ಮಹಿಳಾ ಬಿಗ್​​ ಬ್ಯಾಷ್ ಲೀಗ್​ ಹಾದಿ ಸುಗಮಗೊಂಡ ಬೆನ್ನಲ್ಲೇ ಬಿಸಿಸಿಐಗೆ ಖಡಕ್​ ಸಂದೇಶ ರವಾನಿಸಿದ ಅನಯಾ ಬಂಗಾರ್! Anaya Bangar

ಮಹಿಳಾ ಬಿಗ್​​ ಬ್ಯಾಷ್ ಲೀಗ್​ ಹಾದಿ ಸುಗಮಗೊಂಡ ಬೆನ್ನಲ್ಲೇ ಬಿಸಿಸಿಐಗೆ ಖಡಕ್​ ಸಂದೇಶ ರವಾನಿಸಿದ ಅನಯಾ ಬಂಗಾರ್! Anaya Bangar
ಮಹಿಳಾ ಬಿಗ್​​ ಬ್ಯಾಷ್ ಲೀಗ್​ ಹಾದಿ ಸುಗಮಗೊಂಡ ಬೆನ್ನಲ್ಲೇ ಬಿಸಿಸಿಐಗೆ ಖಡಕ್​ ಸಂದೇಶ ರವಾನಿಸಿದ ಅನಯಾ ಬಂಗಾರ್! Anaya Bangar
Published on

ಪ್ರಮುಖ ಮುಖ್ಯಾಂಶಗಳು

  • ಮಹಿಳಾ ಬಿಗ್ ಬ್ಯಾಷ್ ಲೀಗ್ ಆಡಲು ಅನಯಾ ಬಂಗಾರ್​ಗೆ ಹಾದಿ ಸುಗಮ
  • ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಪುತ್ರಿಯ ಕ್ರೀಡಾಬದುಕಿಗೆ ಹೊಸಜೀವ
  • ಭಾರತಕ್ಕಾಗಿ ವಿಶ್ವಕಪ್ ಗೆಲ್ಲುವ ಕನಸು ಹಂಚಿಕೊಂಡ ಟ್ರಾನ್ಸ್‌ಜೆಂಡರ್ ಕ್ರಿಕೆಟಿಗ
  • ಮಹಿಳಾ ಕ್ರಿಕೆಟ್‌ನಲ್ಲಿ ನ್ಯಾಯಯುತ ನೀತಿಗಳನ್ನು ತರುವಂತೆ ಬಿಸಿಸಿಐಗೆ ಅನಯಾ ಮನವಿ
ನವದೆಹಲಿ: ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಕೋಚ್ ಸಂಜಯ್ ಬಂಗಾರ್ ಅವರ ಮಗಳಾದ ಅನಯಾ ಬಂಗಾರ್ ( Anaya Bangar ), ಕ್ರಿಕೆಟ್ ಆಸ್ಟ್ರೇಲಿಯಾದ (Cricket Australia) ಲಿಂಗಪರಿವರ್ತಿತ ಆಟಗಾರರ ನೀತಿಯಡಿಯಲ್ಲಿ ಆಸ್ಟ್ರೇಲಿಯಾದಲ್ಲಿ ಮಹಿಳಾ ಸಮುದಾಯ ಕ್ರಿಕೆಟ್ ಆಡಲು ಅವಕಾಶ ಸಿಕ್ಕಿದೆ. ಇದರ ಬೆನ್ನಲ್ಲೇ ಮಹಿಳಾ ಬಿಗ್ ಬ್ಯಾಷ್ ಲೀಗ್ (WBBL) ಆಡುವ ಹಾದಿಯೂ ತೆರೆದುಕೊಂಡಿದೆ. ಇದರಿಂದಾಗಿ ಅನಯಾ ಅವರ ಕ್ರೀಡಾಬದುಕಿಗೆ ಮರುಜೀವ ಸಿಕ್ಕಿದ್ದು, ಒಮ್ಮೆ ಕ್ರೀಡೆಯನ್ನೇ ಬಿಟ್ಟುಬಿಡುವ ಹಂತಕ್ಕೆ ತಲುಪಿದ್ದ ತಮ್ಮ ಬದುಕಿನಲ್ಲಿ ಈ ಬೆಳವಣಿಗೆಯಿಂದ ಹೊಸ ಭರವಸೆ ಮೂಡಿದೆ ಎಂದು ಅನಯಾ ಭಾವನಾತ್ಮಕವಾಗಿ ನುಡಿದಿದ್ದಾರೆ. ಅಲ್ಲದೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (BCCI) ತಮ್ಮ ಪರವಾಗಿ ಸೂಕ್ತ ನೀತಿಗಳನ್ನು ರೂಪಿಸಬೇಕೆಂದು ಆಶಿಸುವುದರೊಂದಿಗೆ, ಭವಿಷ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ವಿಶ್ವಕಪ್ ಗೆಲ್ಲಿಸಿಕೊಡುವ ತಮ್ಮ ದೊಡ್ಡ ಕನಸನ್ನು ಸ್ಪಷ್ಟಪಡಿಸಿದ್ದಾರೆ.
ಇಂಡಿಯಾ ಟುಡೇ ಜತೆ ಮಾತನಾಡಿದ ಅನಯಾ ಬಂಗಾರ್​ ಅವರು ಬಿಸಿಸಿಐ, ಮಹಿಳಾ ಕ್ರೀಡೆಯ ಬಗ್ಗೆ ಹೆಚ್ಚು ಅಂತರ್ಗತ, ನ್ಯಾಯಯುತ ಮತ್ತು ಗೌರವಾನ್ವಿತ ನೀತಿಗಳನ್ನು ರೂಪಿಸಬೇಕೆಂದು ಆಶಿಸಿದ್ದಾರೆ. ದೇಶಕ್ಕಾಗಿ ಮೈದಾನಕ್ಕಿಳಿದು ಯಾವುದಾದರೂ ದೊಡ್ಡ ಟ್ರೋಫಿಯನ್ನು ಗೆದ್ದುಕೊಡಬೇಕು ಮತ್ತು ಭವಿಷ್ಯದಲ್ಲಿ ಭಾರತಕ್ಕೆ ವಿಶ್ವಕಪ್ ತಂದುಕೊಡುವುದೇ ತನ್ನ ಅಂತಿಮ ಗುರಿ ಎಂದು ಸ್ಪಷ್ಟಪಡಿಸಿದ್ದಾರೆ.
ಅಂದಹಾಗೆ, ಅನಯಾ ಬಂಗಾರ್​ ಅವರು ಈ ಮೊದಲು ಗಂಡಾಗಿದ್ದರು. ಆರ್ಯನ್ ಬಂಗಾರ್ ಆಗಿದ್ದ ಅವರು ಆಪರೇಷನ್​ ಮಾಡಿಸಿಕೊಳ್ಳುವ ಮೂಲಕ ಇದೀಗ ಹೆಣ್ಣಾಗಿ ಬದಲಾಗಿದ್ದಾರೆ. ತಾನು ಸಾಗಿದ ಹಾದಿ ಅಷ್ಟು ಸುಲಭವಾಗಿರಲಿಲ್ಲ ಎಂದು ತಿಳಿಸಿರುವ ಅನಯಾ, ಸಮಾಜದಿಂದ ಮಾತ್ರವಲ್ಲದೆ ಸ್ವತಃ ಕುಟುಂಬದೊಳಗಿಂದಲೂ ತೀವ್ರ ವಿರೋಧ ಹಾಗೂ ನಿಂದನೆಗಳನ್ನು ಎದುರಿಸಬೇಕಾಯಿತು ಎಂದು ಹಂಚಿಕೊಂಡಿದ್ದಾರೆ. ಇಡೀ ಪಯಣದಲ್ಲಿ ತಮಗೆ ಸಿಕ್ಕಿದ್ದು ಕೇವಲ ಕನಿಷ್ಠ ಬೆಂಬಲ ಮಾತ್ರವೇ ಹೊರತು ಸಂಪೂರ್ಣ ಆತ್ಮಸ್ಥೈರ್ಯವಲ್ಲ ಎಂದು ಭಾವುಕರಾಗಿ ನುಡಿದಿದ್ದಾರೆ.
ಲಿಂಗತ್ವ ದೃಢೀಕರಣ ಶಸ್ತ್ರಚಿಕಿತ್ಸೆಗಳಿಗೂ ಮುನ್ನ ಸಮಾಜದ ಮುಕ್ತ ಸ್ವೀಕೃತಿ ಸಿಗದೆ ಒಂಟಿಯಾಗಿ ಪರದಾಡಿದ್ದ ಅನಯಾ, ಬ್ರಿಟನ್‌ನಲ್ಲಿ ಕ್ರಿಕೆಟ್ ಡ್ರೆಸ್ಸಿಂಗ್ ರೂಮ್‌ಗಳಲ್ಲೇ ಕೆಲವು ತಿಂಗಳ ಕಾಲ ದಿನಗಳನ್ನು ದೂಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿತ್ತು ಎಂದು ಬಿಚ್ಚಿಟ್ಟಿದ್ದಾರೆ. ಅಲ್ಲದೆ, ತನ್ನ ಶಸ್ತ್ರಚಿಕಿತ್ಸೆಗಳ ವೆಚ್ಚವನ್ನು ಭರಿಸಿಕೊಳ್ಳಲು ಮತ್ತು ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಕೊನೆಗೆ ಸಾಮಾಜಿಕ ಜಾಲತಾಣಗಳ ಮೊರೆ ಹೋಗಬೇಕಾಯಿತು ಎಂದಿರುವ ಅನಯಾ, ಕೆಲವೊಂದು ಬ್ರ್ಯಾಂಡ್ ಡೀಲ್‌ಗಳ ಮೂಲಕ ಹಣ ಸಂಪಾದಿಸಿ ತಮ್ಮ ವೈದ್ಯಕೀಯ ಪ್ರಕ್ರಿಯೆಗಳಿಗೆ ಹಣದ ಬೆಂಬಲ ಪಡೆದುಕೊಂಡಿದ್ದಾಗಿ ತಿಳಿಸಿದ್ದಾರೆ.
ತನ್ನ ಈ ಪರಿವರ್ತನೆಯ ಹಾದಿಯು ಅತ್ಯಂತ ಕ್ರೂರ ಹಾಗೂ ಅಘಾತಕಾರಿಯಾಗಿತ್ತು ಎಂದು ಹೇಳಿರುವ ಅನಯಾ, ಈ ಎಲ್ಲಾ ಏಕಾಂಗಿತನದ ದಿನಗಳೇ ತನಗೆ ಅಪಾರ ಆತ್ಮವಿಶ್ವಾಸವನ್ನು ತಂದುಕೊಟ್ಟಿವೆ ಎಂದು ಬಣ್ಣಿಸಿದ್ದಾರೆ. ಹೊರಗಿನ ಪ್ರಪಂಚ ಎಲ್ಲರಿಗೂ ಒಂದೇ ರೀತಿಯ ಸಲಹೆಗಳನ್ನು ನೀಡಲು ಪ್ರಯತ್ನಿಸಿದರೂ, ಸ್ವತಃ ತನ್ನೊಂದಿಗೆ ತಾನೇ ಕಳೆದ ಒಂಟಿತನದ ಕ್ಷಣಗಳು ತಮಗೆ ಮಾನಸಿಕವಾಗಿ ಹೆಚ್ಚು ಬಲ ತುಂಬಿದವು ಎಂದು ಅನಯಾ ಅಭಿಪ್ರಾಯಪಟ್ಟಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾದಿಂದ ಅಧಿಕೃತ ಅನುಮೋದನೆ ಪಡೆದು ವೃತ್ತಿಪರ ಮಹಿಳಾ ಕ್ರಿಕೆಟ್ ಲೋಕಕ್ಕೆ ಮರುಪ್ರವೇಶಿಸುತ್ತಿರುವ ಅವರು, ಬಿಗ್ ಬ್ಯಾಷ್ ಲೀಗ್‌ನಲ್ಲಿ (WBBL) ಆಡುವ ಮೂಲಕ ತಮ್ಮ ಮೇಲಿನ ಸಾಮರ್ಥ್ಯವನ್ನು ಸಾಬೀತುಪಡಿಸಲು ಉತ್ಸುಕರಾಗಿದ್ದಾರೆ. ಈ ಕಠಿಣ ಹಾದಿಯನ್ನು ದಾಟಿ ಬಂದಿರುವ ಅವರಿಗೆ ಈ ಮಹತ್ವದ ಮೈಲಿಗಲ್ಲು ಹೊಸ ಭರವಸೆಯನ್ನು ತಂದುಕೊಟ್ಟಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net