ರಷ್ಯಾ-ಬ್ರಿಟನ್ ಸಂಘರ್ಷಕ್ಕೆ ಸಿಲುಕಿದ ಭಾರತೀಯ ನಾವಿಕ: ನನ್ನ ಪತಿಯನ್ನು ಬಿಡುಗಡೆ ಮಾಡಿ ಎಂದು ಕಣ್ಣೀರಿಟ್ಟ ಪತ್ನಿ! Indian Captain

Indian Captain ಸಾಂದರ್ಭಿಕ ಚಿತ್ರ
Indian Captain ಸಾಂದರ್ಭಿಕ ಚಿತ್ರ
Published on

Indian Captain: ಬ್ರಿಟನ್ ಸೇನೆಯ ಕಮಾಂಡೋಗಳು ಬ್ರಿಟನ್-ಫ್ರಾನ್ಸ್ ನಡುವಿನ ಸಮುದ್ರದಲ್ಲಿದ್ದ ನೌಕೆಗೆ ಹೆಲಿಕಾಪ್ಟರ್‌ನಿಂದ ಇಳಿದು, ರಷ್ಯಾದ ರಹಸ್ಯ ನೌಕಾಪಡೆಗೆ (ಶ್ಯಾಡೋ ಫ್ಲೀಟ್) ಸೇರಿದ ‘ಸ್ಮಿರ್ಟೋಸ್’ ಎಂಬ ತೈಲ ನೌಕೆಯನ್ನು ವಶಪಡಿಸಿಕೊಂಡಿದ್ದಾರೆ. ಸುಮಾರು 98,000 ಟನ್ ತೈಲದೊಂದಿಗೆ ರಷ್ಯಾದ ಉಸ್ಟ್-ಲುಗಾ ಬಂದರಿನಿಂದ ಈಜಿಪ್ಟ್‌ಗೆ ಸಾಗುತ್ತಿದ್ದ ಈ ಹಡಗಿನ ಕ್ಯಾಪ್ಟನ್, ಭಾರತ ಮೂಲದ ಅಜಯ್ ಪಂತ್ (38) ಅವರನ್ನು ಬಂಧಿಸಲಾಗಿದೆ.

ಬ್ರಿಟನ್‌ನ ಕಸ್ಟಡಿಯಲ್ಲಿರುವ ಇವರ ಮೇಲೆ ಅಂತರರಾಷ್ಟ್ರೀಯ ನಿರ್ಬಂಧ ಉಲ್ಲಂಘನೆಯ ಆರೋಪ ಹೊರಿಸಲಾಗಿದ್ದು, ಅಪರಾಧ ಸಾಬೀತಾದರೆ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ.

ನನ್ನ ಪತಿ ಕೇವಲ ಬಲಿಪಶು: ಪತ್ನಿಯ ಆಕ್ರೋಶ

ಘಟನೆಯ ಕುರಿತು ಖಾಸಗಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಕ್ಯಾಪ್ಟನ್​ ಪತ್ನಿ ರಿತು ಪಂತ್, ನನ್ನ ಪತಿಯನ್ನು ಈ ಪ್ರಕರಣದಲ್ಲಿ ಬಲಿಪಶು ಮಾಡಲಾಗಿದೆ. ಅವರು ತಪ್ಪು ಸಮಯದಲ್ಲಿ ತಪ್ಪು ಜಾಗದಲ್ಲಿದ್ದರು. ಹಡಗಿನ ಮಾಲೀಕರ ಆದೇಶವನ್ನು ಪಾಲಿಸುವುದು ಮತ್ತು ಸರಕನ್ನು ಸುರಕ್ಷಿತವಾಗಿ ತಲುಪಿಸುವುದು ನೌಕಾನಾಯಕರ ಕೆಲಸವೇ ಹೊರತು, ಅದರ ಹಿನ್ನೆಲೆ ತಿಳಿಯುವುದು ಅವರ ಜವಾಬ್ದಾರಿಯಲ್ಲ ಎಂದು ಹೇಳಿದ್ದಾರೆ. ಜಾಮೀನು ಸಿಗದೆ ಜೈಲಿನಲ್ಲಿರುವ ಪತಿ ತೀವ್ರ ಮಾನಸಿಕ ಆಘಾತಕ್ಕೊಳಗಾಗಿದ್ದಾರೆ ಎಂದು ಅವರು ಕಣ್ಣೀರಿಟ್ಟಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾನೂನು ನಡುಕ

ನೌಕೆಯ ಮಾಲೀಕರು ಅಥವಾ ಕಂಪನಿಯ ಬದಲಿಗೆ ನೇರವಾಗಿ ಕ್ಯಾಪ್ಟನ್ ಒಬ್ಬರನ್ನೇ ಗುರಿಯಾಗಿಸಿ ಯುರೋಪ್ ದೇಶವೊಂದು ಕ್ರಿಮಿನಲ್ ಪ್ರಕರಣ ದಾಖಲಿಸಿರುವುದು ಇದೇ ಮೊದಲ ಬಾರಿಯಾಗಿದೆ. ಹಡಗಿನಲ್ಲಿದ್ದ ಇತರ 24 ಸಿಬ್ಬಂದಿಗಳನ್ನು ಅವರ ದೇಶಗಳಿಗೆ ವಾಪಸ್ ಕಳುಹಿಸಲಾಗಿದ್ದು, ಅಜಯ್ ಪಂತ್ ಅವರನ್ನು ಮಾತ್ರ ಬಂಧನದಲ್ಲಿಡಲಾಗಿದೆ. ಈ ಘಟನೆಯು ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಲಕ್ಷಾಂತರ ನಾವಿಕರಲ್ಲಿ, ವಿಶೇಷವಾಗಿ 3.2 ಲಕ್ಷಕ್ಕೂ ಹೆಚ್ಚು ಭಾರತೀಯ ನಾವಿಕರಲ್ಲಿ ತೀವ್ರ ಭಯ ಹುಟ್ಟಿಸಿದೆ.

ಬಂಧನಕ್ಕೂ ಮುನ್ನ ಪತಿಯ ಕಳವಳ

ಬಂಧನಕ್ಕೂ ಕೆಲವು ದಿನಗಳ ಮುನ್ನ ಪತ್ನಿಗಿದ್ದ ಆತಂಕವನ್ನು ಹಂಚಿಕೊಂಡಿದ್ದ ಅಜಯ್ ಪಂತ್, ಮಧ್ಯಪ್ರಾಚ್ಯದ ಸಂಘರ್ಷ ಮತ್ತು ಸಮುದ್ರದಲ್ಲಿ ನಾವಿಕರ ಮೇಲಾಗುತ್ತಿರುವ ದಾಳಿಗಳನ್ನು ಉಲ್ಲೇಖಿಸಿ "ಸಮುದ್ರದಲ್ಲಿ ಕೆಲಸ ಮಾಡುವುದು ಈಗ ತುಂಬಾ ಕಷ್ಟಕರವಾಗುತ್ತಿದೆ" ಎಂದು ಬರೆದುಕೊಂಡಿದ್ದರು.
ಪ್ರಸ್ತುತ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಅಜಯ್ ಅವರನ್ನು ಭೇಟಿ ಮಾಡಿದ್ದು, ಅವರ ತಾಯಿ ದೀಪಾ ಪಂತ್ ತಮ್ಮ ಮಗನನ್ನು ದೇಶಕ್ಕೆ ವಾಪಸ್ ಕರೆತರುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಡಿಸೆಂಬರ್ 15 ರಂದು ಈ ಪ್ರಕರಣದ ಮುಖ್ಯ ವಿಚಾರಣೆ ನಡೆಯಲಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net