ಯಾವಾಗಲೂ ಕಪ್ಪು-ಬಿಳಿ ಸೂಟ್ ಧರಿಸುವುದೇಕೆ? ಕೊನೆಗೂ ಮೌನ ಮುರಿದ ಸಿಎಂ ವಿಜಯ್! CM Vijay

ಯಾವಾಗಲೂ ಕಪ್ಪು-ಬಿಳಿ ಸೂಟ್ ಧರಿಸುವುದೇಕೆ? ಕೊನೆಗೂ ಮೌನ ಮುರಿದ ಸಿಎಂ ವಿಜಯ್! CM Vijay
ಯಾವಾಗಲೂ ಕಪ್ಪು-ಬಿಳಿ ಸೂಟ್ ಧರಿಸುವುದೇಕೆ? ಕೊನೆಗೂ ಮೌನ ಮುರಿದ ಸಿಎಂ ವಿಜಯ್! CM Vijay
Published on

ಪ್ರಮುಖ ಮುಖ್ಯಾಂಶಗಳು

  • ಮೊದಲ ಪ್ರಯತ್ನದಲ್ಲೇ ತಮಿಳುನಾಡಿನ ಮುಖ್ಯಮಂತ್ರಿಯಾಗಿ ನೂತನ ಇತಿಹಾಸ ಬರೆದ ನಟ ವಿಜಯ್​
  • ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಜಕೀಯದ ಸಾಂಪ್ರದಾಯಿಕ ಶೈಲಿಗೆ ಬ್ರೇಕ್​
  • ಬಿಳಿ ಶರ್ಟ್ ಮತ್ತು ಪಂಚೆಯ ಬದಲು ಕಪ್ಪು ಮತ್ತು ಬಿಳಿ ಬಣ್ಣದ ಸೂಟ್ ಧರಿಸಿದ ವಿಜಯ್​
  • ಯಾವಾಗಲೂ ಕಪ್ಪು-ಬಿಳಿ ಸೂಟ್ ಧರಿಸುವುದೇಕೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ನೀಡಿದ ಸಿಎಂ ವಿಜಯ್​
ಚೆನ್ನೈ: ಚಿತ್ರರಂಗದಿಂದ ರಾಜಕೀಯಕ್ಕೆ ಧುಮುಕಿ, ಚುನಾವಣೆಯ ಮೊದಲ ಪ್ರಯತ್ನದಲ್ಲೇ ತಮಿಳುನಾಡಿನ ಮುಖ್ಯಮಂತ್ರಿಯಾಗಿ ನೂತನ ಇತಿಹಾಸ ಬರೆದಿರುವ ಸೂಪರ್‌ಸ್ಟಾರ್ ವಿಜಯ್ ( CM Vijay ), ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಜಕೀಯದ ಸಾಂಪ್ರದಾಯಿಕ ಶೈಲಿಗೇ ಬಿಗ್ ಟ್ವಿಸ್ಟ್ ನೀಡಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ರಾಜಕಾರಣಿಗಳು ಸಾಮಾನ್ಯವಾಗಿ ಧರಿಸುವ ಬಿಳಿ ಶರ್ಟ್ ಮತ್ತು ಪಂಚೆಯ ಬದಲು, ವಿಜಯ್ ಅವರು ಸಖತ್ ಸ್ಟೈಲಿಶ್ ಆದ ಕಪ್ಪು ಮತ್ತು ಬಿಳಿ ಬಣ್ಣದ ಸೂಟ್ ಧರಿಸಿ ಆಗಮಿಸುವ ಮೂಲಕ ಎಲ್ಲರ ಹುಬ್ಬೇರಿಸಿದರು. ಸಿಎಂ ಪಟ್ಟಕ್ಕೇರಿದ ಬೆನ್ನಲ್ಲೇ ತಮಿಳುನಾಡು ರಾಜಕೀಯ ಅಂಗಳದಲ್ಲಿ ದಳಪತಿಯ ಈ ವಿನೂತನ ಶೈಲಿಯ ಉಡುಪು ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಯಿತು. ಅಂತಿಮವಾಗಿ ಆ ಚರ್ಚೆಗಳಿಗೆ ವಿಜಯ್​ ಪೂರ್ಣ ವಿರಾಮ ಹಾಕಿದ್ದಾರೆ.

ವಿಪಕ್ಷಗಳ ಟೀಕೆಗೆ ವಿಜಯ್ ತಿರುಗೇಟು

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರವೂ ನಟ, ರಾಜಕಾರಣಿ ವಿಜಯ್ ಅವರು ಸರಣಿಯಾಗಿ ನಡೆದ ಎಲ್ಲಾ ಅಧಿಕೃತ ಸಭೆಗಳು, ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಸರ್ಕಾರಿ ಸಮಾರಂಭಗಳಲ್ಲಿ ಅದೇ ಕಪ್ಪು-ಬಿಳಿ ಸೂಟ್ ಧರಿಸಿ ಭಾಗವಹಿಸಿದ್ದರು. ದಳಪತಿಯ ಈ ವಿನೂತನ ಉಡುಪಿನ ಶೈಲಿಯನ್ನು ತಮಿಳುನಾಡಿನ ವಿಪಕ್ಷಗಳು ತೀವ್ರವಾಗಿ ಟೀಕಿಸಲು ಶುರು ಮಾಡಿದ್ದವು. ಇದೀಗ ಸಿಎಂ ಆದ ಬಳಿಕ ಮೊದಲ ಬಾರಿಗೆ, ತಮ್ಮ ಉಡುಪಿನ ಕುರಿತು ನಡೆಯುತ್ತಿರುವ ಎಲ್ಲಾ ಚರ್ಚೆಗಳು ಮತ್ತು ವಿಪಕ್ಷಗಳ ಟೀಕೆಗಳಿಗೆ ವಿಜಯ್ ಖಡಕ್ ಆಗಿಯೇ ಪ್ರತಿಕ್ರಿಯಿಸಿದ್ದಾರೆ.

ಪಾರದರ್ಶಕತೆಯ ಸತ್ಯ

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ತಿರುಚಿರಾಪಳ್ಳಿಯಲ್ಲಿ ನಡೆದ ತಮ್ಮ ಮೊದಲ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ವಿಜಯ್, ನಾವು ಕೋಟ್ ಮತ್ತು ಸೂಟ್ ಧರಿಸಬಾರದೇ? ಅದು ಕೇವಲ ಅಧಿಕಾರದಲ್ಲಿರುವ ಕೆಲವು ಪ್ರಭಾವಿ ಜನರಿಗೆ ಮಾತ್ರ ಸೀಮಿತವೇ? ಖಂಡಿತ ಇಲ್ಲ. ನಾನು ಹೆಚ್ಚು ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸುವುದಿಲ್ಲ. ನಮ್ಮೆಲ್ಲರ ಮನಸ್ಸಿನಂತೆ ಇದು ಕೇವಲ ಕಪ್ಪು ಮತ್ತು ಬಿಳಿ. ನಮ್ಮ ಸರ್ಕಾರದ ಪ್ರತಿಯೊಂದು ಕೆಲಸದಲ್ಲೂ ಪಾರದರ್ಶಕತೆ ಮತ್ತು ಸರಳತೆ ಇರಲಿದೆ ಎಂಬುದನ್ನು ಜಗತ್ತಿಗೆ ತೋರಿಸಲು ನಾನು ಈ ಬಣ್ಣಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ತಮ್ಮ ಉಡುಪಿನ ಹಿಂದಿನ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.
ಇದೇ ಸಂದರ್ಭವನ್ನು ಬಳಸಿಕೊಂಡು ಮುಖ್ಯಮಂತ್ರಿ ವಿಜಯ್ ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಪಕ್ಷವಾದ ಟಿವಿಕೆ (TVK) ಅಧಿಕಾರಕ್ಕೆ ಬಂದು ಇನ್ನು ಕೆಲವು ವಾರಗಳೂ ಕಳೆದಿಲ್ಲ. ಹೊಸ ಸರ್ಕಾರ ಬಂದಾಗ ಕನಿಷ್ಠ ಆರು ತಿಂಗಳ ಕಾಲ ಯಾವುದೇ ಟೀಕೆ ಮಾಡದೆ ಸುಮ್ಮನಿರುತ್ತೇವೆ ಎಂದು ಹೇಳಿದ್ದ ವಿಪಕ್ಷಗಳಿಗೆ, ಈಗ ಆರು ದಿನಗಳೂ ಕೂಡ ಸುಮ್ಮನೆ ಕೂರಲು ಸಾಧ್ಯವಾಗುತ್ತಿಲ್ಲ ಎಂದು ವಿಜಯ್ ಲೇವಡಿ ಮಾಡಿದ್ದಾರೆ.

ಬದಲಾವಣೆ ಬಯಸಿದ ತಮಿಳುನಾಡು ಜನತೆ

ತಮಿಳುನಾಡಿನ ರಾಜಕೀಯ ಇತಿಹಾಸದ ಬಗ್ಗೆ ಮಾತನಾಡಿದ ಸಿಎಂ ವಿಜಯ್, ದಶಕಗಳಿಂದ ತಮಿಳುನಾಡು ರಾಜ್ಯವನ್ನು ಒಬ್ಬರಾದ ಮೇಲೆ ಒಬ್ಬರಂತೆ ಆಳುತ್ತಾ, ಜನರಿಗೆ ನಿರಂತರವಾಗಿ ವಂಚಿಸುತ್ತಾ ಬಂದಿದ್ದ ಎರಡು ಪ್ರಮುಖ ಸಾಂಪ್ರದಾಯಿಕ ಪಕ್ಷಗಳನ್ನು ತಮಿಳುನಾಡಿನ ಜನತೆ ಈ ಬಾರಿ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎಂದು ಗುಡುಗಿದ್ದಾರೆ. ಆ ಮೂಲಕ ತಮ್ಮ ಹೊಸ ಆಡಳಿತದ ಭರವಸೆಯನ್ನು ಜನರಲ್ಲಿ ಮತ್ತೊಮ್ಮೆ ಗಟ್ಟಿಗೊಳಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net