ಪಶ್ಚಿಮ ಬಂಗಾಳದಿಂದ ಮಾತ್ರ ಯಾಕೆ ಎಸ್​ಐಆರ್​ಗೆ ವಿರೋಧ?: ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಅಮಿತ್ ಶಾ ಕಿಡಿ | Amit Shah

ಅಮಿತ್ ಶಾ ಮತ್ತು ಸಿಎಂ ಮಮತಾ ಬ್ಯಾನರ್ಜಿ
ಅಮಿತ್ ಶಾ ಮತ್ತು ಸಿಎಂ ಮಮತಾ ಬ್ಯಾನರ್ಜಿ
Published on
ನವದೆಹಲಿ: ಚುನಾವಣೆ ಆಯೋಗದ ಎಸ್​ಐಆರ್ ಪ್ರಕ್ರಿಯೆ ವಿರುದ್ಧ ದೊಡ್ಡಮಟ್ಟದಲ್ಲಿ ವಿರೋಧ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಕೇಂದ್ರ ಗೃಹಸಚಿವ ಅಮಿತ್ ಶಾ(Amit Shah) ವಾಗ್ದಾಳಿ ನಡೆಸಿದ್ದು, ಪಶ್ಚಿಮ ಬಂಗಾಳಕ್ಕೆ ಮಾತ್ರ ಎಸ್​ಐಆರ್​ ಸಮಸ್ಯೆಯಾಗಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಖಾಸಗಿ ಸುದ್ದಿ ಚಾನಲ್​ವೊಂದರಲ್ಲಿ ನಡೆದ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ವಿರೋಧ ಪಕ್ಷದ ಆಳ್ವಿಕೆಯ ಮೂರು ರಾಜ್ಯಗಳಾದ ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳದಲ್ಲಿ ಎಸ್‌ಐಆರ್ ನಡೆಯುತ್ತಿದೆ. ಉಳಿದ ರಾಜ್ಯಗಳಲ್ಲಿ ಇಲ್ಲದ ಸಮಸ್ಯೆ ಬಂಗಾಳದಲ್ಲೇಕೆ? ಎಂದು ಕಿಡಿಕಾರಿದ್ದಾರೆ.
ಕೇವಲ ಒಂದು ರಾಜ್ಯದಿಂದ ದೂರು ಬರುತ್ತಿದೆ ಅಂದ್ರೆ, ಸಮಸ್ಯೆ ಎಸ್‌ಐಆರ್ ಪ್ರಕ್ರಿಯೆದ್ದಲ್ಲ. ಬದಲಾಗಿ ರಾಜ್ಯವನ್ನು ಆಳುತ್ತಿರುವವರದ್ದು ಎಂಬುದು ತಿಳಿಯುತ್ತದೆ. ಅಧಿಕಾರಿಗಳು ಮನೆ ಹತ್ತಿರ ಬಂದ್ರೆ ಮಹಿಳೆಯರು ಅವರ ವಿರುದ್ಧ ಹಿಂಸಾಚಾರಕ್ಕೆ ಇಳಿಯುವಂತೆ ಸಿಎಂ ಪ್ರಚೋದನೆ ನೀಡುತ್ತಿದ್ದಾರೆ. ಜನ ಚುನಾವಣೆಯಲ್ಲಿ ಸೋಲಿಸಲು ನಿರ್ಧರಿಸಿರುವುದು ಅವರಿಗೆ ತಿಳಿದಿದೆ. ಹೀಗಾಗಿ ಸೋಲಿನ ನಂತರ ಮತಗಳು ಕಡಿತಗೊಂಡಿವೆ ಎಂದು ನೆಪವಾಗಿ ಹೇಳಲು ಕಾರಣಗಳನ್ನು ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಜನಸಂಖ್ಯಾ ಬದಲಾವಣೆಗೆ ಕಾರಣವಾಗುವ ಮತದಾರರಾಗಿ ತಪ್ಪಾಗಿ ನೋಂದಾಯಿಸಿಕೊಂಡಿರುವ ನುಸುಳುಕೋರರ ಹೆಸರುಗಳನ್ನು ತೆಗೆದುಹಾಕುವುದು SIR ನ ಉದ್ದೇಶಗಳಲ್ಲಿ ಒಂದಾಗಿದೆ. ಪಶ್ಚಿಮ ಬಂಗಾಳ ಸರ್ಕಾರವು ಒಳನುಸುಳುವಿಕೆಗೆ ಬಹಿರಂಗವಾಗಿ ಅನುಕೂಲ ಮಾಡಿಕೊಟ್ಟಿದೆ. ಎಸ್​ಐಆರ್ ಪ್ರಕ್ರಿಯೆ ವೇಳೆ ಅತಿ ಹೆಚ್ಚು ಒಳನುಸುಳುಕೋರರ ಹೆಸರನ್ನು ತೆಗೆದು ಹಾಕಲಾಗುತ್ತದೆ ಎಂಬುದೇ ಈ ವಿರೋಧಕ್ಕೆ ಕಾರಣ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ನಾವು ಪ್ರತಿಯೊಬ್ಬ ನುಸುಳುಕೋರರನ್ನು ಮತಪಟ್ಟಿಯಿಂದ ಮಾತ್ರವಲ್ಲ, ದೇಶದಿಂದಲೇ ಹೊರ ಹಾಕುತ್ತೇವೆ ಎಂದಿದ್ದಾರೆ.
ಇನ್ನೂ ಐ-ಪ್ಯಾಕ್ ಕಚೇರಿ ಮೇಲಿನ ಇಡಿ ದಾಳಿ ಮತ್ತು ಸಿಎಂ ಮಮತಾ ಬ್ಯಾನರ್ಜಿ ಮಧ್ಯಪ್ರವೇಶದ ಬಗ್ಗೆ ಪ್ರತಿಕ್ರಿಯಿಸಿರುವ ಅಮಿತ್ ಶಾ, ಐ-ಪ್ಯಾಕ್ ವಿರುದ್ಧದ ಪ್ರಕರಣ ಹಳೆಯದಾಗಿದೆ. ತನಿಖಾ ಏಜೆನ್ಸಿಗಳ ಮುಂದೆ ಅವರು ಹಾಜರಾಗಿದ್ದರೆ, ಶೋಧ ಪ್ರಕ್ರಿಯೆ ನಡೆಯುತ್ತಿರಲಿಲ್ಲ. ಸಿಎಂ ಪಕ್ಷದ ಪದಾಧಿಕಾರಿಗಳ ವಿರುದ್ಧದ ಕ್ರಮವನ್ನು ಪ್ರತಿಭಟಿಸಿದ್ರೆ ಅರ್ಥವಿರುತ್ತಿತ್ತು. ದಾಳಿಯ ಮಧ್ಯದಲ್ಲಿ ಮಮತಾ ದೀದಿ ತನ್ನ ಎಲ್ಲಾ ಘನತೆಯನ್ನು ತೊರೆದು ಅಲ್ಲಿಗೆ ಹೋಗಲು ಕಾರಣವಾದ ಐ-ಪಿಎಸಿ ಕಂಪ್ಯೂಟರ್‌ನಲ್ಲಿ ಯಾವ ರಹಸ್ಯ ಅಡಗಿತ್ತು? ಎಂದು ಪ್ರಶ್ನಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net