ಬೌಲರ್​ಗಳು ನಡುಗುತ್ತಿದ್ದಾರೆ ಇನ್ನೇಕೆ ತಡ ಕೂಡಲೇ ಕರೆಯಿರಿ... ವೈಭವ್​ ಬಗ್ಗೆ ಇರ್ಫಾನ್​ ಪಠಾಣ್​ ಅಚ್ಚರಿ ಹೇಳಿಕೆ! Vaibhav Suryavanshi

ಬೌಲರ್​ಗಳು ನಡುಗುತ್ತಿದ್ದಾರೆ ಇನ್ನೇಕೆ ತಡ ಕೂಡಲೇ ಕರೆಯಿರಿ... ವೈಭವ್​ ಬಗ್ಗೆ ಇರ್ಫಾನ್​ ಪಠಾಣ್​ ಅಚ್ಚರಿ ಹೇಳಿಕೆ! Vaibhav Suryavanshi
ಬೌಲರ್​ಗಳು ನಡುಗುತ್ತಿದ್ದಾರೆ ಇನ್ನೇಕೆ ತಡ ಕೂಡಲೇ ಕರೆಯಿರಿ... ವೈಭವ್​ ಬಗ್ಗೆ ಇರ್ಫಾನ್​ ಪಠಾಣ್​ ಅಚ್ಚರಿ ಹೇಳಿಕೆ! Vaibhav Suryavanshi
Published on

ಪ್ರಮುಖ ಮುಖ್ಯಾಂಶಗಳು

  • ಟೀಮ್​ ಇಂಡಿಯಾ ಯುವ ಸೆನ್ಸೇಷನ್​ ವೈಭವ್ ಸೂರ್ಯವಂಶಿ ಅವರನ್ನು ಕ್ರೀಡಾ ಲೋಕ ಕೊಂಡಾಡುತ್ತಿದೆ
  • ತನ್ನ ಬಿರುಗಾಳಿ ಬ್ಯಾಟಿಂಗ್​ ಮೂಲಕವೇ ಸಖತ್​ ಸದ್ದು ಮಾಡುತ್ತಿದ್ದಾನೆ ಈ ಬಿಹಾರಿ ಹುಡುಗ
  • ಕ್ರಿಕೆಟ್​ ಲೋಕದಲ್ಲಿ ರಾಜನಾಗಿ ಮೆರೆಯುವ ಸ್ಪಷ್ಟ ಮುನ್ಸೂಚನೆಯನ್ನು ನೀಡಿದ್ದಾರೆ ವೈಭವ್​ ಸೂರ್ಯವಂಶಿ
  • ಇನ್ನು ತಡಮಾಡಬೇಡಿ ಕೂಡಲೇ ವೈಭವ್​ಗೆ ಟೀಮ್​ ಇಂಡಿಯಾ ಕ್ಯಾಪ್​ ಕೊಡಿ ಎಂದ ಇರ್ಫಾನ್​ ಪಠಾಣ್​
Vaibhav Suryavanshi : ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್​ ಬ್ಯಾಟ್ಸ್​ಮನ್ ಹಾಗೂ ಭಾರತದ ಅಂಡರ್-19 ವಿಶ್ವಕಪ್ ವಿಜೇತ ತಂಡದ ಸದಸ್ಯ ವೈಭವ್ ಸೂರ್ಯವಂಶಿ ಅವರನ್ನು ಕ್ರೀಡಾ ಲೋಕ ಕೊಂಡಾಡುತ್ತಿದೆ. ಬಿಹಾರ ಮೂಲದ ವೈಭವ್​, ಐಪಿಎಲ್ ಮತ್ತು ಭಾರತೀಯ ಜೂನಿಯರ್ ತಂಡದಲ್ಲಿ ತನ್ನ ಬಿರುಗಾಳಿ ಬ್ಯಾಟಿಂಗ್​ ಮೂಲಕವೇ ಸಖತ್​ ಸದ್ದು ಮಾಡುತ್ತಿದ್ದಾರೆ. ಈಗಾಗಲೇ ಅನೇಕ ವಿಶ್ವ ದಾಖಲೆಗಳನ್ನು ತನ್ನ ಬತ್ತಳಿಕೆಗೆ ಸೇರಿಸಿಕೊಂಡಿರುವ ವೈಭವ್, ಕ್ರಿಕೆಟ್​ ಲೋಕದಲ್ಲಿ ರಾಜನಾಗಿ ಮೆರೆಯುವ ಸ್ಪಷ್ಟ ಮುನ್ಸೂಚನೆಯನ್ನು ನೀಡಿದ್ದಾರೆ. 
ಕಳೆದ ಐಪಿಎಲ್​ನಲ್ಲಿ ಅಂದರೆ, 18ನೇ ಆವೃತ್ತಿಯಲ್ಲಿ ಪಾದರ್ಪಣೆ ಮಾಡಿ, ಚೊಚ್ಚಲ ಟೂರ್ನಮೆಂಟ್​ನಲ್ಲೇ ಬ್ಯಾಟಿಂಗ್​ ಸುನಾಮಿ ಸೃಷ್ಟಿಸಿ ಎಲ್ಲರ ಗಮನ ಸೆಳೆದ ಟೀಮ್​ ಇಂಡಿಯಾದ ಯುವ ಸೆನ್ಸೇಷನ್​​ ವೈಭವ್ ಸೂರ್ಯವಂಶಿ, ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯಲ್ಲೂ ತನ್ನ ಬಿರುಗಾಳಿ ಬ್ಯಾಟಿಂಗ್​ ಅನ್ನು ಮುಂದುವರಿಸಿದ್ದಾರೆ. ಈ ಸೀಸನ್​ನಲ್ಲಿ ರಾಜಸ್ಥಾನ ತಂಡ ಇಲ್ಲಿಯವರೆಗೆ ಮೂರು ಪಂದ್ಯಗಳನ್ನು ಆಡಿದ್ದು, ಮೂರರಲ್ಲೂ ಗೆಲುವು ಸಾಧಿಸಿದೆ. ಗಮನಾರ್ಹ ಸಂಗತಿ ಏನೆಂದರೆ, ಮೂರೂ ಪಂದ್ಯದಲ್ಲೂ ವೈಭವ್ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಕೇವಲ 17 ಎಸೆತಗಳಲ್ಲಿ 52 ರನ್ ಗಳಿಸಿದ ವೈಭವ್​, ಗುಜರಾತ್ ಟೈಟಾನ್ಸ್ ವಿರುದ್ಧ 18 ಎಸೆತಗಳಲ್ಲಿ 31 ರನ್ ಗಳಿಸಿದರು. ಮಂಗಳವಾರ (ಏಪ್ರಿಲ್​ 07) ಗುವಾಹಟಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮತ್ತೆ ತಮ್ಮ ಬ್ಯಾಟಿಂಗ್​ನಲ್ಲಿ ವಿನಾಶ ಸೃಷ್ಟಿಸಿದರು. ಕೇವಲ 14 ಎಸೆತಗಳನ್ನು ಎದುರಿಸಿದ ವೈಭವ್​, 1 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಾಯದಿಂದ 39 ರನ್ ಗಳಿಸಿದರು.
ಸೂರ್ಯವಂಶಿಯವರ ಧಮಾಕೇದಾರ್​ ಬ್ಯಾಟಿಂಗ್​ ಪ್ರದರ್ಶನ ನೋಡಿದ ಅನೇಕ ಮಂದಿ ಅವರನ್ನು ಭಾರತೀಯ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲು ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಬೇಡಿಕೆಗಳು ಕೇಳಿಬಂದಿವೆ. ವಿಶೇಷವಾಗಿ, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ವೈಭವ್, ವಿಶ್ವ ದರ್ಜೆಯ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದ ರೀತಿ ಎಲ್ಲರನ್ನು ಬೆರಗಾಗಿಸಿದೆ. ಹೀಗಾಗಿ, ವೈಭವ್​ ಟೀಮ್​ ಇಂಡಿಯಾ ಪರ ಕಣಕ್ಕೆ ಇಳಿಯಲು ಇದು ಸೂಕ್ತ ಸಮಯ ಎಂದು ಹೇಳುತ್ತಿದ್ದಾರೆ. 
ಈ ಸಂದರ್ಭದಲ್ಲಿ, ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್, ವೈಭವ್ ಸೂರ್ಯವಂಶಿ ಅವರ ಆಟದ ಶೈಲಿಯನ್ನು ಶ್ಲಾಘಿಸಿದ್ದಾರೆ. ಸೂರ್ಯವಂಶಿ ಓರ್ವ ಅದೃಷ್ಟಶಾಲಿ ಮಗು. ಅವರ ಭವಿಷ್ಯ ಉಜ್ವಲವಾಗಲಿದೆ. ಹದಿನೈದನೇ ವಯಸ್ಸಿನಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅವರ ಪ್ರದರ್ಶನವನ್ನು ನೋಡುವುದು ಅದ್ಭುತವಾಗಿದೆ. ಇಂತಹ ಪ್ರದರ್ಶನವನ್ನು ಈ ಹಿಂದೆ ಯಾರೂ ನೀಡಿಲ್ಲ ಎಂದು ಪಠಾಣ್​ ಹೇಳಿದ್ದಾರೆ.
ಈ ಮಗು (ಸೂರ್ಯವಂಶಿ) ಏನು ಹೇಳಿದೆ ಎಂದು ನಿಮಗೆ ನೆನಪಿದೆಯೇ? ನಾನು ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್‌ನಲ್ಲಿ ಆಡಲು ಕಾಯುತ್ತಿದ್ದೇನೆ. ಕಳೆದ ವರ್ಷ ನಾನು ಔಟಾದೆ. ಈ ಬಾರಿ ನಾನು ಖಂಡಿತವಾಗಿಯೂ ಅವರ ಬೌಲಿಂಗ್‌ನಲ್ಲಿ ಅಬ್ಬರಿಸುತ್ತೇನೆ ಎಂದು ಹೇಳಿದ್ದರು. ನಿರೀಕ್ಷೆಯಂತೆ, ಬುಮ್ರಾ ಎಸೆದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದರು. ಬುಮ್ರಾ ಕೂಡ ಇದರಿಂದ ಆಶ್ಚರ್ಯಚಕಿತರಾದರು. ಇದರಿಂದ ತಮ್ಮ ತಂತ್ರವನ್ನು ಬದಲಾಯಿಸಿಕೊಂಡು ನಿಧಾನಗತಿಯ ಚೆಂಡನ್ನು ಎಸೆಯಬೇಕಾಯಿತು. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಬುಮ್ರಾಗಿಂತ ಉತ್ತಮ ಬೌಲರ್ ಇನ್ನೊಬ್ಬರಿಲ್ಲ. ಅಂತಹ ಬೌಲರ್​ ಎದುರು ವೈಭವ್ ಆಡಿದ ರೀತಿ ನಿಜಕ್ಕೂ ಶ್ಲಾಘನೀಯ ಎಂದರು. ​
ದಯವಿಟ್ಟು ವೈಭವ್ ಅವರನ್ನು ಇನ್ನು ಕಾಯುವಂತೆ ಮಾಡಬೇಡಿ. ಶೀಘ್ರದಲ್ಲೇ ಅವರಿಗೆ ಟೀಮ್ ಇಂಡಿಯಾ ಕ್ಯಾಪ್ ನೀಡಿ. ಅವರು ಇಪ್ಪತ್ತು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಬಹುದು. ಅವರು ನಮ್ಮ ದೇಶದ ಕ್ರಿಕೆಟ್​ ಸಂಪತ್ತು. ಈಗ ಎಲ್ಲ ಬೌಲರ್​ಗಳು ಸೂರ್ಯವಂಶಿಗೆ ಬೌಲಿಂಗ್​ ಮಾಡಲು ಎದುರುತ್ತಿದ್ದಾರೆ. ವೈಭವ್ ಎಂದರೆ ಅವರಿಗೆಲ್ಲ ಭಯ ಹುಟ್ಟಿಸುವ ಹೆಸರಾಗಿದೆ ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ. ಈ ಮೂಲಕ ಆಯ್ಕೆದಾರರಿಗೆ ವೈಭವ್ ಅವರನ್ನು ಟೀಮ್ ಇಂಡಿಯಾಕ್ಕೆ ಆಯ್ಕೆ ಮಾಡಲು ಸೂಚಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net