ಸೂರ್ಯಕುಮಾರ್​ಗೆ ರೋಹಿತ್ ನೀಡಿದ ಆ ಒಂದು "ಟಿಪ್ಸೇ" ಭಾರತದ ರೋಚಕ ಗೆಲುವಿಗೆ ಕಾರಣವಾಯ್ತಾ? Rohit Sharma

ಸೂರ್ಯಕುಮಾರ್​ಗೆ ರೋಹಿತ್ ನೀಡಿದ ಆ ಒಂದು "ಟಿಪ್ಸೇ" ಭಾರತದ ರೋಚಕ ಗೆಲುವಿಗೆ ಕಾರಣವಾಯ್ತಾ? Rohit Sharma
ಸೂರ್ಯಕುಮಾರ್​ಗೆ ರೋಹಿತ್ ನೀಡಿದ ಆ ಒಂದು "ಟಿಪ್ಸೇ" ಭಾರತದ ರೋಚಕ ಗೆಲುವಿಗೆ ಕಾರಣವಾಯ್ತಾ? Rohit Sharma
Published on

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಫೈನಲ್‌ಗೆ ಲಗ್ಗೆ ಇಟ್ಟಿದೆ
  • ಮಾರ್ಚ್ 8 ರಂದು ನಡೆಯಲಿರುವ ಫೈನಲ್‌ನಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ
  • ನಿನ್ನೆಯ ಪಂದ್ಯಲ್ಲಿ ಟೀಮ್​ ಇಂಡಿಯಾದ ಗೆಲುವಿಗೆ ಅನುಭವಿ ಆಟಗಾರನ ಸಲಹೆಯೂ ಕಾರಣ ಎನ್ನಲಾಗಿದೆ
Rohit Sharma : ಅನುಭವಕ್ಕೆ ಸೋಲನ್ನು ಗೆಲುವಾಗಿ ಪರಿವರ್ತಿಸುವ ಸಾಮರ್ಥ್ಯ ಇದೆ. ಅನುಭವಸ್ಥರ ಮಾತು ಕೇಳಿದವರು ಸರಿಯಾದ ಮಾರ್ಗದಲ್ಲಿ ನಡೆಯುತ್ತಾರೆ ಅನ್ನೋ ಮಾತಿದೆ. ಆ ಮಾತಿಗೆ ತಾಜಾ ಉದಾಹರಣೆ ನಿನ್ನೆ ಇಂಗ್ಲೆಂಡ್​ ಮತ್ತು ಭಾರತ ನಡುವೆ ನಡೆದ ಟಿ20 ವಿಶ್ವಕಪ್​ನ ಸೆಮಿಫೈನಲ್​ ಪಂದ್ಯದಲ್ಲಿ ನಡೆದ ಒಂದು ಘಟನೆ.
ಹೌದು, ನಿನ್ನೆಯ ಪಂದ್ಯಲ್ಲಿ ಟೀಮ್​ ಇಂಡಿಯಾದ ಗೆಲುವಿಗೆ ಅನುಭವಿ ಆಟಗಾರನ ಸಲಹೆಯೂ ಕಾರಣ. ಆ ಅನುಭವಿ ಆಟಗಾರ ಬೇರೆ ಯಾರೂ ಅಲ್ಲ, ಅವರೇ ಹಿಟ್​ ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮಾ. ನಾಯಕ ಸೂರ್ಯಕುಮಾರ್​ ಯಾದವ್​ಗೆ ರೋಹಿತ್​ ಶರ್ಮಾ ನೀಡಿದ ಆ ಒಂದು ಸಲಹೆಯೇ ನಿನ್ನೆ ಟೀಮ್​ ಇಂಡಿಯಾದ ಗೆಲುವಿಗೆ ಕಾರಣವಾಯ್ತು ಎಂದು ಮಾಜಿ ಕ್ರಿಕೆಟಿಗ ಸುನೀಲ್​ ಗವಾಸ್ಕರ್​ ಅವರು ಹೇಳಿದ್ದಾರೆ ಎನ್ನಲಾದ ಪೋಸ್ಟ್​ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.
ನಿನ್ನೆ ಪಂದ್ಯ ಶುರುವಾಗುವ ಮುನ್ನ ಸೂರ್ಯಕುಮಾರ್​ ಯಾದವ್​, ರೋಹಿತ್​ ಶರ್ಮಾ ಬಳಿ ತೆರಳಿದರು. ಈ ವೇಳೆ ನೀವೇನಾದರೂ ಮೊದಲು ಬ್ಯಾಟಿಂಗ್​ ಮಾಡಿದರೆ, ಕೊನೆಯ ಓವರ್​ಗಳಲ್ಲಿ ತುಂಬಾ ಜಾಗೂರೂಕರಾಗಿರಿ ಮತ್ತು ಬೌಲಿಂಗ್​ ಮಾಡುವಾಗ ಆ ಓವರ್​ಗಳನ್ನು ಮುಖ್ಯ ಬೌಲರ್​ಗಳಿಗೆ ನೀಡು ಎಂದು ಸಲಹೆ ನೀಡಿದರು. ಅದೇ ರೀತಿ ಸೂರ್ಯ, ಬುಮ್ರಾ ಮತ್ತು ಹಾರ್ದಿಕ್​ ಪಾಂಡ್ಯಾಗೆ ಓವರ್​ ನೀಡಿದರು. ಇದರಿಂದ ನಾವು ಗೆದ್ದೆವು ಎಂದು ವೈರಲ್​ ಪೋಸ್ಟ್​ನಲ್ಲಿ ಬರೆಯಲಾಗಿದೆ.
ವೈರಲ್​ ಪೋಸ್ಟ್​ನಲ್ಲಿ ಸುನೀಲ್​ ಗವಾಸ್ಕರ್​ ಎಲ್ಲಿ? ಯಾವಾಗ? ಹೇಳಿದರು ಎಂದು ಉಲ್ಲೇಖಿಸಿಲ್ಲ. ಆದರೂ, ಈ ಪೋಸ್ಟರ್​ ಎಲ್ಲರ ಗಮನ ಸೆಳೆದಿದೆ. ನಿನ್ನೆ ನಡೆದ ಪಂದ್ಯದಲ್ಲಿ ರೋಹಿತ್​ ಕೂಡ ಮುಂಬೈನ ವಾಂಖೆಡೆ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಈ ವೇಳೆ ಅವರು ತಂಡದ ಆಟಗಾರರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ, ಅನುಭವ ಮಾತು ಎಷ್ಟು ಮುಖ್ಯ ನೋಡಿ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್​, ಭಾರತಕ್ಕೆ ಬ್ಯಾಟ್​ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾಗೆ ಸಂಜು ಸ್ಯಾಮ್ಸನ್ (42 ಎಸೆತ 89 ರನ್​) ಇಶಾನ್ ಕಿಶನ್ (39), ​ಶಿವಂ ದುಬೆ (43) ಮತ್ತು ಹಾರ್ದಿಕ್​ ಪಾಂಡ್ಯ (27) ಅವರ ಸ್ಪೋಟಕ ಇನ್ನಿಂಗ್ಸ್​ ತಂಡದ ಮೊತ್ತವನ್ನು 250ರ ಗಡಿದಾಟಿಸಿತು. 20 ಓವರ್​ನಲ್ಲಿ 7 ವಿಕೆಟ್​ ನಷ್ಟಕ್ಕೆ ಭಾರತ 253 ರನ್ ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್​ಗೆ ಆರಂಭದಲ್ಲೇ ಫಿಲ್​ ಸಾಲ್ಟ್​ ಅವರ ವಿಕೆಟ್​ ದೊಡ್ಡ ಸಂಕಷ್ಟಕ್ಕೆ ದೂಡಿತು. ಅವರ ನಂತರದಲ್ಲಿ, ಜಾಸ್​ ಬಟ್ಲರ್​ ಮತ್ತು ನಾಯಕ ಹ್ಯಾರಿ ಬ್ರೂಕ್​ ವಿಕೆಟ್​ಗಳು ಆಂಗ್ಲರಿಗೆ ಸೋಲಿನ ಭೀತಿ ತಂದಿಟ್ಟಿತು. ಇಲ್ಲಿಗೆ ಭಾರತ ಗೆಲ್ಲುವುದು ಬಹುತೇಕ ಖಚಿತ ಎಂದು ಕ್ರಿಕೆಟ್​ ಪ್ರಿಯರು ಖುಷಿಯಾಗಿದ್ದರು. ಆದರೆ, ಟೀಮ್ ಇಂಡಿಯಾ ಅಭಿಮಾನಿಗಳಿಗೆ ಜಾಕೆಬ್​ ಬೆಥಲ್​ ಮತ್ತು ವಿಲ್​ ಜ್ಯಾಕ್ಸ್​ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಬಿಗ್​ ಶಾಕ್ ನೀಡಿದರು. ಆದರೆ, ಅಂತಿಮ ಘಟ್ಟದಲ್ಲಿ ಬುಮ್ರಾ ಮತ್ತು ಹಾರ್ದಿಕ್​ ಪಾಂಡ್ಯ ಬೌಲಿಂಗ್ ದಾಳಿ ಆಂಗ್ಲರ ಲೆಕ್ಕಾಚಾರಗಳನ್ನೇ ತಲೆಕೆಳಗಾಗಿಸಿತು.
ಕೊನೆಯ ಓವರ್​ವರೆಗೂ ಹೋದ ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿದ್ದು, ಕ್ರೀಡಾಂಗಣದಲ್ಲಿ ತುಂಬಿದ್ದ ಕ್ರಿಕೆಟ್​ ಪ್ರೇಮಿಗಳು ಮತ್ತು ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮ ಸೇರಿದಂತೆ ಕ್ರಿಕೆಟ್​ ದಿಗ್ಗಜರ ಸಂಭ್ರಮಕ್ಕೆ ಸಾಕ್ಷಿಯಾಯಿತು. ಈ ಪಂದ್ಯವನ್ನು ಕೇವಲ 7 ರನ್​ಗಳಿಂದ ಗೆದ್ದ ಭಾರತ ಈಗ ಫೈನಲ್​ನಲ್ಲಿ ನ್ಯೂಜಿಲೆಂಡ್​ ವಿರುದ್ಧ ಟಿ20 ವಿಶ್ವಕಪ್​​ ಪಟ್ಟಕ್ಕಾಗಿ ಸೆಣಸಲಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net