ನಿಮ್ಮದು ಲಜ್ಜೆಗೆಟ್ಟ ದೇಶ: ಆಕ್ಸ್‌ಫರ್ಡ್ ಚರ್ಚಾಕೂಟದಲ್ಲಿ ಪಾಕ್​ ವಿರುದ್ಧ ಹರಿಹಾಯ್ದ ಭಾರತೀಯ ವಿದ್ಯಾರ್ಥಿ! Oxford Debate

Oxford Debate
Oxford Debate
Published on

ಪ್ರಮುಖ ಮುಖ್ಯಾಂಶಗಳು

  • ಬ್ರಿಟನ್‌ನ ಪ್ರತಿಷ್ಠಿತ ಆಕ್ಸ್‌ಫರ್ಡ್ ಯೂನಿಯನ್ ಸೊಸೈಟಿ ಆಯೋಜಿಸಿದ್ದ ಚರ್ಚಾಕೂಟದಲ್ಲಿ ಪಾಕಿಸ್ತಾನಕ್ಕೆ ಚಳಿ ಬಿಡಿಸಿದ ಭಾರತದ ವಿದ್ಯಾರ್ಥಿ
  • ಚರ್ಚಾ ಸ್ಪರ್ಧೆಯಲ್ಲಿ ಮಿಂಚಿದ ಮುಂಬೈ ಮೂಲದ ವಿರಾಂಶ್ ಭಾನುಶಾಲಿ
  • ಭಾರತ ಶಾಂತಿಯನ್ನು ಬಯಸುತ್ತದೆ, ಭಯೋತ್ಪಾದನೆಯನದನ್ನಲ್ಲ : ವಿರಾಂಶ್ ಭಾನುಶಾಲಿ
  • ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಧರ್ಮವನ್ನು ಕೇಳಿ ಕೊಂದವರು ನೀವು
ಬ್ರಿಟನ್‌: ಬ್ರಿಟನ್‌ನ ಪ್ರತಿಷ್ಠಿತ ಆಕ್ಸ್‌ಫರ್ಡ್ ಯೂನಿಯನ್ ಸೊಸೈಟಿ ಆಯೋಜಿಸಿದ್ದ ಚರ್ಚಾಕೂಟದಲ್ಲಿ ಭಾರತ ಮತ್ತು ಪಾಕಿಸ್ತಾನಿ ವಿದ್ಯಾರ್ಥಿಗಳ ನಡುವೆ ತೀವ್ರವಾದ ಚರ್ಚೆ ನಡೆಯಿತು. ಮುಂಬೈ ಮೂಲದ ವಿದ್ಯಾರ್ಥಿ ವಿರಾಂಶ್ ಭಾನುಶಾಲಿ ಭಾರತವನ್ನು ಪ್ರತಿನಿಧಿಸಿದರೆ, ಮೂಸಾ ಹರಾಜ್ ಪಾಕಿಸ್ತಾನವನ್ನು ಪ್ರತಿನಿಧಿಸಿದರು.
ನ.27 ರಂದು ನಡೆದ ಈ ಚರ್ಚೆಯು ಈಗ ಸಾಮಾಜಿಕ ಮಾಧ್ಯಮದಲ್ಲಿ ಸಖತ್​​ ವೈರಲ್ ಆಗುತ್ತಿದೆ. ಚರ್ಚೆಯಲ್ಲಿ, ಭಾನುಶಾಲಿ 26/11 ಮುಂಬೈ ದಾಳಿ ನಮಗೊಂದು ಕಹಿ ಘಟನೆಯಾಗಿದ್ದು ಲಜ್ಜೆಗೆಟ್ಟ ದೇಶ (ಪಾಕಿಸ್ತಾನ) ಕ್ಕೆ ನಯವಾಗಿ ಬುದ್ಧಿ ಹೇಳಲು ಸಾಧ್ಯವಿಲ್ಲ ಎಂಬುದನ್ನು ನಾವು ಕಲಿತ್ತಿದ್ದೇವೆ ಎಂದು ಹೇಳಿದರು.

ಭಾರತದ ನೀತಿ ಪ್ರದರ್ಶನದ ಬಗ್ಗೆ ಅಲ್ಲ, ಭದ್ರತೆಯ ಬಗ್ಗೆ

ಚರ್ಚೆಯ ಸಮಯದಲ್ಲಿ, ಮೂಸಾ ಹರಾಜ್ ಭಾರತದ ನಿಲುವನ್ನು ಪ್ರಶ್ನಿಸುತ್ತಾ, ಭಾರತದಲ್ಲಿ ಸಮಸ್ಯೆ ಉಂಟಾದಾಗಲೆಲ್ಲಾ, ಎಲ್ಲದಕ್ಕೂ ಪಾಕಿಸ್ತಾನವನ್ನು ದೂಷಿಸಲಾಗುತ್ತದೆ. ಪಾಕಿಸ್ತಾನದ ಹೆಸರಿನಲ್ಲಿ ಭಯವನ್ನು ಹುಟ್ಟುಹಾಕುವ ಮೂಲಕ ಭಾರತ ಸರ್ಕಾರ ಸಾರ್ವಜನಿಕ ಬೆಂಬಲವನ್ನು ಪಡೆಯಲು ಪ್ರಯತ್ನಿಸುತ್ತದೆ. ಇದು ಭದ್ರತೆಯೇ ಅಥವಾ ಕೇವಲ ರಾಜಕೀಯವೇ? ಎಂದು ಪ್ರಶಿಸಿದರು. ಈ ಪ್ರಶ್ನೆಗೆ ತರ್ಕಬದ್ಧವಾಗಿ ಉತ್ತರಿಸಿದ ವೀರಾಂಶ್ ಭಾನುಶಾಲಿ, ನಾನು ಮುಂಬೈನವನು. ನಾನು 26/11 ದಾಳಿಯನ್ನು ನನ್ನ ಸ್ವಂತ ಕಣ್ಣುಗಳಿಂದ ನೋಡಿದೆ. ಆ ರಾತ್ರಿ, ಭಯೋತ್ಪಾದಕರು ದಾಳಿ ಮಾಡಿದ ರೈಲ್ವೆ ನಿಲ್ದಾಣದಿಂದಲೇ ನನ್ನ ಚಿಕ್ಕಮ್ಮ ಹಾದುಹೋದರು. ಅದೃಷ್ಟವಶಾತ್ ಅವರು ಬದುಕುಳಿದರು ಆದರೆ 166 ಜನಕ್ಕೆ ಆ ಅದೃಷ್ಟವಿಲ್ಲದೆ ಸಾವಿಗೀಡಾದರು ಇದನ್ನು ನೀವು ರಾಜಕೀಯ ಎನ್ನುತ್ತಿರಾ ಎಂದು ಹೇಳಿದರು.
ಹರಾಜ್ ಕೇಳಿದ ಮತ್ತೊಂದು ಪ್ರಶ್ನೆಯಾದ ಪ್ರತಿಯೊಂದು ದೇಶದಲ್ಲೂ ಹಿಂಸಾಚಾರ ಸಂಭವಿಸುತ್ತದೆ. ಪ್ರತಿ ಬಾರಿಯೂ ಕಠಿಣ ನೀತಿಯನ್ನು ಅಳವಡಿಸಿಕೊಳ್ಳುವುದು ಅಗತ್ಯವೇ? ಎಂಬ ಪ್ರಶ್ನೆಗೆ ಭಾನುಶಾಲಿ, ನಿಮ್ಮ ಮನೆಯ ಸುತ್ತಲೂ ಕಳ್ಳತನಗಳು ನಡೆಯುತ್ತಿದ್ದರೆ, ನೀವು ಬಾಗಿಲು ಲಾಕ್ ಮಾಡುವುದಿಲ್ಲವೇ? ಬೀಗ ಹಾಕುವುದು ಪ್ರದರ್ಶನವೇ ಅಥವಾ ಭದ್ರತಾ ಕ್ರಮವೇ? ಭಾರತದ ನೀತಿಯೂ ಇದೇ ಆಗಿದೆ ಎಂದರು.

ಭಯೋತ್ಪಾದನೆಯನ್ನು ಭಾರತದ ಮೇಲೆ ಹೇರಲಾಯಿತು

ಈ ಚರ್ಚೆಯನ್ನು ಗೆಲ್ಲಲು ನನಗೆ ಭಾಷಣ ಬೇಕಾಗಿಲ್ಲ ಕೇವಲ ಪಾಕಿಸ್ತಾನದಿಂದಾದ ಭಯೋತ್ಪಾದಕ ದಾಳಿಗಳನ್ನು ಹೇಳಿದರೆ ಸಾಕು ಎನ್ನುತ್ತಾ, 1993 ಮುಂಬೈ ಬಾಂಬ್ ದಾಳಿ ನಡೆದಾಗ ಯಾವ ಚುನಾವಣೆ ಇತ್ತು? 2008 ರಲ್ಲಿ 26/11 ನಡೆದಾಗ ಯಾವ ಚುನಾವಣೆ ಇತ್ತು? ಪಠಾಣ್‌ಕೋಟ್, ಉರಿ, ಪುಲ್ವಾಮಾ, ಇವೆಲ್ಲವೂ ಕೇವಲ ಮತಗಳಿಗಾಗಿ ನಡೆದವೇ? ಖಂಡಿತವಾಗಿ ಇಲ್ಲ. ಇದು ಭಾರತದ ಮೇಲೆ ನಿರಂತರವಾಗಿ ಹೇರಲಾಗಿದ್ದ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ದಾಳಿಗಳು ಎಂದರು.

ಹಾಗಿದ್ದರೆ, 26/11 ರ ನಂತರ ಭಾರತ ಏಕೆ ಯುದ್ಧಕ್ಕೆ ಹೋಗಲಿಲ್ಲ?

ಹಾಗಿದ್ದರೆ, 26/11 ರ ನಂತರ ಭಾರತ ಏಕೆ ಯುದ್ಧಕ್ಕೆ ಹೋಗಲಿಲ್ಲ? ಎಂಬ ಪ್ರಶ್ನೆಗೆ ,ಏಕೆಂದರೆ ಭಾರತ ಜವಾಬ್ದಾರಿಯನ್ನು ತೋರಿಸಿತು. ಆ ಸಮಯದಲ್ಲಿ ಸಾರ್ವಜನಿಕ ಕೋಪವು ಅಪಾರವಾಗಿತ್ತು. ಸರ್ಕಾರವು ಜನಪ್ರಿಯವಾಗಲು ಬಯಸಿದರೆ, ಅದು ತಕ್ಷಣವೇ ದಾಳಿ ಮಾಡುತ್ತಿತ್ತು. ಆದರೆ ಭಾರತ ಸಂಯಮವನ್ನು ಕಾಯ್ದುಕೊಂಡಿತು, ಪುರಾವೆಗಳನ್ನು ಒದಗಿಸಿತು ಮತ್ತು ತಪ್ಪಿತಸ್ಥರು ಯಾರು ಎಂದು ಜಗತ್ತಿಗೆ ತೋರಿಸಿತು. ಇದು ರಾಜಕೀಯವಲ್ಲ, ಬುದ್ಧಿವಂತಿಕೆ ಎಂದು ಉತ್ತರಿಸಿದರು.

ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಧರ್ಮವನ್ನು ಕೇಳಿ ಕೊಂದರು

ಇತ್ತೀಚೆಗೆ, ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಅವರ ಧರ್ಮದ ಬಗ್ಗೆ ಕೇಳಿದ ನಂತರ ಹಲ್ಲೆ ನಡೆಸಲಾಯಿತು. ಅವರು ಯಾರಿಗೆ ಮತ ಹಾಕಿದ್ದೀರಿ ಎಂದು ಕೇಳಲಾಗಿಲ್ಲ. ಅವರು ಭಾರತೀಯರು ಎಂದು ಮಾತ್ರ ಹೇಳಿದರು. ಇದು ಕೂಡ ರಾಜಕೀಯವೇ? ಎಂದು ಉತ್ತರಿಸಿದರು. ಟೀಕಿಸುತ್ತಾ, ಎಲ್ಲಿಯಾದರೂ ನಿಜವಾದ ರಾಜಕೀಯ ಗಿಮಿಕ್‌ಗಳಿದ್ದರೆ, ಅದು ಪಾಕಿಸ್ತಾನದಲ್ಲಿದೆ. ಭಾರತ ಕ್ರಮ ಕೈಗೊಂಡಾಗ, ನಾವು ತನಿಖೆ ಮಾಡುತ್ತೇವೆ. ಆದರೆ ಅಲ್ಲಿ, ಅದು ಆಚರಣೆ ಮತ್ತು ಪ್ರದರ್ಶನವಾಗಿ ಬದಲಾಗುತ್ತದೆ. ನೀವು ನಿಮ್ಮ ಸ್ವಂತ ಜನರಿಗೆ ಆಹಾರವನ್ನು ನೀಡಲು ಸಾಧ್ಯವಾಗದಿದ್ದಾಗ, ನೀವು ಎಲ್ಲಿ ಭಿಕ್ಷೆ ಬೇಡುತ್ತಿರಿ ಎಂದು ನಮಗೆ ತಿಳದಿದೆ ಎಂದರು.

ಭಾರತ ಶಾಂತಿಯನ್ನು ಬಯಸುತ್ತದೆ, ಭಯೋತ್ಪಾದನೆಯನದನ್ನಲ್ಲ

ಚರ್ಚೆಯಲ್ಲಿ ಹರಾಜ್, "ಹಾಗಾದರೆ, ಭಾರತ ಯುದ್ಧವನ್ನು ಬಯಸುತ್ತದೆಯೇ?" ಎಂದು ಕೇಳಿದರು. "ಇಲ್ಲ. ಭಾರತ ಯುದ್ಧವನ್ನು ಬಯಸುವುದಿಲ್ಲ. ನಾವು ಶಾಂತಿಯುತ ನೆರೆಹೊರೆಯವರಾಗಿರಲು ಬಯಸುತ್ತೇವೆ. ನಮಗೆ ವ್ಯಾಪಾರ, ಇಂಧನ ಮತ್ತು ಉತ್ಪನ್ನ ವಿನಿಮಯ ಬೇಕು. ಆದರೆ ಭಯೋತ್ಪಾದನೆಯನ್ನು ನೀತಿಯಾಗಿ ಬಳಸುವವರೆಗೆ ನಾವು ಮೌನವಾಗಿರಲು ಸಾಧ್ಯವಿಲ್ಲ" ಎಂದು ವಿರಾಂಶ್ ಭಾನುಶಾಲಿ ಸ್ಪಷ್ಟವಾಗಿ ಉತ್ತರಿಸಿದರು.

ಆಕ್ಸ್‌ಫರ್ಡ್ ಒಕ್ಕೂಟದ ಬಗ್ಗೆ

ಆಕ್ಸ್‌ಫರ್ಡ್ ಒಕ್ಕೂಟ (OU) ವಿಶ್ವದ ಅತ್ಯಂತ ಹಳೆಯ ವಿದ್ಯಾರ್ಥಿ ಚರ್ಚಾ ಸಮಾಜವಾಗಿದೆ. 1823 ರಲ್ಲಿ ಸ್ಥಾಪನೆಯಾದ OU ಅನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಡೆಸುತ್ತಾರೆ. ಇದು ಅಧಿಕೃತವಾಗಿ ವಿಶ್ವವಿದ್ಯಾಲಯದ ಭಾಗವಾಗಿಲ್ಲದಿದ್ದರೂ, ಇದು ಸ್ವತಂತ್ರ ವಿದ್ಯಾರ್ಥಿ ಸಂಘಟನೆಯಾಗಿದೆ. ಪ್ರಪಂಚದಾದ್ಯಂತದ ಪ್ರಮುಖ ನಾಯಕರು, ಪ್ರಧಾನ ಮಂತ್ರಿಗಳು, ಅಧ್ಯಕ್ಷರು, ನಟರು ಮತ್ತು ಲೇಖಕರು OU ನಲ್ಲಿ ಮಾತನಾಡಿದ್ದಾರೆ. ಚರ್ಚೆಗಳು ನೇರಪ್ರಸಾರದಲ್ಲಿ ನಡೆಯುತ್ತವೆ ಮತ್ತು YouTube ನಲ್ಲಿ ಲಕ್ಷಾಂತರ ಜನರು ವೀಕ್ಷಿಸುತ್ತಾರೆ. ಚರ್ಚೆಗಳ ನಂತರ, ಗೆಲುವು ಅಥವಾ ಸೋಲನ್ನು ಪ್ರೇಕ್ಷಕರ ಮತಗಳಿಂದ ನಿರ್ಧರಿಸಲಾಗುತ್ತದೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net