ಅಂದು ರಾಹುಲ್​ ಇಂದು ರಿಷಭ್​...ಬದಲಾಗದ ಗೋಯೆಂಕಾ, ನಾಯಿ ಬಾಲ ಯಾವತ್ತಿದ್ರೂ ಡೊಂಕೇ ಎಂದ ನೆಟ್ಟಿಗರು! Sanjiv Goenka

ಅಂದು ರಾಹುಲ್​ ಇಂದು ರಿಷಭ್​...ಬದಲಾಗದ ಗೋಯೆಂಕಾ, ನಾಯಿ ಬಾಲ ಯಾವತ್ತಿದ್ರೂ ಡೊಂಕೇ ಎಂದ ನೆಟ್ಟಿಗರು! Sanjiv Goenka
ಅಂದು ರಾಹುಲ್​ ಇಂದು ರಿಷಭ್​...ಬದಲಾಗದ ಗೋಯೆಂಕಾ, ನಾಯಿ ಬಾಲ ಯಾವತ್ತಿದ್ರೂ ಡೊಂಕೇ ಎಂದ ನೆಟ್ಟಿಗರು! Sanjiv Goenka
Published on

ಪ್ರಮುಖ ಮುಖ್ಯಾಂಶಗಳು

  • 2024ರ ಐಪಿಎಲ್ ಆವೃತ್ತಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ( LSG ) ತಂಡ ಹೀನಾಯವಾಗಿ ಸೋಲುಂಡಿತು
  • ಅಂದಿನ ನಾಯಕ ಕೆ.ಎಲ್. ರಾಹುಲ್ ವಿರುದ್ಧ ಮೈದಾನದಲ್ಲೇ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಆಕ್ರೋಶ ಹೊರಹಾಕಿದ್ದರು
  • ಅಂದು ರಾಹುಲ್​ಗೆ ಎದುರಾಗಿದ್ದ ಅದೇ ಪರಿಸ್ಥಿತಿ ಇಂದಿನ ಎಲ್​ಎಸ್​ಜಿ ನಾಯಕ ರಿಷಭ್​ ಪಂತ್​ಗೂ ಎದುರಾಗಿದೆ
  • ನಾಯಿ ಬಾಲ ಯಾವತ್ತಿದರೂ ಡೊಂಕೇ, ಇವರು ಈ ಕಾಲದಲ್ಲಿ ಬದಲಾಗುವುದಿಲ್ಲ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ
Sanjiv Goenka : ಸುಮಾರು 2 ವರ್ಷಗಳ ಹಿಂದೆ ಅಂದರೆ, 2024ರ ಐಪಿಎಲ್ ಆವೃತ್ತಿಯಲ್ಲಿ ಲಖನೌ ಸೂಪರ್ ಜೈಂಟ್ಸ್ ( LSG ) ತಂಡ ಹೀನಾಯವಾಗಿ ಸೋಲುಂಡಿತು. ಪಂದ್ಯದ ನಂತರ, ತಂಡದ ಮಾಲೀಕ ಸಂಜೀವ್ ಗೋಯೆಂಕಾ ಅವರು ಅಂದಿನ ನಾಯಕ ಕೆ.ಎಲ್. ರಾಹುಲ್ ವಿರುದ್ಧ ಮೈದಾನದಲ್ಲೇ ತಮ್ಮ ಆಕ್ರೋಶ ಹೊರಹಾಕಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ವೈರಲ್​ ಆಗಿ, ಆ ಸಮಯದಲ್ಲಿ ಗೋಯೆಂಕಾ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಇದಾದ ಬಳಿಕ, ಕೆ.ಎಲ್. ರಾಹುಲ್ ಲಖನೌ ತಂಡ ತೊರೆದರು. ನಂತರ ರಿಷಭ್ ಪಂತ್ ಅವರನ್ನು 27 ಕೋಟಿ ರೂಪಾಯಿಗಳಿಗೆ ಖರೀದಿಸಿ ಲಖನೌ ತಂಡದ ನಾಯಕತ್ವವನ್ನು ಹಸ್ತಾಂತರಿಸಲಾಯಿತು.
ಕೆ.ಎಲ್​. ರಾಹುಲ್ ಮತ್ತು ಗೋಯೆಂಕಾ ನಡುವಿನ ವಿವಾದದ ಬಳಿಕ ಎಲ್ಲರ ಕಣ್ಣುಗಳು ಲಖನೌ ಮಾಲೀಕ ಸಂಜೀವ್ ಗೋಯೆಂಕಾ ಮೇಲೆ ನೆಟ್ಟಿವೆ. ತಮ್ಮ ವಿಭಿನ್ನ ನಡೆಯಿಂದಲೇ ಗೋಯೆಂಕಾ ಅವರು ಖ್ಯಾತಿ ಗಳಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಲಖನೌ ತಂಡ ಸೋಲುಂಡಾಗ ಅವರು ಪ್ರತಿಕ್ರಿಯಿಸುವ ರೀತಿಯನ್ನು ನೆಟ್ಟಿಗರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಏಕೆಂದರೆ, ತಮ್ಮ ತಂಡ ಸೋತಾಗ ತಾಳ್ಮೆ ಕಳೆದುಕೊಳ್ಳುವ ಗೋಯೆಂಕಾ, ಮೈದಾನದಲ್ಲೇ ತಮ್ಮ ತಂಡದ  ನಾಯಕರ ವಿರುದ್ಧ ಕೂಗಾಡುತ್ತಾರೆ. ಈ ಹಿಂದೆ ಕೆ.ಎಲ್​. ರಾಹುಲ್​ ಅನುಭವಿಸಿದ್ದ ಅದೇ ಪರಿಸ್ಥಿತಿಯನ್ನು ಇದೀಗ ರಿಷಭ್​ ಪಂತ್​ ಅವರು ಎದುರಿಸುತ್ತಿದ್ದಾರೆ. 
19ನೇ ಆವೃತ್ತಿಯ ಐಪಿಎಲ್ ಟೂರ್ನಮೆಂಟ್​ ಆರಂಭವಾಗಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಮಾರ್ಚ್​ 28ರಿಂದ ಆರಂಭವಾದ ಈ ಮೆಗಾ ಟೂರ್ನಿ ಇಂದು ಆರನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆ (ಏಪ್ರಿಲ್​ 01) ಲಖನೌ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡ 2026ರ ಐಪಿಎಲ್​ ಸೀಸನ್​ ತಮ್ಮ ಮೊದಲ ಪಂದ್ಯವನ್ನು ಆಡಿದವು. ಇದರಲ್ಲಿ ಲಖನೌ ತಂಡ ಡೆಲ್ಲಿ ವಿರುದ್ಧ 6 ವಿಕೆಟ್‌ಗಳಿಂದ ಸೋಲುಂಡಿತು.
ಲಖನೌದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಐದನೇ ಪಂದ್ಯದಲ್ಲಿ ಲಖನೌ ಸೂಪರ್​ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದು ಬೀಗಿತು.​ ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಎಲ್​ಎಸ್​ಜಿ, 18.4 ಓವರ್​ಗೆ ಕೇವಲ 141 ರನ್​ ಕಲೆಹಾಕಿತು. ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಅಕ್ಷರ್​ ಪಡೆಗೆ ಆರಂಭಿಕ ಆಘಾತ ಎದುರಾಯಿತು. ಓಪನರ್​ಗಳಾದ ಕೆ.ಎಲ್.​ ರಾಹುಲ್ ಡಕ್​ ಔಟ್​ ಆದರೆ, ಪತ್ತಮ್​ ನಿಸ್ಸಂಕಾ ಒಂದು ರನ್​ಗೆ ಪೆವಿಲಿಯನ್ ಹಾದಿ ಹಿಡಿದರು. ಆರಂಭಿಕರ ಬಳಿಕ ಬಂದ ನಿತೀಶ್​ ರಾಣಾ 15 ರನ್ ಬಾರಿಸಿದರೆ,​ ಅಕ್ಷರ್​ ಪಟೇಲ್​ ಶೂನ್ಯಕ್ಕೆ ಔಟ್​ ಆದರು. ಪವರ್​ಪ್ಲೇ ಹಂತದಲ್ಲಿ ಕೇವಲ 33 ರನ್​ಗೆ 4 ಬಹುಮುಖ್ಯ ವಿಕೆಟ್​ಗಳನ್ನು ಕಳೆದುಕೊಂಡು ಕಂಗಾಲಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್​ಗೆ ಆಸರೆಯಾಗಿದ್ದು ಸಮೀರ್ ರಿಜ್ವಿ ಮತ್ತು ಟ್ರಿಸ್ಟನ್​ ಸ್ಟಬ್ಸ್​ ಅವರ ಭರ್ಜರಿ ಇನ್ನಿಂಗ್ಸ್​. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್​ 17.1 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ ಗುರಿ ಮುಟ್ಟಿತು. ಈ ಮೂಲಕ ಡೆಲ್ಲಿ ಶುಭಾರಂಭ ಮಾಡಿತು. 

ಅಂದು ರಾಹುಲ್​ ಇಂದು ರಿಷಭ್​

ಮೊದಲ ಪಂದ್ಯದಲ್ಲೇ ಎಲ್​ಎಸ್​ಜಿ ಹೀನಾಯ ಸೋಲನ್ನು ಅನುಭವಿಸಿತು. ಯಾವಾಗ ಎಲ್​ಎಸ್​ಜಿ ಸೋಲುಂಡಿತೋ ಆಗ ಎಲ್ಲರ ಕಣ್ಣು ಮಾಲೀಕ ಗೋಯೆಂಕಾ ಅವರ ಮೇಲೆ ಬಿದ್ದಿತು. ಎಂದಿನಂತೆ ಗೋಯೆಂಕಾ ಕೂಡ ತಮ್ಮ ಆಕ್ರೋಶವನ್ನು ಹೊರಹಾಕಿದರು. ಪಂದ್ಯ ಮುಗಿದ ಕೂಡಲೇ ಮೈದಾನದ ಬೌಂಡರಿ ಲೈನ್‌ನಲ್ಲಿ ಮಾಲೀಕ ಸಂಜೀವ್ ಗೋಯೆಂಕಾ ಅವರು ತಂಡದ ನಾಯಕ ರಿಷಭ್ ಪಂತ್ ಮತ್ತು ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರೊಂದಿಗೆ ಗಂಭೀರ ಚರ್ಚೆ ನಡೆಸಿದರು. ಗೋಯೆಂಕಾ ಅವರ ಮುಖದಲ್ಲಿ ಪಂದ್ಯ ಸೋತ ಅಸಮಾಧಾನ ಎದ್ದು ಕಾಣುತ್ತಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಸಂಜೀವ್ ಗೋಯೆಂಕಾ ಅವರ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ. ನಾಯಿ ಬಾಲ ಯಾವತ್ತಿದರೂ ಡೊಂಕೇ, ಇವರು ಈ ಕಾಲದಲ್ಲಿ ಬದಲಾಗುವುದಿಲ್ಲ ಎಂದು ಕಾಮೆಂಟ್​ ಮಾಡುತ್ತಿದ್ದಾರೆ. 
ಇದರ ಬೆನ್ನಲ್ಲೇ ಸಂಜೀವ್ ಗೋಯೆಂಕಾ ಅವರು ಗುರುವಾರ ಮುಂಜಾನೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ತಂಡದ ನಾಯಕನ ಮೇಲಿನ ನಂಬಿಕೆಯನ್ನು ವ್ಯಕ್ತಪಡಿಸುವ ಪೋಸ್ಟ್ ಹಂಚಿಕೊಂಡರು. ಈ ಮೂಲಕ ತಮ್ಮ ಇಮೇಜ್​ ಕಾಪಾಡಿಕೊಳ್ಳುವ ಪ್ರಯತ್ನ ಮಾಡಿದರು. 

ಬಲಿಷ್ಠವಾಗಿ ಮರಳುತ್ತೇವೆ

ಇದು (ಐಪಿಎಲ್​) ದೀರ್ಘ ಕಾಲ ಸೀಸನ್​ ಆಗಿದೆ. ಇಂತಹ ಕ್ಷಣಗಳು ಅರ್ಥಪೂರ್ಣವಾದದ್ದನ್ನು ನಿರ್ಮಿಸುವ ಭಾಗವಾಗಿದೆ. ನಮ್ಮ ನಾಯಕ ಮತ್ತು ತಂಡವು ಬಲಿಷ್ಠವಾಗಿ ಮರಳುತ್ತದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಅಭಿಮಾನಿಗಳೇ... ಇಂದು ಏಕಾನಾದಲ್ಲಿ ನೀವು ನೀಡಿದ ಬೆಂಬಲಕ್ಕೆ ಧನ್ಯವಾದಗಳು. ನಾವು ಬಲಿಷ್ಠವಾಗಿ ಮರಳುತ್ತೇವೆ. ಈ ಋತುವಿನಲ್ಲಿ ಲಖನೌ ಕತೆ ಇನ್ನೂ ಮುಗಿದಿಲ್ಲ ಎಂದು ಸಂಜೀವ್ ಗೋಯೆಂಕಾ ಟ್ವೀಟ್ ಮಾಡಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net