ಡೊನಾಲ್ಡ್ ಟ್ರಂಪ್ ಭೇಟಿಯಾದ ಜೋಹ್ರಾನ್ ಮಮ್ದಾನಿ: ಮಮ್ದಾನಿಯನ್ನು ಹೊಗಳಿದ ಟ್ರಂಪ್: ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು? | Mamdani meet Trump

ನ್ಯೂಯಾರ್ಕ್​ನ ನೂತನ ಮೇಯರ್ ಜೋಹ್ರಾನ್ ಮಮ್ದಾನಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್
ನ್ಯೂಯಾರ್ಕ್​ನ ನೂತನ ಮೇಯರ್ ಜೋಹ್ರಾನ್ ಮಮ್ದಾನಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್
Published on
ವಾಷಿಂಗ್ಟನ್​ : ನ್ಯೂಯಾರ್ಕ್​ನ ನೂತನ ಮೇಯರ್ ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಶುಕ್ರವಾರ(ನ. 21) ಭೇಟಿಯಾಗಿ (Mamdani meet Trump) ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಟ್ರಂಪ್, ಮಮ್ದಾನಿಯನ್ನು ಆತನೊಬ್ಬ ತರ್ಕಬದ್ಧ ವ್ಯಕ್ತಿ ಎಂದು ಹಾಡಿಹೊಗಳಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.
ಶುಕ್ರವಾರ ಟ್ರಂಪ್ ಅವರ ಕಚೇರಿ ವೈಟ್​ ಹೌಸ್​ನಲ್ಲಿ ಭೇಟಿಯಾದ ಜೋಹ್ರಾನ್ ಮಮ್ದಾನಿ, ನ್ಯೂಯಾರ್ಕ್​ ನಗರದ ಅಭಿವೃದ್ಧಿ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಇದೇ ವೇಳೆ ಚುನಾವಣೆಯಲ್ಲಿ ನಡೆದ ಪರಸ್ಪರ ವಾಗ್ದಾಳಿಯನ್ನು ಮರೆತು ಡೆಮಾಕ್ರಟಿನ್ ನಾಯಕನೊಬ್ಬನನ್ನು ರಿಪಬ್ಲಿಕನ್ ಪಕ್ಷದ ಮುಖ್ಯ ನಾಯಕ ಸತ್ಕರಿಸಿರುವುದು ಎಲ್ಲರನ್ನೂ ಹುಬ್ಬೆರಿಸಿದೆ. ಜೊತೆಗೆ ಇಬ್ಬರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ನಡೆದ ಅಮೆರಿಕಾದ ಅತಿದೊಡ್ಡ ನಗರವಾದ ನ್ಯೂಯಾರ್ಕ್​ನ ಮೇಯರ್ ಚುನಾವಣೆಯಲ್ಲಿ ಜೋಹ್ರಾನ್ ಮಮ್ದಾನಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ರಿಪಬ್ಲಿಕ್ ಪಕ್ಷದ ಟ್ರಂಪ್ ಮಮ್ದಾನಿಯನ್ನು ಕಮ್ಯೂನಿಷ್ಟ, ಹುಚ್ಚ ಆತನನ್ನು ಗೆಲ್ಲಿಸಬೇಡಿ, ಗೆಲ್ಲಿಸಿದ್ರೆ ನ್ಯೂಯಾರ್ಕ್​ ನಗರಕ್ಕೆ ಕೊಡಬೇಕಾದ ಫೆಡರಲ್ ನಿಧಿಯನ್ನು ನಿಲ್ಲಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು.
ಆದರೂ ಈ ಯಾವ ಬೆದರಿಕೆಯೂ ಮಮ್ದಾನಿಯ ಗೆಲುವನ್ನು ತಡೆಯಲು ಸಾಧ್ಯವಾಗಿಲಿಲ್ಲ. ಕಳೆದ 50 ವರ್ಷಗಳ ಅವಧಿಯಲ್ಲೇ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಇನ್ನೂ ಚುನಾವಣೆ ಮುಗಿದು 20 ದಿನಗಳಾದ ಬಳಿಕ ಇದೇ ಮೊದಲ ಬಾರಿಗೆ ಜೋಹ್ರಾನ್ ಮಮ್ದಾನಿ ಟ್ರಂಪ್ ಅವರನ್ನು ಭೇಟಿಯಾಗಿದ್ದಾರೆ.
ಜೋಹ್ರಾನ್ ಮಮ್ದಾನಿಯನ್ನು ಹೊಗಳಿದ ಟ್ರಂಪ್
ಇಬ್ಬರ ನಡುವಿನ ಮಾತುಕತೆ ಬಳಿಕ ಮಮ್ದಾನಿಯನ್ನು ಪಕ್ಕಕ್ಕೆ ನಿಲ್ಲಿಸಿಕೊಂಡು ಸುದ್ದಿಗೋಷ್ಠಿ ನಡೆಸಿದ ಟ್ರಂಪ್, ಮಮ್ದಾನಿಗೆ ಗೆಲುವಿಗೆ ಅಭಿನಂದನೆಗಳನ್ನು ತಿಳಿಸಿದರು. ಮಮ್ದಾನಿಯನ್ನು ಭೇಟಿಯಾದ ಬಳಿಕ ಆತನೊಬ್ಬ ತರ್ಕಬದ್ಧ ವ್ಯಕ್ತಿ, ನ್ಯೂಯಾರ್ಕ್ ನಗರ ಅವರ ಅವಧಿಯಲ್ಲಿ ಉತ್ತಮ ನಗರವಾಗಲಿದೆ ಎಂದು ಹೊಗಳಿದ್ದಾರೆ. ಮತ್ತು ನ್ಯೂಯಾರ್ಕ್​ ನಗರದ ಅಭಿವೃದ್ಧಿ ಸಹಾಯ ಮಾಡುವುದಾಗಿ, ಒಟ್ಟಾಗಿ ಹೋಗೋದಾಗಿ ಹೇಳಿದ್ದಾರೆ.
ಇಂದು ನಾವು ಒಂದು ಸಭೆ ನಡೆಸಿದ್ದೇವೆ, ಅದು ನಿಜಕ್ಕೂ ನನಗೆ ಆಶ್ಚರ್ಯವನ್ನುಂಟು ಮಾಡಿತು. ನಮ್ಮ ನೀತಿಯಲ್ಲಿ ಭಿನ್ನಾಭಿಪ್ರಾಯಗಳಿರಬಹುದು. ಆದರೆ ನಾನು ಆತನಿಗೆ ಸಹಾಯ ಮಾಡಲು ಬಯಸುತ್ತೇನೆ, ಆತನಿಗೆ ನೋವುಂಟು ಮಾಡಲ್ಲ. ಯಾಕಂದರೆ ನಾನು ನ್ಯೂಯಾರ್ಕ್​ ನಗರವನ್ನು ಉತ್ತಮವಾಗಿಸಬೇಕೆಂದು ಬಯಸುತ್ತೇನೆ. ಅದು ನನನೆ ತುಂಬಾ ಇಷ್ಟವಾದ ನಗರ, ನಾನು ಅಲ್ಲಿಂದ ಬಂದಿದ್ದೇನೆ ಎಂದಿದ್ದಾರೆ.
ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಗಳಿರುವ ವಿಷಯ ಇರುತ್ತವೆ. ಆದರೆ ಬಹುಶಃ ನ್ಯೂಯಾರ್ಕ್​​ನ ಒಳಿತಿಗಾಗಿ ನಾವು ಒಂದು ತೀರ್ಮಾನಕ್ಕೆ ಬರುತ್ತೇವೆ. ಆ ನಗರ ಅದ್ಭುತ ಯಶಸ್ಸು ಗಳಿಸಿದರೆ ನಾನು ತುಂಬಾ ಸಂತೋಷ ಪಡುತ್ತೇನೆ, ಮಮ್ದಾನಿ ಭೇಟಿ ಬಳಿಕ ನನಗೆ ಅವರ ಆಡಳಿತದಲ್ಲಿ ನ್ಯೂಯಾರ್ಕ್​ ಉತ್ತಮ ನಗರವಾಗಲಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ವರದಿಗಾರರೊಬ್ಬರು ಮಮ್ದಾನಿಗೆ, ನೀವು ಟ್ರಂಪ್​ ಅವರನ್ನು ಫ್ಯಾಸಿಸ್ಟ್ ಎಂದು ಕರೆದಿದ್ದೀರಿ ಅದನ್ನು ಒಪ್ಪುತ್ತೀರಾ ಎಂದು ಕೇಳಿದಾಗ, ಮಮ್ದಾನಿ ಅದರ ಬಗ್ಗೆ ನಾನು ಮಾತನಾಡಿದ್ದೇನೆ ಎಂದು ವಿವರಣೆ ನೀಡಲು ಮುಂದಾದಾಗ ತಡೆದ ಟ್ರಂಪ್, ಅದು ಸರಿ, ಹೌದು ಎನ್ನಿ, ವಿವರಣೆ ನೀಡುವುದಕ್ಕಿಂತ ಸುಲಭ. ನನಗೆ ಅಭ್ಯಂತರವಿಲ್ಲ, ಎಡಪಂಥಿಯ ಮತ್ತು ಬಲಪಂಥೀಯ ನಾಯಕರು ವಿಭಿನ್ನ ಸಮಯದಲ್ಲಿ ಒಬ್ಬರನ್ನೊಬ್ಬರು ಕಮ್ಯೂನಿಷ್ಟ್, ಫ್ಯಾಸಿಸ್ಟ್ ಎಂದು ಕರೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಮಮ್ದಾನಿ ಕಂಡರೆ ಮಾಧ್ಯಮಗಳಿಗೆ ಬಹಳ ಪ್ರೀತಿ ಇದ್ದಂಗಿದೆ ಎಂದ ಟ್ರಂಪ್
ಮೇಯರ್ ಚುನಾವಣೆಯಲ್ಲಿ ಪರಸ್ಪರ ತೀವ್ರ ವಾಗ್ದಾಳಿ ಹಿನ್ನೆಲೆ, ಸೈದ್ದಾಂತಿಕ ಭಿನ್ನಾಭಿಪ್ರಾಯಗಳ ನಡುವೆ ಮಮ್ದಾನಿ, ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗುತ್ತಿರುವುದನ್ನು ಮಾಧ್ಯಮಗಳು ಬಹಳ ಗಮನಕೊಟ್ಟು ವರದಿ ಮಾಡುತ್ತಿದ್ದವು. ಇಬ್ಬರ ನಡುವೆ ಈ ಹಿಂದೆ ಉಕ್ರೇನ್ ಅಧ್ಯಕ್ಷರ ನಡುವೆ ನಡೆದ ಮಾತಿನ ಚಕಮಕಿ ಮರಳಿ ನಡೆಯುವ ಸಾಧ್ಯತೆಯನ್ನು ಊಹಿಸಲಾಗಿತ್ತು. ಆದರೆ ಟ್ರಂಪ್ ಅವರಿಂದ ಅಂತಹ ಯಾವುದೇ ಪರಿಸ್ಥಿತಿ ನಿರ್ಮಾಣವಾಗಲಿಲ್ಲ.
ಸುದ್ದಿಗೋಷ್ಠಿಯಲ್ಲಿ ನೂರಾರು ಪತ್ರಕರ್ತರು ಆಗಮಿಸಿದ್ದರಿಂದ ಕಚೇರಿಯಲ್ಲಿ ಗದ್ದಲದ ವಾತಾವರಣದ ಬಗ್ಗೆ ಮಾತನಾಡಿದ ಟ್ರಂಪ್, ಪತ್ರಿಕಾ ಮಾಧ್ಯಮಗಳು ಈ ವಿಷಯವನ್ನು ತಿಂದು ಹಾಕಿವೆ. ಪ್ರಮುಖ ದೇಶಗಳ ಮುಖ್ಯಸ್ಥರೊಂದಿಗೆ ನಾನು ಸಾಕಷ್ಟು ಸಭೆಗಳನ್ನು ನಡೆಸಿದ್ದೇನೆ. ಯಾರೂ ಇಷ್ಟೊಂದು ಕಾಳಜಿ ವಹಿಸಲಿಲ್ಲ. ಹೊರಗೆ ನೂರಾರು ಜನರು ಕಾಯುತ್ತಿದ್ದಾರೆ. ಯಾವುದೋ ಕಾರಣಕ್ಕಾಗಿ, ಪತ್ರಿಕಾ ಮಾಧ್ಯಮಗಳು ಇದನ್ನು ತುಂಬಾ ಆಸಕ್ತಿದಾಯಕ ಸಭೆ ಎಂದುಕೊಂಡಿದ್ದಾರೆ ಎಂದಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net