T20 World Cup ; ಮೈಲಿಗಲ್ಲುಗಳಿಗಿಂತ ಟ್ರೋಫಿಯೇ ಮುಖ್ಯ:ವಿಶ್ವಕಪ್ ಗೆದ್ದ ಬೆನ್ನಲ್ಲೇ ಗಂಭೀರ್ ಖಡಕ್ ಸಂದೇಶ!

T20 World Cup
T20 World Cup
Published on
ಅಹಮದಾಬಾದ್: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಟೀಮ್ ಇಂಡಿಯಾ ಟಿ20 ವಿಶ್ವಕಪ್ 2026ರ(T20 World Cup) ಮುಕುಟವನ್ನು ಮುಡಿಗೇರಿಸಿಕೊಂಡಿದೆ. ಇಡೀ ದೇಶ ವಿಜಯೋತ್ಸವದಲ್ಲಿ ಮುಳುಗಿರುವಾಗಲೇ, ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಭಾರತೀಯ ಕ್ರಿಕೆಟ್ ಸಂಸ್ಕೃತಿಯ ಬಗ್ಗೆ ಅತ್ಯಂತ ಮಹತ್ವದ ಮತ್ತು ಆವೇಶಭರಿತ ಹೇಳಿಕೆಯೊಂದನ್ನು ನೀಡಿದ್ದಾರೆ. "ವೈಯಕ್ತಿಕ ಮೈಲಿಗಲ್ಲುಗಳನ್ನು ಆಚರಿಸುವುದನ್ನು ನಿಲ್ಲಿಸಿ, ತಂಡದ ಗೆಲುವನ್ನು ಸಂಭ್ರಮಿಸಿ" ಎಂದು ಗಂಭೀರ್ ಗುಡುಗಿದ್ದಾರೆ.

ಮೈಲಿಗಲ್ಲುಗಳಿಗಿಂತ ಟ್ರೋಫಿಯೇ ಮುಖ್ಯ

ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್, ಭಾರತೀಯ ಕ್ರಿಕೆಟ್‌ನಲ್ಲಿ ದಶಕಗಳಿಂದ ನಡೆದುಕೊಂಡು ಬಂದಿರುವ 'ವೈಯಕ್ತಿಕ ದಾಖಲೆಗಳ ಆರಾಧನೆ'ಗೆ ಅಂತ್ಯ ಹಾಡಲು ಕರೆ ನೀಡಿದ್ದಾರೆ. "ನನ್ನ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಅವರ ತತ್ವ ಒಂದೇ; ನಮಗೆ ಶತಕ ಅಥವಾ ಅರ್ಧಶತಕದಂತಹ ಮೈಲಿಗಲ್ಲುಗಳು ಮುಖ್ಯವಲ್ಲ, ನಮಗೆ ಬೇಕಿರುವುದು ಟ್ರೋಫಿಗಳು ಮಾತ್ರ. ಭಾರತೀಯ ಕ್ರಿಕೆಟ್‌ನಲ್ಲಿ ತುಂಬಾ ಕಾಲದಿಂದ ನಾವು ವೈಯಕ್ತಿಕ ದಾಖಲೆಗಳ ಬಗ್ಗೆಯೇ ಮಾತನಾಡಿದ್ದೇವೆ. ಆದರೆ ನಾನು ಕೋಚ್ ಆಗಿರುವವರೆಗೂ ಮೈಲಿಗಲ್ಲುಗಳ ಚರ್ಚೆಗೆ ಇಲ್ಲಿ ಅವಕಾಶವಿಲ್ಲ," ಎಂದು ಅವರು ಕಟ್ಟುನಿಟ್ಟಾಗಿ ಹೇಳಿದ್ದಾರೆ.

ಸಂಜು ಸ್ಯಾಮ್ಸನ್ ಆಟಕ್ಕೆ ಗಂಭೀರ್ ಶ್ಲಾಘನೆ

ತಂಡದ ಹಿತಕ್ಕಾಗಿ ವೈಯಕ್ತಿಕ ದಾಖಲೆಗಳನ್ನು ತ್ಯಾಗ ಮಾಡುವುದಕ್ಕೆ ಸಂಜು ಸ್ಯಾಮ್ಸನ್ ಅವರ ಆಟವನ್ನು ಗಂಭೀರ್ ಉದಾಹರಣೆಯಾಗಿ ನೀಡಿದರು. "ಕಳೆದ ಮೂರು ಪಂದ್ಯಗಳಲ್ಲಿ ಸಂಜು ಆಟವನ್ನು ನೋಡಿ. ಅವರು 97 (not out) ಮತ್ತು 89 ರನ್‌ಗಳ ಅಬ್ಬರದ ಇನ್ನಿಂಗ್ಸ್ ಆಡಿದರು. ಒಂದು ವೇಳೆ ಅವರು ಕೇವಲ ತಮ್ಮ ಶತಕ ಅಥವಾ ಮೈಲಿಗಲ್ಲಿಗಾಗಿ ಆಡುತ್ತಿದ್ದರೆ, ತಂಡದ ಸ್ಕೋರ್ 50 ರನ್ ಕೂಡ ದಾಟುತ್ತಿರಲಿಲ್ಲ. ಭಯವಿಲ್ಲದ ಕ್ರಿಕೆಟ್ ಆಡುವುದು ಎಂದರೆ ಇದೇ," ಎಂದು ಗಂಭೀರ್ ಪ್ರಶಂಸಿಸಿದರು.

ಸೂರ್ಯಕುಮಾರ್ ಒಬ್ಬ ಅದ್ಭುತ 'ನಾಯಕ'

ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ನಾಯಕತ್ವದ ಶೈಲಿಯನ್ನು ಹೊಗಳಿದ ಗಂಭೀರ್, "ಸೂರ್ಯ ನನ್ನ ಕೆಲಸವನ್ನು ತುಂಬಾ ಸುಲಭಗೊಳಿಸಿದ್ದಾರೆ. ಅವರು ಕೇವಲ ಒಬ್ಬ ಕ್ಯಾಪ್ಟನ್ ಅಲ್ಲ, ಅವರು ಒಬ್ಬ 'ಲೀಡರ್'. ಡ್ರೆಸ್ಸಿಂಗ್ ರೂಮ್‌ನಲ್ಲಿ ಕ್ಯಾಪ್ಟನ್‌ಗಿಂತ ಲೀಡರ್ ಎಂಬ ಪದಕ್ಕೆ ದೊಡ್ಡ ತೂಕವಿದೆ. ನಾವು ಇಬ್ಬರೂ ಒಂದೇ ರೀತಿಯ ಆಲೋಚನೆಯನ್ನು ಹೊಂದಿರುವುದು ನಮ್ಮ ತಂಡದ ಅದೃಷ್ಟ," ಎಂದರು.

ಕ್ರಿಕೆಟ್ ನೋಡುವ ದೃಷ್ಟಿಕೋನ ಬದಲಾಗಲಿ

ಕ್ರಿಕೆಟ್ ಎಂಬುದು ಒಂದು ಸಾಮೂಹಿಕ ಕ್ರೀಡೆ. ಇಲ್ಲಿ ಒಬ್ಬ ಆಟಗಾರ ಎಷ್ಟು ರನ್ ಗಳಿಸಿದ ಎನ್ನುವುದಕ್ಕಿಂತ ತಂಡವು ಎಷ್ಟು ಟ್ರೋಫಿಗಳನ್ನು ಗೆದ್ದಿತು ಎನ್ನುವುದು ಮುಖ್ಯವಾಗಬೇಕು. "ವೈಯಕ್ತಿಕ ರನ್‌ಗಳು ನನಗೆ ಯಾವತ್ತೂ ಮುಖ್ಯವಾಗಿರಲಿಲ್ಲ ಮತ್ತು ಮುಂದೆಯೂ ಆಗುವುದಿಲ್ಲ. ನಮ್ಮ ಏಕೈಕ ಗುರಿ ಭಾರತಕ್ಕೆ ಕೀರ್ತಿ ತರುವ ಟ್ರೋಫಿಗಳನ್ನು ಗೆಲ್ಲುವುದೇ ಆಗಿರಬೇಕು," ಎಂದು ಹೇಳುವ ಮೂಲಕ ಅಭಿಮಾನಿಗಳಲ್ಲಿ ಕೋಚ್​ ಗೌತಮ್​ ಗಂಭೀರ್​ ಹೊಸ ಸಂಚಲನ ಮೂಡಿಸಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net