ಅದು ಕಸಕ್ಕೆ ಸಮಾನ... ಟಿ20 ವಿಶ್ವಕಪ್​ ಗೆದ್ದ ಬೆನ್ನಲ್ಲೇ ಶಾಕಿಂಗ್​ ಹೇಳಿಕೆ ನೀಡಿದ ಕೋಚ್​ ಗೌತಮ್​ ಗಂಭೀರ್​! Gautam Gambhir

ಅದು ಕಸಕ್ಕೆ ಸಮಾನ... ಟಿ20 ವಿಶ್ವಕಪ್​ ಗೆದ್ದ ಬೆನ್ನಲ್ಲೇ ಶಾಕಿಂಗ್​ ಹೇಳಿಕೆ ನೀಡಿದ ಕೋಚ್​ ಗೌತಮ್​ ಗಂಭೀರ್​! Gautam Gambhir
ಅದು ಕಸಕ್ಕೆ ಸಮಾನ... ಟಿ20 ವಿಶ್ವಕಪ್​ ಗೆದ್ದ ಬೆನ್ನಲ್ಲೇ ಶಾಕಿಂಗ್​ ಹೇಳಿಕೆ ನೀಡಿದ ಕೋಚ್​ ಗೌತಮ್​ ಗಂಭೀರ್​! Gautam Gambhir
Published on

ಪ್ರಮುಖ ಮುಖ್ಯಾಂಶಗಳು

  • ಟೀಮ್​ ಇಂಡಿಯಾದ ಮುಖ್ಯ ಕೋಚ್​ ಗೌತಮ್ ಗಂಭೀರ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ
  • ಯಾವುದೇ ಭಾರತೀಯ ಕ್ರಿಕೆಟ್ ಕೋಚ್ ತಲುಪದ ಗುರಿಯನ್ನು ಈಗ ತಲುಪಿದ್ದಾರೆ
  • ಟೀಮ್​ ಇಂಡಿಯಾದ ಮುಖ್ಯ ಕೋಚ್​ ಆಗಿ ಎರಡು ಐಸಿಸಿ ಟೈಟಲ್​ಗಳನ್ನು ಗೆದ್ದಿದ್ದಾರೆ
Gautam Gambhir : ಟೀಮ್​ ಇಂಡಿಯಾದ ಮುಖ್ಯ ಕೋಚ್​ ಗೌತಮ್ ಗಂಭೀರ್ ಅವರು ಯಾವುದೇ ಭಾರತೀಯ ಕ್ರಿಕೆಟ್ ಕೋಚ್ ತಲುಪದ ಗುರಿಯನ್ನು ಈಗ ತಲುಪಿದ್ದಾರೆ. 2025ರ ಚಾಂಪಿಯನ್ಸ್​ ಟ್ರೋಫಿ ಮತ್ತು ಮೊನ್ನೆಯಷ್ಟೇ (ಮಾರ್ಚ್​ 08) ಮುಗಿದ ಟಿ20 ವಿಶ್ವಕಪ್​ ಗೆಲ್ಲುವ ಮೂಲಕ ಕೋಚ್​ ಆಗಿ ಎರಡು ಐಸಿಸಿ ಟೈಟಲ್​ಗಳನ್ನು ಗೆದ್ದಿದ್ದಾರೆ. 
ಹಾಗಂದ ಮಾತ್ರಕ್ಕೆ, 2024ರ ಟಿ20 ವಿಶ್ವಕಪ್ ಬಳಿಕ ಶುರುವಾದ ಗಂಭೀರ್​ ಅವರ ಅಧಿಕಾರಾವಧಿಯು ಯಾವುದೇ ಸವಾಲುಗಳಿಲ್ಲದೆ ತುಂಬಾ ಸುಲಭವಾಗಿ ಮುಂದುವರೆದಿದೆ ಎಂದರ್ಥವಲ್ಲ. ಏಕೆಂದರೆ, ತಮ್ಮ ಅವಧಿಯಲ್ಲಿ ಟೀಮ್​ ಇಂಡಿಯಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯನ್ನು ಹೀನಾಯವಾಗಿ ಸೋತಿತು. ಅಲ್ಲದೆ, ಶ್ರೀಲಂಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಸಹ ಕಳೆದುಕೊಂಡಿತು. 
ಈ ಸೋಲುಗಳ ಬಳಿಕ ಭಾರತದ ಡ್ರೆಸ್ಸಿಂಗ್​ ಕೋಣೆಯಲ್ಲಿ ತಂಡದ ವಾತಾವರಣದ ಬಗ್ಗೆ ಕೆಲವೊಂದಿಷ್ಟು ಗೊಣಗಾಟಗಳು ಕೇಳಿಬಂದವು. ಗಂಭೀರ್ ಅವರ ಅಧಿಕಾರಾವಧಿಯಲ್ಲಿ ಕೆಲವು ಪ್ರಮುಖ ನಿವೃತ್ತಿಗಳೂ ಕಂಡುಬಂದವು. ಅಂದರೆ, ವಿರಾಟ್​ ಕೊಹ್ಲಿ ಹಾಗೂ ರೋಹಿತ್​ ಶರ್ಮಾರಂತಹ ದಿಗ್ಗಜ ಆಟಗಾರರು ಟೆಸ್ಟ್​ ಮತ್ತು ಟಿ20 ಮಾದರಿ ಪಂದ್ಯಗಳಿಂದ ನಿವೃತ್ತಿ ಘೋಷಣೆ ಮಾಡಿದರು. ಎಲ್ಲ ಬೆಳವಣಿಗೆಗಳ ಬಳಿಕ ಟೀಮ್​ ಇಂಡಿಯಾದ ಡ್ರೆಸ್ಸಿಂಗ್​ ರೂಮ್​ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಾಕಷ್ಟು ವರದಿಗಳು ಬಂದವು. ಇದೆಲ್ಲವನ್ನು ಗಮನಿಸಿದ್ದ ಗಂಭೀರ್​ ಉತ್ತರ ನೀಡಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದರು. ಇದೀಗ ಟೀಮ್​ ಇಂಡಿಯಾ ಟಿ20 ವಿಶ್ವಕಪ್​ ಗೆದ್ದ ಒಂದು ದಿನದ ಬೆನ್ನಲ್ಲೇ ತಂಡದ ವಾತಾವರಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೆ ಗಂಭೀರ್​ ಅವರು ನೇರವಾಗಿ ಉತ್ತರಿಸಿದ್ದಾರೆ. 
ಇಲ್ಲಿ ನನ್ನ ತತ್ವಶಾಸ್ತ್ರ ತುಂಬಾ ಸರಳವಾಗಿದೆ. ತಂಡದ ಬಹುಪಾಲು ಸದಸ್ಯರು ನನ್ನ ಬಗ್ಗೆ ಅತೃಪ್ತರಾಗಿದ್ದರೆ, ನಾನು ಆ ಡ್ರೆಸ್ಸಿಂಗ್ ಕೋಣೆಯಲ್ಲಿ ಉಳಿಯುವುದರಲ್ಲಿ ಯಾವುದೇ ಅರ್ಥವಿಲ್ಲ. ಬಹುಪಾಲು ಸದಸ್ಯರು ಸಂತೋಷವಾಗಿದ್ದರೆ, ನಾನು ಸರಿಯಾದ ಕೆಲಸ ಮಾಡುತ್ತಿದ್ದೇನೆ ಎಂದು ಅರ್ಥ. ನೀವು ಪ್ರಾಮಾಣಿಕವಾಗಿ ವರದಿ ಮಾಡಿದರೆ, ತಂಡದ ವಾತಾವರಣ ಹೇಗಿದೆ ಎಂದು ನಿಮಗೆ ತಿಳಿಯುತ್ತದೆ. ನಿಮಗೆ ಗೊತ್ತಿದೆ ಟೀಮ್​ ಇಂಡಿಯಾದ ವಾತಾವರಣವನ್ನು ಯಾರಿಂದಲೂ ಮರೆಮಾಡಲು ಸಾಧ್ಯವಿಲ್ಲ. ಏಕೆಂದರೆ, ಅಲ್ಲಿ ಹೆಚ್ಚಿನ ಪರಿಶೀಲನೆ, ಪ್ರಚಾರ ಮತ್ತು ಮಾಧ್ಯಮಗಳ ಗಮನ ಇರುತ್ತದೆ ಎಂದು ಗಂಭೀರ್​ ಅವರು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ನಮ್ಮ ತಂಡದ ವಾತಾವರಣ ಚೆನ್ನಾಗಿಲ್ಲ ಎಂದು ಕೆಲ ಜನರು ಹೇಳುತ್ತಿರುವುದು ಕಸಕ್ಕೆ ಸಮಾನ. ನಾನು ಅಥವಾ ನಮ್ಮ ತಂಡದ ಕ್ಯಾಪ್ಟನ್​ ಈ ಬಗ್ಗೆ ಏನೂ ಹೇಳಬೇಕಾಗಿಲ್ಲ. ನಮ್ಮ ತಂಡದ ಪ್ರಯಾಣದಿಂದ ಹಿಡಿದು ಅಭ್ಯಾಸ ಅವಧಿ ಹಾಗೂ ನಮ್ಮ ಆಟಗಾರರ ಸಂದರ್ಶನಗಳವರೆಗೆ ನಮ್ಮನ್ನು ನೀವು ತುಂಬಾ ಹತ್ತಿರದಿಂದ ಗಮನಿಸಿದರೆ ನಮ್ಮ ತಂಡದ ವಾತಾವರಣ ಹೇಗಿದೆ ಎಂದು ನಿಮಗೆ ತಿಳಿಯುತ್ತದೆ ಎಂದು ಗಂಭೀರ್​ ಅವರು ಹೇಳಿದರು. ಈ ಮೂಲಕ ತಂಡದ ವಾತಾವರಣ ಚೆನ್ನಾಗಿಲ್ಲ ಅನ್ನೋದು ಮಾಧ್ಯಮಗಳ ಸೃಷ್ಟಿ ಎಂದು ಪರೋಕ್ಷವಾಗಿ ಹೇಳಿದರು. 
ಮಾತು ಮುಂದುವರಿಸಿದ ಗಂಭೀರ್​, ನಾನು ಆಟಗಾರರನ್ನು ಆಯ್ಕೆ ಮಾಡುವಾಗ ಅವರ ಮೇಲೆ ನಂಬಿಕೆ ಇಡುತ್ತೇನೆ ಎಂದರು. ನೋಡಿ, ನೀವು ಭರವಸೆಯ ಮೇಲೆ ಅಲ್ಲ, ನಂಬಿಕೆಯ ಆಧಾರದ ಮೇಲೆ ಆಟಗಾರರನ್ನು ಆಯ್ಕೆ ಮಾಡುತ್ತೀರಿ. ನೀವು ನಂಬಿಕೆಯ ಆಧಾರದ ಮೇಲೆ ಯಾರನ್ನಾದರೂ ಆಯ್ಕೆ ಮಾಡಿದರೆ, ನಾಲ್ಕು ಅಥವಾ ಐದು ಪಂದ್ಯಗಳ ನಂತರ ನೀವು ಆ ನಂಬಿಕೆಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಆದರೆ, ನೀವು ಕೇವಲ ಭರವಸೆಯ ಮೇಲೆ ಯಾರನ್ನಾದರೂ ಆಯ್ಕೆ ಮಾಡಿದರೆ, ನೀವು ಆ ಭರವಸೆಯನ್ನು ಬೇಗನೆ ಕಳೆದುಕೊಳ್ಳಬಹುದು. ಅದು ಅಭಿಷೇಕ್ ಆಗಿರಲಿ ಅಥವಾ ಆ ಡ್ರೆಸ್ಸಿಂಗ್ ರೂಮ್‌ನಲ್ಲಿರುವ 15 ಆಟಗಾರರಲ್ಲಿ ಯಾರಾಗಿರಲಿ, ನಾವು ಅವರೆಲ್ಲರನ್ನೂ ನಂಬುತ್ತೇವೆ. ಸ್ಪರ್ಧೆಯ ಯಾವುದೇ ಹಂತದಲ್ಲಿ ಅವರಿಗೆ ಅವಕಾಶ ಸಿಕ್ಕಾಗಲೆಲ್ಲಾ ಅವರು ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡುತ್ತಾರೆ. ಈ ತಂಡಕ್ಕೆ ಅತ್ಯಂತ ಮುಖ್ಯವಾದ ವಿಷಯವೆಂದರೆ ತಂಡವನ್ನು ತಮ್ಮ ಮುಂದೆ ಇಡುವುದು ಎಂದು ಗಂಭೀರ್ ಹೇಳಿದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net