ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್ನ 8ನೇ ಓವರ್ ಅನ್ನು ಕಿವೀಸ್ ಬೌಲರ್ ರಾಚಿನ್ ರವೀಂದ್ರ ಎಸೆದರು. ಈ ಓವರ್ನ ನಾಲ್ಕನೇ ಎಸೆತದಲ್ಲಿ ಮಾರ್ಕ್ರಮ್ ಬೃಹತ್ ಶಾಟ್ ಬಾರಿಸಿದರು. ಈ ವೇಳೆ ಚೆಂಡು ಲಾಂಗ್ ಆನ್ ಕಡೆಗೆ ಹೋಯಿತು. ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಡರೈಲ್ ಮಿಚೆಲ್ ಮುಂದಕ್ಕೆ ಡೈವ್ ಮಾಡಿ, ಕ್ಯಾಚ್ ಪಡೆದರು. ಆದರೆ, ಚೆಂಡು ನೆಲವನ್ನು ಮುಟ್ಟಿದಂತೆ ತೋರುತ್ತಿತ್ತು. ಹೀಗಾಗಿ, ಫೀಲ್ಡ್ ಅಂಪೈರ್, ಮೂರನೇ ಅಂಪೈರ್ ಸಹಾಯವನ್ನು ಕೋರಿದರು. ರೀಪ್ಲೇನಲ್ಲೂ ಚೆಂಡು ಡರೈಲ್ ಮಿಚೆಲ್ ಅವರ ಬೆರಳುಗಳ ನಡುವೆ ನೆಲವನ್ನು ಮುಟ್ಟಿದಂತೆ ಕಂಡುಬಂದಿತು. ಇದನ್ನು ನೋಡಿದ ಎಲ್ಲರೂ ಮಾರ್ಕ್ರಮ್ ಔಟ್ ಆಗಿಲ್ಲ ಎಂದು ಭಾವಿಸಿದ್ದರು. ಆದರೆ, ಮೂರನೇ ಅಂಪೈರ್ ಅನಿರೀಕ್ಷಿತವಾಗಿ ಔಟ್ ಎಂದು ಘೋಷಿಸಿದಾಗ, ಮಾರ್ಕ್ರಮ್ ಮತ್ತು ದಕ್ಷಿಣ ಆಫ್ರಿಕಾದ ಆಟಗಾರರು ಮತ್ತು ಅಭಿಮಾನಿಗಳು ಆಘಾತಕ್ಕೊಳಗಾದರು. ಚೆಂಡಿನ ಕೆಳಗೆ ಬೆರಳುಗಳಿವೆ ಎಂದು ಭಾವಿಸಿದ ಕಾರಣ ಥರ್ಡ್ ಅಂಪೈರ್ ನಿತಿನ್ ಮೆನನ್, ಔಟ್ ನೀಡಿದರು. ಆ ಹೊತ್ತಿಗೆ, ಮಾರ್ಕ್ರಮ್ 20 ಎಸೆತಗಳಲ್ಲಿ 18 ರನ್ ಗಳಿಸಿ ಕ್ರೀಸ್ನಲ್ಲಿ ಸೆಟ್ ಆಗಿದ್ದರು.