ಆತ ಎಂಟ್ರಿ ಕೊಟ್ಟಿದ್ದೇ ತಡ ಎಲ್ಲವೂ ಬದಲಾಯ್ತು ವಿಶ್ವಕಪ್​ ಬಂದಾಯ್ತು... ಸೂರ್ಯಕುಮಾರ್​ ಅಚ್ಚರಿ ಹೇಳಿಕೆ! Suryakumar Yadav

ಆತ ಎಂಟ್ರಿ ಕೊಟ್ಟಿದ್ದೇ ತಡ ಎಲ್ಲವೂ ಬದಲಾಯ್ತು ವಿಶ್ವಕಪ್​ ಬಂದಾಯ್ತು... ಸೂರ್ಯಕುಮಾರ್​ ಅಚ್ಚರಿ ಹೇಳಿಕೆ! Suryakumar Yadav
ಆತ ಎಂಟ್ರಿ ಕೊಟ್ಟಿದ್ದೇ ತಡ ಎಲ್ಲವೂ ಬದಲಾಯ್ತು ವಿಶ್ವಕಪ್​ ಬಂದಾಯ್ತು... ಸೂರ್ಯಕುಮಾರ್​ ಅಚ್ಚರಿ ಹೇಳಿಕೆ! Suryakumar Yadav
Published on

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್​ ಟೂರ್ನಿ ಗೆಲುವಿನ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೂರ್ಯಕುಮಾರ್ ಯಾದವ್
  • ತಂಡದ ಪ್ರಯಾಣ, ಸಹ ಆಟಗಾರರ ಪಾತ್ರ ಮತ್ತು ತರಬೇತುದಾರರ ಮಾರ್ಗದರ್ಶನ ಕುರಿತು ಮುಕ್ತ ಮಾತು
  • ಐಸಿಸಿ ಅಧ್ಯಕ್ಷ ಜಯ್ ಶಾ ತಮ್ಮ ಮೇಲೆ ಇಟ್ಟಿರುವ ನಂಬಿಕೆ ಭಾರತೀಯ ತಂಡವನ್ನು ಹೊಸ ದಿಕ್ಕಿನಲ್ಲಿ ಮುನ್ನಡೆಸಿದೆ ಎಂದ ಸೂರ್ಯ
Suryakumar Yadav : ಟಿ20 ವಿಶ್ವಕಪ್​ ಟೂರ್ನಿ ಗೆಲುವಿನ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ತಮ್ಮ ತಂಡದ ಪ್ರಯಾಣ, ಸಹ ಆಟಗಾರರ ಪಾತ್ರ ಮತ್ತು ತರಬೇತುದಾರರ ಮಾರ್ಗದರ್ಶನದ ಕುರಿತು ಆಸಕ್ತಿದಾಯಕ ಮಾಹಿತಿಗಳನ್ನು ಹಂಚಿಕೊಂಡರು.
ಕೆಲವು ಸಮಯದಿಂದ ಟೀಮ್ ಇಂಡಿಯಾ ಹೊಸ ದಿಕ್ಕಿನಲ್ಲಿ ಮುನ್ನಡೆಯುತ್ತಿದೆ. ಈ ಅದ್ಭುತ ಪ್ರಯಾಣವು ಕೇವಲ ಒಂದು ಬಾರಿಯ ಯಶಸ್ಸಿನಿಂದ ಬಂದಿದ್ದಲ್ಲ, ಬದಲಾಗಿ ಅದರ ಹಿಂದೆ ದೀರ್ಘಕಾಲೀನ ಶ್ರಮ ಹಾಗೂ ಹೋರಾಟವಿದೆ. ಐಸಿಸಿ ಅಧ್ಯಕ್ಷ ಜಯ್ ಶಾ ತಮ್ಮ ಮೇಲೆ ಇಟ್ಟಿರುವ ನಂಬಿಕೆಯು ಭಾರತೀಯ ತಂಡವನ್ನು ಹೊಸ ದಿಕ್ಕಿನಲ್ಲಿ ಮುನ್ನಡೆಸಿದೆ ಎಂದು ಸೂರ್ಯಕುಮಾರ್ ಹೇಳಿದರು.

ನನ್ನ ಮೇಲೆ ನಂಬಿಕೆ ಇಟ್ಟರು

ವಿಶ್ವಕಪ್​ ಗೆದ್ದ ನನಗಿಂದು ತುಂಬಾ ಸಂತೋಷವಾಗಿದೆ. ಇದೊಂದು ದೀರ್ಘ ಪ್ರಯಾಣವಾಗಿದ್ದು, ಈ ಯಶಸ್ಸಿಗೆ 2024ರ ವಿಶ್ವಕಪ್ ನಂತರ ತಂಡದಲ್ಲಿ ಆಗಿರುವ ಬದಲಾವಣೆಗಳೇ ಕಾರಣ. ಆ ಸಮಯದಲ್ಲಿ ಬಿಸಿಸಿಐ ಕಾರ್ಯದರ್ಶಿಯಾಗಿದ್ದ ಜಯ್ ಶಾ, ರೋಹಿತ್ (ಶರ್ಮಾ) ಭಾಯ್ ಮತ್ತು ತಂಡದ ಎಲ್ಲಾ ಸದಸ್ಯರು ನನ್ನ ಮೇಲೆ ನಂಬಿಕೆ ಇಟ್ಟಿದ್ದರು ಮತ್ತು ತಂಡವನ್ನು ಮುನ್ನಡೆಸಲು ನನಗೆ ಅವಕಾಶ ನೀಡಿದರು. ಆ ನಂಬಿಕೆ ತಂಡವನ್ನು ಹೊಸ ದಿಕ್ಕಿನಲ್ಲಿ ಮುನ್ನಡೆಸಿದೆ ಎಂದು ಸೂರ್ಯಕುಮಾರ್​ ಹೇಳಿದರು.

ತುಂಬಾ ವಿಶೇಷ ಕ್ಷಣ

ಇಂದು ನಾವು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ದೊಡ್ಡ ಗೆಲುವು ಸಾಧಿಸಿದ್ದೇವೆ. ಇದೊಂದು ವಿಶೇಷ ಭಾವನೆ. ಭಾರತೀಯ ತಂಡವನ್ನು ಮುನ್ನಡೆಸುವುದು ಮತ್ತು ವಿಶ್ವಕಪ್ ಗೆಲ್ಲುವುದು ನನ್ನ ಜೀವನದಲ್ಲಿ ಬಹಳ ವಿಶೇಷವಾಗಿದೆ. ಈ ಕ್ಷಣಗಳನ್ನು ನಾನು ಎಂದಿಗೂ ಒಟ್ಟಿಗೆ ಸೇರಿಸಲು ಸಾಧ್ಯವಾಗುವುದಿಲ್ಲ. ಇದೊಂದು ವಿಶೇಷ ಕ್ಷಣ ಎಂದು ಸೂರ್ಯಕುಮಾರ್​ ಯಾದವ್​ ಅವರು ಹೇಳಿದರು.

ಸಂಜು ಬಂದ ಬಳಿಕ ಎಲ್ಲವು ಬದಲು

ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಬಗ್ಗೆ ಮಾತನಾಡಿದ ಸೂರ್ಯಕುಮಾರ್ ಯಾದವ್, ಸಂಜು ಮೇಲೆ ಪ್ರಶಂಸೆಯ ಮಳೆಗರೆದರು. ಸಂಜು ಸ್ಯಾಮ್ಸನ್ ತಂಡಕ್ಕೆ ಬರಲು ಇದು ಸರಿಯಾದ ಸಮಯ ಎಂದು ನಾವು ಭಾವಿಸಿದ್ದೆವು. ಸಂಜು ತಮ್ಮ ಪ್ರತಿಭೆಯಿಂದ ತಂಡಕ್ಕೆ ಅದ್ಭುತ ಗೆಲುವುಗಳನ್ನು ನೀಡಿದ್ದಾರೆ. ಅವರು ಸತತ ಮೂರು ನಿರ್ಣಾಯಕ ಪಂದ್ಯಗಳಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ್ದಾರೆ. ಅವರು ಅದ್ಭುತ ಆಟಗಾರ. ಸಂಜು ಆಗಮನದಿಂದ ತಂಡದಿಂದ ಎಲ್ಲವೂ ಬದಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವರುಣ್ ಚಕ್ರವರ್ತಿ ಮತ್ತು ಅಭಿಷೇಕ್ ಶರ್ಮಾ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುತ್ತಿದ್ದಾರೆ ಮತ್ತು ವಿಶ್ವ ಮಟ್ಟದಲ್ಲಿ ಮನ್ನಣೆ ಗಳಿಸುತ್ತಿದ್ದಾರೆ. ತಂಡದಲ್ಲಿ ಹಿರಿಯ ಆಟಗಾರರ ಪಾತ್ರವೂ ಬಹಳ ಮುಖ್ಯ. ಜಸ್​ಪ್ರೀತ್​ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು "ಅಕ್ಷರ್ ಪಟೇಲ್ ಅವರಂತಹ ಆಟಗಾರರು ತಂಡದ ಬೆನ್ನೆಲುಬು. ಯಾವಾಗ ಏನು ಮಾಡಬೇಕೆಂದು ಅವರಿಗೆ ತಿಳಿದಿದೆ. ಗಂಭೀರ್ ಅವರು ತಂಡಕ್ಕೆ ಏನು ಬೇಕು ಮತ್ತು ಅದನ್ನು ಹೇಗೆ ಮಾಡಬೇಕೆಂದು ತಿಳಿದಿದ್ದಾರೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದರು.
ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ, ನಿನ್ನೆ ನಡೆದ ಫೈನಲ್​ ಎಂಬ ಮಹಾಕದನದಲ್ಲಿ ಟೀಮ್​ ಇಂಡಿಯಾ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ (89 ರನ್​, 46 ಎಸೆತ, 5 ಬೌಂಡರಿ, 8 ಸಿಕ್ಸರ್‌) ಹಾಗೂ ಅಭಿಷೇಕ್ ಶರ್ಮಾ (52 ರನ್​, 21 ಎಸೆತ, 6 ಬೌಂಡರಿ, 3 ಸಿಕ್ಸರ್‌) ಭರ್ಜರಿ ಆರಂಭ ಒದಗಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ಇಶಾನ್ ಕಿಶನ್ (54 ರನ್​, 25 ಎಸೆತ, 4 ಬೌಂಡರಿ, 4 ಸಿಕ್ಸರ್‌) ಅರ್ಧ ಶತಕದೊಂದಿಗೆ ತಂಡದ ಮೊತ್ತವನ್ನು ಹಿಗ್ಗಿಸಿದರು. ಕೊನೆಯಲ್ಲಿ ಬಂದ ಶಿವಂ ದುಬೆ ( ಅಜೇಯ 26 ರನ್​, 8 ಎಸೆತ, 3 ಬೌಂಡರಿ, 2 ಸಿಕ್ಸರ್‌) ವಿನಾಶಕಾರಿ ಇನ್ನಿಂಗ್ಸ್ ಆಡಿದರು. ಈ ಮೂಲಕ ಟೀಮ್​ ಇಂಡಿಯಾ, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 255 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಕಿವೀಸ್ ಬೌಲರ್‌ಗಳಲ್ಲಿ, ಜೇಮ್ಸ್ ನೀಶಮ್ ಮೂರು ವಿಕೆಟ್‌ಗಳನ್ನು ಪಡೆದರೆ, ಮ್ಯಾಟ್ ಹೆನ್ರಿ ಮತ್ತು ರಾಚಿನ್ ರವೀಂದ್ರ ತಲಾ ಒಂದು ವಿಕೆಟ್ ಪಡೆದರು.
256 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಕಿವೀಸ್ ತಂಡ, ಟೀಮ್​ ಇಂಡಿಯಾದ ಬೌಲಿಂಗ್​ ದಾಳಿಗೆ ತತ್ತರಿಸಿತು. ಅಂತಿಮವಾಗಿ 19 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟ್ ಆಯಿತು. ಕಿವೀಸ್​ ಪರ ಟಿಮ್ ಸೈಫರ್ಟ್ (26 ಎಸೆತಗಳಲ್ಲಿ 52 ರನ್) ಮತ್ತು ಮಿಚೆಲ್ ಸ್ಯಾಂಟ್ನರ್ (35 ಎಸೆತಗಳಲ್ಲಿ 43 ರನ್) ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಉಳಿದಂತೆ ಯಾವೊಬ್ಬ ಬ್ಯಾಟರ್​ ಕೂಡ ಪ್ರಭಾವ ಬೀರಲಿಲ್ಲ. ಸೆಮಿಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 33 ಎಸೆತಗಳಲ್ಲಿ ಶತಕ ಬಾರಿಸಿದ್ದ ಫಿನ್​ ಅಲೆನ್​ ನಿನ್ನೆಯ ಪಂದ್ಯದಲ್ಲಿ ಕೇವಲ 9 ರನ್​ಗೆ ಔಟಾದರು. ಟೀಮ್​ ಇಂಡಿಯಾ ಪರ ಜಸ್​ಪ್ರೀತ್​ ಬುಮ್ರಾ ನಾಲ್ಕು ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಮೂರು ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ ಮತ್ತು ಅಭಿಷೇಕ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net