ಕ್ರಿಕೆಟ್ ಜಗತ್ತಿನಲ್ಲಿ ಮರುಕಳಿಸಿದ ಇತಿಹಾಸ: ದ್ರಾವಿಡ್, ಸೆಹ್ವಾಗ್ ಪುತ್ರರಿಗೆ ಭಾರತ ಅಂಡರ್-19 ತಂಡದಲ್ಲಿ ಸ್ಥಾನ! Virender Sehwag and Rahul Dravid

ಕ್ರಿಕೆಟ್ ಜಗತ್ತಿನಲ್ಲಿ ಮರುಕಳಿಸಿದ ಇತಿಹಾಸ: ದ್ರಾವಿಡ್, ಸೆಹ್ವಾಗ್ ಪುತ್ರರಿಗೆ ಭಾರತ ಅಂಡರ್-19 ತಂಡದಲ್ಲಿ ಸ್ಥಾನ! Virender Sehwag and Rahul Dravid
ಕ್ರಿಕೆಟ್ ಜಗತ್ತಿನಲ್ಲಿ ಮರುಕಳಿಸಿದ ಇತಿಹಾಸ: ದ್ರಾವಿಡ್, ಸೆಹ್ವಾಗ್ ಪುತ್ರರಿಗೆ ಭಾರತ ಅಂಡರ್-19 ತಂಡದಲ್ಲಿ ಸ್ಥಾನ! Virender Sehwag and Rahul Dravid
Published on

ಪ್ರಮುಖ ಮುಖ್ಯಾಂಶಗಳು

  • ಆಸ್ಟ್ರೇಲಿಯಾ ವಿರುದ್ಧದ ಅಂಡರ್ 19 ಏಕದಿನ ಸರಣಿಗೆ ಭಾರತ ತಂಡ ಪ್ರಕಟ
  • ದ್ರಾವಿಡ್ ಹಾಗೂ ಸೆಹ್ವಾಗ್ ಪುತ್ರರಿಗೆ ರಾಷ್ಟ್ರೀಯ ತಂಡದಲ್ಲಿ ಮೊದಲ ಬಾರಿಗೆ ಅವಕಾಶ
  • ದೆಹಲಿ ಪ್ರೀಮಿಯರ್ ಲೀಗ್ ಆಟಗಾರ ಆರ್ಯವೀರ್ ಸೆಹ್ವಾಗ್ ತಂಡಕ್ಕೆ ಆಯ್ಕೆ
  • ಕಳೆದ ಶ್ರೀಲಂಕಾ ಪ್ರವಾಸದಲ್ಲೂ ಆಡಿದ್ದ ವಿಕೆಟ್ ಕೀಪರ್ ಅನ್ವಯ್ ದ್ರಾವಿಡ್ ಮುಂದುವರಿಕೆ
ನವದೆಹಲಿ: ಟೀಮ್​ ಇಂಡಿಯಾದ ದತಕಥೆಗಳಾದ ರಾಹುಲ್ ದ್ರಾವಿಡ್ ಮತ್ತು ವೀರೇಂದ್ರ ಸೆಹ್ವಾಗ್ ( Virender Sehwag and Rahul Dravid ) ಅವರ ಪುತ್ರರು ಇದೀಗ ರಾಷ್ಟ್ರೀಯ ತಂಡದ ಮೆಟ್ಟಿಲು ಏರಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮುಂಬರುವ ಅಂಡರ್-19 ಏಕದಿನ ಸರಣಿಗಾಗಿ ಬಿಸಿಸಿಐ (BCCI) ಆಯ್ಕೆ ಸಮಿತಿಯು ಪ್ರಕಟಿಸಿರುವ ಭಾರತದ ಯುವ ತಂಡದಲ್ಲಿ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ ಹಾಗೂ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಅವರಿಗೆ ಸ್ಥಾನ ಕಲ್ಪಿಸಲಾಗಿದೆ. ಈ ಮೂಲಕ ತಂದೆಯಂದಿರಂತೆ ಮಕ್ಕಳೂ ಕೂಡ ಭಾರತೀಯ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಲು ಸಜ್ಜಾಗಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂಡರ್-19 ಸರಣಿಯು ಸೆಪ್ಟೆಂಬರ್ 18 ರಿಂದ ಅಧಿಕೃತವಾಗಿ ಆರಂಭವಾಗಲಿದೆ. ಈ ಪ್ರವಾಸದಲ್ಲಿ ಒಟ್ಟು ಮೂರು ಏಕದಿನ ಪಂದ್ಯಗಳು ಹಾಗೂ ಎರಡು ಬಹು-ದಿನಗಳ ಪಂದ್ಯಗಳು ನಡೆಯಲಿವೆ. ಈ ಏಕದಿನ ಸರಣಿಗಾಗಿ ಲಕ್ಷ್ಯ ರೈಚಂದಾನಿ ಅವರನ್ನು ಭಾರತ ತಂಡದ ನಾಯಕರನ್ನಾಗಿ ಮತ್ತು ಯಶವರ್ಧನ್ ಸಿಂಗ್ ಚೌಹಾಣ್ ಅವರನ್ನು ಉಪನಾಯಕರನ್ನಾಗಿ ಆಯ್ಕೆ ಸಮಿತಿಯು ನೇಮಕ ಮಾಡಿದೆ.
ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿರುವ 18 ವರ್ಷ ವಯಸ್ಸಿನ ಆರ್ಯವೀರ್ ಸೆಹ್ವಾಗ್ ಮೊದಲ ಬಾರಿಗೆ ಭಾರತ ಅಂಡರ್-19 ಏಕದಿನ ತಂಡಕ್ಕೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ತಂಡದಲ್ಲಿ ಸ್ಥಾನ ಪಡೆದಿರುವ ಆರ್ಯವೀರ್, ಬಹು-ದಿನಗಳ ಪಂದ್ಯಗಳಿಗಾಗಿ ಪ್ರಕಟಿಸಲಾದ ತಂಡದಲ್ಲಿ ಮಾತ್ರ ಸ್ಥಾನ ಪಡೆದಿಲ್ಲ. ತಂದೆಯ ಸ್ಫೋಟಕ ಬ್ಯಾಟಿಂಗ್ ಶೈಲಿಯನ್ನು ಮೈಗೂಡಿಸಿಕೊಳ್ಳುತ್ತಿರುವ ಆರ್ಯವೀರ್ ಮೇಲಿನ ನಿರೀಕ್ಷೆಗಳು ಈಗ ಗರಿಗೆದರಿವೆ.
ಮತ್ತೊಂದೆಡೆ, ಭಾರತ ತಂಡದ ಮಾಜಿ ನಾಯಕ ಹಾಗೂ ಹೆಮ್ಮೆಯ ಕೋಚ್ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರರಾದ 17 ವರ್ಷದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಅನ್ವಯ್ ದ್ರಾವಿಡ್ ಅವರು ಏಕದಿನ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಕಳೆದ ತಿಂಗಳು ನಡೆದ ಶ್ರೀಲಂಕಾ ಪ್ರವಾಸದ ಅಂಡರ್-19 ತಂಡದಲ್ಲೂ ಸದಸ್ಯರಾಗಿದ್ದ ಅನ್ವಯ್, ಅಲ್ಲಿ ನಡೆದ ಎರಡು ಯೂತ್ ಏಕದಿನ ಪಂದ್ಯಗಳಲ್ಲಿ 14 ಮತ್ತು 87 ರನ್‌ಗಳನ್ನು ಕಲೆಹಾಕಿ ಉತ್ತಮ ಸಾಮರ್ಥ್ಯ ಪ್ರದರ್ಶಿಸಿದ್ದರು.
ಉಭಯ ತಂಡಗಳ ನಡುವಿನ ಮೂರು ಏಕದಿನ ಪಂದ್ಯಗಳು ಹಾಗೂ ಮೊದಲ ಬಹು-ದಿನಗಳ ಪಂದ್ಯವು ಗುಜರಾತ್‌ನ ರಾಜಕೋಟ್‌ನಲ್ಲಿ ಜರುಗಲಿದೆ. ಇದರ ಬೆನ್ನಲ್ಲೇ ಸರಣಿಯ ಎರಡನೇ ಹಾಗೂ ಅಂತಿಮ ಬಹು-ದಿನಗಳ ಪಂದ್ಯವು ಅಹಮದಾಬಾದ್‌ನಲ್ಲಿ ಆಯೋಜಿಸಲ್ಪಡಲಿದೆ. ದಿಗ್ಗಜರ ಮಕ್ಕಳ ಈ ಭರ್ಜರಿ ಪ್ರವೇಶವು ಭಾರತೀಯ ಕ್ರಿಕೆಟ್ ವಲಯದಲ್ಲಿ ಭಾರೀ ಕುತೂಹಲ ಹಾಗೂ ಸಂಚಲನ ಮೂಡಿಸಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net