ಒಲಿಂಪಿಕ್ಸ್​ನಲ್ಲಿ 92 ಮೀಟರ್​​ ಎಸೆದು ಚಿನ್ನ ಗೆದ್ದಿದ್ದ ಪಾಕ್​ ಜಾವೆಲಿನ್​ ಸ್ಟಾರ್​ ಅರ್ಷದ್ ಈ ಬಾರಿ ಕಂಚನ್ನೂ ಗೆಲ್ಲಲಿಲ್ಲ ಏಕೆ? Arshad Nadeem

ಒಲಿಂಪಿಕ್ಸ್​ನಲ್ಲಿ 92 ಮೀಟರ್​​ ಎಸೆದು ಚಿನ್ನ ಗೆದ್ದಿದ್ದ ಪಾಕ್​ ಜಾವೆಲಿನ್​ ಸ್ಟಾರ್​ ಅರ್ಷದ್ ಈ ಬಾರಿ ಕಂಚನ್ನೂ ಗೆಲ್ಲಲಿಲ್ಲ ಏಕೆ? Arshad Nadeem
ಒಲಿಂಪಿಕ್ಸ್​ನಲ್ಲಿ 92 ಮೀಟರ್​​ ಎಸೆದು ಚಿನ್ನ ಗೆದ್ದಿದ್ದ ಪಾಕ್​ ಜಾವೆಲಿನ್​ ಸ್ಟಾರ್​ ಅರ್ಷದ್ ಈ ಬಾರಿ ಕಂಚನ್ನೂ ಗೆಲ್ಲಲಿಲ್ಲ ಏಕೆ? Arshad Nadeem
Published on

ಪ್ರಮುಖ ಮುಖ್ಯಾಂಶಗಳು

  • ಅರ್ಷದ್ ನದೀಮ್ ಗ್ಲಾಸ್ಗೋ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಹೀನಾಯ ಸೋಲು
  • ಶ್ರೀಲಂಕಾದ ರೂಮೇಶ್ ತರಂಗ ಪತಿರಗೆಗೆ ಜಾವೆಲಿನ್ ನಲ್ಲಿ ಚಿನ್ನದ ಪದಕ
  • ನೀರಜ್ ಚೋಪ್ರಾ ಬೆಳ್ಳಿ ಪದಕ ಹಾಗೂ ಯಶ್ ವಿರ್ ಸಿಂಗ್ ಗೆ ಕಂಚು
  • ತರಬೇತಿ ಕೊರತೆ ಮತ್ತು ವ್ಯವಹಾರಗಳಲ್ಲಿ ಮಗ್ನರಾಗಿರುವುದೇ ಅರ್ಷದ್ ವೈಫಲ್ಯಕ್ಕೆ ಕಾರಣ
  • ಸರ್ಕಾರ ಹಾಗೂ ಒಕ್ಕೂಟದ ನೆರವಿಗಾಗಿ ಕಾಯದೆ ಸ್ವಂತ ಖರ್ಚಿನಿಂದ ತರಬೇತಿ ಪಡೆಯಬೇಕಿತ್ತು
Arshad Nadeem : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಜಯಸಿ ವಿಶ್ವದ ಗಮನ ಸೆಳೆದಿದ್ದ ಪಾಕಿಸ್ತಾನದ ಜಾವೆಲಿನ್​ ಎಸೆತಗಾರ ಅರ್ಷದ್​ ನದೀಮ್​, ಪ್ರಸ್ತುತ ಸ್ಕಾಟ್ಲೆಂಡ್​ನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್​ವೆಲ್ತ್​ ಕ್ರೀಡಾಕೂಟದಲ್ಲಿ ಯಾವುದೇ ಪದಕ ಜಯಿಸಿದಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ. 2024ರಲ್ಲಿ ನಡೆದ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಬರೋಬ್ಬರಿ 92.97 ಮೀಟರ್​ ದೂರ ಜಾವೆಲಿನ್​ ಎಸೆದು ದಾಖಲೆ ಬರೆದಿದ್ದ ಅರ್ಷದ್​ ಇದೀಗ ಕಾಮನ್​ವೆಲ್ತ್​ ಕ್ರೀಡಾಕೂಟದ 12 ಮಂದಿಯನ್ನು ಒಳಗೊಂಡ ಫೈನಲ್​ ಪಂದ್ಯದಲ್ಲಿ 9ನೇ ಸ್ಥಾನಕ್ಕೆ ಕುಸಿಯುವ ಮೂಲಕ ತಮ್ಮ ಅಭಿಮಾನಿಗಳು ಹಾಗೂ ತರಬೇತುದಾರರಿಗೆ ಬೇಸರ ಮೂಡಿಸಿದ್ದಾರೆ.
ಅರ್ಷದ್ ಅವರು 78.63 ಮೀಟರ್‌ಗಳ ವೀಕ್ ಥ್ರೋ ಮೂಲಕ ಹೇಗೋ ಕಷ್ಟಪಟ್ಟು ಅಂತಿಮ ಸುತ್ತಿಗೆ ಅರ್ಹತೆ ಪಡೆದರು. ಆದರೆ, ಫೈನಲ್‌ನಲ್ಲಿ ಕೇವಲ 77.41 ಮೀಟರ್‌ ಮಾತ್ರ ಜಾವೆಲಿನ್​ ಎಸೆಯಲು ಸಾಧ್ಯವಾಯಿತು. ಆದರೆ, ಇದು ಫೈನಲ್​ನ ಕಠಿಣ ಸ್ಪರ್ಧೆಗೆ ಸಾಕಾಗಲಿಲ್ಲ. ಇನ್ನು ಈ ಫೈನಲ್​ ಪಂದ್ಯದಲ್ಲಿ ಶ್ರೀಲಂಕಾದ ಉದಯೋನ್ಮುಖ ಜಾವೆಲಿನ್​ ಎಸೆತಗಾರರ ರೂಮೇಶ್ ತರಂಗ ಪತಿರಗೆ ಅವರು ಅತ್ಯುತ್ತಮ 89.75 ಮೀಟರ್‌ಗಳ ದೂರ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
ಅಂದಹಾಗೆ, ಭಾರತದ ಜಾವೆಲಿನ್​ ಸ್ಟಾರ್​ ನೀರಜ್​ ಚೋಪ್ರಾ ಬೆಳ್ಳಿ ಪದಕವನ್ನು ಜಯಿಸಿದರೆ, ಭಾರತದ ಉಯೋನ್ಮುಖ ಜಾವೆಲಿನ್​ ಎಸೆತಗಾರ ಯಶ್​ ವಿರ್​ ಸಿಂಗ್​ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

ಅರ್ಷದ್​ ವೈಫಲ್ಯಕ್ಕೆ ಕಾರಣವೇನು?

ಗ್ಲಾಸ್ಗೋದಲ್ಲಿನ ಕಾಮನ್​ವೆಲ್ತ್​ ಕ್ರೀಡಾಕೂಟದಲ್ಲಿ ಅರ್ಷದ್​ ಅವರ ಕಳಪೆ ಪ್ರದರ್ಶನಕ್ಕೆ ಅವರ ನಿರ್ಲಕ್ಷ್ಯ, ಸರಿಯಾದ ತರಬೇತಿಯ ಕೊರತೆ ಮತ್ತು ಅತಿಯಾದ ಆತ್ಮತೃಪ್ತಿಯೇ ಕಾರಣ ಎಂದು ಪಾಕಿಸ್ತಾನ ಅಥ್ಲೆಟಿಕ್ಸ್ ಫೆಡರೇಷನ್‌ನ ಮಾಜಿ ಅಧ್ಯಕ್ಷ ಅಕ್ರಮ್ ಸಾಹಿ ಮತ್ತು ಮತ್ತೊಬ್ಬ ಮಾರ್ಗದರ್ಶಕರು ಕಟುವಾಗಿ ಟೀಕಿಸಿದ್ದಾರೆ. ಒಲಿಂಪಿಕ್ಸ್ ನಂತರ ಬಂದ ದೊಡ್ಡ ಮೊತ್ತದ ಬಹುಮಾನದ ಹಣವನ್ನು ದಕ್ಷಿಣ ಆಫ್ರಿಕಾದಲ್ಲಿ ಸ್ವಂತ ಖರ್ಚಿನಲ್ಲಿ ತರಬೇತಿ ಪಡೆಯಲು ಬಳಸಿಕೊಳ್ಳುವ ಬದಲು, ನದೀಮ್ ಅವರು ಸರ್ಕಾರ ಮತ್ತು ಒಕ್ಕೂಟದ ಆರ್ಥಿಕ ನೆರವಿಗಾಗಿ ಕಾದರು ಎಂದು ಹಿರಿಯರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಚೆಗೆ ಜಾವೆಲಿನ್ ಥ್ರೋಗೆ ಸಂಬಂಧವಿಲ್ಲದ ಸಾಮಾನ್ಯ ಡಿಸ್ಕಸ್ ಥ್ರೋ ಕ್ರೀಡಾಪಟು ಸಲ್ಮಾನ್ ಬಟ್ ಅವರನ್ನು ಕೋಚ್ ಆಗಿ ನೇಮಿಸಿಕೊಂಡಿರುವುದು ಮತ್ತು ಮಿಯಾ ಚನ್ನುವಿನಲ್ಲಿ ಮ್ಯಾರೇಜ್ ಹಾಲ್ ಹಾಗೂ ರೆಸ್ಟೋರೆಂಟ್ ನಿರ್ಮಾಣದಂತಹ ವ್ಯವಹಾರಗಳಲ್ಲಿ ನಿರತರಾಗಿರುವುದು ಅವರ ಗಮನವನ್ನು ಬೇರೆಡೆಗೆ ಸೆಳೆದಿವೆ ಎಂದು ಅಭಿಪ್ರಾಯಗಳು ಪಾಕಿಸ್ತಾನದ ಕ್ರೀಡಾಲೋಕದಲ್ಲಿ ಕೇಳಿಬರುತ್ತಿವೆ.
ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಲು ದಕ್ಷಿಣ ಆಫ್ರಿಕಾದ ತರಬೇತುದಾರ ಟೆರ್ಸಿಯಸ್ ಲೈಬೆನ್‌ಬರ್ಗ್ ಮತ್ತು ನಾರ್ತ್‌ವೆಸ್ಟ್ ವಿಶ್ವವಿದ್ಯಾಲಯದ ತರಬೇತಿ ಶಿಬಿರಗಳು ಕಾರಣವಾಗಿದ್ದವು, ಆದರೆ ಹಜ್ ಯಾತ್ರೆಯ ನಂತರ ಅಂತಹ ಗಂಭೀರ ತರಬೇತಿ ಮುಂದುವರಿಯಲಿಲ್ಲ. ಗ್ಲಾಸ್ಗೋ ಸ್ಪರ್ಧೆಯಲ್ಲಿ ಪದಕ ಕೈ ತಪ್ಪಿದರೂ, ಶ್ರೀಲಂಕಾದ ಉದಯೋನ್ಮುಖ ತಾರೆ ರೂಮೇಶ್ ತರಂಗ ಪತಿರಗೆ ಮತ್ತು ವಿರ್ ಸಿಂಗ್ ಅವರಂತಹ ದಕ್ಷಿಣ ಏಷ್ಯಾದ ಕ್ರೀಡಾಪಟುಗಳು ಮುಂಚೂಣಿಗೆ ಬರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಸಾಹಿ ಸಂತಸ ವ್ಯಕ್ತಪಡಿಸಿದರು.
ಕ್ರೀಡಾಪಟುಗಳಿಗೆ ಕೋಟ್ಯಂತರ ಹಣದ ಬಹುಮಾನ ನೀಡಿ ಮುದ್ದಿಸುವ ಬದಲು, ವಿದೇಶಗಳಲ್ಲಿ ಉತ್ತಮ ತರಬೇತಿ ಮತ್ತು ಸೌಲಭ್ಯಗಳನ್ನು ಕಲ್ಪಿಸಬೇಕಿತ್ತು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದು, ನದೀಮ್ ಕಂಬ್ಯಾಕ್ ಮಾಡುವುದು ಕಷ್ಟಸಾಧ್ಯ ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net