ಧೋನಿ, ಕೊಹ್ಲಿ, ರೋಹಿತ್​ ಅಲ್ಲವೇ ಅಲ್ಲ.... ರಹಾನೆ ಪ್ರಕಾರ ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರ ಇವರೇ...! Ajinkya Rahane

ಧೋನಿ, ಕೊಹ್ಲಿ, ರೋಹಿತ್​ ಅಲ್ಲವೇ ಅಲ್ಲ.... ರಹಾನೆ ಪ್ರಕಾರ ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರ ಇವರೇ...! Ajinkya Rahane
ಧೋನಿ, ಕೊಹ್ಲಿ, ರೋಹಿತ್​ ಅಲ್ಲವೇ ಅಲ್ಲ.... ರಹಾನೆ ಪ್ರಕಾರ ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರ ಇವರೇ...! Ajinkya Rahane
Published on

ಪ್ರಮುಖ ಮುಖ್ಯಾಂಶಗಳು

  • ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಶ್ರೇಷ್ಠ ಆಟಗಾರ ಸಚಿನ್ ತೆಂಡೂಲ್ಕರ್ ಎಂದು ಅಜಿಂಕ್ಯ ರಹಾನೆ ಅಭಿಪ್ರಾಯಪಟ್ಟಿದ್ದಾರೆ
  • ಧೋನಿ ಮತ್ತು ಕೊಹ್ಲಿ ನಾಯಕತ್ವದಲ್ಲೂ ಆಡಿರುವ ರಹಾನೆ 2020-21ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದುಕೊಟ್ಟಿದ್ದಾರೆ
  • ಸುದೀರ್ಘ ವೃತ್ತಿಜೀವನ ಹೊಂದಿರುವ ಟೀಮ್ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಜುಲೈ 30 ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ
  • ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದರೂ ಅವರು ಐಪಿಎಲ್ ಸೇರಿದಂತೆ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಆಟವನ್ನು ಮುಂದುವರಿಸಲಿದ್ದಾರೆ
Ajinkya Rahane : ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಶ್ರೇಷ್ಠ ಆಟಗಾರ ಯಾರೆಂಬ ಪ್ರಶ್ನೆಗೆ ಟೀಮ್​ ಇಂಡಿಯಾದ ಮಾಜಿ ಆಟಗಾರ ಅಜಿಂಕ್ಯ ರಹಾನೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರನ್ನು ಆಯ್ಕೆ ಮಾಡಿದ್ದಾರೆ.
ಎಂ.ಎಸ್. ಧೋನಿ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಹಲವು ದಿಗ್ಗಜರ ಹೆಸರುಗಳು ನೆನಪಿಗೆ ಬಂದರೂ, ಕ್ರಿಕೆಟ್ ಲೋಕದಲ್ಲಿ ಅಳಿಸಲಾಗದ ಮುದ್ರೆ ಒತ್ತಿರುವ ಸಚಿನ್ ತೆಂಡೂಲ್ಕರ್ ಅವರೇ ಸಾರ್ವಕಾಲಿಕ ಶ್ರೇಷ್ಠ ಭಾರತೀಯ ಕ್ರಿಕೆಟರ್ ಎಂದು ರಹಾನೆ 'ಸ್ಟಿಕ್ ಟು ಕ್ರಿಕೆಟ್' ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.
2011ರಿಂದ 2023ರವರೆಗೆ ಎಲ್ಲಾ ಮೂರು ಮಾದರಿಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ರಹಾನೆ, ಧೋನಿ ಮತ್ತು ಕೊಹ್ಲಿ ನಾಯಕತ್ವದಲ್ಲೂ ಆಡಿದ್ದು, ವಿಶೇಷವಾಗಿ 2020-21ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ತಂಡದ ನಾಯಕತ್ವ ವಹಿಸಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದು ಕೊಟ್ಟ ಹೆಗ್ಗಳಿಗೆ ಪಾತ್ರರಾಗಿದ್ದಾರೆ.
ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಮುಂಬೈ ಪರ ರಣಜಿ ಟ್ರೋಫಿ, 2009ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ನಂತರ ಭಾರತೀಯ ರಾಷ್ಟ್ರೀಯ ತಂಡದಲ್ಲಿ ಸಚಿನ್ ಜೊತೆ ಆಡಿರುವ ಅನುಭವವನ್ನು ಸ್ಮರಿಸಿರುವ ರಹಾನೆ, ಆ ದಿಗ್ಗಜನೊಂದಿಗೆ ಕಳೆದ ಕ್ಷಣಗಳೇ ತಮ್ಮ ಡ್ರೆಸ್ಸಿಂಗ್ ರೂಮ್ ಅನುಭವದ ಅತ್ಯಂತ ವಿಶೇಷ ಕ್ಷಣ ಎಂದು ಬಣ್ಣಿಸಿದ್ದಾರೆ.
1989ರಿಂದ 2013ರವರೆಗೆ 24 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿರುವ ಸಚಿನ್, 100 ಶತಕಗಳು ಸೇರಿದಂತೆ ಅತಿ ಹೆಚ್ಚು ರನ್ ಕಲೆಹಾಕಿ ದಾಖಲೆ ಬರೆದಿರುವುದಲ್ಲದೆ, 2011ರ ಐಸಿಸಿ ವಿಶ್ವಕಪ್ ಗೆಲುವನ್ನು ತಮ್ಮ ವೃತ್ತಿಜೀವನದ ಅತ್ಯುನ್ನತ ಮೈಲಿಗಲ್ಲಾಗಿ ಉಳಿಸಿಕೊಂಡಿದ್ದಾರೆ ಎಂದು ರಹಾನೆ ನೆನಪಿಸಿಕೊಂಡಿದ್ದಾರೆ.

ರಹಾನೆ ನಿವೃತ್ತಿ

ಅಂದಹಾಗೆ, ದೇಶಿ ಪಿಚ್‌ಗಳಲ್ಲಿ ಭಾರತದ ಪರ ಅತ್ಯದ್ಭುತ ಬ್ಯಾಟಿಂಗ್​ ಪ್ರದರ್ಶನ ನೀಡಿದ ಹೆಗ್ಗಳಿಕೆ ಹೊಂದಿರುವ ಟೀಮ್​ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್ ಹಾಗೂ 2020-21ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಐತಿಹಾಸಿಕ ಬಾರ್ಡರ್-ಗವಾಸ್ಕರ್ ಟ್ರೋಫಿ ಗೆಲುವಿಗೆ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಅಜಿಂಕ್ಯ ರಹಾನೆ, ಜುಲೈ 30 ರಂದು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ಗುಡ್​ ಬೈ ಹೇಳಿದ್ದಾರೆ.
ರಹಾನೆ ಅವರು ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಒಟ್ಟು 85 ಟೆಸ್ಟ್, 90 ಏಕದಿನ ಹಾಗೂ 20 ಟಿ20 ಪಂದ್ಯಗಳನ್ನು ಆಡಿದ್ದು, ಭಾರತದ ಪರ ಮೂರರಲ್ಲೂ ತಮ್ಮ ಅಮೋಘ ಆಟದ ಮೂಲಕ ಗಮನಾರ್ಹ ಕೊಡುಗೆಯನ್ನು ನೀಡಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ನಡೆದ 2020-21ರ ಐತಿಹಾಸಿಕ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಪ್ರಮುಖ ಆಟಗಾರರ ಗಾಯದ ಗೈರುಹಾಜರಿಯ ನಡುವೆಯೂ ತಂಡವನ್ನು ಮುಂಚೂಣಿಯಿಂದ ನಾಯಕನಾಗಿ ಸಮರ್ಥವಾಗಿ ಮುನ್ನಡೆಸಿ, ಮೆಲ್ಬೋರ್ನ್‌ನಲ್ಲಿ ಭರ್ಜರಿ ಶತಕ ಸಿಡಿಸುವುದರೊಂದಿಗೆ ಭಾರತಕ್ಕೆ 2-1ರ ಐತಿಹಾಸಿಕ ಜಯ ತಂದುಕೊಟ್ಟಿದ್ದು ಅವರ ನಾಯಕತ್ವದ ವೃತ್ತಿಜೀವನದ ಶ್ರೇಷ್ಠ ಕ್ಷಣವಾಗಿದೆ.
ಅಜಿಂಕ್ಯ ರಹಾನೆ ಅವರು 2023ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದೇ ಭಾರತದ ಪರ ಅವರ ಅಂತಿಮ ಟೆಸ್ಟ್ ಪಂದ್ಯವಾಗಿದೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಅವರು ಕೊನೆಯ ಬಾರಿಗೆ 2018ರಲ್ಲಿ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿದಿದ್ದರು. ಅವರ ಟಿ20 ವೃತ್ತಿಜೀವನವು ತುಸು ಚಿಕ್ಕದಾಗಿದ್ದು, 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯವೇ ರಾಷ್ಟ್ರೀಯ ತಂಡದ ಪರ ಅವರು ಆಡಿದ ಕೊನೆಯ ಟಿ20 ಪಂದ್ಯವಾಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದರೂ ಅಜಿಂಕ್ಯ ರಹಾನೆ ಅವರು ಟಿ20 ಕ್ರಿಕೆಟ್‌ನಲ್ಲಿ ಮುಂದುವರಿದು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ಆಟವನ್ನು ಮುಂದುವರಿಸಿದ್ದಾರೆ. ಕೋಲ್ಕತ ನೈಟ್ ರೈಡರ್ಸ್ ತಂಡದ ನಾಯಕನಾಗಿ ಕಳೆದ ಕೆಲವು ಸೀಸನ್‌ಗಳಲ್ಲಿ ತಂಡವನ್ನು ಮುನ್ನಡೆಸಿದರಾದರೂ, ತಂಡವನ್ನು ಪ್ಲೇಆಫ್ ಹಂತಕ್ಕೇರಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಮುಂದೆ ಅಜಿಂಕ್ಯ ರಹಾನೆ ಅವರ ಪ್ರಯಾಣ ಹೇಗಿರುತ್ತದೆ ಎಂದು ಕಾದು ನೋಡಬೇಕಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net