕೊಳ್ಳಲು ತುಂಬಾ ಶ್ರಮಿಸುತ್ತೀರಿ ಅಲ್ಲಿಯವರೆಗೆ ಉತ್ತಮ ಫಲಿತಾಂಶಗಳು ಖಂಡಿತವಾಗಿಯೂ ಬರುತ್ತವೆ ಎಂದು ಕೊಹ್ಲಿ ಹೇಳಿದರು.
ತಮ್ಮ ವೃತ್ತಿಜೀವನದಲ್ಲಿ ಫಿಟ್​ನೆಸ್​ ಮತ್ತು ಮಾನಸಿಕ ತಾಜಾತನ ಎಷ್ಟು ಮುಖ್ಯ ಎಂಬುದನ್ನು ಇದೇ ಸಂದರ್ಭದಲ್ಲಿ ಕೊಹ್ಲಿ ವಿವರಿಸಿದರು. ಕಳೆದ 15 ವರ್ಷಗಳಲ್ಲಿ ನಾನು ಆಡಿರುವ ಪಂದ್ಯಗಳ ಸಂಖ್ಯೆ ತುಂಬಾನೇ ಹೆಚ್ಚಿದೆ. ಅದಕ್ಕಾಗಿಯೇ ನಾನು ಬರ್ನ್ಔಟ್ (ತುಂಬಾ ದಣಿದಿರುವುದು) ಆಗಿರುವ ಸಾಧ್ಯತೆ ಇದೆ. ಹೀಗಾಗಿ, ಮಾನಸಿಕವಾಗಿ ವಿರಾಮಗಳು ತುಂಬಾ ಉಪಯುಕ್ತವಾಗಿವೆ. ನಾನೀಗ ಒಂದೇ ಸ್ವರೂಪದಲ್ಲಿ ಆಡುತ್ತಿರುವುದರಿಂದ, ನನಗೆ ಸರಿಯಾದ ವಿಶ್ರಾಂತಿ ಸಿಗುತ್ತದೆ. ಅದಕ್ಕಾಗಿಯೇ ನಾನು ತುಂಬಾ ಫ್ರೆಶ್ ಮತ್ತು ಉತ್ಸಾಹಭರಿತನಾಗಿದ್ದೇನೆ. ನಾನು ಮೈದಾನದಲ್ಲಿ ಶೇ. 120 ರಷ್ಟು ನನ್ನ ಪ್ರಯತ್ನವನ್ನು ನೀಡುತ್ತೇನೆ. ನಾನು ಸಿದ್ಧತೆ ಇಲ್ಲದೆ ಮೈದಾನಕ್ಕೆ ಹೋಗುವುದಿಲ್ಲ. ನಾನು ಫಿಟ್ ಮತ್ತು ಮಾನಸಿಕವಾಗಿ ಫ್ರೆಶ್ ಆಗಿದ್ದರೆ, ತಂಡಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಕೊಹ್ಲಿ ಹೇಳಿದರು.

ಪಡಿಕ್ಕಲ್​ ಕೊಂಡಾಡಿದ ಕೊಹ್ಲಿ

ದೇವದತ್ತ್ ಪಡಿಕ್ಕಲ್ ಅದ್ಭುತ ಇನ್ನಿಂಗ್ಸ್ ಆಡಿದರು. ನಾನು ಆರಂಭದಿಂದಲೂ ಪವರ್‌ಪ್ಲೇನಲ್ಲಿ ಆಕ್ರಮಣಕಾರಿಯಾಗಿ ಆಡಲು ಬಯಸಿದ್ದೆ. ಆದರೆ, ಪಡಿಕ್ಕಲ್ ಆಡುವ ರೀತಿಯನ್ನು ನೋಡಿ, ನಾನು ಅವರಿಗೆ ಸ್ಟ್ರೈಕ್ ನೀಡಲು ಮತ್ತು ಮಧ್ಯದಲ್ಲಿ ಬೌಂಡರಿಗಳನ್ನು ಹೊಡೆಯಲು ನಿರ್ಧರಿಸಿದೆ. ಪಡಿಕ್ಕಲ್​ ಅವರು ಎದುರಾಳಿಗಳ ಕೈಯಿಂದ ಪಂದ್ಯವನ್ನು ಸಂಪೂರ್ಣವಾಗಿ ಕಸಿದುಕೊಂಡರು. ಮಿಡ್-ಆನ್‌ನಲ್ಲಿ ನಿಧಾನಗತಿಯ ಚೆಂಡನ್ನೂ ಸಿಕ್ಸರ್‌ಗೆ ಹೊಡೆದರು. ನಂತರ ನಾನು ಪಡಿಕ್ಕಲ್ ಬಳಿ ಹೋಗಿ, 'ಇದೇ ರೀತಿ ಆಟ ಮುಂದುವರಿಸಿ, ನೀವು ಅದ್ಭುತವಾಗಿ ಆಡುತ್ತಿದ್ದೀರಿ' ಎಂದು ಹೇಳಿದೆ. ಪಂದ್ಯವು 25 ರಿಂದ 26 ಎಸೆತಗಳು ಬಾಕಿ ಇರುವಾಗಲೇ ಕೊನೆಗೊಂಡರೆ, ಅದು ನೆಟ್ ರನ್ ರೇಟ್‌ಗೆ ಸಹ ಉಪಯುಕ್ತವಾಗುತ್ತದೆ ಎಂದು ಹೇಳಿದೆ. ಅವರ ಟೈಮಿಂಗ್​, ಹೆಡ್ ಪೊಸಿಷನ್ ಮತ್ತು ಸಮತೋಲನ ಅದ್ಭುತವಾಗಿದೆ. ಆತ್ಮವಿಶ್ವಾಸವಿದ್ದರೆ ಬ್ಯಾಟ್‌ನೊಂದಿಗೆ ಹೇಗೆ ಆಡಬಹುದೆಂದು ನನಗೆ ತಿಳಿದಿದೆ. ಅದಕ್ಕೆ ಪಡಿಕ್ಕಲ್ ಅವರ ಪ್ರತಿಭೆಗೆ ಉತ್ತಮ ಉದಾಹರಣೆ ಎಂದು ಕೊಹ್ಲಿ ಹೊಗಳಿದರು.
ಪಂದ್ಯದ ವಿಚಾರಕ್ಕೆ ಬಂದರೆ, ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿನ್ನೆ (ಮಾರ್ಚ್​ 28) ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಎಸ್​ಆರ್​ಎಚ್ ತಂಡ ನಿಗದಿತ 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗಳ ನಷ್ಟಕ್ಕೆ 201 ರನ್​ಗಳ ಬೃಹತ್​ ಮೊತ್ತ ಗಳಿಸಿತು. ಇದಾದ ನಂತರ, ಆರ್​ಸಿಬಿ ಬ್ಯಾಟ್ಸ್‌ಮನ್‌ಗಳು ಆಕ್ರಮಣಕಾರಿಯಾಗಿ ಆಡಿದರು. ಕೇವಲ 15.4 ಓವರ್‌ಗಳಲ್ಲಿ ಕೇವಲ ನಾಲ್ಕು ವಿಕೆಟ್‌ಗಳ ನಷ್ಟಕ್ಕೆ 203 ರನ್ ಗಳಿಸಿದರು. ಇದರೊಂದಿಗೆ, ಆರ್​ಸಿಬಿ ತಂಡವು ಆರು ವಿಕೆಟ್‌ಗಳ ಭಾರಿ ಅಂತರದಿಂದ ಜಯಗಳಿಸಿತು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net