ಕಡಿಮೆ ಶ್ರಮ ಹಾಕಲು ನನ್ನ ಮನಸ್ಸು ಒಪ್ಪಲ್ಲ... ಗೌರವಯುತವಾಗಿ ಕ್ರಿಕೆಟ್‌ನಿಂದ ದೂರ ಸರಿದ ಕೇನ್ ವಿಲಿಯಮ್ಸನ್! Kane Williamson

ಕಡಿಮೆ ಶ್ರಮ ಹಾಕಲು ನನ್ನ ಮನಸ್ಸು ಒಪ್ಪಲ್ಲ... ಗೌರವಯುತವಾಗಿ ಕ್ರಿಕೆಟ್‌ನಿಂದ ದೂರ ಸರಿದ ಕೇನ್ ವಿಲಿಯಮ್ಸನ್! Kane Williamson
ಕಡಿಮೆ ಶ್ರಮ ಹಾಕಲು ನನ್ನ ಮನಸ್ಸು ಒಪ್ಪಲ್ಲ... ಗೌರವಯುತವಾಗಿ ಕ್ರಿಕೆಟ್‌ನಿಂದ ದೂರ ಸರಿದ ಕೇನ್ ವಿಲಿಯಮ್ಸನ್! Kane Williamson
Published on

ಪ್ರಮುಖ ಮುಖ್ಯಾಂಶಗಳು

  • ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ ಕೇನ್​ ವಿಲಿಯಮ್ಸನ್​
  • ಕಿವೀಸ್​ ಪರ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಸ್ಟಾರ್​ ಬ್ಯಾಟರ್​ ವಿಲಿಯಮ್ಸನ್​​
  • ನನ್ನ ಶ್ರಮದಲ್ಲಿ ಕೊಂಚ ಕೊರತೆಯಾಗುವುದು ಕೂಡ ಸರಿಯಲ್ಲ ಅಂತ ಭಾವಿಸಿ ಈ ನಿರ್ಧಾರ ಎಂದ ಮಾಜಿ ನಾಯಕ
ನವದೆಹಲಿ : ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದ ಅತ್ಯಂತ ಪ್ರಮುಖ ಆಟಗಾರಲ್ಲಿ ಒಬ್ಬರಾದ ಹಾಗೂ ಕಿವೀಸ್​ ಪರ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ದಾಖಲೆ ಹೊಂದಿರುವ ಸ್ಟಾರ್​ ಬ್ಯಾಟರ್ ಕೇನ್ ವಿಲಿಯಮ್ಸನ್ (Kane Williamson) ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಂದು ನಿವೃತ್ತಿ ಘೋಷಿಸಿದ್ದಾರೆ. ಈ ನಿರ್ಧಾರದೊಂದಿಗೆ ನ್ಯೂಜಿಲೆಂಡ್ ಕ್ರಿಕೆಟ್‌ಗೆ ದೀರ್ಘಕಾಲದವರೆಗೆ ನಾಯಕನಾಗಿ ಹಾಗೂ ಬ್ಯಾಟಿಂಗ್ ಬೆನ್ನೆಲುಬಾಗಿ ಅದ್ಭುತ ಸೇವೆ ಸಲ್ಲಿಸಿದ ವಿಲಿಯಮ್ಸನ್​ ಅವರ ಸುದೀರ್ಘ ಮತ್ತು ಯಶಸ್ವಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಯಣಕ್ಕೆ ಅಧಿಕೃತವಾಗಿ ತೆರೆ ಬಿದ್ದಂತಾಗಿದೆ.
35 ವರ್ಷದ ಕೇನ್ ವಿಲಿಯಮ್ಸನ್ ಅವರ ಈ ನಿವೃತ್ತಿ ನಿರ್ಧಾರವು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಸದ್ಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಉಳಿದ ಪಂದ್ಯಗಳಲ್ಲಿ ವಿಲಿಯಮ್ಸನ್​ ಅವರು ಆಡುವುದಿಲ್ಲ. ಪ್ರವಾಸದ ಬಾಕಿ ಪಂದ್ಯಗಳಿಗಾಗಿ ಅವರ ಜಾಗಕ್ಕೆ ಮತ್ತೊಬ್ಬ ಆಟಗಾರನನ್ನು ಮುಂದಿನ ದಿನಗಳಲ್ಲಿ ಆಯ್ಕೆ ಮಾಡಲಾಗುವುದು ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ.
ನಾನು ನಿವೃತ್ತಿಯ ಬಗ್ಗೆ ಕೆಲವು ದಿನಗಳಿಂದ ಯೋಚಿಸುತ್ತಿದ್ದೆ, ನಿವೃತ್ತಿಗೆ ಇದು ಸರಿಯಾದ ಸಮಯವೆಂದು ನನಗೆ ಅನಿಸಿದೆ. ನ್ಯೂಜಿಲೆಂಡ್ ತಂಡಕ್ಕಾಗಿ ಆಡುವಾಗ ನಾನು ನೂರಕ್ಕೆ ನೂರರಷ್ಟು ಶ್ರಮವನ್ನು ಹಾಕಿದ್ದೇನೆ, ಆ ಶ್ರಮದಲ್ಲಿ ಕೊಂಚ ಕೊರತೆಯಾಗುವುದು ಕೂಡ ಸರಿಯಲ್ಲ ಅಂತ ಅನಿಸಿದ್ದರಿಂದ ನನ್ನದೇ ಆದ ನಿರ್ಧಾರದೊಂದಿಗೆ ಗೌರವಯುತವಾಗಿ ನಾನು ವಿದಾಯ ಹೇಳುತ್ತಿದ್ದೇನೆ ಎಂದು ವಿಲಿಯಮ್ಸನ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ಪ್ರಸ್ತುತ ನ್ಯೂಜಿಲೆಂಡ್ ತಂಡದಲ್ಲಿ ಅದ್ಭುತ ಪ್ರತಿಭೆಗಳಿದ್ದು, ತಂಡವು ಸರಿಯಾದ ಹಾದಿಯಲ್ಲೇ ಸಾಗುತ್ತಿದೆ ಎಂಬ ನಂಬಿಕೆ ನನಗಿದೆ. ಈ ತಂಡವನ್ನು ನಾನು ತುಂಬಾ ಪ್ರೀತಿಸುತ್ತೇನೆ ಮತ್ತು ಇಷ್ಟು ಸುದೀರ್ಘ ಕಾಲ ಈ ತಂಡದ ಭಾಗವಾಗಿದ್ದಕ್ಕೆ ನನ್ನನ್ನು ನಾನು ಅದೃಷ್ಟವಂತ ಎಂದು ಭಾವಿಸುತ್ತೇನೆ. ಈ ತಂಡ ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿರುತ್ತದೆ ಎಂದು ಭಾವುಕರಾಗಿ ವಿಲಿಯಮ್ಸನ್​ ನುಡಿದಿದ್ದಾರೆ.
ಅಂದಹಾಗೆ, ಕೇನ್ ವಿಲಿಯಮ್ಸನ್ ಅವರು ಒಟ್ಟು 16 ವರ್ಷಗಳ ಸುದೀರ್ಘ ಕ್ರಿಕೆಟ್ ಜರ್ನಿಯಲ್ಲಿ ನ್ಯೂಜಿಲೆಂಡ್ ಪರ 378 ಅಂತಾರಾಷ್ಟ್ರೀಯ ಪಂದ್ಯಗಳನ್ನು ಪ್ರತಿನಿಧಿಸಿ ವಿದಾಯ ಹೇಳಿದ್ದಾರೆ. ತಮ್ಮ ಅದ್ಭುತ ವೃತ್ತಿಜೀವನದಲ್ಲಿ 48 ಶತಕ ಹಾಗೂ 6 ದ್ವಿಶತಕಗಳ ನೆರವಿನಿಂದ ಒಟ್ಟು 19,346 ರನ್ ಕಲೆಹಾಕಿರುವ ಅವರು, ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಹಾಗೂ ಗರಿಷ್ಠ ರನ್ ದಾಖಲಿಸಿದ ಶ್ರೇಷ್ಠ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಳೆದ ವರ್ಷವೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಅವರು, ಇದೀಗ ಏಕದಿನ ಮತ್ತು ಟೆಸ್ಟ್ ಸೇರಿದಂತೆ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸಂಪೂರ್ಣವಾಗಿ ವಿದಾಯ ಹೇಳಿದ್ದಾರೆ.
ಕೇವಲ ವೈಯಕ್ತಿಕ ಪ್ರದರ್ಶನ ಮಾತ್ರವಲ್ಲದೆ ನಾಯಕನಾಗಿಯೂ ವಿಲಿಯಮ್ಸನ್ ಅವರ ಕೊಡುಗೆ ಅಪಾರವಾಗಿದೆ. 2016 ರಿಂದ 2024 ರವರೆಗೆ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಿದ ಇವರು, ಕಿವೀಸ್ ಕ್ರಿಕೆಟ್ ಇತಿಹಾಸದ ಅತ್ಯಂತ ಸುವರ್ಣ ಯುಗಕ್ಕೆ ಸಾಕ್ಷಿಯಾಗಿದ್ದರು. ಇವರ ಅದ್ಭುತ ನಾಯಕತ್ವದಲ್ಲಿ ನ್ಯೂಜಿಲೆಂಡ್ ತಂಡವು ಎರಡು ಬಾರಿ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಹಾಗೂ ಮೂರು ಬಾರಿ ಸೆಮಿಫೈನಲ್ ತಲುಪಿದ್ದಲ್ಲದೆ, 2021 ರಲ್ಲಿ ಭಾರತದ ವಿರುದ್ಧ ನಡೆದ ಚೊಚ್ಚಲ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ (WTC) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಐತಿಹಾಸಿಕ ಸಾಧನೆ ಮಾಡಿತ್ತು.
ಕೇನ್ ವಿಲಿಯಮ್ಸನ್ ಅವರ ನಿವೃತ್ತಿ ನಿರ್ಧಾರದ ಬೆನ್ನಲ್ಲೇ ನ್ಯೂಜಿಲೆಂಡ್ ಕ್ರಿಕೆಟ್ ವಲಯದಿಂದ ಅವರಿಗೆ ಅಪಾರ ಗೌರವ ಹಾಗೂ ಪ್ರಶಂಸೆಗಳು ಹರಿದುಬರುತ್ತಿವೆ. ಈ ಕುರಿತು ಮಾತನಾಡಿದ ನ್ಯೂಜಿಲೆಂಡ್ ತಂಡದ ಮುಖ್ಯ ತರಬೇತುದಾರ (ಕೋಚ್) ರಾಬ್ ವಾಲ್ಟರ್ ಅವರು, "ವಿಲಿಯಮ್ಸನ್ ಅವರ ಪ್ರಭಾವ ಮತ್ತು ಕೊಡುಗೆ ಕೇವಲ ರನ್‌ಗಳ ಅಂಕಿ-ಅಂಶಗಳು ಅಥವಾ ಪಂದ್ಯದ ಫಲಿತಾಂಶಗಳಿಗಷ್ಟೇ ಸೀಮಿತವಾಗಿಲ್ಲ, ಅದು ಅದನ್ನೂ ಮೀರಿದ್ದಾಗಿದೆ. ಕೇನ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಪಡೆದ ಪ್ರತಿಯೊಬ್ಬರಿಗೂ ಗೊತ್ತು, ಅವರು ಒಬ್ಬ ಶ್ರೇಷ್ಠ ಆಟಗಾರ ಮಾತ್ರವಲ್ಲದೆ ಅದ್ಭುತ ವ್ಯಕ್ತಿಯೂ ಹೌದು ಎಂದು ಕೊಂಡಾಡಿದ್ದಾರೆ.
ಮುಂದುವರಿದು, "ತಂಡದ ಸಂಸ್ಕೃತಿ ಮತ್ತು ಗುಣಮಟ್ಟವನ್ನು ಉನ್ನತ ಮಟ್ಟಕ್ಕೇರಿಸುವಲ್ಲಿ ಅವರ ಪಾತ್ರ ದೊಡ್ಡದಾಗಿದೆ. ಅವರೊಬ್ಬ ಅಪ್ರತಿಮ ಆಟಗಾರ, ಅದ್ಭುತ ಸಹ ಆಟಗಾರ, ಶ್ರೇಷ್ಠ ನಾಯಕ ಹಾಗೂ ಕ್ರಿಕೆಟ್ ಜಗತ್ತಿನ ಹೆಮ್ಮೆಯ ರಾಯಭಾರಿ ಎಂದು ರಾಬ್ ವಾಲ್ಟರ್ ಗುಣಗಾನ ಮಾಡಿದ್ದಾರೆ. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ವಿಲಿಯಮ್ಸನ್ ಅವರು 2015 ರಲ್ಲಿ 'ಐಸಿಸಿ ವರ್ಷದ ಕ್ರಿಕೆಟಿಗ', 2019 ರಲ್ಲಿ 'ಐಸಿಸಿ ವರ್ಷದ ಟೆಸ್ಟ್ ಆಟಗಾರ' ಪ್ರಶಸ್ತಿ ಹಾಗೂ ನ್ಯೂಜಿಲೆಂಡ್ ಕ್ರಿಕೆಟ್‌ನ ಅತ್ಯುನ್ನತ ಗೌರವವಾದ 'ಸರ್ ರಿಚರ್ಡ್ ಹ್ಯಾಡ್ಲಿ ಮೆಡಲ್' ಅನ್ನು ದಾಖಲೆಯ ನಾಲ್ಕು ಬಾರಿ ಮುಡಿಗೇರಿಸಿಕೊಂಡಿದ್ದು, ಕಿವೀಸ್ ಕ್ರಿಕೆಟ್ ಇತಿಹಾಸದಲ್ಲಿ ತಮ್ಮದೇ ಆದ ಸುವರ್ಣ ಅಧ್ಯಾಯ ಬರೆದು ನಿರ್ಗಮಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net