ನಾಳೆಯ ಪಂದ್ಯದಲ್ಲಿ ಅಭಿಷೇಕ್​... ಹೈವೋಲ್ಟೇಜ್​ ಪಂದ್ಯಕ್ಕೂ ಮುನ್ನವೇ ಪಾಕ್​ ನಾಯಕನಿಂದ ಅಚ್ಚರಿ ಹೇಳಿಕೆ! IND vs PAK ​

ಟೀಮ್​ ಇಂಡಿಯಾ ಆರಂಭಿಕ ಆಟಗಾರ ಅಭಿಷೇಕ್​ ಶರ್ಮ ಮತ್ತು ಪಾಕಿಸ್ತಾನ ತಂಡದ ನಾಯಕ ಸಲ್ಮಾನ್​ ಅಲಿ ಅಘಾ ( IND vs PAK )
ಟೀಮ್​ ಇಂಡಿಯಾ ಆರಂಭಿಕ ಆಟಗಾರ ಅಭಿಷೇಕ್​ ಶರ್ಮ ಮತ್ತು ಪಾಕಿಸ್ತಾನ ತಂಡದ ನಾಯಕ ಸಲ್ಮಾನ್​ ಅಲಿ ಅಘಾ ( IND vs PAK )
Published on

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್​ ಟೂರ್ನಿಯ ಹೈ-ವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ
  • ನಾಳೆ ಕೊಲಂಬೊದಲ್ಲಿರುವ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ
  • ಈ ಪಂದ್ಯಕ್ಕಾಗಿ ಪ್ರಪಂಚದಾದ್ಯಂತ ಕ್ರಿಕೆಟ್​ ಪ್ರೇಮಿಗಳು ಬಹಳ ಕಾತರದಿಂದ ಎದುರು ನೋಡುತ್ತಿದ್ದಾರೆ
  • ಹೈವೋಲ್ಟೇಜ್​ ಪಂದ್ಯಕ್ಕೂ ಮುನ್ನವೇ ಪಾಕ್​ ನಾಯಕ ಸಲ್ಮಾನ್​ ಅಲಿ ಅಘಾರಿಂದ ಅಚ್ಚರಿ ಹೇಳಿಕೆ
IND vs PAK: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್​ ಟೂರ್ನಿಯ ಹೈ-ವೋಲ್ಟೇಜ್ ಪಂದ್ಯಕ್ಕೆ ಮೆಗಾ ವೇದಿಕೆ ರೆಡಿಯಾಗಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ, ಭಾನುವಾರ (ಫೆ.15) ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿರುವ ಪ್ರೇಮದಾಸ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಪ್ರಪಂಚದಾದ್ಯಂತ ಇರುವ ಕ್ರಿಕೆಟ್ ಅಭಿಮಾನಿಗಳು ಈ ಒಂದು ಪಂದ್ಯಕ್ಕಾಗಿ ಬಹಳ ಕಾತರದಿಂದ ಕಾಯುತ್ತಿದ್ದಾರೆ.
ಈಗಾಗಲೇ ಉಭಯ ತಂಡಗಳು ಲಂಕಾವನ್ನು ತಲುಪಿದ್ದು, ತರಬೇತಿಯಲ್ಲಿ ನಿರತರಾಗಿವೆ. ಈ ಪಂದ್ಯಕ್ಕೂ ಮುನ್ನ ಇಂದು (ಫೆ.14) ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಅವರು ಮಹತ್ವದ ಹೇಳಿಕೆಗಳನ್ನು ನೀಡಿದರು. ನಾಳಿನ ಪಂದ್ಯದಲ್ಲಿ ಕ್ರೀಡಾ ಮನೋಭಾವ ಕಾಣಲಿ ಎಂದು ಆಶಿಸುತ್ತೇನೆ ಎಂದರು.
ಭಾರತೀಯ ಆಟಗಾರರೊಂದಿಗೆ ಮಾತನಾಡಲು ನೀವು ಸಿದ್ಧರಿದ್ದೀರಾ ಎಂದು ಸಲ್ಮಾನ್ ಅವರನ್ನು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಲಾಯಿತು. ಇದಕ್ಕೆ ಹೌದು ಅಥವಾ ಇಲ್ಲ ಅನ್ನೋ ಯಾವುದೇ ಉತ್ತರವನ್ನು ಸಲ್ಮಾನ್​ ನೀಡಲಿಲ್ಲ. ಇದರ ಬದಲಾಗಿ ನಾಳೆ ನೋಡೋಣ ಅಂತ ಸಲ್ಮಾನ್​ ಜಾರಿಕೊಂಡರು.
ಅಂದಹಾಗೆ, ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಉತ್ತಮ ದಾಖಲೆಯನ್ನು ಹೊಂದಿದೆ. ಈ ಎರಡೂ ತಂಡಗಳು ಇಲ್ಲಿಯವರೆಗೆ ಎಂಟು ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಏಳು ಪಂದ್ಯಗಳಲ್ಲಿ ಭಾರತ ಗೆದ್ದಿದೆ. ಪಾಕಿಸ್ತಾನ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ.
ಈ ದಾಖಲೆಗಳ ಬಗ್ಗೆ ಮಾತನಾಡಿದ ಸಲ್ಮಾನ್, ಹಿಂದಿನ ದಾಖಲೆಗಳ ಬಗ್ಗೆ ನಾವು ಚಿಂತಿಸುವುದಿಲ್ಲ ಎಂದರು. ಪ್ರತಿದಿನವೂ ಹೊಸ ದಿನ ಎಂದು ಭಾವಿಸಿ ನಾವು ಆಡುತ್ತೇವೆ. ಇತಿಹಾಸವನ್ನು ಬದಲಾಯಿಸಲು ನಮ್ಮಿಂದ ಸಾಧ್ಯವಿಲ್ಲ ಆದರೆ, ನಾವು ನಾಳೆ ಗೆಲ್ಲಲು ಖಂಡಿತವಾಗಿಯೂ ಪ್ರಯತ್ನಿಸುತ್ತೇವೆ ಎಂದು ಸಲ್ಮಾನ್ ಇದೇ ಸಂದರ್ಭದಲ್ಲಿ ಹೇಳಿದರು.

ಅಭಿಷೇಕ್​ ಬಗ್ಗೆ ಮಾತು

ಯುಎಸ್ಎ ವಿರುದ್ಧದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ಅಭಿಷೇಕ್ ಶರ್ಮಾ ನಂತರ ಹೊಟ್ಟೆ ನೋವಿನಿಂದಾಗಿ ನಮೀಬಿಯಾ ವಿರುದ್ಧದ ಪಂದ್ಯವನ್ನು ತಪ್ಪಿಸಿಕೊಂಡರು. ಈ ಬಗ್ಗೆ ಮಾತನಾಡಿದ ಸಲ್ಮಾನ್, ಅಭಿಷೇಕ್ ಚೇತರಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ನಾಳೆಯ ಪಂದ್ಯದಲ್ಲಿ ಅವರು ಆಡಬೇಕೆಂದು ನಾವೆಲ್ಲರು ಬಯಸುತ್ತೇವೆ. ಏಕೆಂದರೆ, ನಾವು ಅತ್ಯುತ್ತಮ ಆಟಗಾರರೊಂದಿಗೆ ಸ್ಪರ್ಧಿಸಲು ಇಚ್ಛಿಸುತ್ತೇವೆ ಎಂದರು.
ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಆಡುವ ಎಲ್ಲಾ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. ಈ ಬಗ್ಗೆ ಮಾತನಾಡಿದ ಸಲ್ಮಾನ್​, ನಾಳಿನ ಪಂದ್ಯದಲ್ಲಿ ಭಾರತವನ್ನು ಸೋಲಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾವು ಲಂಕಾದ ಹವಾಮಾನಕ್ಕೆ ತುಂಬಾ ಒಗ್ಗಿಕೊಂಡಿದ್ದೇವೆ. ನಮಗೆ ಪಿಚ್ ಬಗ್ಗೆ ಉತ್ತಮ ತಿಳುವಳಿಕೆ ಇದೆ. ಇದು ನಮಗೆ ದೊಡ್ಡ ಅನುಕೂಲ ಎಂದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net