ಲೆಟ್ಸ್ ಡು ಇಟ್ ಎಂದಿದ್ದೇಕೆ? ಇರಾನ್ ಮೇಲಿನ ದಾಳಿಗೆ ಸದ್ದಿಲ್ಲದೆ ಮುನ್ನುಡಿ ಬರೆದಿದ್ದ ರಕ್ಷಣಾ ಕಾರ್ಯದರ್ಶಿ! Pete Hegseth

ಲೆಟ್ಸ್ ಡು ಇಟ್ ಎಂದಿದ್ದೇಕೆ? ಇರಾನ್ ಮೇಲಿನ ದಾಳಿಗೆ ಸದ್ದಿಲ್ಲದೆ ಮುನ್ನುಡಿ ಬರೆದಿದ್ದ ರಕ್ಷಣಾ ಕಾರ್ಯದರ್ಶಿ!
ಲೆಟ್ಸ್ ಡು ಇಟ್ ಎಂದಿದ್ದೇಕೆ? ಇರಾನ್ ಮೇಲಿನ ದಾಳಿಗೆ ಸದ್ದಿಲ್ಲದೆ ಮುನ್ನುಡಿ ಬರೆದಿದ್ದ ರಕ್ಷಣಾ ಕಾರ್ಯದರ್ಶಿ!
Published on
ವಾಷಿಂಗ್ಟನ್: ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಭೀಕರ ಯುದ್ಧವು 25ನೇ ದಿನಕ್ಕೆ ಕಾಲಿಟ್ಟಿದೆ. ಈ ಯುದ್ಧದ ಅಖಾಡದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ಅತ್ಯಂತ ನಿಕಟವರ್ತಿ ಮತ್ತು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ (Pete Hegseth) ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ. 
ಈ ಬಗ್ಗೆ ಸುದ್ದಿ ಸಂಸ್ಥೆವೊಂದರ ಜತೆ ಮಾತನಾಡಿದ ಹೆಗ್ಸೆತ್, ಟ್ರಂಪ್ ಅವರ ಅಟ್ಯಾಕ್ ಡಾಗ್ ಎಂದು ಕರೆದಿದ್ದರೆ, ಇತ್ತ ಟ್ರಂಪ್ ಅವರು ಇರಾನ್ ಮೇಲೆ ದಾಳಿ ಮಾಡೋಣ ಎಂದು ಮೊದಲು ಹೇಳಿದ್ದೇ ಪೀಟ್ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.

ದಯೆ ಇಲ್ಲದ ಯುದ್ಧ: ಹೆಗ್ಸೆತ್ ಅವರ ಉಗ್ರ ರೂಪ

ಮುಂದುವರೆದು ಮಾತನಾಡಿರುವ ಹೆಗ್ಸೆತ್, ಯುದ್ಧದ ಆರಂಭದಿಂದಲೂ ಅತ್ಯಂತ ಆಕ್ರಮಣಕಾರಿ ಧೋರಣೆ ತಳೆದಿದ್ದಾರೆ. ಮಾರ್ಚ್ 4 ರಂದು ಯುದ್ಧದ ಉದ್ದೇಶದ ಬಗ್ಗೆ ಪ್ರಶ್ನಿಸಿದ ಟೀಕಾಕಾರರ ವಿರುದ್ಧ ಗುಡುಗಿದ್ದ ಹೆಗ್ಸೆತ್​, ಅಮೆರಿಕ ಗೆಲ್ಲುತ್ತಿದೆ, ನಿರ್ಣಾಯಕವಾಗಿ, ವಿನಾಶಕಾರಿಯಾಗಿ ಮತ್ತು ಯಾವುದೇ ಕರುಣೆಯಿಲ್ಲದೆ ಎಂದು ಸಾರಿದ್ದರು. ಅಮೆರಿಕವನ್ನು ಮತ್ತೊಂದು ಅಂತ್ಯವಿಲ್ಲದ ಯುದ್ಧಕ್ಕೆ ಎಳೆಯಬಾರದು ಎಂದು ಪ್ರತಿಪಾದಿಸುವ ಹೆಗ್ಸೆತ್, ಇರಾನ್ ಪರಮಾಣು ಅಸ್ತ್ರ ಹೊಂದುವುದನ್ನು ತಡೆಯಲು ಯುದ್ಧವೊಂದೇ ದಾರಿ ಎಂದು ನಂಬಿದ್ದಾರೆ.

ವಿವಾದಗಳ ಸುಳಿಯಲ್ಲಿ ಪೀಟ್ ಹೆಗ್ಸೆತ್: ಸರಣಿ ಹಗರಣಗಳ ನೆರಳು

ಹೆಗ್ಸೆತ್ ಅವರ ರಕ್ಷಣಾ ಕಾರ್ಯದರ್ಶಿ ಪದವಿಯ ಹಾದಿ ಸುಗಮವಾಗಿರಲಿಲ್ಲ. ಜನವರಿ 2025 ರಲ್ಲಿ ನಡೆದ ಸೆನೆಟ್ ಅನುಮೋದನೆಯಲ್ಲಿ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಟೈ-ಬ್ರೇಕರ್ ಮತದಿಂದಾಗಿ ಅವರು ಕೂದಲೆಳೆ ಅಂತರದಲ್ಲಿ ಜಯಗಳಿಸಿದ್ದರು. ಅವರ ವಿರುದ್ಧದ ಪ್ರಮುಖ ವಿವಾದಗಳು ಹೀಗಿವೆ.
ವೈಯಕ್ತಿಕ ಜೀವನದ ಕಲೆ: ಅವರ ತಾಯಿ ಪೆನೆಲೋಪ್ ಹೆಗ್ಸೆತ್ ಅವರು ಈ ಹಿಂದೆ ಬರೆದಿದ್ದ ಇಮೇಲ್‌ನಲ್ಲಿ ಪೀಟ್ ವಿರುದ್ಧ ದೈಹಿಕ ದೌರ್ಜನ್ಯ ಮತ್ತು ಮದ್ಯಪಾನದ ಗಂಭೀರ ಆರೋಪಗಳನ್ನು ಮಾಡಿದ್ದರು.
ಟ್ಯಾಟೂ ವಿವಾದ: ಅವರ ಬಲಗೈ ಮೇಲಿರುವ ದೇವರ ಇಚ್ಛೆಯಂತೆ ಎಂಬ ಲ್ಯಾಟಿನ್ ಟ್ಯಾಟೂ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಇದು ಮಧ್ಯಕಾಲೀನ ಕ್ರೈಸ್ತ ಧರ್ಮಯುದ್ಧಗಳ ಘೋಷಣೆಯಾಗಿದ್ದು, ಬಲಪಂಥೀಯ ಉಗ್ರಗಾಮಿ ಗುಂಪುಗಳೊಂದಿಗೆ ನಂಟು ಹೊಂದಿದೆ ಎಂದು ವರದಿಯಾಗಿತ್ತು.
ಮಹಿಳಾ ವಿರೋಧಿ ಹೇಳಿಕೆ: ಯುದ್ಧದ ಭೂಮಿಕೆಯಲ್ಲಿ ಮಹಿಳೆಯರು ಮಿಲಿಟರಿಯ ದಕ್ಷತೆಯನ್ನು ಕಡಿಮೆ ಮಾಡುತ್ತಾರೆ ಎಂಬ ಅವರ ಹೇಳಿಕೆ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಪ್ರಸ್ತುತ ಪೆಂಟಗನ್ ಮಹಿಳೆಯರ ಪಾತ್ರದ ಬಗ್ಗೆ ಆರು ತಿಂಗಳ ವಿಮರ್ಶೆಯನ್ನು ನಡೆಸುತ್ತಿದೆ.
ಸಿಗ್ನಲ್ ಚಾಟ್ ಹಗರಣ: ಯೆಮನ್ ಮೇಲಿನ ದಾಳಿಯ ಸಮಯವನ್ನು ದಾಳಿಗೂ ಮುನ್ನವೇ ಸಿಗ್ನಲ್ ಗ್ರೂಪ್‌ನಲ್ಲಿ ಹಂಚಿಕೊಂಡಿದ್ದ ಹಗರಣವು ಅಮೆರಿಕದ ಸೈನಿಕರ ಪ್ರಾಣವನ್ನು ಅಪಾಯಕ್ಕೆ ತಂದಿತ್ತು ಎಂದು ಪೆಂಟಗನ್ ವಾಚ್‌ಡಾಗ್ ವರದಿ ಮಾಡಿದೆ.

ಯುದ್ಧದ ವ್ಯಾಪಾರ ಮತ್ತು ಮ್ಯಾಗಾ ರಾಜಕೀಯ

ಹಾರ್ಮುಜ್ ಜಲಸಂಧಿಯ ದಿಗ್ಬಂಧನದಿಂದಾಗಿ ಅಮೆರಿಕದಲ್ಲಿ ಇಂಧನ ಬೆಲೆಗಳು ಗಗನಕ್ಕೇರಿವೆ. ಇದರಿಂದಾಗಿ ಯುದ್ಧಕ್ಕೆ ಶತಕೋಟಿ ಡಾಲರ್ ವೆಚ್ಚ ಮಾಡುವುದನ್ನು ಸಮರ್ಥಿಸಿಕೊಳ್ಳುವುದು ಟ್ರಂಪ್‌ಗೆ ಕಷ್ಟವಾಗುತ್ತಿದೆ. ಎಂಟು ತಿಂಗಳಲ್ಲಿ ಮಧ್ಯಂತರ ಚುನಾವಣೆಗಳು ಬರಲಿರುವ ಹಿನ್ನೆಲೆಯಲ್ಲಿ, ಹೆಗ್ಸೆತ್ ಅವರ ಆಕರ್ಷಕ ಭಾಷಣ ಶೈಲಿಯನ್ನು ಬಳಸಿ ಜನಸಾಮಾನ್ಯರನ್ನು ಯುದ್ಧದ ಪರವಾಗಿ ಸೆಳೆಯಲು ಟ್ರಂಪ್ ಪ್ರಯತ್ನಿಸುತ್ತಿದ್ದಾರೆ.

ಹಿನ್ನೆಲೆ ಮತ್ತು ವೃತ್ತಿಜೀವನ

1980 ರಲ್ಲಿ ಮಿನ್ನೇಸೋಟದಲ್ಲಿ ಜನಿಸಿದ ಹೆಗ್ಸೆತ್, ಪ್ರಿನ್ಸ್‌ಟನ್ ಪದವೀಧರರು. ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿ ಎರಡು ಬಾರಿ ಬ್ರಾಂಜ್ ಸ್ಟಾರ್ ಪದಕ ಪಡೆದಿದ್ದಾರೆ. 2014 ರಲ್ಲಿ ಫಾಕ್ಸ್ ನ್ಯೂಸ್ ಸೇರಿದ ಅವರು, ಟ್ರಂಪ್ ಅವರ ಪರಮ ಆಪ್ತರಾಗಿ ಬೆಳೆದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net