ತಾಕತ್ತಿದ್ರೆ ಬಾಕ್ಸಿಂಗ್​ ಅಖಾಡಕ್ಕೆ ಬಾ ಎಂದು ಸವಾಲು ಹಾಕಿದ ಶ್ರೀಶಾಂತ್​​ಗೆ ಹರ್ಭಜನ್​ ಸಿಂಗ್​ ಕೊಟ್ಟ ಉತ್ತರ ವೈರಲ್​! Harbhajan Singh

ತಾಕತ್ತಿದ್ರೆ ಬಾಕ್ಸಿಂಗ್​ ಅಖಾಡಕ್ಕೆ ಬಾ ಎಂದು ಸವಾಲು ಹಾಕಿದ ಶ್ರೀಶಾಂತ್​​ಗೆ ಹರ್ಭಜನ್​ ಸಿಂಗ್​ ಕೊಟ್ಟ ಉತ್ತರ ವೈರಲ್​! Harbhajan Singh
ತಾಕತ್ತಿದ್ರೆ ಬಾಕ್ಸಿಂಗ್​ ಅಖಾಡಕ್ಕೆ ಬಾ ಎಂದು ಸವಾಲು ಹಾಕಿದ ಶ್ರೀಶಾಂತ್​​ಗೆ ಹರ್ಭಜನ್​ ಸಿಂಗ್​ ಕೊಟ್ಟ ಉತ್ತರ ವೈರಲ್​! Harbhajan Singh
Published on

ಪ್ರಮುಖ ಮುಖ್ಯಾಂಶಗಳು

  • ಲೈವ್ ಪಾಡ್‌ಕಾಸ್ಟ್‌ನಲ್ಲೇ ಭಜ್ಜಿಗೆ ಬಾಕ್ಸಿಂಗ್ ಸವಾಲು ಹಾಕಿದ ಶ್ರೀಶಾಂತ್!
  • ಬಾಕ್ಸಿಂಗ್​ ಅಖಾಡಕ್ಕೆ ಇಳಿಯೋ ಧೈರ್ಯ ಇದೆಯಾ ಎಂದು ಕೇಳಿದ ಕೇರಳ ಕ್ರಿಕೆಟಿಗ
  • ಹೆಸರು ಹೇಳದೆ ಶ್ರೀಶಾಂತ್‌ಗೆ ಭರ್ಜರಿ ಟಾಂಗ್ ಕೊಟ್ಟ ಹರ್ಭಜನ್ ಸಿಂಗ್​
  • ಖಾಲಿ ಪಾತ್ರೆಗಳೇ ಹೆಚ್ಚು ಸೌಂಡ್ ಮಾಡೋದು ಅಂತಾ ತಿರುಗೇಟು ಕೊಟ್ಟ ಭಜ್ಜಿ
Harbhajan Singh : ಐಪಿಎಲ್ 2008ರ ಕುಖ್ಯಾತ 'ಸ್ಲ್ಯಾಪ್‌ಗೇಟ್' ಪ್ರಕರಣದ ಬಳಿಕ ಮಾಜಿ ಭಾರತೀಯ ಕ್ರಿಕೆಟಿಗರಾದ ಹರ್ಭಜನ್ ಸಿಂಗ್ ಮತ್ತು ಎಸ್. ಶ್ರೀಶಾಂತ್ ನಡುವಿನ ಸಂಬಂಧವು ತೀವ್ರ ಹಳಸಿತ್ತು. ಆದಾಗ್ಯೂ, ಹರ್ಭಜನ್ ಸಿಂಗ್ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ನಂತರ ಇಬ್ಬರು ತಮ್ಮ ವೈಮನಸ್ಸು ಮರೆತು ಒಂದಾಗಿದ್ದಾರೆ ಎಂದೇ ಭಾವಿಸಲಾಗಿತ್ತು. ಅಲ್ಲದೆ, ಹರ್ಭಜನ್ ಮತ್ತು ಅವರ ಪತ್ನಿ ಗೀತಾ ಬಸ್ರಾ ನಡೆಸಿಕೊಡುವ 'ಹೂಸ್​ ದಿ ಬಾಸ್' (Who's The Boss) ಎಂಬ ಟಾಕ್ ಶೋನಲ್ಲಿ ಶ್ರೀಶಾಂತ್​ ಮತ್ತು ಹರ್ಭಜನ್​ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ನಮ್ಮ ನಡುವೆ ಯಾವುದೇ ವೈಮನಸ್ಸು ಇಲ್ಲ ಅನ್ನೋದನ್ನು ಪುಷ್ಟೀಕರಿಸಿದ್ದರು. ಆದರೆ ಇತ್ತೀಚಿಗೆ ಶ್ರೀಶಾಂತ್ ಅವರು ನೀಡಿದ ಒಂದು ಓಪನ್​ ಚಾಲೆಂಜ್​ಗೆ ಹರ್ಭಜನ್ ಸಿಂಗ್ ಅವರು ಪ್ರತಿಕ್ರಿಯೆ ನೀಡಿರುವುದನ್ನು ನೋಡಿದರೆ, ಇಬ್ಬರ ನಡುವಿನ ಹಳೆಯ ವಿವಾದದ ಕಿಡಿ ಮತ್ತೆ ಹೊತ್ತಿಕೊಂಡಿರುವ ಮುನ್ಸೂಚನೆ ಸಿಕ್ಕಂತಾಗಿದೆ.
ಅಂದಹಾಗೆ, ಸಾಮಾಜಿಕ ಜಾಲತಾಣಗಳಲ್ಲಿ ಐಪಿಎಲ್‌ನ ಆ ಹಳೆಯ 'ಸ್ಲ್ಯಾಪ್‌ಗೇಟ್' ಘಟನೆಯ ಸಂಪೂರ್ಣ ವಿಡಿಯೋ ಮತ್ತೊಮ್ಮೆ ಭಾರಿ ವೈರಲ್ ಆದಾಗ ಹಾಗೂ ಅದೇ ಘಟನೆಯನ್ನು ಹಾಸ್ಯಭರಿತವಾಗಿ ಬಳಸಿಕೊಂಡು ಹರ್ಭಜನ್ ಸಿಂಗ್ ಅವರು ಜಾಹೀರಾತೊಂದರಲ್ಲಿ ನಟಿಸಿದಾಗ ಇಬ್ಬರ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿತು. ಈ ಜಾಹೀರಾತು ಶ್ರೀಶಾಂತ್ ಅವರ ಕೆರಳಿಕೆಗೆ ಕಾರಣವಾಯಿತು. ಈ ಘಟನೆಯಿಂದ ತೀವ್ರ ಆಕ್ರೋಶಗೊಂಡ ವೇಗದ ಬೌಲರ್ ಶ್ರೀಶಾಂತ್, ಹರ್ಭಜನ್​ ಸಿಂಗ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಬ್ಲಾಕ್ ಮಾಡಿರುವುದಾಗಿ ಬಹಿರಂಗಪಡಿಸಿದರು.
ಇಷ್ಟಕ್ಕೇ ನಿಲ್ಲದ ಶ್ರೀಶಾಂತ್, ಇತ್ತೀಚಿನ ಪಾಡ್‌ಕಾಸ್ಟ್‌ ಒಂದರಲ್ಲಿ ತಾವಿಬ್ಬರೂ ಬಾಕ್ಸಿಂಗ್ ಗೇರ್ (ಬಾಕ್ಸಿಂಗ್ ಗ್ಲೌಸ್ ಮತ್ತು ಕವಚ) ಧರಿಸಿರುವ ಫೋಟೋವನ್ನು ನೋಡಿದ ನಂತರ ಮತ್ತಷ್ಟು ಕೆರಳಿದರು. ತಾವಿಬ್ಬರೂ ಬಾಕ್ಸಿಂಗ್​ ಅಖಾಡದಲ್ಲಿ ಮುಖಾಮುಖಿಯಾಗಲು ಸಿದ್ಧ ಎಂಬಂತೆ ಬಿಂಬಿಸುವ ಆ ಫೋಟೋವನ್ನು ಕಂಡು ಆಕ್ರೋಶಗೊಂಡ ಶ್ರೀಶಾಂತ್​, ಹರ್ಭಜನ್ ಸಿಂಗ್ ಅವರಿಗೆ ನೇರವಾಗಿಯೇ ಓಪನ್ ಚಾಲೆಂಜ್ (ಮುಕ್ತ ಸವಾಲು) ಹಾಕುವ ಮೂಲಕ ಅಸಮಾಧಾನ ಹೊರಹಾಕಿದರು. ಇಬ್ಬರ ನಡುವಿನ ಈ ಹಗ್ಗಜಗ್ಗಾಟ ಈಗ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇತ್ತೀಚೆಗೆ ಶ್ರೀಶಾಂತ್​ ಅವರು ಲಲ್ಲನ್‌ಟಾಪ್ ಪಾಡ್‌ಕಾಸ್ಟ್‌‌ನಲ್ಲಿ ಭಾಗವಹಿಸಿದರು. ಈ ವೇಳೆ ಶ್ರೀಶಾಂತ್ ಅವರಿಗೆ ಹರ್ಭಜನ್​ ಮತ್ತು ಅವರು ಬಾಕ್ಸಿಂಗ್​ ಗೇರ್​ ಧರಿಸಿರುವ ಫೋಟೋವನ್ನು ತೋರಿಸಲಾಯಿತು. ಇದನ್ನು ನೋಡಿ ಕೆರಳಿದ ಶ್ರೀಶಾಂತ್​, ಹರ್ಭಜನ್‌ಗೆ ನೇರ ಸವಾಲು ಹಾಕಿದರು. ಇದೇ ಸೀನ್, ನಿನ್ನತ್ರ ಆ ಧೈರ್ಯ ಇದೆಯಾ? ನನ್ನೊಂದಿಗೆ ರಿಂಗ್‌ಗೆ ಇಳಿಯುವ ಧೈರ್ಯ ನಿನಗಿದೆಯಾ? ಸೈನ್ ಮಾಡಿ ರಿಂಗ್ ಒಳಗೆ ಬರಲು ಸಾಧ್ಯವೇ? ನಾನು ಅವರನ್ನೇ (ಹರ್ಭಜನ್​ ಸಿಂಗ್​) ಕೇಳುತ್ತಿದ್ದೇನೆ. ಇದೇ ಗ್ಲೌಸ್ ಧರಿಸಿ ನನ್ನ ಜೊತೆ ರಿಂಗ್‌ಗೆ ಬರುವ ಧೈರ್ಯ ನಿನಗಿದೆಯಾ? ಇದು ಆಕ್ಟಿಂಗ್ ಅಲ್ಲ. ನಾನು ಕನಿಷ್ಠ ನಗುತ್ತಲಾದರೂ ಇದ್ದೇನೆ, ಆದರೆ ನೀನು ನಗುತ್ತಲೂ ಇಲ್ಲ, ನೀನೇನು ಮಾಡುತ್ತಿದ್ದೀಯೋ ನನಗಂತೂ ತಿಳಿಯುತ್ತಿಲ್ಲ. ನೋಡೇ ಬಿಡೋಣ, ಇದು ನನ್ನ ಓಪನ್​ ಚಾಲೆಂಜ್​ ಎಂದು ಅತ್ಯಂತ ಆಕ್ರೋಶದಿಂದ ಹರ್ಭಜನ್​ ಸಿಂಗ್‌ಗೆ ಸವಾಲು ಹಾಕಿದ್ದಾರೆ.
ಶ್ರೀಶಾಂತ್ ಅವರ ಈ ಸವಾಲಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದಂತೆ, ಇತ್ತ ಹರ್ಭಜನ್ ಸಿಂಗ್ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನಿಗೂಢ ಅರ್ಥವಿರುವ ವಿಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ ತಿರುಗೇಟು ನೀಡಿದ್ದಾರೆ. ಆ ವಿಡಿಯೋದಲ್ಲಿ ಮಾತನಾಡಿರುವ ಅವರು, "ಯಾರೋ ಒಬ್ಬರು ತುಂಬಾ ಅದ್ಭುತವಾಗಿ ಹೇಳಿದ್ದಾರೆ, ಬಕಾವಾಸ್ ಮಾಡುವವರು ಮಾಡುತ್ತಿರಲಿ ಬಿಡಿ, ಯಾಕಂದ್ರೆ ಯಾವಾಗಲೂ ಖಾಲಿ ಪಾತ್ರೆಗಳೇ ಅತಿ ಹೆಚ್ಚು ಸೌಂಡ್ ಮಾಡುವುದು (Kisine bohot khub kaha hai ki karne do jo log bakwaas karte hain, hamesha khali bartaan hi to awaaz karte hain) ಎನ್ನುವ ಶಾಯರಿ ಮೂಲಕ ಶ್ರೀಶಾಂತ್ ಹೆಸರನ್ನು ಎಲ್ಲೂ ಪ್ರಸ್ತಾಪಿಸದೆಯೇ ಪರೋಕ್ಷವಾಗಿ ಭರ್ಜರಿ ಟಾಂಗ್ ಕೊಟ್ಟಿದ್ದಾರೆ.
ಹರ್ಭಜನ್ ಸಿಂಗ್ ಅವರು ತಮ್ಮ ಈ ವಿಡಿಯೋದಲ್ಲಿ ಎಲ್ಲಿಯೂ ಶ್ರೀಶಾಂತ್ ಹೆಸರನ್ನು ನೇರವಾಗಿ ಉಲ್ಲೇಖಿಸದಿದ್ದರೂ ಸಹ, ಇದು ಶ್ರೀಶಾಂತ್ ನೀಡಿದ ಮುಕ್ತ ಸವಾಲಿಗೆ ಭಜ್ಜಿ ಕೊಟ್ಟಿರುವ ಖಡಕ್ ತಿರುಗೇಟು ಮತ್ತು ಪರೋಕ್ಷ ಪ್ರತಿಕ್ರಿಯೆ ಎಂದು ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚಿಸುತ್ತಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net