ನೀವು ಕೊಹ್ಲಿಯಂತೆ ಮ್ಯಾಚ್​ ಫಿನಿಶ್​ ಮಾಡಲ್ಲ ಏಕೆ? ಸಿಡುಕುಮೋರೆ ಹಾಕ್ಕೊಂಡು ಬಾಬರ್​ ಕೊಟ್ಟ ಉತ್ತರ ವೈರಲ್​...Babar Azam

ನೀವು ಕೊಹ್ಲಿಯಂತೆ ಮ್ಯಾಚ್​ ಫಿನಿಶ್​ ಮಾಡಲ್ಲ ಏಕೆ? ಸಿಡುಕುಮೋರೆ ಹಾಕ್ಕೊಂಡು ಬಾಬರ್​ ಕೊಟ್ಟ ಉತ್ತರ ವೈರಲ್​...Babar Azam
ನೀವು ಕೊಹ್ಲಿಯಂತೆ ಮ್ಯಾಚ್​ ಫಿನಿಶ್​ ಮಾಡಲ್ಲ ಏಕೆ? ಸಿಡುಕುಮೋರೆ ಹಾಕ್ಕೊಂಡು ಬಾಬರ್​ ಕೊಟ್ಟ ಉತ್ತರ ವೈರಲ್​...Babar Azam
Published on

ಪ್ರಮುಖ ಮುಖ್ಯಾಂಶಗಳು

  • ಕ್ರಿಕೆಟ್​ ಅಭಿಮಾನಿಗಳಿಗೆ ಪಾಕಿಸ್ತಾನಿ ಕ್ರಿಕೆಟಿಗ ಬಾಬರ್​ ಅಜಮ್​ ಅವರ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ
  • ಬಾಬರ್​ ಅವರನ್ನು ಟೀಮ್​ ಇಂಡಿಯಾ ಲೆಜೆಂಡ್​ ವಿರಾಟ್​ ಕೊಹ್ಲಿ ಜೊತೆ ಹೋಲಿಕೆ ಮಾಡುತ್ತಾರೆ
  • ಇದೇ ಹೋಲಿಕೆ ಇದೀಗ ಬಾಬಾರ್​ ಅಜಮ್​ ಅವರು ಮುಖಭಂಗ ಅನುಭವಿಸಲು ಕಾರಣವಾಗಿದೆ
  • ಪಾಕಿಸ್ತಾನಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಬಾಬರ್​ ಅಜಮ್​ ಅಸಮಾಧಾನಗೊಂಡಿದ್ದಾರೆ
Babar Azam : ಕ್ರೀಡಾಭಿಮಾನಿಗಳಿಗೆ ಬಾಬರ್ ಅಜಮ್ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಏಕೆಂದರೆ, ಬಾಬರ್​ ಪಾಕಿಸ್ತಾನದ ಸ್ಟಾರ್ ಕ್ರಿಕೆಟಿಗರಲ್ಲಿ ಒಬ್ಬರು. ಕೆಲವರು ಅವರನ್ನು ಟೀಮ್ ಇಂಡಿಯಾದ ದಂತಕಥೆ ವಿರಾಟ್ ಕೊಹ್ಲಿಗೆ ಹೋಲಿಸಿ ಮಾತನಾಡುತ್ತಾರೆ. ಪ್ರಸ್ತುತ, ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ನಲ್ಲಿ ಬಿಜಿಯಾಗಿರುವ ಬಾಬರ್​, ಪೇಶಾವರ್ ಝಲ್ಮಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದರ ನಡುವೆ ಮಾಧ್ಯಮಗೋಷ್ಠಿಯಲ್ಲಿ ಬಾಬರ್ ಭಾರಿ ಮುಖಭಂಗ ಅನುಭವಿಸಿದ್ದಾರೆ. 
ಪ್ರಸ್ತುತ ನಡೆಯುತ್ತಿರುವ ಪಿಎಸ್‌ಎಲ್ 2026ರ ಭಾಗವಾಗಿ ಬುಧವಾರ (ಏಪ್ರಿಲ್​ 08) ಕರಾಚಿಯಲ್ಲಿ ಪೇಶಾವರ್ ಝಲ್ಮಿ ಮತ್ತು ಹೈದರಾಬಾದ್ ಕಿಂಗ್ಸ್‌ಮೆನ್ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ 18.2 ಓವರ್‌ಗಳಲ್ಲಿ 145 ರನ್‌ಗಳಿಗೆ ಆಲೌಟ್ ಆಯಿತು. ನಂತರ, ಪೇಶಾವರ್ ಝಲ್ಮಿ 20 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು 146 ರನ್‌ಗಳ ಗುರಿಯನ್ನು ತಲುಪಿತು. ಪೇಶಾವರ್ ಬ್ಯಾಟ್ಸ್‌ಮನ್‌ಗಳ ಪರವಾಗಿ ನಾಯಕ ಬಾಬರ್ ಅಜಮ್ (43 ರನ್​, 37 ಎಸೆತ, 6 ಬೌಂಡರಿ) ಗರಿಷ್ಠ ಸ್ಕೋರರ್ ಎನಿಸಿಕೊಂಡರು. 
ಈ ಪಂದ್ಯದಲ್ಲಿ ಬಾಬರ್ ಅವರು ಟಾಪ್ ಸ್ಕೋರರ್ ಆಗಿದ್ದರು ಕೊನೆಯವರೆಗೂ ಕ್ರೀಸ್‌ನಲ್ಲಿ ಉಳಿಯಲಿಲ್ಲ. ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಬಾಬರ್ ಅಜಮ್ ಅವರನ್ನು ಈ ಬಗ್ಗೆ ಪ್ರಶ್ನೆ ಕೇಳಲಾಯಿತು. ವಿರಾಟ್ ಕೊಹ್ಲಿಯಂತೆ ನೀವು ಪಂದ್ಯಗಳನ್ನು ಮುಗಿಸುವುದಿಲ್ಲ ಏಕೆ? ನಿಮ್ಮನ್ನು ಕೊಹ್ಲಿ ಜತೆ ಹೋಲಿಕೆ ಮಾಡಿ ಮಾತನಾಡುತ್ತಾರೆ. ಈ ಹೋಲಿಕೆ ಬಗ್ಗೆ ನಿಮ್ಮ ಅಭಿಪ್ರಾಯಗಳೇನು? ಎಂದು ವರದಿಗಾರರೊಬ್ಬರು ಬಾಬರ್​ ಅವರನ್ನು ಪ್ರಶ್ನೆ ಮಾಡಿದರು. 
ಪ್ರಶ್ನೆ ಕೇಳುತ್ತಿದ್ದಂತೆ ಅಸಮಾಧಾನಗೊಂಡ ಬಾಬರ್​, ಸಿಡುಕುಮೋರೆ ಹಾಕ್ಕೊಂಡು "ಈ ವಿಷಯಗಳನ್ನು ಇಲ್ಲಗೇ ಮುಗಿಸಿಬಿಡಿ. ಇದನ್ನು ನಿಮ್ಮಲ್ಲೇ ಇಟ್ಟುಕೊಳ್ಳಿ. ಹೋಲಿಕೆ ಮಾಡುವುದನ್ನು ಬಿಟ್ಟು ಮುಂದೆ ಸಾಗಿ. ಪಂದ್ಯಗಳನ್ನು ಫಿನಿಶ್​ ಮಾಡಿಲ್ಲ ಎಂಬುದು ನಿಮ್ಮ ತಪ್ಪು ಕಲ್ಪನೆ ಅಷ್ಟೇ" ಎಂದು ಹೇಳಿದರು. ಸದ್ಯಕ್ಕೆ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಟೀಮ್​ ಇಂಡಿಯಾ ಅಭಿಮಾನಿಗಳು ಬಾಬರ್​ ಅವರನ್ನು ಟ್ರೋಲ್​ ಮಾಡುತ್ತಿದ್ದಾರೆ.
ಪಾಕಿಸ್ತಾನದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರೆಂದು ಗುರುತಿಸಿಕೊಂಡಿದ್ದರೂ, ಬಾಬರ್ ಅಜಮ್​ ಅವರು ಟಿ20 ಕ್ರಿಕೆಟ್‌ನಲ್ಲಿ ಸದಾ ಟೀಕೆಗೆ ಗುರಿಯಾಗುತ್ತಿದ್ದಾರೆ. ವಿಶೇಷವಾಗಿ ಅವರ ಸ್ಟ್ರೈಕ್-ರೇಟ್ (ರನ್ ಗಳಿಸುವ ವೇಗ) ಮತ್ತು ದೊಡ್ಡ ಮೊತ್ತವನ್ನು ಬೆನ್ನಟ್ಟುವಾಗ ಜವಾಬ್ದಾರಿಯುತವಾಗಿ ಆಡಲು ವಿಫಲರಾಗುತ್ತಿರುವುದು ವಿಮರ್ಶಕರ ಅಸಮಾಧಾನಕ್ಕೆ ಕಾರಣವಾಗಿದೆ.
ಪ್ರಸ್ತುತ ನಡೆಯುತ್ತಿರುವ ಪಾಕಿಸ್ತಾನ ಸೂಪರ್ ಲೀಗ್ (PSL) ನಲ್ಲಿ ಬಾಬರ್ ಅವರು ಆಡಿದ ಎರಡು ಪಂದ್ಯಗಳಲ್ಲಿ 126.15 ರ ಸ್ಟ್ರೈಕ್-ರೇಟ್‌ನಲ್ಲಿ 82 ರನ್ ಗಳಿಸಿದ್ದಾರೆ. ಆದರೆ, ಅವರ ಬೌಂಡರಿಗಳ ಸಂಖ್ಯೆ ನಿರಾಶಾದಾಯಕವಾಗಿದ್ದು, ಕೇವಲ 10 ಫೋರ್ ಮತ್ತು ಒಂದೇ ಒಂದು ಸಿಕ್ಸ್ ಬಾರಿಸುವಲ್ಲಿ ಮಾತ್ರ ಅವರು ಯಶಸ್ವಿಯಾಗಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net