ಅವರ ಪ್ರಭಾವಕ್ಕೆ ಬಲಿಯಾದೆ, ಕ್ಷಮಿಸಿ!...ಪ್ರಧಾನಿ ಮೋದಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಬಾಲಕಿಯಿಂದ ಶಾಕಿಂಗ್​ ಸ್ಟೇಟ್​ಮೆಂಟ್! | Ruchika Singh

 Ruchika Singh | ಅವರ ಪ್ರಭಾವಕ್ಕೆ ಬಲಿಯಾದೆ, ಕ್ಷಮಿಸಿ!...ಪ್ರಧಾನಿ ಮೋದಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಬಾಲಕಿಯಿಂದ ಶಾಕಿಂಗ್​ ಸ್ಟೇಟ್​ಮೆಂಟ್!
Ruchika Singh | ಅವರ ಪ್ರಭಾವಕ್ಕೆ ಬಲಿಯಾದೆ, ಕ್ಷಮಿಸಿ!...ಪ್ರಧಾನಿ ಮೋದಿ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಬಾಲಕಿಯಿಂದ ಶಾಕಿಂಗ್​ ಸ್ಟೇಟ್​ಮೆಂಟ್!
Published on

ನವದೆಹಲಿ: ಇಲ್ಲಿನ ಜಂತರ್ ಮಂತರ್‌ನಲ್ಲಿ ಜುಲೈ 23 ರಂದು ನಡೆದ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿಂದನೀಯ ಭಾಷೆ ಬಳಸಿದ ಆರೋಪ ಹೊತ್ತಿರುವ ರುಚಿಕಾ ಸಿಂಗ್ (Ruchika Singh), ಕೊನೆಗೂ ಕ್ಷಮೆಯಾಚಿಸಿದ್ದಾರೆ ಎಂದು ವರದಿಯಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ತನಗೆ 15 ವರ್ಷ ವಯಸ್ಸೆಂದು ಹೇಳಿಕೊಂಡಿರುವ ಆಕೆ, ಗೆಳೆಯರೊಂದಿಗೆ ಕನ್ನಾಟ್ ಪ್ಲೇಸ್‌ಗೆ ಭೇಟಿ ನೀಡಿದ ಬಳಿಕ ಪ್ರತಿಭಟನಾ ಸ್ಥಳಕ್ಕೆ ತೆರಳಿದ್ದಾಗಿ ತಿಳಿಸಿದ್ದಾಳೆ. ಅಲ್ಲದೆ, ಪ್ರಧಾನಿ ವಿರುದ್ಧ ನಿಂದನೀಯ ಘೋಷಣೆಗಳನ್ನು ಕೂಗುತ್ತಿದ್ದ ಸುತ್ತಮುತ್ತಲಿನ ಜನರಿಂದ ಪ್ರಭಾವಿತಳಾಗಿರುವುದಾಗಿಯೂ ಹೇಳಿದ್ದಾಳೆ. ಆದರೆ, ಈ ವಿಡಿಯೋದ ಸತ್ಯಾಸತ್ಯತೆಯ ಕುರಿತು ಇದುವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ಲಭ್ಯವಾಗಿಲ್ಲ.

ಆಕೆ ಕೈಮುಗಿದು ನಿಂತಿರುವುದನ್ನು ತೋರಿಸುವ ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಾನು ಆ ಜನರ ಪ್ರಭಾವಕ್ಕೆ ಒಳಗಾದೆ ಎಂದು ಆಕೆ ಹೇಳಿದ್ದು, ನನಗೆ ಕೇವಲ 15 ವರ್ಷ. ನಾನು ಮಾಡಿದ್ದು ಕ್ಷಮೆಗೆ ಅರ್ಹವಲ್ಲ. ನಾನು ಬಹಳಷ್ಟು ಕೆಟ್ಟ ಮಾತುಗಳನ್ನು ಹೇಳಿದ್ದೇನೆ ಎಂದು ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾಳೆ. ಇದನ್ನು ತನ್ನ ಮೊದಲ ಮತ್ತು ಕೊನೆಯ ತಪ್ಪು ಎಂದು ಕರೆದಿರುವ ಆಕೆ, ನಾನು ಇಡೀ ದೇಶದ ಕ್ಷಮೆ ಕೇಳುತ್ತೇನೆ. ನನಗೆ ತುಂಬಾ ನಾಚಿಕೆಯಾಗುತ್ತಿದೆ. ನನ್ನನ್ನು ನಾನೇ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಮನವಿ ಮಾಡಿದ್ದಾಳೆ.

ಪ್ರತಿಭಟನೆಯಲ್ಲಿ ತಮ್ಮನ್ನು ನಿಂದಿಸಿದ ಆರೋಪ ಹೊತ್ತಿರುವ ವಿದ್ಯಾರ್ಥಿಗಳನ್ನು ಕ್ಷಮಿಸಿರುವುದಾಗಿ ಮತ್ತು ಸಮಾಜವು ಅವರಿಗೆ ಶಿಕ್ಷೆ ನೀಡುವ ಬದಲು ಮಾರ್ಗದರ್ಶನ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಸಂದೇಶ ಬಿಡುಗಡೆ ಮಾಡಿದ ಕೆಲವು ಗಂಟೆಗಳ ನಂತರ ಈ ವಿಡಿಯೋ ಹೊರಬಿದ್ದಿದೆ. ಈ ಹಿಂದೆ ನನ್ನ ಮತ್ತು ನನ್ನ ದಿವಂಗತ ತಾಯಿಯ ವಿರುದ್ಧ ಬಳಸಿದ ನಿಂದನಾತ್ಮಕ ಪದಗಳು ತೀವ್ರವಾಗಿ ನೋವುಂಟುಮಾಡಿದ್ದವು, ಆದರೆ ಯುವಜನರಿಗೆ ತಮ್ಮ ತಪ್ಪುಗಳಿಂದ ಕಲಿಯಲು ಅವಕಾಶ ನೀಡಬೇಕು ಎಂದು ಮೋದಿ ಹೇಳಿದ್ದಾರೆ

ಏನಿದು ಘಟನೆ..?

ಇದಕ್ಕೂ ಮುನ್ನ, ಜುಲೈ 23 ರ ಪ್ರತಿಭಟನೆಯಲ್ಲಿn ನಿಂದನೀಯ ಘೋಷಣೆಗಳಿಗೆ ಸಂಬಂಧಿಸಿದಂತೆ ಜುಲೈ 29 ರಂದು ನೋಯ್ಡಾದ ಎಕ್ಸ್‌ಪ್ರೆಸ್‌ವೇ ಪೊಲೀಸ್ ಠಾಣೆಯಲ್ಲಿ ರುಚಿಕಾ ಸಿಂಗ್ ವಿರುದ್ಧ ಝೀರೋ ಎಫ್‌ಐಆರ್ ದಾಖಲಿಸಲಾಗಿತ್ತು. ಸಿಂಗ್ ಪ್ರಧಾನಿಯವರ ವಿರುದ್ಧ ನಿಂದನೀಯ ಭಾಷೆಯನ್ನು ಬಳಸಿದ್ದು, ಸಾಂವಿಧಾನಿಕ ಹುದ್ದೆಯ ಘನತೆಗೆ ಕುಂದು ಉಂಟುಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ದುರುದ್ದೇಶದಿಂದ ದ್ವೇಷವನ್ನು ಪ್ರಚೋದಿಸಲು ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರುವ ಉದ್ದೇಶದಿಂದ ಈ ಹೇಳಿಕೆಗಳನ್ನು ನೀಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಲಭ್ಯವಿರುವ ಮಾಹಿತಿಯ ಪ್ರಕಾರ, ಸಿಂಗ್ ನೋಯ್ಡಾದ ಹೌಸಿಂಗ್ ಸೊಸೈಟಿಯೊಂದರಲ್ಲಿ ತಮ್ಮ ತಾಯಿಯೊಂದಿಗೆ ವಾಸಿಸುತ್ತಿದ್ದರು. ಅಪಾರ್ಟ್‌ಮೆಂಟ್ ಪ್ರಸ್ತುತ ಬೀಗ ಹಾಕಲ್ಪಟ್ಟಿದ್ದು, ಜಂತರ್ ಮಂತರ್ ಪ್ರತಿಭಟನೆಯ ನಂತರ ಆಕೆ ಹಿಂತಿರುಗಿಲ್ಲ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ. ನಡೆಯುತ್ತಿರುವ ತನಿಖೆಯ ಭಾಗವಾಗಿ ಪೊಲೀಸರು ಸೊಸೈಟಿಗೆ ಭೇಟಿ ನೀಡಿದ್ದು ನಿವಾಸಿಗಳನ್ನು ವಿಚಾರಣೆ ನಡೆಸಿದ್ದಾರೆ.

ಎಫ್‌ಐಆರ್‌ಗೆ ಪ್ರತಿಕ್ರಿಯಿಸಿದ ಸಿಜೆಪಿ ಪಕ್ಷ, ಸಿಂಗ್ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಖಂಡಿಸಿದೆ. ಆಕ್ಷೇಪಾರ್ಹ ಅಥವಾ ನಿಂದನೀಯ ಭಾಷೆಯನ್ನು ಬೆಂಬಲಿಸಬಾರದು, ಆದರೆ ಇಂತಹ ಹೇಳಿಕೆಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ವಕ್ತಾರ ಸೌರವ್ ದಾಸ್ ಹೇಳಿದ್ದಾರೆ. ಸಂತ್ರಸ್ತರು ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಬಳಸುವ ಬದಲು ಮಾನನಷ್ಟ ಮೊಕದ್ದಮೆ ಹೂಡಬೇಕು ಎಂದು ಅವರು ವಾದಿಸಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net