ತಮ್ಮ ಹನಿಮೂನ್​ ಪ್ರವಾಸಕ್ಕೆ ನನ್ನನ್ನೂ ಕರೆದೊಯ್ದಿದ್ದರು ನಿತೀಶ್... ಅಚ್ಚರಿ ಸಂಗತಿ ಬಿಚ್ಚಿಟ್ಟ ರಿಂಕು ಸಿಂಗ್​! Rinku Singh

ತಮ್ಮ ಹನಿಮೂನ್​ ಪ್ರವಾಸಕ್ಕೆ ನನ್ನನ್ನೂ ಕರೆದೊಯ್ದಿದ್ದರು ನಿತೀಶ್... ಅಚ್ಚರಿ ಸಂಗತಿ ಬಿಚ್ಚಿಟ್ಟ ರಿಂಕು ಸಿಂಗ್​! Rinku Singh
ತಮ್ಮ ಹನಿಮೂನ್​ ಪ್ರವಾಸಕ್ಕೆ ನನ್ನನ್ನೂ ಕರೆದೊಯ್ದಿದ್ದರು ನಿತೀಶ್... ಅಚ್ಚರಿ ಸಂಗತಿ ಬಿಚ್ಚಿಟ್ಟ ರಿಂಕು ಸಿಂಗ್​! Rinku Singh
Published on

ಪ್ರಮುಖ ಮುಖ್ಯಾಂಶಗಳು

  • ಟೀಮ್​ ಇಂಡಿಯಾದ ಫಿನಿಶರ್​ ರಿಂಕು ಸಿಂಗ್ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ತಂಡದ ಭಾಗವಾಗಿದ್ದಾರೆ
  • ಒಂದೆರೆಡು ಪಂದ್ಯಗಳನ್ನು ಆಡಿದ ರಿಂಕು, ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ
  • ತಂದೆಯನ್ನು ಕಳೆದುಕೊಂಡ ರಿಂಕು ಊರಿಗೆ ತೆರಳಿ ಎಲ್ಲ ವಿಧಿ-ವಿಧಾನಗಳನ್ನು ಮುಗಿಸಿ ವಾಪಸ್​ ಬಂದಿದ್ದಾರೆ
  • ಇದೀಗ ರಿಂಕು ಅವರು ಹಳೆಯ ವಿಡಿಯೋವೊಂದು ಜಾಲತಾಣದಲ್ಲಿ ಮತ್ತೆ ಸಖತ್​ ಸದ್ದು ಮಾಡುತ್ತಿದೆ
ನವದೆಹಲಿ: ಟೀಮ್​ ಇಂಡಿಯಾದ ಫಿನಿಶರ್​ ರಿಂಕು ಸಿಂಗ್ ( Rinku Singh ) ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ತಂಡದ ಭಾಗವಾಗಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಒಂದೆರೆಡು ಪಂದ್ಯಗಳನ್ನು ಆಡಿದ ರಿಂಕು, ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಇದರ ನಡುವೆ ತಮ್ಮ ತಂದೆಯನ್ನು ಕಳೆದುಕೊಂಡ ರಿಂಕು, ಊರಿಗೆ ತೆರಳಿ ಎಲ್ಲ ವಿಧಿ-ವಿಧಾನಗಳನ್ನು ಮುಗಿಸಿ ಮತ್ತೆ ತಂಡವನ್ನು ಸೇರಿಕೊಂಡಿದ್ದಾರೆ. ಇದೀಗ ರಿಂಕು ಅವರು ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸಖತ್​ ಸದ್ದು ಮಾಡುತ್ತಿದೆ.
ರಿಂಕು, ತಮ್ಮ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ತಂಡದ ಮಾಜಿ ಆಟಗಾರ ನಿತೀಶ್ ರಾಣಾ ಅವರ ಜತೆ ಈ ಹಿಂದೆ ನಡೆದ ಅಚ್ಚರಿಯ ಮತ್ತು ಹೃದಯಸ್ಪರ್ಶಿ ಘಟನೆಯೊಂದನ್ನು ಹಂಚಿಕೊಂಡರು. ರಿಂಕುಗೆ ವಿದೇಶ ಪ್ರವಾಸ ಅಂದರೆ ತುಂಬಾ ಇಷ್ಟ. ಆ ಒಂದು ಕನಸು ಮೊದಲ ಬಾರಿಗೆ ಹೇಗೆ ನನಸಾಯಿತು ಎಂಬುದನ್ನು ಬಹಿರಂಗಪಡಿಸಿದರು. ಇದಕ್ಕೆಲ್ಲಾ ನಿತೀಶ್​ ರಾಣಾ ಕಾರಣ ಮತ್ತು ಅವರಿಗೆ ಧನ್ಯವಾದಗಳು ಎಂದು ಹೇಳಿದರು.
ಹೌದು, ಈ ಎಲ್ಲ ವಿಚಾರಗಳನ್ನು ರಿಂಕು ಅವರು ಕಳೆದ ವರ್ಷ ರಾಜ್​ ಶಮಾನಿ ಅವರ ಪಾಡ್​ಕಾಸ್ಟ್​ನಲ್ಲಿ ತಿಳಿಸಿದರು. ಇದೀಗ ಆ ವಿಡಿಯೋ ತುಣುಕು ಮತ್ತೆ ವೈರಲ್​ ಆಗುತ್ತಿದೆ. ಪಾಡ್​ಕಾಸ್ಟ್​ನಲ್ಲಿ ಮಾತನಾಡಿದ್ದ ರಿಂಕು, ನಾನು ಯಾವಾಗಲೂ ವಿದೇಶ ಪ್ರವಾಸ ಮಾಡುವ ಕನಸು ಕಂಡಿದ್ದೆ. 2019 ರಲ್ಲಿ, ನಿತೀಶ್ ರಾಣಾ ವಿವಾಹವಾಯಿತು. ನಾನು ಮತ್ತು ರಾಣಾ ತುಂಬಾ ಆತ್ಮೀಯರು. ಅವರು, ತಮ್ಮ ಹನಿಮೂನ್​ ಪ್ರಯಾಣದ ವೇಳೆ ನನ್ನನ್ನೂ ಜತೆಗೆ ಕರೆದೊಯ್ದಿದ್ದರು.
ಅದು ಯೂರೋಪ್​ ಪ್ರವಾಸವಾಗಿತ್ತು. ಈ ಪ್ರವಾಸದ ವೇಳೆ ಬೇರೆ ಜನರೊಂದಿಗೆ ಬೆರೆಯಲಿ ಮತ್ತು ನನ್ನ ಆತ್ಮವಿಶ್ವಾಸ ಬೆಳೆಯಲಿ ಎಂದು ರಾಣಾ ಬಯಸಿದ್ದರು. ಆದರೆ, ಇಂಗ್ಲಿಷ್‌ನಲ್ಲಿ ಹೇಗೆ ಮಾತನಾಡಬೇಕೆಂಬುದು ನನಗೆ ತಿಳಿದಿರಲಿಲ್ಲ. ವಸ್ತುಗಳನ್ನು ಹೇಗೆ ಕೇಳಬೇಕು ಅಥವಾ ನನಗೆ ಬೇಕಾದುದನ್ನು ಹೇಗೆ ಹೇಳಬೇಕು ಎಂದು ಯೋಚನೆ ಮಾಡುತ್ತಿದ್ದೆ. ಆದ್ದರಿಂದ ನಾನು ಸನ್ನೆಗಳ ಮೂಲಕ ಆಹಾರ ಮತ್ತು ಎಲ್ಲವನ್ನೂ ಆರ್ಡರ್ ಮಾಡುತ್ತಿದ್ದೆ ಎಂದು ರಿಂಕು ಹೇಳಿದರು.
ಹೀಗಿರುವಾಗ ಒಮ್ಮೆ ಒಂದು ಹಾಸ್ಯಪ್ರಸಂಗ ನಡೆಯಿತು. ಹನಿಮೂನ್​ ಮುಗಿದು ಭಾರತಕ್ಕೆ ವಾಪಸ್​ ಬರುವಾಗ, ಮ್ಯಾಕ್​ಡೊನಾಲ್ಡ್​ನಲ್ಲಿ ಒಂದು ಬರ್ಗರ್​ ಆರ್ಡರ್​ ಮಾಡುವಂತೆ ನಿತೀಶ್​ ರಾಣಾ ಕೇಳಿದರು. ಈ ವೇಳೆ ನಾನು ಚಿಕನ್​ ಬರ್ಗರ್​ ಮಾತ್ರ ಖರೀದಿ ಮಾಡಿದೆ. ಆದರೆ, ಚೀಸ್​ ಖರೀದಿ ಮಾಡಲಿಲ್ಲ. ಬರ್ಗರ್​ ಓಪನ್​ ಮಾಡಿದ ರಾಣಾ ಚೀಸ್​ ಎಲ್ಲಿ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ನಾನು, ಬೈಯ್ಯಾ ನನಗೆ ಇಂಗ್ಲಿಷ್​ನಲ್ಲಿ ಬರ್ಗರ್​ ಅಂತಾ ಹೇಳೋಕೆ ಮಾತ್ರ ಗೊತ್ತು ಮತ್ತು ಅದಕ್ಕೆ ಚೀಸ್​ ಸೇರಿಸಿ ಅಂತ ಹೇಗೆ ಹೇಳಬೇಕೆಂದು ಗೊತ್ತಾಗಲಿಲ್ಲ ಎಂದೆ. ಇದನ್ನು ಕೇಳಿದ ನಿತೀಶ್​ ರಾಣಾ ನಗೆಗಡಲಲ್ಲಿ ತೇಲಿದರು. ಬಳಿಕ, ಅವರೇ ನನಗೆ ಸಹಾಯ ಮಾಡಿದರು ಎಂದು ರಿಂಕು ಹೇಳಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕು ಮತ್ತೆ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.
ತಂದೆ ಸಾವು
ರಿಂಕು ಜೀವನದ ಪ್ರಯಾಣದಲ್ಲಿ ಆಧಾರಸ್ತಂಭವಾಗಿದ್ದ ಅವರ ತಂದೆ ಫೆ.27ರಂದು ನಿಧನರಾದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ರಿಂಕು ತಂದೆ ಖಾನ್‌ಚಂದ್ರ ಸಿಂಗ್​ ಗ್ರೇಟರ್ ನೋಯ್ಡಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದರು. ಕಳೆದ ಕೆಲವು ದಿನಗಳಿಂದ ಖಾನ್‌ಚಂದ್ರ ಸಿಂಗ್​ ಲಿವರ್ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ನಾಲ್ಕನೇ ಹಂತದಲ್ಲಿದ್ದರಿಂದ ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿತ್ತು. ಹೀಗಾಗಿ, ವೈದ್ಯರು ಕಳೆದ ಒಂದು ತಿಂಗಳಿನಿಂದ ತುರ್ತು ವಾರ್ಡ್‌ನಲ್ಲಿ ಚಿಕಿತ್ಸೆ ನೀಡುತ್ತಿದ್ದರು. ಅತ್ತ ಟಿ20 ವಿಶ್ವಕಪ್ ನಡೆಯುತ್ತಿದ್ದರಿಂದ ರಿಂಕು ಸಿಂಗ್ ಟೀಮ್ ಇಂಡಿಯಾ ಪರ ಕಣಕ್ಕಿಳಿದಿದ್ದರು. ಅವರ ತಂದೆಯ ಯೋಗಕ್ಷೇಮವನ್ನು ಕುಟುಂಬ ಸದಸ್ಯರು ನೋಡಿಕೊಳ್ಳುತ್ತಿದ್ದರು. ಇದರ ನಡುವೆ, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ನಂತರ, ತಂದೆಯ ಆರೋಗ್ಯ ಹದಗೆಟ್ಟ ಹಿನ್ನೆಲೆ ರಿಂಕು ಸಿಂಗ್ ಉತ್ತರ ಪ್ರದೇಶಕ್ಕೆ ಧಾವಿಸಿದ್ದರು. ತಮ್ಮ ತಂದೆಯ ಆರೋಗ್ಯವನ್ನು ವಿಚಾರಿಸಿಕೊಳ್ಳುತ್ತಾ ಒಂದು ದಿನ ಆಸ್ಪತ್ರೆಯಲ್ಲೇ ಕಳೆದರು. ಅದಾದ ನಂತರ, ರಿಂಕು ಸಿಂಗ್ ಮತ್ತೆ ತಂಡವನ್ನು ಸೇರಿಕೊಂಡರು. ಜಿಂಬಾಬ್ವೆ ವಿರುದ್ಧ ನಡೆದ ಪಂದ್ಯದಲ್ಲಿ ಟೀಮ್​ ಇಂಡಿಯಾ ಫೀಲ್ಡಿಂಗ್​ ಮಾಡುವಾಗ ರಿಂಕು ಮೈದಾನಕ್ಕೆ ಇಳಿದಿದ್ದರು. ಇದರ ಬೆನ್ನಲ್ಲೇ ಅಂದರೆ, ಫೆ.27ರಂದು ಬೆಳಗ್ಗೆ ರಿಂಕು ತಂದೆ ಚಿಕಿತ್ಸೆ ಫಲಿಸದೇ ನಿಧನರಾದರು. ಹೀಗಾಗಿ, ರಿಂಕು ಸಿಂಗ್ ತಮ್ಮ ಊರಿಗೆ ಮರಳಿ, ವಿಧಿವಿಧಾನಗಳನ್ನು ಪೂರೈಸಿ, ಮತ್ತೆ ತಂಡ ಸೇರಿಕೊಂಡಿದ್ದಾರೆ.

ಮದುವೆ ಮುಂದೂಡಿಕೆ

ತಂದೆ ಖಾನ್​ಚಂದ್ರ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ, ರಿಂಕು ಸಿಂಗ್ ಅವರ ವಿವಾಹವೂ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ. ರಿಂಕು ಸಿಂಗ್, ಕುಟುಂಬದ ಸಂಪ್ರದಾಯದ ಪ್ರಕಾರ, ಯಾರಾದರೂ ಸತ್ತರೆ, ಒಂದು ವರ್ಷದವರೆಗೆ ಮನೆಯಲ್ಲಿ ಯಾವುದೇ ಶುಭ ಕಾರ್ಯಕ್ರಮಗಳು ನಡೆಯುವುದಿಲ್ಲ. ಇದರೊಂದಿಗೆ, ರಿಂಕು ಸಿಂಗ್ ಮತ್ತು ಸಂಸದೆ ಪ್ರಿಯಾ ಸರೋಜ್ ಅವರ ವಿವಾಹ ಮುಂದಿನ ವರ್ಷ ನಡೆಯುವ ಸಾಧ್ಯತೆಗಳಿವೆ. ವಾಸ್ತವವಾಗಿ, ರಿಂಕು ಅವರು 2026, ಜೂನ್ ತಿಂಗಳಲ್ಲಿ ವಿವಾಹವಾಗಬೇಕಿತ್ತು. ಈ ಮಧ್ಯೆ, ರಿಂಕು ಸಿಂಗ್ ಅವರ ತಂದೆ ನಿಧನರಾಗಿದ್ದು, ವಿವಾಹವು ಒಂದು ವರ್ಷ ಮುಂದೂಡಲ್ಪಡುವ ಸಾಧ್ಯತೆಗಳಿವೆ. ಅಂದಹಾಗೆ, ರಿಂಕು ಸಿಂಗ್ ಮತ್ತು ಸಂಸದೆ ಪ್ರಿಯಾ ಸರೋಜ್ ಅವರದ್ದು ಲವ್​ ಮ್ಯಾರೇಜ್​. 2025, ಜೂನ್ 8 ರಂದು ನಿಶ್ಚಿತಾರ್ಥ ಮಾಡಿಕೊಂಡರು. ಆದಾಗ್ಯೂ, ಮದುವೆ ಹತ್ತಿರ ಇರುವಾಗಲೇ ಈ ದೊಡ್ಡ ದುರಂತ ಸಂಭವಿಸಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net