ಪ್ರಧಾನ್​ ಅಷ್ಟೆ ಅಲ್ಲ, ಪ್ರಧಾನಿ ಕೂಡ!...ದೆಹಲಿ ಪೊಲೀಸರ ಲಾಠಿಚಾರ್ಜ್‌ ವಿರುದ್ಧ ರಾಹುಲ್ ಕಿಡಿ; ಮೋದಿ-ಷಾ ರಾಜೀನಾಮೆಗೆ ಒತ್ತಾಯ | Rahul Gandhi

Rahul Gandhi | ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
Rahul Gandhi | ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
Published on
ನವದೆಹಲಿ: ಸೋಮವಾರ ದೆಹಲಿಯಲ್ಲಿ ಸಿಜೆಪಿ ಪ್ರತಿಭಟನಾಕಾರರ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi), ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳ ಕ್ಷಮೆ ಕೇಳಬೇಕು ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಮಂಗಳವಾರ ಆಗ್ರಹಿಸಿದ್ದಾರೆ.
ದೇಶದ ಯುವಜನರು ಪ್ರಸ್ತುತ ಇರುವ ಶಿಕ್ಷಣ ಹಾಗೂ ಪರೀಕ್ಷಾ ವ್ಯವಸ್ಥೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದಿರುವ ರಾಹುಲ್ ಗಾಂಧಿ, ಇಡೀ ದೇಶದ ಶಿಕ್ಷಣ ಮತ್ತು ಪರೀಕ್ಷಾ ವ್ಯವಸ್ಥೆಗೆ ಗೆದ್ದಲು ಹಿಡಿದಿದೆ ಎಂಬುದು ಎಲ್ಲರಿಗೂ ತಿಳಿದಿದೆ. ನಿನ್ನೆ ನಡೆದ ಘಟನೆಗೆ ಮೋದಿಜಿ ಕನಿಷ್ಠ ಕ್ಷಮೆಯನ್ನೂ ಕೇಳಿಲ್ಲ. ಪ್ರಧಾನಮಂತ್ರಿಯವರು ಏಕೆ ಮೌನವಾಗಿದ್ದಾರೆ..? ಅವರು ತಕ್ಷಣವೇ ವಿದ್ಯಾರ್ಥಿಗಳ ಕ್ಷಮೆ ಕೇಳಬೇಕು ಹಾಗೂ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುವ ಈ ನಾಟಕವನ್ನು ನಿಲ್ಲಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ಭಾರತದ ಯುವಜನರನ್ನು ನಡೆಸಿಕೊಳ್ಳುವ ರೀತಿ ಇದಲ್ಲ ಎಂದು ಕಿಡಿಕಾರಿದ ರಾಹುಲ್​, ಈ ದೇಶದ ಯುವಕರಿಗೆ ಉದ್ಯೋಗ ಅಥವಾ ಉದ್ಯಮದ ಅವಕಾಶಗಳೇ ಇಲ್ಲವಾಗಿದೆ. ಅವರಿಗೆ ಎಲ್ಲ ಬಾಗಿಲುಗಳು ಮುಚ್ಚಲ್ಪಟ್ಟಿವೆ. ಸ್ಪರ್ಧಾತ್ಮಕ ಪರೀಕ್ಷೆಗಳೆಂಬ ಒಂದೇ ಒಂದು ಬಾಗಿಲು ತೆರೆದಿತ್ತು, ಅದನ್ನು ಸಹ ನಾಶಪಡಿಸಲಾಗಿದೆ. ಇಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಕೇವಲ ಶಿಕ್ಷಣ ವ್ಯವಸ್ಥೆಯ ಬಗ್ಗೆ ಮಾತ್ರವಲ್ಲ, ತಮ್ಮ ಭವಿಷ್ಯದ ಕುರಿತು ದೂರುತ್ತಿದ್ದಾರೆ ಎಂದರು.

ವಿದ್ಯಾರ್ಥಿಗಳ ಆಕ್ರೋಶ ನ್ಯಾಯಯುತವಾಗಿದೆ!...

ಮುಂದುವರಿದು ಮಾತನಾಡಿದ ಲೋಕಸಭೆಯ ವಿಪಕ್ಷ ನಾಯಕ, ಅಂಬಾನಿ ಮತ್ತು ಅದಾನಿ ಹಸ್ತಕ್ಷೇಪ ಹಾಗೂ ಶಿಕ್ಷಣ ವ್ಯವಸ್ಥೆಯನ್ನು ಆರ್‌ಎಸ್ಎಸ್ ಸಂಪೂರ್ಣವಾಗಿ ತನ್ನ ವಶಕ್ಕೆ ತೆಗೆದುಕೊಂಡಿರುವುದೇ ಇದಕ್ಕೆ ಕಾರಣ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದು ಭಾರತೀಯ ಯುವಕರ ಭವಿಷ್ಯದ ಪ್ರಶ್ನೆಯಾಗಿದೆ. ಒಂದೆಡೆ ಅಂಬಾನಿ ಮನೆಯ ಮದುವೆಯಲ್ಲಿ 1,000 ಕೋಟಿ ರೂಪಾಯಿ ಪೋಲಾಗುತ್ತಿರುವುದನ್ನು ಯುವಕರು ನೋಡುತ್ತಿದ್ದಾರೆ, ಇನ್ನೊಂದೆಡೆ ಸ್ವಂತ ಉದ್ಯಮ ಆರಂಭಿಸಲು ಅವರ ಬಳಿ ಹಣವಿಲ್ಲ. ಇದು ಕೇವಲ ಶಿಕ್ಷಣಕ್ಕಷ್ಟೇ ಸೀಮಿತವಾದ ವಿಚಾರವಲ್ಲ. ಭಾರತದಲ್ಲಿ ತಮಗೆ ಯಾವುದೇ ಭವಿಷ್ಯವಿಲ್ಲ ಎಂದು ದೇಶದ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ, ಅವರ ಈ ಆಕ್ರೋಶ ನ್ಯಾಯಯುತವಾಗಿದೆ.
ಈ ಘಟನೆಯ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಗೃಹ ಸಚಿವ ಅಮಿತ್ ಷಾ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ರಾಹುಲ್ ಗಾಂಧಿ ಪಟ್ಟು ಹಿಡಿದಿದ್ದಾರೆ. ಸೋಮವಾರ ಸಿಜೆಪಿ ಪ್ರತಿಭಟನಾ ಮೆರವಣಿಗೆಯ ವೇಳೆ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ ಗಾಯಗೊಂಡಿದ್ದವರನ್ನು ಭೇಟಿಯಾಗಲು ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಸಂಸದರಾದ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ದೆಹಲಿಯ ಆರ್‌ಎಂಎಲ್ ಆಸ್ಪತ್ರೆಗೆ ಭೇಟಿ ನೀಡಿದರು.

ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿದರೆ ಸುಮ್ಮನಿರಲ್ಲ ಎಂದ ನಮೋ

ಮತ್ತೊಂದೆಡೆ, ಎನ್‌ಡಿಎ ಸಂಸದೀಯ ಪಕ್ಷದ ಮಂಗಲ್ ಮಿಲನ್ ಸಭೆಯ ನಂತರ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ನೀಟ್ ಪರೀಕ್ಷಾ ಸೋರಿಕೆಗೆ ಕಾರಣರಾದವರಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವುದಾಗಿ ತಿಳಿಸಿದ್ದಾರೆ. ಪರೀಕ್ಷಾ ಪತ್ರಿಕೆ ಸೋರಿಕೆ ತಡೆಯುವುದು ರಾಷ್ಟ್ರೀಯ ಹೊಣೆಗಾರಿಕೆಯಾಗಿದ್ದು, ಭವಿಷ್ಯದಲ್ಲಿ ಅಕ್ರಮಗಳು ನಡೆಯದಂತೆ ಸಂಪೂರ್ಣ ಸುರಕ್ಷಿತ ಪರೀಕ್ಷಾ ವ್ಯವಸ್ಥೆಯನ್ನು ರೂಪಿಸಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದು ಪ್ರಧಾನಿ ಕರೆ ನೀಡಿದ್ದಾರೆ ಎಂದು ರಿಜಿಜು ಮಾಹಿತಿ ನೀಡಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net