ಐಪಿಎಲ್​ನ ಆ ದಾಖಲೆ ಮುರಿಯುವುದೇ ನನ್ನ ಗುರಿ... ವೈಭವ್​ ಮಾತಿಗೆ ಸಂಜು, ಹಾರ್ದಿಕ್​, ಅಭಿಷೇಕ್​ ಶಾಕ್​! Vaibhav Suryavanshi

ಐಪಿಎಲ್​ನ ಆ ದಾಖಲೆ ಮುರಿಯುವುದೇ ನನ್ನ ಗುರಿ... ವೈಭವ್​ ಮಾತಿಗೆ ಸಂಜು, ಹಾರ್ದಿಕ್​, ಅಭಿಷೇಕ್​ ಶಾಕ್​! Vaibhav Suryavanshi
ಐಪಿಎಲ್​ನ ಆ ದಾಖಲೆ ಮುರಿಯುವುದೇ ನನ್ನ ಗುರಿ... ವೈಭವ್​ ಮಾತಿಗೆ ಸಂಜು, ಹಾರ್ದಿಕ್​, ಅಭಿಷೇಕ್​ ಶಾಕ್​! Vaibhav Suryavanshi
Published on

ಪ್ರಮುಖ ಮುಖ್ಯಾಂಶಗಳು

  • ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯೋಜಿಸಿದ್ದ 'ನಮನ್ ಪ್ರಶಸ್ತಿ' ಪ್ರದಾನ ಸಮಾರಂಭ
  • ನಿನ್ನೆ (ಮಾರ್ಚ್ 15) ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ವಿಶ್ವಕಪ್​ ಹೀರೋಗಳಿಗೆ ಸನ್ಮಾನ
  • ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ ಮತ್ತು ಅಭಿಷೇಕ್ ಶರ್ಮಾ ಜತೆ ವೇದಿಕೆ ಹಂಚಿಕೊಂಡ ವೈಭವ್​ ಸೂರ್ಯವಂಶಿ
  • ತಮ್ಮ ಭವಿಷ್ಯದ ಗುರಿ ಬಹಿರಂಗಪಡಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ ವೈಭವ್​
Vaibhav Suryavanshi : ನಿನ್ನೆ (ಮಾರ್ಚ್ 15) ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯೋಜಿಸಿದ್ದ 'ನಮನ್ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಒಂದು ಕುತೂಹಲಕಾರಿ ಸಂಗತಿ ಜರುಗಿತು. ಅದೇನೆಂದರೆ, ಟೀಮ್ ಇಂಡಿಯಾ ಆಟಗಾರರಾದ ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ ಮತ್ತು ಅಭಿಷೇಕ್ ಶರ್ಮಾ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದ 14 ವರ್ಷದ ವೈಭವ್ ಸೂರ್ಯವಂಶಿ, ತಮ್ಮ ಭವಿಷ್ಯದ ಗುರಿಯನ್ನು ಬಹಿರಂಗಪಡಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು.
ಈ ಕಾರ್ಯಕ್ರಮದಲ್ಲಿ, ಖ್ಯಾತ ನಿರೂಪಕ ಹರ್ಷ ಭೋಗ್ಲೆ ಅವರು ವೈಭವ್​ಗೆ ಒಂದು ಕುತೂಹಲಕಾರಿ ಪ್ರಶ್ನೆಯನ್ನು ಕೇಳಿದರು. ಮುಂಬರುವ ಐಪಿಎಲ್‌ ಆವೃತ್ತಿಯಲ್ಲಿ ನೀವು ಮುರಿಯಲು ಬಯಸುವ ಅತಿದೊಡ್ಡ ದಾಖಲೆ ಯಾವುದು? ಎಂದು ಕೇಳಿದಾಗ, ಯಾವುದೇ ಹಿಂಜರಿಕೆ ಇಲ್ಲದೇ ಉತ್ತರ ನೀಡಿದ ವೈಭವ್​, ಕ್ರಿಸ್ ಗೇಲ್ ಮಾಡಿರುವ ಅಜೇಯ 175 ರನ್ ದಾಖಲೆಯನ್ನು ಮುರಿಯುವುದೇ ನನ್ನ ಗುರಿ ಎಂದರು. ಈ ಮೂಲಕ ತಮ್ಮ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದರು. ವೈಭವ್​ ಅವರ ಮಾತು ಕೇಳಿ ಸಂಜು, ಹಾರ್ದಿಕ್​ ಹಾಗೂ ಅಭಿಷೇಕ್​ ಕೂಡ ಒಂದು ಕ್ಷಣ ದಂಗಾದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇದು ಉತ್ಪ್ರೇಕ್ಷೆಯಲ್ಲ

ಅಂದಹಾಗೆ, 2013 ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಕೇವಲ 66 ಎಸೆತಗಳಲ್ಲಿ ಗೇಲ್ ಈ ಐತಿಹಾಸಿಕ ಸ್ಕೋರ್ ಅನ್ನು ಸಾಧಿಸಿದರು. ವೈಭವ್ ಅವರ ಅಂಕಿಅಂಶಗಳನ್ನು ನೋಡಿದರೆ, ಅವರು ಆಡಿರುವ ಮಾತುಗಳು ಕೇವಲ ಉತ್ಪ್ರೇಕ್ಷೆಯಲ್ಲ ಎಂದು ಹೇಳಬಹುದು. ಏಕೆಂದರೆ, 2026ರ ಅಂಡರ್ -19 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಫೈನಲ್​ ಪಂದ್ಯದಲ್ಲಿ ವೈಭವ್ ಸೃಷ್ಟಿಸಿದ ಬ್ಯಾಟಿಂಗ್​ ವಿನಾಶವನ್ನು ಎಲ್ಲರು ನೋಡಿದ್ದಾರೆ.

80 ಎಸೆತಗಳಲ್ಲಿ 175 ರನ್​

ಈ ಪಂದ್ಯದಲ್ಲಿ ವೈಭವ್​ ಅವರು ಕೇವಲ 80 ಎಸೆತಗಳಲ್ಲಿ 175 ರನ್ ಗಳಿಸಿದರು. ಈ ಮೂಲಕ ಅಂಡರ್ -19 ವಿಶ್ವಕಪ್ ಫೈನಲ್ ಇತಿಹಾಸದಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಅನ್ನು ದಾಖಲಿಸಿದರು. ಈ ಇನ್ನಿಂಗ್ಸ್‌ನಲ್ಲಿ 15 ಬೌಂಡರಿಗಳು ಮತ್ತು 15 ಸಿಕ್ಸರ್‌ಗಳು ವೈಭವ್​ ಅವರ ಬ್ಯಾಟಿಂಗ್​ನಿಂದ ಸಿಡಿದವು. ವೈಭವ್​ ಅವರ ಅದ್ಭುತ ಬ್ಯಾಟಿಂಗ್‌ ನೆರವಿನಿಂದ ಭಾರತ ದಾಖಲೆಯ ಆರನೇ ಬಾರಿಗೆ ಚಾಂಪಿಯನ್ ಆಯಿತು.

ಐಪಿಎಲ್​ನಲ್ಲೂ ದಾಖಲೆ

ವೈಭವ್ ಸೂರ್ಯವಂಶಿ ಅವರು ಈಗಾಗಲೇ ಐಪಿಎಲ್‌ನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. 2025ರ ಸೀಸನ್​ನಲ್ಲಿ ವೈಭವ್​ ಅವರು ರಾಜಸ್ಥಾನ ರಾಯಲ್ಸ್ ಪರ ಪಾದಾರ್ಪಣೆ ಮಾಡಿದರು. ಕೇವಲ 14ನೇ ವಯಸ್ಸಿನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಶತಕ ಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿದರು. ಕೇವಲ 35 ಎಸೆತಗಳಲ್ಲಿ ಶತಕದ ಗಡಿ ತಲುಪಿದ ವೈಭವ್​, ಕ್ರಿಸ್ ಗೇಲ್ (30 ಎಸೆತಗಳು) ನಂತರ ಐಪಿಎಲ್ ಇತಿಹಾಸದಲ್ಲಿ ಶತಕ ಗಳಿಸಿದ ಎರಡನೇ ಅತ್ಯಂತ ವೇಗದ ಆಟಗಾರರಾದರು. ಭಾರತೀಯನಾಗಿ ಇದು ಅತ್ಯಂತ ವೇಗದ ಶತಕವಾಗಿದೆ.
ಇಂಥಾ ಚಿಕ್ಕ ವಯಸ್ಸಿನಲ್ಲಿಯೇ ಕ್ರಿಕೆಟ್​ ದಂತಕಥೆಗಳ ದಾಖಲೆಗಳ ಮೇಲೆ ಗುರಿ ಇಟ್ಟಿರುವ ವೈಭವ್, ಭವಿಷ್ಯದಲ್ಲಿ ಟೀಮ್ ಇಂಡಿಯಾದಲ್ಲಿ ಪ್ರಮುಖ ಆಟಗಾರನಾಗುವ ನಿರೀಕ್ಷೆಯಿದೆ. ಈ ತಿಂಗಳ 28 ರಿಂದ ಪ್ರಾರಂಭವಾಗಲಿರುವ ಐಪಿಎಲ್ 2026 ರಲ್ಲಿ ವೈಭವ್ ಇನ್ನೂ ಎಷ್ಟು ವಿನಾಶಗಳನ್ನು ಸೃಷ್ಟಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net