ಬಿಡದಿ ಟೌನ್‌ಶಿಪ್ ವಿಚಾರವಾಗಿ ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪಕಾಣಿಕೆ ನೀಡಲಾಗುತ್ತಿದೆ ಎಂಬ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆರೋಪಕ್ಕೆ ಸಚಿವ ರಾಮಲಿಂಗಾರೆಡ್ಡಿ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಖಡಕ್ ತಿರುಗೇಟು ನೀಡಿದ್ದಾರೆ. ಆಗಸ್ಟ್ ಕೊನೆಯೊಳಗೆ ಜಿಬಿಎ ಚುನಾವಣೆ ನಡೆಸಬೇಕೆಂದು ಈ ಹಿಂದೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು, ಆದರೆ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ಈಗ ನ್ಯಾಯಾಲಯವೇ ಡಿಸೆಂಬರ್ ಒಳಗೆ ಚುನಾವಣೆ ನಡೆಸುವಂತೆ ಗಡುವು ವಿಸ್ತರಿಸಿದೆ. ಅಷ್ಟರೊಳಗೆ ಎಸ್‌ಐಆರ್ ಪ್ರಕ್ರಿಯೆಯೂ ಮುಗಿಯಲಿದ್ದು, ನಾವು ಸೋಲುತ್ತೇವೆ ಎಂಬ ಕಾರಣಕ್ಕೆ ಚುನಾವಣೆ ಮುಂದೂಡಲಾಗಿದೆ ಎಂದು ವಿಪಕ್ಷದವರು ಕನಸು ಕಾಣುತ್ತಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಕಪ್ಪಕಾಣಿಕೆ ಆರೋಪಕ್ಕೆ ಆಕ್ರೋಶ ಹೊರಹಾಕಿದ ಅವರು, "2006ರಲ್ಲಿ ಬಿಡದಿ ಸೇರಿದಂತೆ ಹಲವು ಭಾಗಗಳಲ್ಲಿ ಟೌನ್‌ಶಿಪ್ ಘೋಷಿಸಿದವರು ಯಾರು? ಇವರ ಅವಧಿಯಲ್ಲೇ ಅಲ್ಲವೇ ಟೌನ್‌ಶಿಪ್ ಘೋಷಣೆಯಾಗಿದ್ದು? ಹಾಗಾದರೆ ಇವರು ಅಂದು ಟೌನ್‌ಶಿಪ್ ಘೋಷಿಸಲು ಯಾರಿಗೆ ಕಪ್ಪಕಾಣಿಕೆ ಕೊಟ್ಟಿದ್ದರು? ಸುಮ್ಮನೆ ಆಧಾರರಹಿತವಾಗಿ ಯಾರ ಮೇಲೂ ಆರೋಪ ಮಾಡುವುದು ಸರಿಯಲ್ಲ, ಕಾಂಗ್ರೆಸ್ ಹೈಕಮಾಂಡ್‌ಗೂ ಮತ್ತು ಬಿಡದಿ ಟೌನ್‌ಶಿಪ್ ಯೋಜನೆಗೂ ಯಾವುದೇ ಸಂಬಂಧವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.