ಭಾರತದ "ಗ್ರೇ ವೇವ್" ಅನ್ನು ನೀವು ಏಕೆ ಸಂಭ್ರಮಿಸಬೇಕು? India Grey Wave

ಭಾರತದ "ಗ್ರೇ ವೇವ್" ಅನ್ನು ನೀವು ಏಕೆ ಸಂಭ್ರಮಿಸಬೇಕು? India Grey Wave
ಭಾರತದ "ಗ್ರೇ ವೇವ್" ಅನ್ನು ನೀವು ಏಕೆ ಸಂಭ್ರಮಿಸಬೇಕು? India Grey Wave
Published on

ಪ್ರಮುಖ ಮುಖ್ಯಾಂಶಗಳು

  • ದಕ್ಷಿಣ ಭಾರತದಲ್ಲಿನ ವೃದ್ಧರ ಜನಸಂಖ್ಯೆ ಆರ್ಥಿಕ ಬೆಳವಣಿಗೆಯನ್ನು ಕುಂಠಿತಗೊಳಿಸಲಿದೆ ಎಂಬ ಆತಂಕಗಳು ಅತಿರೇಕದಿಂದ ಕೂಡಿವೆ
  • ಉತ್ತಮ ಜೀವನಮಟ್ಟ ಹಾಗೂ ಆರೋಗ್ಯ ರಕ್ಷಣೆಯಿಂದ ಜೀವಿತಾವಧಿ ಹೆಚ್ಚುತ್ತಿರುವುದನ್ನು ವೃದ್ಧರ ಜನಸಂಖ್ಯೆ ಪ್ರತಿಬಿಂಬಿಸುತ್ತದೆ
  • ಆವಿಷ್ಕಾರಗಳು ತರುವ ದಕ್ಷತೆಯು ಭಾರತ ಮತ್ತು ಜಾಗತಿಕವಾಗಿ ವೃದ್ಧರನ್ನು ನಿಭಾಯಿಸಲು ನೆರವಾಗುತ್ತದೆ
India Grey Wave: ವೃದ್ಧಾಪ್ಯದ ಅಲೆ ಅಪ್ಪಳಿಸುತ್ತಿದೆ! ಕಡಿಮೆ ಜನನ ಪ್ರಮಾಣ ಮತ್ತು ಹೆಚ್ಚುತ್ತಿರುವ ಹಿರಿಯ ನಾಗರಿಕರ ಸಂಖ್ಯೆ ಭಾರತವೆಂಬ 'ಚಿನ್ನದ ಹಕ್ಕಿ'ಯ ಆರ್ಥಿಕ ಜಿಗಿತಕ್ಕೆ ತಡೆ ಹಾಕಬಹುದು ಎಂಬುದು ತಜ್ಣರ ಮತ್ತು ವಿಶ್ಲೇಷಕರ ಕಳವಳ. ಚಾಮುಂಡೇಶ್ವರಿ, ಚಿಕ್ಕಮಗಳೂರು ಮತ್ತು ನಾಗಮಂಗಲದಂತಹ ಕ್ಷೇತ್ರಗಳು ಈ ಭೀತಿಯನ್ನು ವಿಶೇಷವಾಗಿ ಪ್ರಚೋದಿಸುತ್ತಿವೆ. ಭವಿಷ್ಯದಲ್ಲಿ ಕಾರ್ಮಿಕರ ಅಭಾವ ಉದ್ಯಮಗಳನ್ನು ಮುಳುಗಿಸಲಿದೆ ಹಾಗು ಅನುತ್ಪಾದಕ ವೃದ್ಧರೇ ಇದಕ್ಕೆ ಕಾರಣವಾಗಲಿದ್ದಾರೆ ಎಂದು ನಿರಾಶಾವಾದಿಗಳು ಭಯ ಬಿತ್ತುತ್ತಿದ್ದಾರೆ. ಶುದ್ಧ ಸುಳ್ಳು. ವೃದ್ಧರ ಸಂಖ್ಯೆ ಹೆಚ್ಚುತ್ತಿರುವುದು ಪ್ರಗತಿಗೆ ಅಡ್ಡಿಯಲ್ಲ - ಅದು ಪ್ರಗತಿಯನ್ನು ಬಿಂಬಿಸುತ್ತದೆ.
ಹೌದು, ಭಾರತಕ್ಕೆ ವಯಸ್ಸಾಗುತ್ತಿದೆ, ವಿಶೇಷವಾಗಿ ದಕ್ಷಿಣ ಭಾರತಕ್ಕೆ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (OECD) ವರದಿಯ ಪ್ರಕಾರ, 2025 ರ ಹೊತ್ತಿಗೆ 65 ವರ್ಷ ದಾಟಿದ ಭಾರತೀಯರ ಪ್ರಮಾಣ ಶೇ. 7.4 ರಷ್ಟಿತ್ತು. ಇದು ಯುಎಸ್ ಮತ್ತು ಯುಕೆಗೆ ಹೋಲಿಸಿದರೆ ತೀರಾ ಕಡಿಮೆ. ಏಕೆಂದರೆ ಅಲ್ಲಿ ಈ ಪ್ರಮಾಣ ಶೇ. 20 ರಹತ್ತಿರದಲ್ಲಿದೆ. ಆದಾಗ್ಯೂ, ಇದು 1970 ರ ಮಟ್ಟಕ್ಕಿಂತ ದುಪ್ಪಟ್ಟಾಗಿದ್ದು, 2050 ರ ವೇಳೆಗೆ ಶೇ. 15 ಕ್ಕೆ ಏರುವ ನಿರೀಕ್ಷೆಯಿದೆ. 2000 ನೇ ಇಸವಿಯಲ್ಲಿ 8.9ರಷ್ಟಿದ್ದ ಭಾರತದ 'ವೃದ್ಧಾಪ್ಯದ ಅವಲಂಬನೆ ಅನುಪಾತ (OADR - ಅಂದರೆ ಪ್ರತಿ 100 'ದುಡಿಯುವ ವಯಸ್ಸಿನ' ಜನರಿಗೆ 65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಎಷ್ಟಿದ್ದಾರೆ ಎಂಬ ಲೆಕ್ಕಾಚಾರ) ಈಗ 12.3 ಕ್ಕೆ ಬೆಳೆದಿದೆ. OECD ಅಂದಾಜಿನ ಪ್ರಕಾರ ಇದು 2050 ರಲ್ಲಿ 24 ಕ್ಕೆ ಮತ್ತು 2070 ರ ಹೊತ್ತಿಗೆ 42 ಕ್ಕೆ ತಲುಪಲಿದೆ. ಮೇಲ್ನೋಟಕ್ಕೆ ಇದು ಆತಂಕಕಾರಿ!
ಭಾರತದ ಸಂತಾನೋತ್ಪತ್ತಿ ದರ, ಮೊದಲ ಬಾರಿಗೆ ಜನಸಂಖ್ಯಾ ಸ್ಥಿರತೆಯ ಮಟ್ಟಕ್ಕಿಂತ ಕೆಳಗಿಳಿದಿರುವುದು ಆತಂಕಕಾರಿ. ಸದ್ಯ ಈ ಪ್ರಮಾಣ ಪ್ರತಿ ಮಹಿಳೆಗೆ 1.9 ರಷ್ಟಿದ್ದು, ಜನಸಂಖ್ಯೆ ಕುಗ್ಗದಂತೆ ಕಾಯ್ದುಕೊಳ್ಳಲು ಬೇಕಾದ 2.1 ರ ಮಿತಿಗಿಂತ ಕಡಿಮೆಯಿದೆ. ಕರ್ನಾಟಕದ್ದು 1.5 ರಷ್ಟಿದ್ದು, ದೇಶದಲ್ಲೇ ಅತ್ಯಂತ ಕನಿಷ್ಠ ಮಟ್ಟದಲ್ಲಿದೆ. ಅದಕ್ಕಾಗಿಯೇ ಅಂದು ಕಾಡುತ್ತಿದ್ದ ಜನಸಂಖ್ಯಾ ಸ್ಫೋಟದ ಭಯ, ಇಂದು ಜನಸಂಖ್ಯೆ ಕುಸಿಯುವ ಆತಂಕವಾಗಿ ತಿರುವು ಪಡೆದಿದೆ.
ಏನು ಮಾಡುವುದು? ಖುಷಿಪಡಿ! ಅಭಿವೃದ್ಧಿ ಹೊಂದಿದಂತೆಲ್ಲಾ ಪ್ರತಿ ಪ್ರಮುಖ ಆರ್ಥಿಕತೆಗೂ ವಯಸ್ಸಾಗುತ್ತಾ ಹೋಗುತ್ತದೆ. ಇದರಿಂದ ಜೀವನಮಟ್ಟ ಸುಧಾರಿಸುತ್ತದೆ. ಉತ್ತಮ ಆರೋಗ್ಯ ಸೇವೆಗಳು ಆಯುಷ್ಯನ್ನು ವೃದ್ಧಿಸಿ, ಬದುಕನ್ನು ಕ್ರಿಯಾಶೀಲವಾಗಿಸುತ್ತವೆ. 1970ರಲ್ಲಿ, ಭಾರತೀಯ ಮಹಿಳೆಯರ ಸರಾಸರಿ ಜೀವಿತಾವಧಿ ಕೇವಲ 48 ವರ್ಷಗಳಾಗಿದ್ದರೆ, ಪುರುಷರ ಜೀವಿತಾವಧಿ 49 ವರ್ಷಗಳಾಗಿತ್ತು. 2000ನೇಇಸವಿವೇಳೆಗೆ ಇದು ಮಹಿಳೆಯರಲ್ಲಿ 64 ಹಾಗುಪುರುಷರಲ್ಲಿ 62 ವರ್ಷಕ್ಕೆ ಕ್ಕೆ ಮುಟ್ಟಿತ್ತು. ಈಗ? ಪ್ರಸ್ತುತ ಮಹಿಳೆಯದ್ದು 74 ಮತ್ತು ಪುರುಷರದ್ದು 71 ವರ್ಷದಷ್ಟಿದೆ. ಸಂತೋಷ!
ವಿಪರ್ಯಾಸವೆಂದರೆ, ಆಫ್ರಿಕಾದಂತಹ 'ಉತ್ತಮ' ಜನಸಂಖ್ಯಾ ಅನುಪಾತ ಹೊಂದಿರುವ ದೇಶಗಳು, ಬಡತನ, ಕಡಿಮೆ ಜೀವಿತಾವಧಿ ಹಾಗು ಹೆಚ್ಚಿನ ಶಿಶು ಮರಣ ಪ್ರಮಾಣದಿಂದ ನರಳುತ್ತಿವೆ. ಇನ್ನು ಅವರ ಆರ್ಥಿಕತೆ ಮತ್ತು ಬಂಡವಾಳ ಮಾರುಕಟ್ಟೆಗಳ ಪಾಡೇನು? ತೀರಾ ಶೋಚನೀಯ!
ಅಮೆರಿಕ ಮತ್ತು ಯುರೋಪ್‌ನ ಹೂಡಿಕೆದಾರರಲ್ಲೂ ವೃದ್ಧರ ಅಲೆ ಆತಂಕ ಮೂಡಿಸಿವೆ. ಕೆಲಸದ ಅವಧಿ, ಹೂಡಿಕೆ ಮತ್ತು ವಲಯವಾರು ಸಂಯೋಜನೆಯಂತಹ ನೈಜ ಆರ್ಥಿಕ ಅಂಶಗಳನ್ನು ಬದಿಗೊತ್ತಿ, ಇಟಲಿಯ ಮಂದಗತಿಯ ಬೆಳವಣಿಗೆಗೆ ಜನಸಂಖ್ಯೆಯನ್ನಷ್ಟೆ ಹೊಣೆ ಮಾಡುವುದು ತಪ್ಪು. ಅಷ್ಟೇ ಅಲ್ಲ, ಕಳೆದ ಎರಡು ದಶಕಗಳಲ್ಲಿ ದೊಡ್ಡ ಪ್ರಗತಿ ಕಂಡಿರುವ ಷೇರು ಮಾರುಕಟ್ಟೆಗಳಾದ ಸ್ವೀಡನ್, ಜರ್ಮನಿ, ಹಾಲೆಂಡ್‌ನಂತಹ ದೇಶಗಳು ತೀರಾ ಗರಿಷ್ಠ ಮಟ್ಟದ ವೃದ್ಧಾಪ್ಯದ ಅನುಪಾತ (OADR) ಹೊಂದಿದ್ದರೂ ಪಂಡಿತರು ಅದನ್ನು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ. ಇಂದು ಯೂರೋಪಿನ ಆರ್ಥಿಕ ಬೆಳವಣಿಗೆಯ ನೇತೃತ್ವ ವಹಿಸಿರುವ ಸ್ಪೇನ್, ವರ್ಷಗಳ ಹಿಂದೆ ಜನಸಂಖ್ಯಾ ಏರುಪೇರಿನಿಂದಾಗಿ ದೂಷಣೆಗೆ ಒಳಗಾಗಿತ್ತು ಎಂಬುದನ್ನು ಅವರು ಮರೆತಿದ್ದಾರೆ.
ಭಾರತದ ವೃದ್ಧರ ಸಂಖ್ಯೆ ಹೆಚ್ಚಳದ ಬಗ್ಗೆ ಆತಂಕಪಡುವವರು, 1950 ರಲ್ಲಿ OECD ಮಾಹಿತಿ ಆರಂಭವಾದಾಗ ಅಮೆರಿಕ 14.1ರಷ್ಟು ವೃದ್ಧಾಪ್ಯದ ಅನುಪಾತವನ್ನು ಹೊಂದಿದ್ದು, ಅದು ಇಂದಿನ ಭಾರತದ ಅನುಪಾತಕ್ಕಿಂತ ಹೆಚ್ಚಾಗಿತ್ತು ಎಂಬುದನ್ನು ನಿರ್ಲಕ್ಷಿಸುತ್ತಿದ್ದಾರೆ! ಸ್ಥಗಿತಗೊಳ್ಳುವ ಬದಲು, ಆ ನಂತರದ 76 ವರ್ಷಗಳಲ್ಲಿ ಅಮೆರಿಕ ಬೃಹತ್ ಬೆಳವಣಿಗೆ, ಹೊಸ ಆವಿಷ್ಕಾರ ಮತ್ತು ಆರ್ಥಿಕ ಸಬಲತೆಯನ್ನು ಕಂಡಿತು.ಹಾಗಾದರೆ ಸಮಸ್ಯೆ ಇರುವುದಾದರೂ ಎಲ್ಲಿ?
ಈ ಜಾಗತಿಕ ಮಟ್ಟದ ನಿರಾಶಾವಾದಕ್ಕೆ ಭಾಗಶಃ ಜನಸಂಖ್ಯಾ ಕುರಿತ ಜನರ ಪೂರ್ವಾಗ್ರಹವೇ ಕಾರಣವಾಗಿದೆ. ವೃದ್ಧರೆಲ್ಲರನ್ನೂ ಸರ್ಕಾರದ ಪಿಂಚಣಿಯ್ನು ಜೇಬಿಗೆ ಇಳಿಸಿಕೊಳ್ಳುವ ಜಿಪುಣರೆಂಬಂತೆ ನಿರಾಶಾವಾದಿಗಳು ನೋಡುತ್ತಾರೆ. ಖಂಡಿತ ತಪ್ಪು! ಹಿರಿಯ ನಾಗರಿಕರು ಇಂದಿಗೂ ಖರ್ಚು ಮಾಡುತ್ತಲೇ ಇದ್ದಾರೆ. ಇಲ್ಲವೇ ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಹಣ ಕೊಡುತ್ತಾರೆ; ಆ ಮೂಲಕ ಮಾರುಕಟ್ಟೆಗೆ ಹಣ ಹರಿದುಬಂದೇ ಬರುತ್ತದೆ! ಅವರು ಹೂಡಿಕೆಯನ್ನೂ ಮಾಡುವ ಮೂಲಕ ಬಂಡವಾಳಶಾಹಿಯ ಪ್ರಗತಿಯ ಮಂತ್ರಕ್ಕೆ ಆಸರೆಯಾಗುತ್ತಾರೆ. ಅವರನ್ನು ಕೇವಲ 'ಅವಲಂಬಿತ' ಹೊರೆ ಎನ್ನಲು ಸಾಧ್ಯವೇ? ಇಲ್ಲ! ಅನೇಕ ಹಿರಿಯರು ತಮ್ಮ 70-80ನೇ ವಯಸ್ಸಿನಲ್ಲೂ ದುಡಿಯುತ್ತಿದ್ದಾರೆ. ನನಗೆ ಈಗ 75 ವರ್ಷ - ವಿಶ್ರಾಂತಿ ಆಲೋಚನೆಯೇ ಇಲ್ಲ. ಇಂದಿನ ಭಾರತದಂತಹ ತಾಂತ್ರಿಕ ಮತ್ತು ಸೇವಾ ವಲಯದ ಆರ್ಥಿಕತೆಯಲ್ಲಿ, ಹಿರಿಯರ ಅನುಭವವು ಅವರ ಉತ್ಪಾದಕತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ನಿರಾಶಾವಾದಿಗಳ ಅಂದಾಜು ಇತ್ತೀಚಿನ ಸಣ್ಣಪುಟ್ಟ ಟ್ರೆಂಡ್‌ಗಳ ಮೇಲ್ನೋಟದ ವಿಸ್ತರಣೆಯಷ್ಟೇ ಹೊರತು ಬೇರೇನಲ್ಲ. ಭಾರತದ ಜನನ ದರವು ಕುಸಿಯುತ್ತಲೇ ಇರುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಜನನ ದರ ಇಳಿಕೆಯ ಆತಂಕದ ನಡುವೆಯೂಪ್ರಸಕ್ತ ಶತಮಾನದಲ್ಲಿ ಯೂರೋಪ್ ಹಲವು ಬಾರಿ ಆರ್ಥಿಕ ಪ್ರಗತಿಯ ಉತ್ತುಂಗಕ್ಕೇರಿದೆ. ಕರ್ನಾಟಕದ ಐವಿಎಫ್ (IVF) ರಿಯಾಯಿತಿಗಳು ಅಥವಾ ದಕ್ಷಿಣದ ರಾಜ್ಯಗಳ ಹೆರಿಗೆ ಪ್ರೋತ್ಸಾಹ ನಗದು ಯೋಜನೆಗಳು ಪ್ರಾದೇಶಿಕ ಜನನ ದರವನ್ನು ಹೆಚ್ಚಿಸಲು ನೆರವಾಗಬಹುದು.
ಇಲ್ಲದಿದ್ದರೆ ಏನಾಗುತ್ತೆ? ಹೊಸ ಆವಿಷ್ಕಾರಗಳು ಎಂದಿನಂತೆ ಮಾರುಕಟ್ಟೆಯ ದಕ್ಷತೆಗೆ ಮತ್ತಷ್ಟು ವೇಗ ನೀಡಲಿವೆ. ಮೈಕ್ರೋಚಿಪ್ ತಂದ ಕ್ರಾಂತಿಯನ್ನೊಮ್ಮೆ ಯೋಚಿಸಿ ನೋಡಿ! ಇಲ್ಲ ಇಂಟರ್ನೆಟ್ ಬೀರಿದ ಪ್ರಭಾವವನ್ನಾದರೂ ತೆಗೆದುಕೊಳ್ಳಿ! ಅಲ್ಲದೆ, ಈಗ AI? AI ಉದ್ಯೋಗಗಳನ್ನು ಕಬಳಿಸುತ್ತದೆ ಎಂಬ ಭೀತಿ ವ್ಯಾಪಕವಾಗಿದೆ. ಆದರೆ ಹೆಚ್ಚುತ್ತಿರುವ ವಯೋವೃದ್ಧರು ಮತ್ತು ಕರ್ನಾಟಕದ ಆರೋಗ್ಯ ವಲಯದ ಸಿಬ್ಬಂದಿ ಕೊರತೆಯ ನಡುವೆಯೂ, AI ಶಾಪವಾಗದೆ ಆಶೀರ್ವಾದವಾಗಿ ಪರಿಣಮಿಸಲಿದೆ. ಕಳೆದ ಜೂನ್‌ನಲ್ಲಿ, ನಾನು ಹೇಳಿದಂತೆ, AI ಹೆಲ್ತ್‌ಕೇರ್ ಸಂಸ್ಥೆಗಳು, ಉದ್ಯೋಗ ಮತ್ತು ಹಿರಿಯರ ಆರೈಕೆಯ ಜವಾಬ್ದಾರಿಯನ್ನು ಸರಿದೂಗಿಸಲು ದೊಡ್ಡ ಆಸರೆಯಾಗುತ್ತಿವೆ. ಜನಸಂಖ್ಯೆಯೇ ಅಂತಿಮ ಹಣೆಬರಹವಲ್ಲ. ಅನ್ವೇಷಣೆಗಳೇ ನಿಜವಾದ ಭವಿಷ್ಯ.
ಜನಸಂಖ್ಯಾ ಕುಸಿತದ ಭೀತಿ ಹುಟ್ಟಿಸುವ ಕಥೆಗಳಿಗೆ ಹೆದರುವುದು ಬೇಡ - ಅವುಗಳನ್ನು ಸ್ವಾಗತಿಸೋಣ ಭಾರತೀಯರ ಜೀವಿತಾವಧಿ ಹೆಚ್ಚುತ್ತಿರುವುದೇ ದೇಶದ ಹಳೆಯ ಹಾಗೂ ಇಂದಿನ ಆರ್ಥಿಕ ಪ್ರಗತಿಗೆ ಸಾಕ್ಷಿ. ಇದರಿಂದ ನಿಮಗೇನೂ ಅಪಾಯವಿಲ್ಲ.

ಲೇಖಕರ ಬಗ್ಗೆ

ಕೆನ್ ಫಿಶರ್ ಅವರು 1979 ರಲ್ಲಿ ಫಿಶರ್ ಇನ್ವೆಸ್ಟ್‌ಮೆಂಟ್ಸ್ ಅನ್ನು ಸ್ಥಾಪಿಸಿದರು, ಇದು ಜಾಗತಿಕವಾಗಿ 386 ಬಿಲಿಯನ್ ಯುಎಸ್‌ಡಿ ಗಿಂತ ಹೆಚ್ಚಿನ ಹಣವನ್ನು ನಿರ್ವಹಿಸುವ ಹೂಡಿಕೆ ಸಲಹಾ ಸಂಸ್ಥೆಯಾಗಿದೆ. ಅವರು 37 ವರ್ಷಗಳ ಕಾಲ ಫಿಶರ್ ಇನ್ವೆಸ್ಟ್‌ಮೆಂಟ್ಸ್‌ನ ಸಿಇಒ ಆಗಿದ್ದರು ಮತ್ತು ಪ್ರಸ್ತುತ ಕಾರ್ಯಕಾರಿ ಅಧ್ಯಕ್ಷರು ಮತ್ತು ಸಹ-ಮುಖ್ಯ ಹೂಡಿಕೆ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು 4 ನ್ಯೂಯಾರ್ಕ್ ಟೈಮ್ಸ್ ಬೆಸ್ಟ್ ಸೆಲ್ಲರ್‌ಗಳು ಸೇರಿದಂತೆ 11 ಪುಸ್ತಕಗಳ ಲೇಖಕರಾಗಿದ್ದಾರೆ ಮತ್ತು ವಿಶ್ವದ 28 ದೇಶಗಳ ಪ್ರಮುಖ ಮಾಧ್ಯಮಗಳಲ್ಲಿ ಮಾಸಿಕ ಅಂಕಣಗಳನ್ನು ಆಯಾ ದೇಶದ ಸ್ಥಳೀಯ ಭಾಷೆಗಳಲ್ಲಿ ಬರೆಯುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net