ಟಿ20 ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಆಡಲ್ಲ: ಕ್ರಿಸ್​ ಶ್ರೀಕಾಂತ್​ ಕೊಟ್ಟ ಟಿಪ್ಸ್​ ಫಾಲೋ ಮಾಡ್ತಿದೆ ಪಾಕಿಸ್ತಾನ​! Kris Srikkanth

ಕ್ರಿಸ್​ ಶ್ರೀಕಾಂತ್​ ಕೊಟ್ಟ ಟಿಪ್ಸ್​ ಫಾಲೋ ಮಾಡ್ತಿದೆ ಪಾಕಿಸ್ತಾನ​
ಕ್ರಿಸ್​ ಶ್ರೀಕಾಂತ್​ ಕೊಟ್ಟ ಟಿಪ್ಸ್​ ಫಾಲೋ ಮಾಡ್ತಿದೆ ಪಾಕಿಸ್ತಾನ​
Published on

ಪ್ರಮುಖ ಮುಖ್ಯಾಂಶಗಳು

  • ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದೆ
  • ಫೆ. 7 ರಿಂದ ಈ ಮೆಗಾ ಟೂರ್ನಮೆಂಟ್​ ಆರಂಭವಾಗಲಿದೆ
  • ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಈ ಟೂರ್ನಿಯನ್ನು ಆಯೋಜಿಸುತ್ತಿದೆ
  • ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಆಡದಿರಲು ಪಾಕ್​ ತೀರ್ಮಾನಿಸಿದೆ ಎಂಬ ವರದಿ ಇದೆ
Kris Srikkanth : ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದೆ. ಫೆ. 7 ರಿಂದ ಈ ಮೆಗಾ ಟೂರ್ನಮೆಂಟ್​ ಆರಂಭವಾಗಲಿದೆ. ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಈ ಟೂರ್ನಿಯನ್ನು ಆಯೋಜಿಸುತ್ತಿದೆ. ಇನ್ನೇನು ಟೂರ್ನಿ ಆರಂಭವಾಗಬೇಕು ಅಷ್ಟರಲ್ಲಿ ಪಾಕಿಸ್ತಾನ ಒಂದು ಸಂಚಲನಾತ್ಮಕ ನಿರ್ಧಾರವನ್ನು ತೆಗೆದುಕೊಂಡಿದೆ. ಅದೇನೆಂದರೆ, ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಆಡದಿರಲು ಪಾಕ್​ ತೀರ್ಮಾನಿಸಿದೆ ಎಂಬ ವರದಿ ಹೊರಬಿದ್ದಿದೆ.
ಹೌದು, ಭಾರತದ ವಿರುದ್ಧದ ಗ್ರೂಪ್​ ಪಂದ್ಯವನ್ನು ಬಹಿಷ್ಕರಿಸಲು ಪಾಕಿಸ್ತಾನ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಈ ನಿರ್ಧಾರವು ಈಗ ಕ್ರಿಕೆಟ್ ವಲಯಗಳಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಇದರ ನಡುವೆ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಕ್ರಿಸ್​ ಶ್ರೀಕಾಂತ್​ ಹೇಳಿದ ಮಾತು ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಅಷ್ಟಕ್ಕೂ ಕ್ರಿಸ್​ ಶ್ರೀಕಾಂತ್​ ಹೇಳಿದ್ದೇನು ಅನ್ನೋದನ್ನು ನಾವೀಗ ತಿಳಿದುಕೊಳ್ಳೋಣ. 
ಈ ಹಿಂದೆ ಟಿ20 ವಿಶ್ವಕಪ್​ ಅನ್ನು ಪಾಕಿಸ್ತಾನ ಬಹಿಷ್ಕರಿಸುತ್ತದೆ ಎಂಬ ಸುದ್ದಿ ಹರಿದಾಡಿತ್ತು. ಈ ಸಂದರ್ಭದಲ್ಲಿ ಕ್ರಿಸ್​ ಶ್ರೀಕಾಂತ್​ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಪಾಕಿಸ್ತಾನಕ್ಕೆ ಒಂದು ಸಲಹೆಯನ್ನು ನೀಡಿದ್ದರು. ಫೆ. 7 ರಿಂದ ಪ್ರಾರಂಭವಾಗುವ ಟಿ20 ವಿಶ್ವಕಪ್‌ನಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾವನ್ನು ಎದುರಿಸಲು ಎಲ್ಲ ತಂಡಗಳು ಭಯಪಡುತ್ತಿವೆ. ಟಿ20 ವಿಶ್ವಕಪ್‌ನಲ್ಲಿ ಆಡದೇ ಇರುವುದು ಪಾಕಿಸ್ತಾನಕ್ಕೆ ಒಳ್ಳೆಯದು. ಒಂದು ವೇಳೆ ಆಡಿದರೆ, ಟೀಮ್ ಇಂಡಿಯಾ ವಿರುದ್ಧ ಹೀನಾಯ ಸೋಲು ಅನುಭವಿಸಬೇಕಾಗುತ್ತದೆ. ಆಗ ಪಾಕ್​ ತಂಡವು ತನ್ನ ಎಲ್ಲಾ ವೈಭವವನ್ನು ಕಳೆದುಕೊಳ್ಳುತ್ತದೆ. ಅದರ ಬದಲು, ಅವರು ಪಂದ್ಯಾವಳಿಯನ್ನು ಆಡದಿರಲು ಒಂದು ನೆಪ ಕಂಡುಕೊಳ್ಳಬೇಕು ಎಂದಿದ್ದರು. ಇದೀಗ ಪಾಕಿಸ್ತಾನ ಅದೇ ಹಾದಿಯನ್ನು ತುಳಿಯುತ್ತಿದೆ.
ಟೀಮ್​ ಇಂಡಿಯಾ ವಿರುದ್ಧ ಪಾಕಿಸ್ತಾನ ಆಡಿದರೆ, ಹೀನಾಯ ಸೋಲು ಅನುಭವಿಸುವುದು ಪಕ್ಕಾ. ಈಗಾಗಲೇ ನ್ಯೂಜಿಲೆಂಡ್​ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ವೇಳೆ ಟೀಮ್​ ಇಂಡಿಯಾದ ಆರ್ಭಟ ಕಂಡು ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಭಾರತದ ವಿರುದ್ಧ ವಿಷ ಉಗುಳುತ್ತಿದ್ದಾರೆ. ಭಾರತದ ಬ್ಯಾಟರ್​ಗಳ ಬ್ಯಾಟಿನಲ್ಲಿ ಸ್ಪ್ರಿಂಗ್​ ಇದೇ ಎಂಬ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಟೀಮ್​ ಇಂಡಿಯಾದ ಆಟಕ್ಕೆ ಕಂಗಾಲಾಗಿರುವ ಪಾಕ್​, ಹೀನಾಯ ಸೋಲನ್ನು ತಪ್ಪಿಸಲು ಭಾರತದ ವಿರುದ್ಧದ ಆಡದಿರಲು ನಿರ್ಧರಿಸಿದೆ ಎಂಬ ಮಾತುಗಳು ಕ್ರಿಕೆಟ್​ ವಲಯದಲ್ಲಿ ಕೇಳಿಬರುತ್ತಿವೆ.
ಅಂದಹಾಗೆ, ಪಾಕಿಸ್ತಾನದ ಈ ಒಂದು ನಿರ್ಧಾರವು ಗ್ರೂಪ್ ಎ ಅರ್ಹತಾ ಲೆಕ್ಕಾಚಾರಗಳನ್ನು ಸಂಪೂರ್ಣವಾಗಿ ಬದಲಾಯಿಸುವ ಸಾಧ್ಯತೆಯಿದೆ. ಒಂದೆಡೆ ಇದು ಭಾರತಕ್ಕೆ ಪ್ಲಸ್​ ಆದರೆ, ಪಾಕಿಸ್ತಾನಕ್ಕೆ ಗಂಭೀರ ಹೊಡೆತ ಬೀಳಲಿದೆ. ಫೆಬ್ರವರಿ 15 ರಂದು ನಡೆಯಲಿರುವ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಮೈದಾನಕ್ಕೆ ಇಳಿಯದಿದ್ದರೆ, ಐಸಿಸಿ ನಿಯಮಗಳ ಪ್ರಕಾರ ಭಾರತವು ವಾಕ್‌ಓವರ್ ಮೂಲಕ ಪೂರ್ಣ ಎರಡು ಅಂಕಗಳನ್ನು ಪಡೆಯುತ್ತದೆ. ಅದೇ ರೀತಿ ಪಾಕಿಸ್ತಾನಕ್ಕೆ ಶೂನ್ಯ ಅಂಕಗಳು ಸಿಗುತ್ತದೆ. ಇದು ಪಾಯಿಂಟ್ಸ್ ಟೇಬಲ್‌ನಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತದೆ. ಆದರೆ, ಪಾಕಿಸ್ತಾನದ ಪರಿಸ್ಥಿತಿ ತುಂಬಾ ಕಠಿಣವಾಗುತ್ತದೆ. ಈ ನಿರ್ಧಾರದಿಂದ ಪಾಕಿಸ್ತಾನ ಯೂಟರ್ನ್​ ತೆಗೆದುಕೊಳ್ಳುತ್ತಾ ಅನ್ನೋದನ್ನು ಕಾದು ನೋಡಬೇಕಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net