ಈ 3 ಮಿಸ್ಟೇಕ್ಸ್​ ಸರಿಮಾಡಿಕೊಂಡ್ರೆ ಮಾತ್ರ ಭಾರತಕ್ಕೆ ಗೆಲುವು ಇಲ್ಲದಿದ್ರೆ ಮತ್ತೆ ಸೋಲು ಗ್ಯಾರಂಟಿ ಎಂದ ಮಂಜ್ರೇಕರ್! Team India

ಟೀಮ್​ ಇಂಡಿಯಾಗೆ ಸಲಹೆ ನೀಡಿದ ಭಾರತದ ಮಾಜಿ ಕ್ರಿಕೆಟಿಗ ಸಂಜಯ್​ ಮಂಜ್ರೇಕರ್​ ( Team India )
ಟೀಮ್​ ಇಂಡಿಯಾಗೆ ಸಲಹೆ ನೀಡಿದ ಭಾರತದ ಮಾಜಿ ಕ್ರಿಕೆಟಿಗ ಸಂಜಯ್​ ಮಂಜ್ರೇಕರ್​ ( Team India )
Published on

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್​ನ ನಿರ್ಣಾಯಕ ಪಂದ್ಯದಲ್ಲೇ ಟೀಮ್​ ಇಂಡಿಯಾ ಹೀನಾಯ ಸೋಲು
  • ಸೂಪರ್​ 8ರ ಮೊದಲ ಪಂದ್ಯದಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ ಮುಗ್ಗರಿಸಿದ ಭಾರತ
  • ಮಾಜಿ ಕ್ರಿಕೆಗರ ಆಕ್ರೋಶಕ್ಕೆ ಗುರಿಯಾದ ಟೀಮ್​ ಇಂಡಿಯಾ ಆಟಗಾರರ ಕಳಪೆ ಪ್ರದರ್ಶನ
  • ಹೀನಾಯ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ಸಂಜಯ್ ಮುಂಜ್ರೇಕರ್ ತೀವ್ರ ಅಸಮಾಧಾನ
Team India : ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಲೀಗ್​ ಹಂತವನ್ನು ಯಶಸ್ವಿಯಾಗಿ ಮುಗಿಸಿದ ಟೀಮ್​ ಇಂಡಿಯಾ, ಸೂಪರ್​ 8 ಹಂತದ ಆರಂಭದಲ್ಲೇ ಮುಗ್ಗಿರಿಸಿದೆ. ನಿರ್ಣಾಯಕ ಪಂದ್ಯದಲ್ಲೇ ಟೀಮ್​ ಇಂಡಿಯಾ ಹೀನಾಯವಾಗಿ ಸೋಲುಂಡಿರುವುದನ್ನು ಅಭಿಮಾನಿಗಳು ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಲ್ಲದೆ, ಟೀಮ್​ ಇಂಡಿಯಾ ಆಟಗಾರರ ಕಳಪೆ ಪ್ರದರ್ಶನ ಮಾಜಿ ಕ್ರಿಕೆಗರ ಆಕ್ರೋಶಕ್ಕೆ ಗುರಿಯಾಗಿದೆ.
ಗುಜರಾತಿನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ​ ಕ್ರೀಡಾಂಗಣದಲ್ಲಿ ನಿನ್ನೆ (ಫೆ.22) ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಸೂಪರ್​ 8ರ ಪಂದ್ಯದಲ್ಲಿ ಟೀಮ್​ ಇಂಡಿಯಾ 74 ರನ್​ಗಳ ಭಾರಿ ಅಂತರದಿಂದ ಸೋಲುಂಡಿತು. ಇದು ಕೇವಲ ಸೋಲಲ್ಲ, ಹೀನಾಯ ಸೋಲು. ಈ ಒಂದು ಸೋಲಿನಿಂದಾಗಿ ಟೀಮ್​ ಇಂಡಿಯಾದ ಸೆಮಿಫೈನಲ್​ ಹಾದಿ ತುಂಬಾ ಕಠಿಣವಾಗಿದೆ. ಬ್ಯಾಟ್ಸ್​ಮನ್​ ಹಾಗೂ ಕೆಲ ಬೌಲರ್​ಗಳ ವೈಫಲ್ಯದಿಂದಾಗಿ ನಿನ್ನೆಯ ಪಂದ್ಯವನ್ನು ಕಳೆದುಕೊಳ್ಳಬೇಕಾಯಿತು. ಆಗಿದ್ದು ಆಗಿ ಹೋಯಿತು. ಇದೀಗ ಮುಂದೇನು ಮಾಡಬೇಕು ಅನ್ನೋದು ತುಂಬಾನೇ ಮುಖ್ಯ. ಇದೀಗ ಉಳಿದಿರುವ ಎರಡೂ ಪಂದ್ಯಗಳನ್ನು ಭಾರತ ಗೆಲ್ಲಬೇಕು. ಅದು ಕೂಡ ಭಾರಿ ಅಂತರದಲ್ಲಿ ಗೆಲ್ಲಬೇಕು. 
ಅಂದಹಾಗೆ, ಫೆ.26ರಂದು ಜಿಂಬಾಬ್ವೆ ಹಾಗೂ ಮಾರ್ಚ್​ 1ರಂದು ವೆಸ್ಟ್​ ಇಂಡೀಸ್​ ವಿರುದ್ಧ ಟೀಮ್​ ಇಂಡಿಯಾ ಆಡಲಿದೆ. ಇದಕ್ಕೂ ಮುನ್ನ ಟೀಮ್​ ಇಂಡಿಯಾ ಮೂರು ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಿದೆ ಅನ್ನೋದು ಭಾರತದ ಮಾಜಿ ಕ್ರಿಕೆಟಿಗ ಸಂಜಯ್​ ಮಂಜ್ರೇಕರ್​ ಅವರ ಅಭಿಪ್ರಾಯವಾಗಿದೆ. ಹಾಗಾದರೆ, ಆ ತಪ್ಪುಗಳು ಯಾವುವು ಎಂದು ನಾವೀಗ ತಿಳಿದುಕೊಳ್ಳೋಣ. 
ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡದ ಹೀನಾಯ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ಸಂಜಯ್ ಮುಂಜ್ರೇಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಂಡದಲ್ಲಿ ಮೂರು ಬದಲಾವಣೆಗಳನ್ನು ಸೂಚಿಸಿರುವ ಮಂಜ್ರೇಕರ್​, ಮೊದಲನೆಯದಾಗಿ ಸ್ಪಿನ್ನರ್‌ಗಳನ್ನು ಚೆನ್ನಾಗಿ ನಿಭಾಯಿಸಬಲ್ಲ ಬ್ಯಾಟ್ಸ್​ಮನ್​ಗಳನ್ನು ಬ್ಯಾಟಿಂಗ್ ಕ್ರಮಾಂಕದಲ್ಲಿ ಮುಂದಕ್ಕೆ ಕಳುಹಿಸಬೇಕು ಎಂದಿದ್ದಾರೆ.
ಎರಡನೆಯದಾಗಿ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಇತರ ಬ್ಯಾಟ್ಸ್‌ಮನ್‌ಗಳು ನಿಧಾನಗತಿಯಲ್ಲಿ ವೇಗಿಗಳು ಎಸೆಯುವ 'ಪೀಸ್-ಆಫ್' ಎಸೆತಗಳನ್ನು ನಿಭಾಯಿಸುವಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಇದರ ಬಗ್ಗೆ ಎಚ್ಚರವಹಿಸಬೇಕಿದೆ ಎಂದಿದ್ದಾರೆ. ಮೂರನೆಯದಾಗಿ ಕುಲದೀಪ್ ಯಾದವ್​ ಅವರನ್ನು ಮತ್ತೆ ತಂಡಕ್ಕೆ ಕರೆತರುವ ಮೂಲಕ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಮುಂಜ್ರೇಕರ್ ಸಲಹೆ ನೀಡಿದ್ದಾರೆ. 

ನಿನ್ನೆಯ ಪಂದ್ಯದ ಫಲಿತಾಂಶ

ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ (ಫೆ.22) ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 187 ರನ್ ಗಳಿಸಿತು. ಪ್ರೋಟಿಯಸ್​ ಬ್ಯಾಟ್ಸ್‌ಮನ್‌ಗಳಲ್ಲಿ ಡೇವಿಡ್ ಮಿಲ್ಲರ್ (63 ರನ್​, 35 ಎಸೆತ, 7 ಬೌಂಡರಿ, 3 ಸಿಕ್ಸರ್‌ಗಳು) ಅದ್ಭುತ ಅರ್ಧಶತಕ ಗಳಿಸಿದರು. ಜೂನಿಯರ್​ ಎಬಿಡಿ ಎಂದೇ ಖ್ಯಾತಿಯಾಗಿರುವ ಡೆವಾಲ್ಡ್ ಬ್ರೆವಿಸ್ (45 ರನ್​, 29 ಎಸೆತ, 3 ಬೌಂಡರಿಗಳು, 3 ಸಿಕ್ಸರ್‌ಗಳು) ಮತ್ತು ಡೆತ್​ ಓವರ್​ಗಳಲ್ಲಿ ಅದ್ಭುತ ಬ್ಯಾಟಿಂಗ್​ ಮಾಡುವಲ್ಲಿ ಹೆಸರಾಗಿರುವ ಟ್ರಿಸ್ಟಾನ್ ಸ್ಟಬ್ಸ್ (ಅಜೇಯ 44 ರನ್​, 24 ಎಸೆತ, 1 ಬೌಂಡರಿ, 3 ಸಿಕ್ಸರ್‌ಗಳು) ಸಿಡಿಲಬ್ಬರದ ಬ್ಯಾಟಿಂಗ್​ ಪ್ರದರ್ಶನ ನೀಡಿದರು. ಭಾರತೀಯ ಬೌಲರ್‌ಗಳಲ್ಲಿ ಜಸ್ಪ್ರೀತ್ ಬುಮ್ರಾ ಮೂರು ವಿಕೆಟ್ ಪಡೆದರೆ, ಅರ್ಷದೀಪ್​ ಸಿಂಗ್​ ಎರಡು ವಿಕೆಟ್ ಪಡೆದರು. ವರುಣ್ ಚಕ್ರವರ್ತಿ ಮತ್ತು ಶಿವಂ ದುಬೆ ತಲಾ ಒಂದು ವಿಕೆಟ್ ಪಡೆದರು.
ಆಫ್ರಿಕಾ ಪಡೆ ನೀಡಿದ ಸವಾಲಿನ ಗುರಿಯನ್ನು ಬೆನ್ನಟ್ಟಿದ ಭಾರತ 18.5 ಓವರ್‌ಗಳಲ್ಲಿ 111 ರನ್‌ಗಳಿಗೆ ಆಲೌಟ್ ಆಯಿತು. ಶಿವಂ ದುಬೆ (42 ರನ್​, 37 ಎಸೆತ, 1 ಬೌಂಡರಿ, 3 ಸಿಕ್ಸರ್) ಭಾರತದ ಪರ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ತಂಡದ ಉಳಿದ ಆಟಗಾರರು ಬ್ಯಾಟಿಂಗ್​ನಲ್ಲಿ ವಿಫಲರಾದ್ದರಿಂದ ಟೀಮ್​ ಇಂಡಿಯಾ ಸೋಲಬೇಕಾಯಿತು. ದಕ್ಷಿಣ ಆಫ್ರಿಕಾದ ಬೌಲರ್‌ಗಳಲ್ಲಿ ಮಾರ್ಕೊ ಜಾನ್ಸೆನ್ ನಾಲ್ಕು ವಿಕೆಟ್ ಪಡೆದರೆ, ಕೇಶವ್ ಮಹಾರಾಜ್ ಮೂರು ವಿಕೆಟ್ ಪಡೆದರು. ಕಾರ್ಬಿನ್ ಬಾಷ್ ಎರಡು ವಿಕೆಟ್ ಪಡೆದರೆ, ಐಡೆನ್ ಮಾರ್ಕ್ರಾಮ್ ಒಂದು ವಿಕೆಟ್ ಪಡೆದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net