ಗೂಗಲ್​ ಹುಡುಕಾಟದಲ್ಲಿ ನೀವು ಕೊಹ್ಲಿಯನ್ನೂ ಮೀರಿಸಿದ್ದೀರಿ ಎಂದಿದ್ದಕ್ಕೆ ವೈಭವ್ ಕೊಟ್ಟ ಉತ್ತರ ವೈರಲ್​! Vaibhav Suryavanshi

ವೈಭವ್ ಸೂರ್ಯವಂಶಿ ಹಾಗೂ ವಿರಾಟ್​ ಕೊಹ್ಲಿ
ವೈಭವ್ ಸೂರ್ಯವಂಶಿ ಹಾಗೂ ವಿರಾಟ್​ ಕೊಹ್ಲಿ
Published on

ಪ್ರಮುಖ ಮುಖ್ಯಾಂಶಗಳು

  • ಹೆಚ್ಚಾಯ್ತು ಟೀಮ್ ಇಂಡಿಯಾದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಕ್ರೇಜ್​
  • ಈ ವರ್ಷ ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಭಾರತೀಯ ವ್ಯಕ್ತಿ ವೈಭವ್
  • ವಿಶ್ವದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಆರನೇ ವ್ಯಕ್ತಿಯೂ ವೈಭವ್
Vaibhav Suryavanshi : ಟೀಮ್ ಇಂಡಿಯಾದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಈ ವರ್ಷ ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಭಾರತೀಯ ವ್ಯಕ್ತಿಯಾಗಿದ್ದಾರೆ. ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿಯಂತಹ ದಿಗ್ಗಜ ಆಟಗಾರರಿಗಿಂತ 14 ವರ್ಷದ ವೈಭವ್ ಸೂರ್ಯವಂಶಿಗಾಗಿ ಹೆಚ್ಚಿನ ಜನರು ಗೂಗಲ್‌ನಲ್ಲಿ ಹುಡುಕಿದ್ದಾರೆ. ಈ ವಿಚಾರವನ್ನು ವೈಭವ್ ಸೂರ್ಯವಂಶಿ ಬಳಿ ಹೇಳಿದಾಗ, ಆತ ಕೊಟ್ಟ ಉತ್ತರ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವೈಭವ್ ಸೂರ್ಯವಂಶಿ ಅವರು ಈ ವರ್ಷ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಶುಕ್ರವಾರ ನಡೆದ ಅಂಡರ್-19 ಏಷ್ಯಾಕಪ್‌ನಲ್ಲಿ ಯುಎಇ ವಿರುದ್ಧ ಕೇವಲ 95 ಎಸೆತಗಳಲ್ಲಿ 171 ರನ್ ಗಳಿಸಿದರು. ಈ ಮೂಲಕ, ಅಂಡರ್-19 ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ಆಟಗಾರನೆಂಬ ದಾಖಲೆಗೆ ಪಾತ್ರರಾದರು.
ಈ ಪಂದ್ಯದ ನಂತರ, ಪ್ರಸಾರಕರು ವೈಭವ್ ಸೂರ್ಯವಂಶಿ ಅವರ ಗಮನಕ್ಕೆ ಗೂಗಲ್​ ಸರ್ಚ್ ವಿಚಾರವನ್ನು ತಂದರು. ನಿಮಗಿದು ತಿಳಿದಿಲ್ಲದಿರಬಹುದು. ಏನೆಂದರೆ, ಈ ವರ್ಷ ಗೂಗಲ್‌ನಲ್ಲಿ ಭಾರತದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿ ನೀವು. ಈ ವಿಚಾರದಲ್ಲಿ ನೀವು ಕೊಹ್ಲಿಯನ್ನೂ ಮೀರಿಸಿದ್ದೀರಿ ಮತ್ತು ನೀವು ವಿಶ್ವದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಆರನೇ ವ್ಯಕ್ತಿಯಾಗಿದ್ದೀರಿ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂದು ಸೂರ್ಯವಂಶಿಯನ್ನು ಪ್ರಶ್ನಿಸಲಾಯಿತು.
ಈ ಬಗ್ಗೆ ಸಂತೋಷ ವ್ಯಕ್ತಪಡಿಸಿದ ವೈಭವ್ ಸೂರ್ಯವಂಶಿ, ತಮ್ಮ ಆಟವನ್ನು ಮತ್ತಷ್ಟು ಸುಧಾರಿಸಿಕೊಳ್ಳುವತ್ತ ಗಮನಹರಿಸಿರುವುದಾಗಿ ಹೇಳಿದರು.
ನಾನು ಇಂತಹ ವಿಷಯಗಳ ಮೇಲೆ ಹೆಚ್ಚು ಗಮನಹರಿಸುವುದಿಲ್ಲ. ನಾನು ನನ್ನ ಆಟದ ಮೇಲೆ ಮಾತ್ರ ಗಮನ ಹರಿಸುತ್ತೇನೆ. ಈ ವಿಷಯಗಳ ಬಗ್ಗೆ ಕೇಳಿದಾಗ ಅದು ಖುಷಿ ಕೊಡುತ್ತದೆ. ಒಂದು ಉತ್ತಮ ವಿಷಯ ಎಂದು ನಾನು ಭಾವಿಸುತ್ತೇನೆ. ಆದರೆ, ನಾನಿದನ್ನು ಇಲ್ಲಿಗೆ ಬಿಡುತ್ತೇನೆ. ನನ್ನ ಆಟವನ್ನು ಹೇಗೆ ಮತ್ತಷ್ಟು ಸುಧಾರಿಸುವುದು ಎಂಬುದರ ಮೇಲೆ ನಾನು ಗಮನ ಹರಿಸುತ್ತೇನೆ ಎಂದು ಸೂರ್ಯವಂಶಿ ಹೇಳಿದರು.

ದಾಖಲೆ ಶತಕ

ಅಂದಹಾಗೆ, 2025ರ ಅಂಡರ್-19 ಏಷ್ಯಾ ಕಪ್‌ನ ಭಾಗವಾಗಿ ನಿನ್ನೆ (ಡಿ.12) ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆದ ಭಾರತ ಮತ್ತು ಯುಎಇ ನಡುವಿನ ಪಂದ್ಯದಲ್ಲಿ ವೈಭವ್ ಮತ್ತೊಂದು ಬಿರುಗಾಳಿಯ ಶತಕ ಬಾರಿಸಿದರು. ಕೇವಲ 95 ಎಸೆತಗಳಲ್ಲಿ 14 ಸಿಕ್ಸರ್​ ಮತ್ತು 9 ಬೌಂಡರಿಗಳ ನೆರವಿನಿಂದ 175 ರನ್ ಗಳಿಸಿ ಮತ್ತೊಂದು ದಾಖಲೆಯನ್ನು ಸೂರ್ಯವಂಶಿ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. 14 ವರ್ಷದ ವೈಭವ್ 30 ಎಸೆತಗಳಲ್ಲಿ ಅರ್ಧಶತಕ ಗಳಿಸಿದರೆ, ಅವರು ಕೇವಲ 56 ಎಸೆತಗಳಲ್ಲಿ ಶತಕದ ಗಡಿ ದಾಟಿದರು. ಎರಡನೇ ಓವರ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ವೈಭವ್​ ತಮ್ಮ ರನ್​ ಖಾತೆಯನ್ನು ತೆರೆದರು. ಮೂರನೇ ಓವರ್‌ನಲ್ಲಿ ಆಯುಷ್ ಮಾತ್ರೆ ವಿಕೆಟ್ ಒಪ್ಪಿಸಿದರು ಕೂಡ ವೈಭವ್, ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಅನ್ನು ಮುಂದುವರಿಸಿದರು. ಯುಎಇ ಬೌಲರ್‌ಗಳ ಮೇಲೆ ಮನಬಂದಂತೆ ದಾಳಿ ಮಾಡಿದ ವೈಭವ್​, 30 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಅರ್ಧಶತಕದ ಬಳಿಕ ಇನ್ನಷ್ಟು ಆಕ್ರಮಣಕಾರಿ ಆಟವಾಡಿದ ವೈಭವ್​, ಕೇವಲ 26 ಎಸೆತಗಳಲ್ಲಿ ಮತ್ತೊಂದು ಅರ್ಧಶತಕ ಗಳಿಸಿದರು. ಒಟ್ಟು 56 ಎಸೆತಗಳಲ್ಲಿ ಸೆಂಚುರಿ ಸಿಡಿಸಿದರು. ಶತಕದ ನಂತರವೂ ವೈಭವ್ ಆರ್ಭಟಕ್ಕೆ ಬ್ರೇಕ್​ ಬೀಳಲಿಲ್ಲ. ಬೌಂಡರಿ ಮತ್ತು ಸಿಕ್ಸರ್​ಗಳ ಸುರಿಮಳೆಗೈದರು. 150 ರನ್ ಗಳಿಸಿದ ವೈಭವ್​, ದ್ವಿಶತಕ ಕಡೆಗೆ ದಾಪುಗಾಲು ಇಟ್ಟಿದ್ದರು. ಆದರೆ, ಅಂತಿಮವಾಗಿ 175 ರನ್‌ಗಳಿಗೆ ಔಟ್​ ಆಗಿ ಪೆವಿಲಿಯನ್ ತಲುಪಿದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net