ಆಸ್ಕರ್​​ ಓಟದಲ್ಲಿ “ಮಹಾವತಾರ ನರಸಿಂಹ”! ಅನಿಮೇಟೆಡ್​ ವಿಭಾಗದ ಪಟ್ಟಿಯಲ್ಲಿ ಯಾವೆಲ್ಲ ಚಿತ್ರಗಳಿವೆ? ಇಲ್ಲಿದೆ ವಿವರ

ಮಹಾವತಾರ ನರಸಿಂಹ
ಮಹಾವತಾರ ನರಸಿಂಹ
Published on

ಪ್ರಮುಖ ಮುಖ್ಯಾಂಶಗಳು

  • ಆಸ್ಕರ್​ ರೇಸ್​ನಲ್ಲಿ ಮಹಾವತಾರ ನರಸಿಂಹ
  • 30 ಕೋಟಿ ರೂ. ಬಂಡವಾಳ, 300 ಕೋಟಿ ರೂ. ಆದಾಯ
  • ಹಾಲಿವುಡ್​ ಚಿತ್ರಗಳೊಂದಿಗೆ ಪೈಪೋಟಿ
ಬೆಂಗಳೂರು:
ಕನ್ನಡದ ಹೊಂಬಾಳೆ ಫಿಲಂಸ್​ ಬ್ಯಾನರ್​ನಿಂದ ಹೊರಬಂದ ವಿಷ್ಣುವಿನ ಅವತಾರವಾದ ನರಸಿಂಹನ ಕಥೆಯನ್ನು ಆಧರಿಸಿದ ಅನಿಮೇಟೆಡ್ ಸಿನಿಮಾ 'ಮಹಾವತಾರ ನರಸಿಂಹ' ಚಿತ್ರ ಇದೀಗ ಆಸ್ಕರ್​ ರೇಸ್​ನಲ್ಲಿ ಸ್ಪರ್ಧೆಗಿಳಿದಿದೆ. ಅಶ್ವಿನ್ ಕುಮಾರ್ ನಿರ್ದೇಶನದ ಈ ಚಿತ್ರವು ಬ್ಲಾಕ್​ಬಸ್ಟರ್ ಹಿಟ್ ಆಗುವುದರ ಜತೆಗೆ ಭಾರತೀಯ ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿತು. ಇದರೊಟ್ಟಿಗೆ ಹೊಸ ದಾಖಲೆಯನ್ನು ನಿರ್ಮಿಸಿತು.
ಅನಿಮೇಷನ್​ ಮೂಲಕ ನರಸಿಂಹನ ಉಗ್ರ ನೋಟವನ್ನು ಬೆಳ್ಳಿಪರದೆಯ ಮೇಲೆ ತೋರಿಸಿದ ರೀತಿಗೆ ಪ್ರೇಕ್ಷಕರು ಮಂತ್ರಮುಗ್ಧರಾದರು. ಇದಕ್ಕೆ ಹಲವಾರು ಸಿನಿ ವರದಿಗಳು ಮತ್ತು ವಿಮರ್ಶೆಗಳೇ ಸಾಕ್ಷಿ. ಈ ಸಿನಿಮಾ ಆರಂಭದಲ್ಲಿ ಅಷ್ಟಾಗಿ ಪ್ರಚಾರ ಪಡೆಯಲಿಲ್ಲ. ಆದರೆ, ತೆರೆಕಂಡ ಕೆಲವೇ ದಿನಗಳಲ್ಲಿ ದೇಶವ್ಯಾಪಿ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಮತ್ತು ಚಿತ್ರಪ್ರೇಮಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್​ನತ್ತ ಕರೆತರುವ ಕೆಲಸ ಮಾಡಿತು.
ಕೇವಲ 30 ಕೋಟಿ ರೂ.ಗಳಲ್ಲಿ ನಿರ್ಮಿಸಲಾದ ಈ ಚಿತ್ರವು ತನ್ನ ದೀರ್ಘಾವಧಿಯಲ್ಲಿ 300 ಕೋಟಿ ರೂ.ಗಿಂತ ಹೆಚ್ಚು ಸಂಗ್ರಹಿಸಿದೆ ಮತ್ತು ಭಾರತೀಯ ಚಿತ್ರೋದ್ಯಮದಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ಈಗ ಇದೇ ಸಿನಿಮಾ 98ನೇ ಆಸ್ಕರ್‌ಗೆ ಆಯ್ಕೆಯಾಗಿರುವ ಬಗ್ಗೆ ಹಲವರು ಸಂತಸ ವ್ಯಕ್ತಪಡಿಸಿದ್ದಾರೆ. ಚಿತ್ರವು ಅನಿಮೇಷನ್ ವಿಭಾಗದಲ್ಲಿ ಆಸ್ಕರ್‌ಗೆ ಪ್ರವೇಶ ಪಡೆದಿದೆ. ಈ ವಿಭಾಗದಲ್ಲಿ 'ಮಹಾವತಾರ ನರಸಿಂಹ' ಹಲವು ಹಾಲಿವುಡ್​ ಚಿತ್ರಗಳೊಂದಿಗೆ ಪೈಪೋಟಿ ಕೊಡುತ್ತಿದೆ.
'ಪಾಪ್ ಡೆಮನ್ ಹಂಟರ್ಸ್', 'ಇನ್ಫಿನಿಟಿ ಕ್ಯಾಸಲ್' ಮತ್ತು 'ಡೆಮನ್ ಸ್ಲೇಯರ್: ಕಿಮೆಟ್ಸು ನೋ ಯೈಬಾ' ಸೇರಿ ಒಂದಷ್ಟು ಹಾಲಿವುಡ್ ಸಿನಿಮಾಗಳು ಈ ಅನಿಮೇಷನ್ ವಿಭಾಗದಲ್ಲಿ ರೇಸ್​ಗಿಳಿದಿವೆ. ಆಸ್ಕರ್​ನಲ್ಲಿ ಪ್ರಶಸ್ತಿ ಲಭಿಸುತ್ತದೆಯೋ ಇಲ್ಲವೋ ಸದ್ಯಕ್ಕೆ ತಿಳಿಯದು. ಆದರೆ, ಆಸ್ಕರ್‌ಗೆ ಮಹಾವತಾರ ನರಸಿಂಹ ಆಯ್ಕೆಯಾಗಿರುವುದು ಮಾತ್ರ ಭಾರತೀಯ ಚಿತ್ರೋದ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಲ್ಲದೆ, ಭವಿಷ್ಯದಲ್ಲಿ ಬರಲಿರುವ ಹಲವು ರೀತಿಯ ಅನಿಮೇಟೆಡ್ ಚಿತ್ರಗಳಿಗೆ ಇದು ಅಡಿಪಾಯ ಹಾಕಿಕೊಟ್ಟಂತಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net