ಹೆಚ್ಚಾದ ನಿವೃತ್ತಿ ವದಂತಿ... ಕೊನೆಗೂ ಮೌನ ಮುರಿದ ರೋಹಿತ್​ ಶರ್ಮ ಕೊಟ್ಟೇ ಬಿಟ್ರೂ ಖಡಕ್​ ಉತ್ತರ! Rohit Sharma

ಹೆಚ್ಚಾದ ನಿವೃತ್ತಿ ವದಂತಿ... ಕೊನೆಗೂ ಮೌನ ಮುರಿದ ರೋಹಿತ್​ ಶರ್ಮ ಕೊಟ್ಟೇ ಬಿಟ್ರೂ ಖಡಕ್​ ಉತ್ತರ! Rohit Sharma
ಹೆಚ್ಚಾದ ನಿವೃತ್ತಿ ವದಂತಿ... ಕೊನೆಗೂ ಮೌನ ಮುರಿದ ರೋಹಿತ್​ ಶರ್ಮ ಕೊಟ್ಟೇ ಬಿಟ್ರೂ ಖಡಕ್​ ಉತ್ತರ! Rohit Sharma
Published on

ಪ್ರಮುಖ ಮುಖ್ಯಾಂಶಗಳು

  • ಲಾರ್ಡ್ಸ್ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದು ಏಕದಿನ ಸರಣಿಯ ಅಂತಿಮ ಹೈ ವೋಲ್ಟೇಜ್ ಸಮರ
  • ಹ್ಯಾರಿ ಬ್ರೂಕ್ ನೇತೃತ್ವದ ಇಂಗ್ಲೆಂಡ್ ಪಡೆ ಭಾರತದ ವಿರುದ್ಧ ಎಂಟು ವರ್ಷಗಳ ನಂತರ ಸರಣಿ ಗೆಲ್ಲಲು ಸಜ್ಜಾಗಿದೆ
  • ರೋಹಿತ್ ಶರ್ಮಾ ನಿವೃತ್ತಿ ವದಂತಿಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಆರಂಭವಾಗಿದೆ
  • ತಮ್ಮ ಏಕದಿನ ಕ್ರಿಕೆಟ್ ಭವಿಷ್ಯದ ಕುರಿತಾದ ವದಂತಿಗಳಿಗೆ ಬ್ಯಾಟಿಂಗ್ ಕೋಚ್ ಜೊತೆಗಿನ ವಿಡಿಯೋ ಮೂಲಕ ಟಾಂಗ್ ನೀಡಿದ ರೋಹಿತ್ ಶರ್ಮಾ
Rohit Sharma : ವಿಶ್ವ ಕ್ರಿಕೆಟ್‌ನ ಅತ್ಯಂತ ಐತಿಹಾಸಿಕ ಅಂಗಳ ಲಂಡನ್‌ನ ಲಾರ್ಡ್ಸ್ ಮೈದಾನ ಈಗ ಮತ್ತೊಂದು ಜಿದ್ದಾಜಿದ್ದಿನ ಮಹಾ ಸಮರಕ್ಕೆ ಸಾಕ್ಷಿಯಾಗಲು ಸಂಪೂರ್ಣ ಸಜ್ಜಾಗಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯವು ಕೇವಲ ಸರಣಿಯ ವಿಜೇತರನ್ನು ನಿರ್ಧರಿಸುವ ಪಂದ್ಯವಾಗಿ ಉಳಿದಿಲ್ಲ, ಬದಲಿಗೆ ಉಭಯ ದೇಶಗಳ ನಡುವಿನ 22ನೇ ದ್ವಿಪಕ್ಷೀಯ ಏಕದಿನ ಸರಣಿಯ ಚಾಂಪಿಯನ್ ಪಟ್ಟ ಯಾರಿಗೆ ಒಲಿಯಲಿದೆ ಎಂಬುದನ್ನು ನಿರ್ಣಯಿಸುವ ಅಸಲಿ ಫೈನಲ್ ಕದನವಾಗಿ ಮಾರ್ಪಟ್ಟಿದೆ. ಕಾರ್ಡಿಫ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ನ ಅನುಭವಿ ಬ್ಯಾಟ್ಸ್‌ಮನ್ ಜೋ ರೂಟ್ ಅಜೇಯ 99 ರನ್ ಗಳಿಸುವ ಮೂಲಕ ಸರಣಿಯನ್ನು ಸಮಬಲಗೊಳಿಸಿದ್ದು, ಲಾರ್ಡ್ಸ್ ಅಖಾಡದಲ್ಲಿ ನಡೆಯಲಿರುವ ಈ ಪಂದ್ಯ ಈಗ ಉಭಯ ತಂಡಗಳಿಗೂ 'ಮಾಡೂ ಇಲ್ಲವೇ ಮಡಿ' ಎಂಬಂತಾಗಿದೆ.
ಇಂಗ್ಲೆಂಡ್ ತಂಡಕ್ಕೆ ಈ ಪಂದ್ಯ ಹೊಸ ಇತಿಹಾಸ ಸೃಷ್ಟಿಸಲು ಸಿಕ್ಕಿರುವ ಸುವರ್ಣ ಅವಕಾಶವಾಗಿದೆ. ಏಕೆಂದರೆ, ಇದುವರೆಗೆ ನಡೆದಿರುವ 21 ದ್ವಿಪಕ್ಷೀಯ ಏಕದಿನ ಸರಣಿಗಳಲ್ಲಿ ಇಂಗ್ಲೆಂಡ್ ಕೇವಲ 7 ಬಾರಿ ಮಾತ್ರ ಜಯಭೇರಿ ಬಾರಿಸಿದೆ. ಅಷ್ಟೇ ಅಲ್ಲದೆ, ಭಾರತದ ವಿರುದ್ಧ ಇಂಗ್ಲೆಂಡ್ ಕೊನೆಯ ಬಾರಿಗೆ ಏಕದಿನ ಸರಣಿ ಗೆದ್ದಿದ್ದು ಬರೋಬ್ಬರಿ ಎಂಟು ವರ್ಷಗಳ ಹಿಂದೆ, ಅಂದರೆ 2018 ರಲ್ಲಿ. ಹೀಗಾಗಿ, ಸುದೀರ್ಘ ಕಾಯುವಿಕೆಗೆ ಬ್ರೇಕ್ ಹಾಕಿ, ಈ ಬಾರಿ ಪ್ರವಾಸಿ ಟೀಮ್ ಇಂಡಿಯಾವನ್ನು ಮಣಿಸಿ ಹೊಸ ಇತಿಹಾಸ ಬರೆಯಲು ಹ್ಯಾರಿ ಬ್ರೂಕ್ ನೇತೃತ್ವದ ಇಂಗ್ಲೆಂಡ್ ಪಡೆ ಸರ್ವಸನ್ನದ್ಧವಾಗಿದೆ. ಅತ್ತ ರೋಹಿತ್ ಶರ್ಮಾ ಅವರ ನಿವೃತ್ತಿಯ ಹಿನ್ನೆಲೆಯಲ್ಲಿ ಈ ಸರಣಿ ಭಾರತಕ್ಕೂ ಅತ್ಯಂತ ಮಹತ್ವದ್ದಾಗಿದ್ದು, ಲಾರ್ಡ್ಸ್ ಮೈದಾನದಲ್ಲಿ ಟ್ರೋಫಿ ಎತ್ತಿಹಿಡಿಯಲು ಉಭಯ ತಂಡಗಳ ನಡುವೆ ಹೈ-ವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.
ಲಾರ್ಡ್ಸ್ ಮೈದಾನದ ಮಹಾ ಸಮರಕ್ಕೂ ಮುನ್ನ ಭಾರತ ಕ್ರಿಕೆಟ್ ವಲಯದಲ್ಲಿ ಹಿರಿಯ ಆಟಗಾರ ರೋಹಿತ್ ಶರ್ಮ ಅವರ ಭವಿಷ್ಯದ ಕುರಿತು ದೊಡ್ಡ ಚರ್ಚೆಯೊಂದು ಮುಂಚೂಣಿಗೆ ಬಂದಿದೆ. ನಾಯಕತ್ವ ಬದಲಾವಣೆಯಾಗಿದ್ದರೂ ತಂಡದ ಪ್ರಮುಖ ಆಧಾರಸ್ತಂಭವಾಗಿರುವ ರೋಹಿತ್, ಕಾರ್ಡಿಫ್ ಪಂದ್ಯದಲ್ಲಿ ಅತ್ಯಂತ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇದನ್ನೇ ನೆಪವಾಗಿಟ್ಟುಕೊಂಡ ಸಾಮಾಜಿಕ ಜಾಲತಾಣಗಳು, 2027ರ ಏಕದಿನ ವಿಶ್ವಕಪ್‌ಗೂ ಮುನ್ನವೇ ಆಯ್ಕೆದಾರರು ರೋಹಿತ್ ಶರ್ಮಗೆ ವಿದಾಯ ಹೇಳಲಿದ್ದಾರೆ ಎಂಬ ವದಂತಿ ಹಾಗೂ ಊಹಾಪೋಹಗಳನ್ನು ಹರಡಲಾರಂಭಿಸಿದ್ದವು. ಈ ಎಲ್ಲಾ ಚರ್ಚೆಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ, ಸ್ವತಃ ರೋಹಿತ್ ಶರ್ಮಾ ಅವರಿಂದಲೇ ಈ ಕುರಿತು ಮೊದಲ ಪರೋಕ್ಷ ಪ್ರತಿಕ್ರಿಯೆ ಹೊರಬಿದ್ದಿದೆ.
ತಮ್ಮ ಏಕದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ಹೊರಗಡೆ ನಡೆಯುತ್ತಿರುವ ಅಪಪ್ರಚಾರಗಳಿಗೆ ರೋಹಿತ್ ಶರ್ಮ ತಮ್ಮದೇ ಶೈಲಿಯಲ್ಲಿ ಟಾಂಗ್ ನೀಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ರೋಹಿತ್ ಶರ್ಮ ಅವರು ಭಾರತ ತಂಡದ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ ಅವರೊಂದಿಗೆ ಗಂಭೀರವಾಗಿ ಮಾತನಾಡುತ್ತಾ, ಹೊರಗಡೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಮಗೇಕೆ ತಲೆಬಿಸಿ? (ಹಮ್ ಲೋಗ್ ಕೊ ಬಾಹರ್ ಕ್ಯಾ ಚಲ್ ರಹಾ ಹೈ, ಉಸ್ ಸೆ ಹುಮ್ಕೋ ಕ್ಯಾ) ಎಂದು ಹೇಳುತ್ತಿರುವುದು ಸೆರೆಯಾಗಿದೆ. ಈ ವಿಡಿಯೋ ನೋಡಿದ ಕ್ರಿಕೆಟ್ ಅಭಿಮಾನಿಗಳು ರೋಹಿತ್ ಶರ್ಮ ಅವರ ನಿವೃತ್ತಿಯ ಸುದ್ದಿಗಳೆಲ್ಲವೂ ಕೇವಲ ಆಧಾರರಹಿತ ವದಂತಿಗಳಷ್ಟೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಈ ಎಲ್ಲಾ ವದಂತಿಗಳ ನಡುವೆ, ಬಿಸಿಸಿಐ ಮೂಲಗಳಿಂದ ಅತ್ಯಂತ ರೋಚಕ ಮಾಹಿತಿಯೊಂದು ಹೊರಬಿದ್ದಿದೆ. ಕಳೆದ ತಿಂಗಳು ನಡೆದ ಅಫ್ಘಾನಿಸ್ತಾನ ಸರಣಿಗೂ ಮುನ್ನವೇ ಆಯ್ಕೆ ಸಮಿತಿಯ ಕೆಲವು ಸದಸ್ಯರು ರೋಹಿತ್ ಶರ್ಮ ಅವರನ್ನು ಭೇಟಿಯಾಗಿ, ನೀವು ತಂಡದ ಭವಿಷ್ಯದ ಯೋಜನೆಗಳಲ್ಲಿ ಇಲ್ಲ ಎಂಬ ನಿರ್ಧಾರವನ್ನು ತಿಳಿಸಿದ್ದರು ಎನ್ನಲಾಗಿದೆ. ಈ ಮಹತ್ವದ ಚರ್ಚೆಯ ಕುರಿತು ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೂ ಮಾಹಿತಿ ನೀಡಲಾಗಿತ್ತು. ಆದರೆ, ಹಠ ಬಿಡದ ಮಾಜಿ ನಾಯಕ ರೋಹಿತ್ ಶರ್ಮ, ಬಿಸಿಸಿಐನ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರು. ಇದರ ಬೆನ್ನಲ್ಲೇ ಉನ್ನತ ಅಧಿಕಾರಿಗಳ ಹಸ್ತಕ್ಷೇಪದಿಂದಾಗಿ ರೋಹಿತ್ ಅವರನ್ನು ಅಫ್ಘಾನಿಸ್ತಾನ ಸರಣಿ ಮಾತ್ರವಲ್ಲದೆ, ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮಹತ್ವದ ಏಕದಿನ ಸರಣಿಗೂ ಆಯ್ಕೆ ಮಾಡಲಾಗಿದೆ.
ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ರೋಹಿತ್ ಶರ್ಮ, ಈ ಮಾದರಿಯಲ್ಲಿ ಬರೋಬ್ಬರಿ 11,700 ಕ್ಕೂ ಹೆಚ್ಚು ರನ್ ಗಳಿಸಿದ ಅಪಾರ ಅನುಭವ ಹೊಂದಿದ್ದಾರೆ. 2023ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ಫೈನಲ್ ತಲುಪುವಲ್ಲಿ ಹಾಗೂ ಇತ್ತೀಚೆಗೆ ಭಾರತ ತಂಡ 2025ರ ಚಾಂಪಿಯನ್ಸ್ ಟ್ರೋಫಿ ಮುಕುಟ ಧರಿಸುವಲ್ಲಿ ರೋಹಿತ್ ಪಾತ್ರ ಅನನ್ಯವಾಗಿತ್ತು. ಆ ಐತಿಹಾಸಿಕ ಗೆಲುವಿನ ನಂತರ ಶುಭಮಾನ್ ಗಿಲ್ ಭಾರತ ಏಕದಿನ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರೂ ಸಹ, ಬ್ಯಾಟಿಂಗ್ ವಿಭಾಗದಲ್ಲಿ ರೋಹಿತ್ ಶರ್ಮ ಇಂದಿಗೂ ಅತ್ಯಂತ ಹಿರಿಯ ಮತ್ತು ಅನಿವಾರ್ಯ ಆಟಗಾರನಾಗಿ ಉಳಿದಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾದ ಮುಂದಿನ ಮಹತ್ತರ ಯೋಜನೆಗಳಲ್ಲಿ ರೋಹಿತ್ ಪ್ರಮುಖ ತಂತ್ರಗಾರನಾಗಿ ಮುಂದುವರಿದಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net