ಇಂಥಾ ಬಾಳು ಬಾಳೋದಕ್ಕಿಂತ ಎಲ್ಲರು ಬಾವಿಗೆ ಹಾರಿ... ಭಾರಿ ಮುಖಭಂಗ, ಆಕ್ರೋಶ ಹೊರಹಾಕಿದ ಅಫ್ರಿದಿ! Shahid Afridi

ಆಕ್ರೋಶ ಹೊರಹಾಕಿದ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್​ ಅಫ್ರಿದಿ ( Shahid Afridi  )
ಆಕ್ರೋಶ ಹೊರಹಾಕಿದ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್​ ಅಫ್ರಿದಿ ( Shahid Afridi )
Published on

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್​ ಆರಂಭಕ್ಕೂ ಮುನ್ನ ಟಿ20 ವಿಶ್ವಕಪ್​ ಬಹಿಷ್ಕರಿಸುತ್ತೇವೆ ಎನ್ನುತ್ತಿದ್ದ ಪಾಕಿಸ್ತಾನ
  • ಆರಂಭದ ನಂತರ ಟೀಮ್​ ಇಂಡಿಯಾ ವಿರುದ್ಧದ ಪಂದ್ಯವನ್ನು ಆಡುವುದಿಲ್ಲ ಎಂದು ಖ್ಯಾತೆ ತೆಗೆದಿದ್ದ ಪಾಕ್​
  • ಪಾಕಿಸ್ತಾನ ಯುಟರ್ನ್​ ಹೊಡದ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಶಾಹಿದ್​ ಅಫ್ರಿದಿ ಆಕ್ರೋಶ ಹೊರಹಾಕಿದ್ದಾರೆ
Shahid Afridi : ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜನೆ ಮಾಡಿರುವ 2026ನೇ ಸಾಲಿನ ಟಿ20 ವಿಶ್ವಕಪ್ ಟೂರ್ನಮೆಂಟ್ ತುಂಬಾ ರೋಚಕತೆಯಿಂದ ಸಾಗುತ್ತಿದೆ. ಟೂರ್ನಿ ಆರಂಭಕ್ಕೂ ಮುನ್ನ ಟಿ20 ವಿಶ್ವಕಪ್​ ಬಹಿಷ್ಕರಿಸುತ್ತೇವೆ ಎನ್ನುತ್ತಿದ್ದ ಪಾಕಿಸ್ತಾನ ಆರಂಭದ ನಂತರ ಟೀಮ್​ ಇಂಡಿಯಾ ವಿರುದ್ಧದ ಪಂದ್ಯವನ್ನು ಆಡುವುದಿಲ್ಲ ಎಂದು ಖ್ಯಾತೆ ತೆಗೆದಿದ್ದು ಭಾರಿ ವಿವಾದವಾಯಿತು. ಇದೀಗ ತನ್ನ ನಿರ್ಧಾರದಿಂದ ಪಾಕ್​ ಯೂಟರ್ನ್​ ಹೊಡೆದಿದೆ.

ಏನಿದು ವಿವಾದ?

ಆರಂಭದಲ್ಲಿ ಟಿ20 ವಿಶ್ವಕಪ್ ಬಹಿಷ್ಕರಿಸುವುದಾಗಿ ಪಾಕಿಸ್ತಾನ ಬೆದರಿಕೆ ಹಾಕಿತು. ಐಸಿಸಿ ಮತ್ತು ಭಾರತ, ಬಾಂಗ್ಲಾದೇಶವನ್ನು ಕೆಟ್ಟದಾಗಿ ನಡೆಸಿಕೊಂಡಿರುವುದನ್ನು ಉಲ್ಲೇಖಿಸಿ ಪಾಕಿಸ್ತಾನ ಬಹಿಷ್ಕಾರದ ಬೆದರಿಕೆ ಹಾಕಿತು. ಇದಾದ ನಂತರ, ಪಾಕಿಸ್ತಾನ ಪಂದ್ಯಾವಳಿಯನ್ನು ಆಡಲು ಸೈಲೆಂಟ್​ ಆಗಿ ಕೊಲಂಬೊಗೆ ಬಂದಿತು. ಐಸಿಸಿಯಿಂದ ಬ್ಯಾನ್ ಆಗುವ ಭೀತಿಯಿಂದಾಗಿ ಬಹಿಷ್ಕಾರದ ಬೆದರಿಕೆಯಿಂದ ಹಿಂದೇಟು ಹಾಕಿತು. ಈ ಮೂಲಕ ವಿಶ್ವ ಕ್ರಿಕೆಟ್​ ಜಗತ್ತಿನ ಎದುರು ಪಾಕ್​ ಮುಖಭಂಗ ಅನುಭವಿಸಿತು. ಆದರೆ, ಪಾಕಿಸ್ತಾನ​ ತನ್ನ ವರಸೆಯನ್ನು ಇಷ್ಟಕ್ಕೆ ನಿಲ್ಲಿಸಲಿಲ್ಲ. ಫೆಬ್ರವರಿ 15 ರಂದು ಭಾರತದ ವಿರುದ್ಧ ನಡೆಯಬೇಕಿರುವ ಹೈವೋಲ್ಟೇಜ್​ ಪಂದ್ಯವನ್ನು ಆಡದೆ ಹೊಸ ನಾಟಕವನ್ನು ಆರಂಭಿಸಿತು. ಭಾರತ ವಿರುದ್ಧ ಆಡುವುದಿಲ್ಲ ಎಂದು ಪಾಕ್​ ಹೇಳಿತು. ಆದಾಗ್ಯೂ, ಐಸಿಸಿ ಖಡಕ್​ ಎಚ್ಚರಿಕೆ ನೀಡಿದ ಬೆನ್ನಲ್ಲೇ ಮೆತ್ತಗಾದ ಪಾಕ್, ಅಂತಿಮವಾಗಿ ಟೀಮ್​ ಇಂಡಿಯಾ ವಿರುದ್ಧ ಆಡಲು ಒಪ್ಪಿಕೊಂಡಿದೆ. ಪಾಕಿಸ್ತಾನ ಕ್ರಿಕೆಟ್​ ಮಂಡಳಿ (ಪಿಸಿಬಿ)ಗೆ ಪಾಕ್​ ಸರ್ಕಾರ ಅನುಮತಿ ನೀಡಿದೆ.
ಇದೀಗ ಪಿಸಿಬಿ ಯುಟರ್ನ್​ ಹೊಡೆದ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ, ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನೀವು ಏಕೆ ಕ್ಷುಲ್ಲಕರಂತೆ ನಟಿಸುತ್ತಿದ್ದೀರಿ? ನೀವು ಆಡಿದರೆ, ಆಡಿ, ಇಲ್ಲದಿದ್ದರೆ ನಿಲ್ಲಿಸಿ. ಆದರೆ, ಎರಡು ತಲೆಯ ಹಾವಿನಂತೆ ಇಂತಹ ನಾಟಕಗಳನ್ನು ಆಡಬೇಡಿ ಎಂದು ಶಾಹಿದ್ ಅಫ್ರಿದಿ ಅವರು ತಮ್ಮದೇ ಪಿಸಿಬಿ ವಿರುದ್ಧ ಹರಿಹಾಯ್ದಿದ್ದಾರೆ.
ಇಂದು ನಾನು ಸ್ಟುಡಿಯೋದಲ್ಲಿ ನನ್ನ ಮುಖವನ್ನು ಹೇಗೆ ತೋರಿಸಲಿ? ನಾನು ಏನು ಹೇಳಲಿ? ಯು-ಟರ್ನ್ ತೆಗೆದುಕೊಳ್ಳುವ ಮೂಲಕ, ಪಿಸಿಬಿ ನಮಗೆ ಇದ್ದ ಸಣ್ಣ ಗೌರವವನ್ನು ಅಪಹಾಸ್ಯವನ್ನಾಗಿ ಮಾಡಿದೆ. ನೀವು ಆಟವಾಡಲು ಹೋದಾಗ, ನೀವು ನವಾಬರಂತೆ ಏಕೆ ವರ್ತಿಸುತ್ತಿದ್ದೀರಿ? ನಾವು ನಮ್ಮ ಗೌರವವನ್ನು ಸಂಪೂರ್ಣವಾಗಿ ಮಾರಿಕೊಂಡಿದ್ದೇವೆ. ಪಾಕಿಸ್ತಾನದ ಖ್ಯಾತಿ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪೂರ್ಣವಾಗಿ ಕಣ್ಮರೆಯಾಗಿದೆ. ಹಣಕ್ಕಾಗಿ ಪಾಕಿಸ್ತಾನದ ಗೌರವವನ್ನೇ ಮಾರಿದ್ದೀರಿ. ಇಂತಹ ಅವಮಾನವನ್ನು ಸಹಿಸುವುದಕ್ಕಿಂದ ಎಲ್ಲರೂ ಒಟ್ಟಾಗಿ ಬಾವಿಗೆ ಹಾರಬೇಕು ಎಂದು ಶಾಹಿದ್ ಅಫ್ರಿದಿ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಶಾಹಿದ್ ಅಫ್ರಿದಿ ಅವರ ಕಾಮೆಂಟ್‌ಗಳು ಭಾರೀ ಸಂಚಲವನ್ನು ಉಂಟು ಮಾಡಿದೆ.
ಅಂದಹಾಗೆ, ಟಿ20 ವಿಶ್ವಕಪ್ ಟೂರ್ನಮೆಂಟ್​ನಲ್ಲಿ ಭಾರತದೊಂದಿಗೆ ಆಡುವುದಿಲ್ಲ ಎಂದು ಪಾಕಿಸ್ತಾನ ಪದೇ ಪದೇ ಹೇಳುತ್ತಿತ್ತು. ಆದರೆ, ಕೊನೆಯ ಕ್ಷಣದಲ್ಲಿ, ಪಾಕಿಸ್ತಾನ ಭಾರತದೊಂದಿಗೆ ಪಂದ್ಯವನ್ನು ಆಡಲು ಒಪ್ಪಿಕೊಂಡಿದೆ. ಐಸಿಸಿಯೊಂದಿಗೆ ಚರ್ಚಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನಿರ್ಧಾರವನ್ನು ಅಲ್ಲಿನ ಸರ್ಕಾರವೂ ಅನುಮೋದಿಸಿದೆ. ಪ್ರಧಾನಿ ಸಹಬಾಜ್​ ಷರೀಫ್ ಕೂಡ ಭಾರತದೊಂದಿಗೆ ಪಂದ್ಯವನ್ನು ಆಡಲು ಗ್ರೀನ್​ ಸಿಗ್ನಲ್​ ನೀಡಿದ್ದಾರೆ. ಐಸಿಸಿ ಕೂಡ ಈ ಬಗ್ಗೆ ಅಧಿಕೃತ ಘೋಷಣೆ ನೀಡಿದೆ. ಇದರೊಂದಿಗೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಫೆಬ್ರವರಿ 15 ರಂದು ನಡೆಯಲಿದೆ. ಈ ಪಂದ್ಯವು ಶ್ರೀಲಂಕಾದ ಕೊಲಂಬೊ ಕ್ರೀಡಾಂಗಣದಲ್ಲಿ ನಡೆಯಲಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net