ಕಾರ್ಮಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ: ಕೆ.ಜಿ.ನಂಜಪ್ಪ ಹೇಳಿಕೆ-safety

ಕೆ.ಜಿ.ನಂಜಪ್ಪ
ಕೆ.ಜಿ.ನಂಜಪ್ಪ
Published on
ಬೆಂಗಳೂರು: ಮುಂದಿನ ದಿನಗಳಲ್ಲಿ ಕೈಗಾರಿಕಾ ಕ್ರಾಂತಿ ಆಧಾರದಲ್ಲಿ ದೇಶ ಕಟ್ಟಲು ಕಾರ್ಮಿಕರ ಸುರಕ್ಷತೆಯು ಪ್ರಮುಖ ಪಾತ್ರ ವಹಿಸಲಿದೆ ಎಂದು ಕಾರ್ಖಾನೆಗಳು, ಬ್ಲಾಯರ್‌ಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ನಿರ್ದೇಶಕ ಕೆ.ಜಿ.ನಂಜಪ್ಪ ಹೇಳಿದ್ದಾರೆ.
ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಸುರಕ್ಷತಾ ಸಂಸ್ಥೆ, ನಿಮ್ಹಾನ್ಸ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ರಾಷ್ಟ್ರೀಯ ಸುರಕ್ಷತಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಕಾರ್ಖಾನೆಗಳು, ಬಾಯ್ಲರ್‌ಗಳಲ್ಲಿ ಪ್ರತಿ ವರ್ಷ 200ಕ್ಕೂ ಅಧಿಕ ಘಟನೆಗಳು ಸಂಭವಿಸುತ್ತಿದ್ದು, ಅಂದಾಜು 50 ಕಾರ್ಮಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಘಟನೆಗಳನ್ನು ಶೂನ್ಯ ಪ್ರಮಾಣಕ್ಕೆ ತಗ್ಗಿಸಲು ಪರಿಣಾಮಕಾರಿಯಾಗಿ ಸುರಕ್ಷತೆಯನ್ನು ಅಳವಡಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಸುರಕ್ಷತೆ ಬಗ್ಗೆ ಕಾರ್ಮಿಕರಿಗೆ ಜಾಗೃತಿ ಮೂಡಿಸುವ ಜೊತೆಗೆ ತರಬೇತಿಯನ್ನು ನೀಡಲಾಗುತ್ತಿದೆ ಎಂದರು.
ಅಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಈ ಮೂಲಕ ಕಾಯ್ದೆ ಮತ್ತು ಕಾನೂನು ಅನುಷ್ಠಾನಕ್ಕೆ ತರಲಾಗುತ್ತಿದೆ. ಮುಂದಿನ 25 ವರ್ಷಗಳು ಕಾರ್ಮಿಕರ ಕೊರತೆ ಇಲ್ಲ. ಕೈಗಾರಿಕೆಗಳ ವಲಯದಲ್ಲಿ ಕೃತಕಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಇದರಿಂದ ಕಾರ್ಮಿಕರ ಉದ್ಯೋಗಕ್ಕೆ ತೊಂದರೆ ಇಲ್ಲ. ಆದರೆ, ಕೌಶಲ ಕಲಿಯಲು ಕಾರ್ಮಿಕರು ಆದ್ಯತೆ ನೀಡಬೇಕು ಎಂದು ಕೆ.ಜಿ.ನಂಜಪ್ಪ ಸಲಹೆ ನೀಡಿದರು.
ನೆಕ್ಟರ್ ಪ್ರೆಶ್ ಸಂಸ್ಥಾಪಕಿ ಛಾಯ ನಂಜಪ್ಪ ಮಾತನಾಡಿ, 19 ವರ್ಷದ ಹಿಂದೆ ಜೇನು ತುಪ್ಪ ವ್ಯವಹಾರ ಆರಂಭಿಸಿದ್ದೆ. ಹಂತ ಹಂತವಾಗಿ ನಮ್ಮ ಕಂಪನಿ ಯಶಸ್ವಿಯಾಗಿ ಬೆಳೆದಿದ್ದು, ಪ್ರಸ್ತುತ ದಿನಗಳಲ್ಲಿ 400 ಟನ್‌ವರೆಗೆ ಜೇನು ತುಪ್ಪ ಪೂರೈಕೆ ಮಾಡಲಾಗುತ್ತಿದೆ. ಕೆಲಸ ಮಾಡುವ ಸ್ಥಳದಲ್ಲಿ ಕಾರ್ಮಿಕರಿಗೆ ಸುರಕ್ಷತಾ ಎಂಬುದು ಬಹಳ ಮುಖ್ಯವಾಗಿದ್ದು, ಅವರಿಗೆ ಹೆಚ್ಚಿನ ಸುರಕ್ಷತೆ ಸಿಗುವಂತಾಗಬೇಕು ಎಂದರು.
ಉತ್ಕೃಷ್ಟ ಗುಣಮಟ್ಟದ ಸುರಕ್ಷತಾ ಮಾನದಂಡ ಅಳವಡಿಸಿಕೊಂಡಿರುವ ಅತ್ಯುತ್ತಮ ಕೈಗಾರಿಕೆಗಳಿಗೆ ಪ್ರಶಸ್ತಿ ನೀಡಲಾಯಿತು. ಇಮೇಜ್ ಸಿನರ್ಜಿ ಎಕ್ಸ್‌ಪ್ಲೋರ್ ಪ್ರೈ.ಲಿ. ಎಂಡಿ ಸುಜನ್ ನೈಲಾಡಿ, ಕರ್ನಾಟಕ ರಾಜ್ಯ ಸಮಿತಿಯ ಡಿ.ಎ.ವಿಜಯ ಭಾಸ್ಕರ್, ರಾಷ್ಟ್ರೀಯ ಸುರಕ್ಷತಾ ಪರಿಷತ್ತಿನ ಗೌರವ ಕಾರ್ಯದರ್ಶಿ ಪಿ.ಸಿ.ವೆಂಕಟೇಶ್ವರಲು ಸೇರಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net