ಆರ್​ಸಿಬಿ ಸೇಲ್: 16 ಸಾವಿರ ಕೋಟಿಗೆ ಮಾರಾಟವಾದ್ರೂ ವಿಜಯ್ ಮಲ್ಯಗೆ ಒಂದೇ ಒಂದು ರೂಪಾಯಿ ಸಿಗಲ್ಲ ಏಕೆ? RCB

ಆರ್​ಸಿಬಿ ಸೇಲ್: 16,706 ಕೋಟಿಗೆ ಮಾರಾಟವಾದರೂ ವಿಜಯ್ ಮಲ್ಯಗೆ ಒಂದೇ ಒಂದು ರೂಪಾಯಿ ಸಿಗಲ್ಲ ಏಕೆ? RCB
ಆರ್​ಸಿಬಿ ಸೇಲ್: 16,706 ಕೋಟಿಗೆ ಮಾರಾಟವಾದರೂ ವಿಜಯ್ ಮಲ್ಯಗೆ ಒಂದೇ ಒಂದು ರೂಪಾಯಿ ಸಿಗಲ್ಲ ಏಕೆ? RCB
Published on

ಪ್ರಮುಖ ಮುಖ್ಯಾಂಶಗಳು

  • ರಾಯಲ್​ ಚಾಲೆಂಜರ್ಸ್​ ಬೆಂಗಳೂರು ( RCB ) ತಂಡದ ಮಾರಾಟ ಪ್ರಕ್ರಿಯೆ ಮುಗಿದಿದೆ
  • ಆರ್​ಸಿಬಿ ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್ ಸ್ವಾಧೀನಪಡಿಸಿಕೊಂಡಿದೆ
  • ಬಿರ್ಲಾ ಗ್ರೂಪ್ ಜೊತೆಗೆ ಇತರೆ ಮೂರು ಕಂಪನಿಗಳು 16,706 ಕೋಟಿ ರೂ.ಗಳಿಗೆ ಖರೀದಿ ಮಾಡಿದೆ
  • ಆರ್​ಸಿಬಿ ತಂಡವನ್ನು ಆರಂಭದಲ್ಲಿ ಖರೀದಿ ಮಾಡಿದ ವಿಜಯ್​ ಮಲ್ಯಗೆ ಸಿಗಲ್ಲ ಒಂದೇ ಒಂದು ರೂಪಾಯಿ
RCB : ಕ್ರೀಡಾಭಿಮಾನಿಗಳು ಎದುರು ನೋಡುತ್ತಿರುವ 19ನೇ ಆವೃತ್ತಿಯ ಐಪಿಎಲ್​ ಟೂರ್ನಿಗೂ ಮುನ್ನವೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ( RCB ) ತಂಡದ ಮಾರಾಟ ಪ್ರಕ್ರಿಯೆ ಮುಗಿದಿದೆ. ಆರ್​ಸಿಬಿ ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್  ಸ್ವಾಧೀನಪಡಿಸಿಕೊಂಡಿದ್ದು, ಬರೋಬ್ಬರಿ 16,706 ಕೋಟಿ ರೂ.ಗಳಿಗೆ ಖರೀದಿ ಮಾಡಿದೆ. ಬಿರ್ಲಾ ಗ್ರೂಪ್ ಜೊತೆಗೆ, ಇತರೆ ಮೂರು ಕಂಪನಿಗಳು ಕೂಡ ಆರ್​ಸಿಬಿ ತಂಡದ ಷೇರುಗಳನ್ನು ಖರೀದಿ ಮಾಡಿವೆ. ಇನ್ನು ಮುಂದೆ ಆರ್​ಸಿಬಿಗೆ ಹೊಸ ಮಾಲೀಕತ್ವದಲ್ಲಿ ತನ್ನ ಐಪಿಎಲ್​ ಪ್ರಯಾಣವನ್ನು ಆರಂಭಿಸಲಾಗಿದೆ. 
ಆರ್​ಸಿಬಿ ಏನೋ ಸೇಲಾಯ್ತು ಇದೀಗ ಓರ್ವ ವ್ಯಕ್ತಿಯ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ. ಅವರು ಬೇರೆ ಯಾರೂ ಅಲ್ಲ ಸಾವಿರಾರು ಕೋಟಿ ಹಣಕಾಸು ವಂಚನೆ ಆರೋಪದಲ್ಲಿ ದೇಶ ಬಿಟ್ಟು ಪರಾರಿಯಾಗಿ, ಲಂಡನ್​ನಲ್ಲಿ ನೆಲೆಸಿರುವ ವಿಜಯ್​ ಮಲ್ಯ. ಆರ್​ಸಿಬಿ ತಂಡವನ್ನು ಆರಂಭದಲ್ಲಿ ಖರೀದಿ ಮಾಡಿದ್ದು ಕೂಡ ಇದೇ ವಿಜಯ್​ ಮಲ್ಯ.
ಐಪಿಎಲ್​ ಶುರುವಾಗಿದ್ದು 2008ರಿಂದ ಅನ್ನೋದು ನಿಮಗೆಲ್ಲರಿಗೂ ಗೊತ್ತೇ ಇದೆ. ಈ ಸಂದರ್ಭದಲ್ಲಿ 111.6 ಮಿಲಿಯನ್​ ಡಾಲರ್​ (ಅಂದಾಜು 446 ಕೋಟಿ ರೂಪಾಯಿ) ಗೆ ಆರ್​ಸಿಬಿ ತಂಡವನ್ನು ವಿಜಯ್​ ಮಲ್ಯ ಖರೀದಿ ಮಾಡಿದರು. ಅಂದು 446 ಕೋಟಿ ರೂ. ಇದ್ದ ಆರ್​ಸಿಬಿ ಮೌಲ್ಯ ಇಂದು 16,706 ಕೋಟಿ ರೂ.ಗೆ ಏರಿಕೆಯಾಗಿದೆ. ಆರ್​ಸಿಬಿ ಷೇರು ಮೌಲ್ಯ ರಾಕೆಟ್​ ವೇಗದಲ್ಲಿ ಏರಿದ್ದು, ವಿಶ್ವದ ಶ್ರೀಮಂತ ಫ್ರಾಂಚೈಸಿಗಳಲ್ಲಿ ಒಂದಾಗಿದೆ. 
ಇಷ್ಟೊಂದು ಹಣಕ್ಕೆ ಆರ್​ಸಿಬಿ ಏನೋ ಮಾರಾಟವಾಗಿದೆ. ಇದರಿಂದ ವಿಜಯ್​ ಮಲ್ಯಗೆ ಎಷ್ಟು ಹಣ ಸಿಗುತ್ತೆ ಎಂಬ ಪ್ರಶ್ನೆ ಇದೀಗ ಮೂಡಿದೆ. ವಿಜಯ್​ ಮಲ್ಯ ಅವರು ತಮ್ಮ ಸಾಲವನ್ನು ತೀರಿಸಿ, ಮರಳಿ ಸ್ವದೇಶಕ್ಕೆ ಬರಬಹುದಲ್ವಾ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಹಾಗಾದರೆ, ವಿಜಯ್​ ಮಲ್ಯಗೆ ನಿಜಕ್ಕೂ ಹಣ ಸಿಗುತ್ತಾ? ಸಿಕ್ಕರೆ ಎಷ್ಟು ಹಣ ಸಿಗಬಹುದು ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ. 

ಒಂದು ರೂಪಾಯಿ ಕೂಡ ಸಿಗಲ್ಲ

ಅಚ್ಚರಿಯ ಸಂಗತಿ ಏನೆಂದರೆ, ವಿಜಯ್​ ಮಲ್ಯಗೆ ಒಂದೇ ಒಂದು ರೂಪಾಯಿ ಸಿಗುವುದಿಲ್ಲ. ಏಕೆಂದರೆ, ಮಾಜಿ ಮಾಲೀಕ ಅನ್ನೋದು ಬಿಟ್ಟರೆ ವಿಜಯ್​ ಮಲ್ಯಗೂ ಆರ್​ಸಿಬಿಗೂ ಪ್ರಸ್ತುತ ಯಾವುದೇ ಸಂಬಂಧವಿಲ್ಲ. 2016 ರಲ್ಲಿ ಹಣಕಾಸಿನ ಹಗರಣದಲ್ಲಿ ಸಿಲುಕಿದ ವಿಜಯ್​ ಮಲ್ಯ ದೇಶವನ್ನು ತೊರೆದರು. ಅಲ್ಲದೆ, ಆರ್​ಸಿಬಿ ಮಾಲೀಕತ್ವವನ್ನು ಯುನೈಟೆಡ್​ ಕಿಂಗ್​ಡಮ್​ ಮೂಲದ ಡಿಯಾಜಿಯೊ ಕಂಪನಿಯ ಅಂಗಸಂಸ್ಥೆ ಯುನೈಟೆಡ್​ ಸ್ಪಿರಿಟ್ಸ್​ ಲಿಮಿಟೆಡ್​ಗೆ ವರ್ಗಾವಣೆ ಮಾಡಿದರು. ಅಲ್ಲಿಂದಾಚೆಗೆ ಅವರು ತಂಡದ ಮೇಲಿನ ನಿಯಂತ್ರಣವನ್ನೇ ಕಳೆದುಕೊಂಡರು.

ಪೂರ್ಣ ಷೇರು ಮಾರಿದ ಡಿಯಾಜಿಯೊ

ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್, ಆರ್‌ಸಿಬಿ ಫ್ರಾಂಚೈಸಿಯ 100 ರಷ್ಟು ಷೇರನ್ನು ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬೋಲ್ಟ್ ವೆಂಚರ್ಸ್ ಮತ್ತು ಬ್ಲಾಕ್‌ಸ್ಟೋನ್ ನೇತೃತ್ವದ ಒಕ್ಕೂಟಕ್ಕೆ $1.78 ಬಿಲಿಯನ್ (ಸುಮಾರು 16,660 ಕೋಟಿ) ಗೆ ಮಾರಾಟ ಮಾಡಿದೆ. 2008 ರಲ್ಲಿ ಮಲ್ಯ ಅವರು 446 ಕೋಟಿ ರೂ.ಗೆ ಆರ್​ಸಿಬಿ ತಂಡವನ್ನು ಖರೀದಿ ಮಾಡಿದ್ದರು. ಅದರ ಮೌಲ್ಯ ಇಂದು 1,500 ರಷ್ಟು ಹೆಚ್ಚಳವಾಗಿದ್ದು, 16 ಸಾವಿರ ಕೋಟಿಗೆ ಮಾರಾಟವಾಗಿದೆ. ಆದರೆ, ಆರ್ಥಿಕ ಲಾಭವು ಸಂಪೂರ್ಣ ಯುನೈಟೆಡ್ ಸ್ಪಿರಿಟ್ಸ್/ಡಿಯಾಜಿಯೊಗೆ ಹೋಗಿದೆ. ಮಾ.28 ರಿಂದ ಆರಂಭವಾಗಲಿರುವ 19ನೇ ಐಪಿಎಲ್​ ಆವೃತ್ತಿಗೆ ಡಿಯಾಜಿಯೋ ಕಂಪನಿಯೇ ಆರ್​ಸಿಬಿ ಮಾಲೀಕತ್ವ ಇರಲಿದೆ. ಮುಂದಿನ ಸೀಸನ್​ನಿಂದ ಆದಿತ್ಯ ಬಿರ್ಲಾ ಗ್ರೂಪ್​ಗೆ ಮಾಲೀಕತ್ವ ಹಸ್ತಾಂತರಗೊಳ್ಳಲಿದೆ. 
ಅಂದಹಾಗೆ, 19ನೇ ಆವೃತ್ತಿಯು ಐಪಿಎಲ್​, ಮಾರ್ಚ್ 28ರಂದು ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ತವರು ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಸಂಜೆ 7.30ಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net