ಟೀಮ್​ ಇಂಡಿಯಾ ಆಟಗಾರರನ್ನೇ ಟಾರ್ಗೆಟ್​ ಮಾಡಿದ ಗಂಭೀರ್​: ಎಬಿ ಡಿವಿಲಿಯರ್ಸ್ ಸ್ಫೋಟಕ ಹೇಳಿಕೆ! AB de Villiers

ಟೀಮ್​ ಇಂಡಿಯಾ ಹೆಡ್​ ಕೋಚ್​ ಗೌತಮ್​ ಗಂಭೀರ್ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್​
ಟೀಮ್​ ಇಂಡಿಯಾ ಹೆಡ್​ ಕೋಚ್​ ಗೌತಮ್​ ಗಂಭೀರ್ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್​
Published on

ಪ್ರಮುಖ ಮುಖ್ಯಾಂಶಗಳು

  • ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಹೀನಾಯ ಸೋಲು
  • ಕೋಲ್ಕತದ ಈಡನ್​ ಗಾರ್ಡನ್ಸ್​ ಪಿಚ್​ ವಿರುದ್ಧ ಭಾರೀ ಟೀಕೆ
  • ಪಿಚ್​ ಸಮರ್ಥಿಸಿಕೊಂಡ ಟೀಮ್​ ಇಂಡಿಯಾ ಹೆಡ್​ ಕೋಚ್​ ಗೌತಮ್​ ಗಂಭೀರ್​
  • ಗಂಭೀರ್​ ಕುರಿತು ಅಚ್ಚರಿ ಹೇಳಿಕೆ ನೀಡಿದ ದಕ್ಷಿಣ ಆಫ್ರಿಕಾ ದಿಗ್ಗಜ ಆಟಗಾರ ಡಿವಿಲಿಯರ್ಸ್​
AB de Villiers : ಕೋಲ್ಕತದ ಈಡನ್ ಗಾರ್ಡನ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್​ ಇಂಡಿಯಾ ಹೀನಾಯ ಸೋಲುಂಡಿತು. ಇದರಿಂದ ಎಲ್ಲರು ಈಡನ್​ ಗಾರ್ಡನ್ಸ್​ ಪಿಚ್​ ಅನ್ನು ಟೀಕಿಸಿದರು. ಏಕೆಂದರೆ, ಪಂದ್ಯದ ಎರಡನೇ ದಿನದಂದು ಬೌಲರ್‌ಗಳು ಮೇಲುಗೈ ಸಾಧಿಸಿದರು. ವೇಗಿಗಳು ಮತ್ತು ಸ್ಪಿನ್ನರ್​ಗಳಿಗೆ ಪಿಚ್​ ನೆರವಾಯಿತು. ಅದರಲ್ಲೂ ಸ್ಪಿನ್ನರ್​ಗಳಿಗೆ ಸಾಕಷ್ಟು ಟರ್ನ್ ಸಿಕ್ಕಿತು. ಈ ಪರಿಸ್ಥಿತಿಯ ಲಾಭ ಪಡೆದ ಎದುರಾಳಿ ತಂಡದ ಸ್ಪಿನ್ನರ್ ಸೈಮನ್ ಹಾರ್ಮರ್ 8 ವಿಕೆಟ್‌ಗಳನ್ನು ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಬೌನ್ಸಿ ಪಿಚ್‌ನಲ್ಲಿ ಟೀಮ್​ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ರನ್​ ಗಳಿಸಲು ತುಂಬಾ ಕಷ್ಟಪಟ್ಟರು. ಭಾರತದ ಆಟಗಾರರು ಮಾತ್ರವಲ್ಲ, ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳು ಸಹ ಈ ಪಿಚ್‌ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಹೀಗಾಗಿ, ಈಡನ್ ಗಾರ್ಡನ್ಸ್ ಪಿಚ್‌ ತೀವ್ರ ಟೀಕೆಗೆ ಗುರಿಯಾಯಿತು. ಇದು ಟೆಸ್ಟ್ ಕ್ರಿಕೆಟ್‌ಗೆ ಸೂಕ್ತವಾದ ಪಿಚ್ ಅಲ್ಲ ಎಂದು ಅನೇಕ ಮಾಜಿ ಆಟಗಾರರು ಕಿಡಿಕಾರಿದರು.
ಈಡನ್​ ಗಾರ್ಡನ್​ ಪಿಚ್​ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬರುವಾಗ, ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್, ಪಿಚ್ ಅನ್ನು ಸಮರ್ಥಿಸಿಕೊಂಡರು. ಈ ಪಿಚ್ ಬ್ಯಾಟಿಂಗ್‌ಗೆ ಅಷ್ಟೊಂದು ಕಷ್ಟಕರವೇನಲ್ಲ ಮತ್ತು ಸರಿಯಾದ ರಕ್ಷಣಾತ್ಮಕ ತಂತ್ರವಿದ್ದರೆ ಸುಲಭವಾಗಿ ರನ್ ಗಳಿಸಬಹುದು ಎಂದು ಗಂಭೀರ್ ಹೇಳಿದರು.
ಗಂಭೀರ್ ಅವರ ಈ ಹೇಳಿಕೆಗಳು ಈಗ ಕೋಲಾಹಲಕ್ಕೆ ಕಾರಣವಾಗಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್, ಗಂಭೀರ್​ ನಡೆಯನ್ನು ಟೀಕಿಸಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಎಬಿಡಿ, ಗಂಭೀರ್ ಅವರು ಪರೋಕ್ಷವಾಗಿ ತಮ್ಮದೇ ತಂಡವನ್ನು ಟೀಕಿಸಿದ್ದಾರೆ ಎಂದು ಹೇಳಿದ್ದಾರೆ.
ಮಾತು ಮುಂದುವರಿಸಿದ ಎಬಿಡಿ, ಕಳೆದ ಐದು ವರ್ಷಗಳಲ್ಲಿ ಟೀಮ್​ ಇಂಡಿಯಾ ತವರಿನಲ್ಲಿ ಹೆಚ್ಚು ಪಂದ್ಯಗಳನ್ನು ಸೋಲುತ್ತಿವೆ. ಇದು ನಿಜಕ್ಕೂ ಆತಂಕಕಾರಿ ವಿಷಯವಾಗಿದೆ. ಈ ಹಿಂದೆ, ತವರಿನ ನೆಲದಲ್ಲಿ ಭಾರತವನ್ನು ಸೋಲಿಸುವುದು ತುಂಬಾ ಕಷ್ಟಕರವಾಗಿತ್ತು. ಆದರೆ, ಇತ್ತೀಚೆಗೆ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಭಾರತ ಇಲ್ಲಿಯವರೆಗೆ ನಾಲ್ಕು ಪಂದ್ಯಗಳನ್ನು ಸೋತಿದ್ದಾರೆ. ಈಗ, ಭಾರತೀಯ ಬ್ಯಾಟ್ಸ್‌ಮನ್‌ಗಳು ಸ್ಪಿನ್​ಗೆ ಆಡಲು ದುರ್ಬಲರಾಗಿದ್ದಾರೆಯೇ? ನಾನು ಆ ರೀತಿ ಭಾವಿಸುವುದಿಲ್ಲ. ಏಕೆಂದರೆ, ಎದುರಾಳಿ ತಂಡಗಳು ಭಾರತದ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿವೆ ಎಂದು ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಎಬಿಡಿ ಹೇಳಿದರು.
ಅಂದಹಾಗೆ, ಮೊದಲ ದಿನದ ಮೊದಲಾರ್ಧದಲ್ಲಿ ಈಡನ್ ಗಾರ್ಡನ್ಸ್ ಪಿಚ್ ಬ್ಯಾಟಿಂಗ್‌ಗೆ ಅನುಕೂಲಕರವಾಗಿದ್ದರೂ, ಎರಡನೇ ದಿನದಂದು ಅದು ಸಂಪೂರ್ಣವಾಗಿ ಬೌಲರ್​ಗಳ ಪರವಾಗಿ ಬದಲಾಯಿತು. ಹೀಗಾಗಿ ಟೀಮ್​ ಇಂಡಿಯಾದ ಕೇವಲ 124 ರನ್‌ಗಳ ಸಣ್ಣ ಗುರಿಯನ್ನು ತಲುಪಲು ಸಾಧ್ಯವಾಗದೇ ಕೇವಲ 93 ರನ್​​ಗಳಿಗೆ ಆಲೌಟ್​ ಆಗುವ ಮೂಲಕ ಹರಿಣ ಪಡೆ ಎದುರು ಮಂಡಿಯೂರಿತು.
ಇನ್ನು ಎರಡನೇ ಟೆಸ್ಟ್ ನವೆಂಬರ್ 22 ರಂದು ಗುವಾಹಟಿಯಲ್ಲಿ ಪ್ರಾರಂಭವಾಗಲಿದೆ. ಸರಣಿಯಲ್ಲಿ ಹಿಂದುಳಿದಿರುವ ಭಾರತ ಈ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net