ಸ್ಮೃತಿ ಮಂಧಾನ ಬೆದರಿಕೆಗೆ ಹೆದರಿದ ಹರ್ಮನ್​ಪ್ರೀತ್​​: ಅಚ್ಚರಿ ಸಂಗತಿ ಬಿಚ್ಚಿಟ್ಟ ಜೆಮಿನಾ ರೊಡ್ರಿಗಸ್​! Harmanpreet kaur

ಟೀಮ್​ ಇಂಡಿಯಾ ಉಪನಾಯಕಿ ಸ್ಮೃತಿ ಮಂಧಾನ ಮತ್ತು ಟೀಮ್​ ಇಂಡಿಯಾ ನಾಯಕಿ ಹರ್ಮನ್​ಪ್ರೀತ್​ ಕೌರ್
ಟೀಮ್​ ಇಂಡಿಯಾ ಉಪನಾಯಕಿ ಸ್ಮೃತಿ ಮಂಧಾನ ಮತ್ತು ಟೀಮ್​ ಇಂಡಿಯಾ ನಾಯಕಿ ಹರ್ಮನ್​ಪ್ರೀತ್​ ಕೌರ್
Published on

ಪ್ರಮುಖ ಮುಖ್ಯಾಂಶಗಳು

  • ಭಾರತೀಯ ಮಹಿಳಾ ತಂಡ ಚೊಚ್ಚಲ ವಿಶ್ವಕಪ್ ಮುಡಿಗೇರಿಸಿಕೊಂಡಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ
  • ಟ್ರೋಫಿ ಸ್ವೀಕರಿಸುವಾಗ ಟೀಮ್​ ಇಂಡಿಯಾ ನಾಯಕಿ ಹರ್ಮನ್​ಪ್ರೀತ್​ ಕೌರ್ ಬಾಂಗ್ರಾ ಡಾನ್ಸ್​ ಮಾಡಿದರು
  • ಡಾನ್ಸ್​ ಹಿಂದಿರುವ ಸ್ವಾರಸ್ಯಕರ ಸಂಗತಿಯನ್ನು ಟೀಮ್​ ಇಂಡಿಯಾ ಆಟಗಾರ್ತಿ ಜೆಮಿನಾ ರೊಡ್ರಿಗಸ್​ ಬಿಚ್ಚಿಟ್ಟಿದ್ದಾರೆ
ಮುಂಬೈ: ಭಾರತೀಯ ಮಹಿಳಾ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಚೊಚ್ಚಲ ವಿಶ್ವಕಪ್ ಮುಡಿಗೇರಿಸಿಕೊಂಡಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಕಳೆದ ನವೆಂಬರ್​ 2ರಂದು ನಡೆದ ಫೈನಲ್​ ಪಂದ್ಯದಲ್ಲಿ ಭಾರತದ ನಾರಿ ಪಡೆ ವಿಜಯ ಸಾಧಿಸುತ್ತಿದ್ದಂತೆ ಇಡೀ ದೇಶವೇ ಹುಚ್ಚೆದ್ದು ಸಂಭ್ರಮಿಸಿತು. ಪ್ರಶಸ್ತಿ ಗೆದ್ದ ನಂತರ ವೇದಿಕೆ ಮೇಲೆ ಟ್ರೋಫಿ ಸ್ವೀಕರಿಸುವಾಗ ಟೀಮ್​ ಇಂಡಿಯಾ ನಾಯಕಿ ಹರ್ಮನ್​ಪ್ರೀತ್​ ಕೌರ್ ( Harmanpreet kaur ) ಅವರು ಅದ್ಭುತವಾಗಿ ಬಾಂಗ್ರಾ ಡಾನ್ಸ್​ ಮಾಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಆ ಕ್ಷಣದಲ್ಲಿ ವೈರಲ್​ ಆದರು. ಈ ಡಾನ್ಸ್​ ಹಿಂದಿರುವ ಸ್ವಾರಸ್ಯಕರ ಸಂಗತಿಯನ್ನು ಟೀಮ್​ ಇಂಡಿಯಾ ಆಟಗಾರ್ತಿ ಜೆಮಿನಾ ರೊಡ್ರಿಗಸ್​ ಬಿಚ್ಚಿಟ್ಟಿದ್ದಾರೆ.
ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನ 'ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ'ದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಭಾರತೀಯ ಆಟಗಾರರು ತಮ್ಮ ವಿಶ್ವಕಪ್ ವಿಜಯೋತ್ಸವದ ವಿವರಗಳನ್ನು ಕ್ಯಾಮೆರಾ ಮುಂದೆ ಮುಕ್ತವಾಗಿ ಹಂಚಿಕೊಂಡರು.
ಟ್ರೋಫಿ ಪಡೆಯುವ ವೇಳೆ ಹರ್ಮನ್​ಪ್ರೀತ್ ಮಾಡಿದ ಬಾಂಗ್ರಾ ಡಾನ್ಸ್​ ಬಗ್ಗೆ ಕಪಿಲ್​ ಶರ್ಮ ಅವರು ಮೆಚ್ಚುಗೆ ವ್ಯಕ್ತಪಡಿಸಿದಾಗ, ಜೆಮಿಮಾ ಅವರು ಆ ಡಾನ್ಸ್​ ಹಿಂದಿನ ಸ್ವಾರಸ್ಯಕರ ಸಂಗತಿಯನ್ನು ಹಂಚಿಕೊಂಡರು.​ ಅಂದು ಹರ್ಮನ್​ಪ್ರೀತ್​ ಬಾಂಗ್ರಾ ಡಾನ್ಸ್‌ ಮಾಡಲು ಸ್ಮೃತಿ ಮಂಧಾನಾ ಕಾರಣ! ಟ್ರೋಫಿ ವಿತರಿಸುವ ಕಾರ್ಯಕ್ರಮಕ್ಕೂ ಮುನ್ನ ಸ್ಮೃತಿ ಅವರು ಹರ್ಮನ್‌ಪ್ರೀತ್‌ಗೆ ತಮಾಷೆಯಾಗಿ ಎಚ್ಚರಿಕೆ ನೀಡಿದ್ದರು. ಬಾಂಗ್ರಾ ಡಾನ್ಸ್​ ಮಾಡದಿದ್ದರೆ ಇನ್ನೆಂದು ನಿನ್ನೊಂದಿಗೆ ಮಾತನಾಡುವುದಿಲ್ಲ ಎಂದು ಸ್ಮೃತಿ ಎಚ್ಚರಿಕೆ ನೀಡಿದ್ದರು. ಸಾಮಾನ್ಯವಾಗಿ ಹರ್ಮನ್‌ಪ್ರೀತ್, ತಂಡದ ಯುವ ಆಟಗಾರ್ತಿಯರ ಮಾತು ಕೇಳುವುದಿಲ್ಲ. ಆದರೆ, ಸ್ಮೃತಿಯ ಮಾತಿಗೆ ಅವರು ಒಪ್ಪಿ ಬಾಂಗ್ರಾ ಡಾನ್ಸ್​ ಮಾಡಿದರು ಎಂದು ಜೆಮಿಮಾ ಅವರು ಹೇಳಿದರು.
ಪ್ರಶಸ್ತಿ ಗೆಲುವಿನ ನಂತರ ಕ್ರೀಡಾಂಗಣ ಮತ್ತು ಹೋಟೆಲ್‌ನಲ್ಲಿ ನಡೆದ ಸಂಭ್ರಮಾಚರಣೆಯ ಬಗ್ಗೆಯೂ ಆಟಗಾರ್ತಿಯರು ಮಾತನಾಡಿದರು. ಫೈನಲ್​ ಪಂದ್ಯದ ಗೆಲುವಿನ ನಂತರ ತಂಡದ ಸದಸ್ಯರು ಆ ರಾತ್ರಿ ನಿದ್ರೆ ಮಾಡಲಿಲ್ಲ. ಬೆಳಗಿನ ಜಾವ 3.30ರವರೆಗೂ ಅಂದರೆ, ಕ್ರೀಡಾಂಗಣದಲ್ಲಿನ ದೀಪಗಳು ಆರಿಹೋಗುವವರೆಗೆ ನಾವು ಆಚರಣೆ ಮಾಡಿದೆವು. ನಮ್ಮ ಜೀವನದಲ್ಲಿ ಮೊದಲ ಬಾರಿಗೆ, ಎಲ್ಲಾ ತಂಡದ ಸದಸ್ಯರು ಬೆಳಗಿನ ಜಾವದವರೆಗೂ ಆಚರಣೆಯಲ್ಲಿ ಸೇರಿಕೊಂಡೆವು ಎಂದು ಆಟಗಾರ್ತಿಯರು ತಿಳಿಸಿದರು.
ತಂಡದಲ್ಲಿ ಅತಿ ದೊಡ್ಡ ಪಾರ್ಟಿ ಗರ್ಲ್ ಯಾರು ಎಂದು ಕೇಳಿದಾಗ, ಎಲ್ಲರೂ ಸ್ಟಾರ್ ಆಟಗಾರ್ತಿ ರೇಣುಕಾ ಸಿಂಗ್ ಕಡೆಗೆ ಬೆರಳು ತೋರಿಸಿದರು. ರೇಣುಕಾ ಪಾರ್ಟಿ ಮೂಡ್‌ನಲ್ಲಿರುವಾಗ ಮಾತ್ರ ಇಂಗ್ಲಿಷ್ ಮಾತನಾಡುತ್ತಾರೆ ಎಂದು ಜೆಮಿಮಾ ತಮಾಷೆಯಾಗಿ ಹೇಳಿದರು.
ವಿಶ್ವಕಪ್​ ವಿಚಾರಕ್ಕೆ ಬಂದರೆ, 2025ರ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ಸೆಪ್ಟೆಂಬರ್ 30ರಿಂದ ನವೆಂಬರ್ 2ರವರೆಗೆ ನಡೆಯಿತು. 13ನೇ ಆವೃತ್ತಿಯಲ್ಲಿ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಭಾಗವಹಿಸಿದವು. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸಿ ಚೊಚ್ಚಲ ಬಾರಿಗೆ ವಿಶ್ವಕಪ್ ಗೆದ್ದು ಇತಿಹಾಸ ಸೃಷ್ಟಿಸಿತು. ದೀಪ್ತಿ ಶರ್ಮಾ ಟೂರ್ನಿಯ ಆಟಗಾರ್ತಿಯಾಗಿ ಹೊರಹೊಮ್ಮಿದರು.
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂಧಾನ ಅವರು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರೊಂದಿಗೆ ನವೆಂಬರ್ 23, 2025ರಂದು ಮದುವೆಯಾಗಬೇಕಿತ್ತು. ಆದರೆ ಮದುವೆಯ ದಿನವೇ ಅವರ ತಂದೆಗೆ ಹೃದಯಾಘಾತವಾದ ಕಾರಣಕ್ಕೆ ಕಾರ್ಯಕ್ರಮ ಮುಂದೂಡಲ್ಪಟ್ಟಿತು. ನಂತರ ಸಾಮಾಜಿಕ ಜಾಲತಾಣಗಳಲ್ಲಿ ಪಲಾಶ್ ಮೋಸ ಮಾಡಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಬಳಿಕ ಸ್ಮೃತಿ ಹಾಗೂ ಪಲಾಶ್​ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಮದುವೆ ರದ್ದಾಗಿರುವುದಾಗಿ ಸ್ಪಷ್ಟಪಡಿಸಿ, ಖಾಸಗಿತನಕ್ಕೆ ಗೌರವಿಸಿ ಎನ್ನುವ ಮೂಲಕ ವಿವಾದಕ್ಕೆ ತೆರೆ ಎಳೆದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net