ಇದರಿಂದ ಏನು ಸಾಧಿಸ್ತೀರಾ...? ಸಿಜೆಪಿ ಪ್ರತಿಭಟನೆಗೆ ಬಿಜೆಪಿ ಸಂಸದೆ ಹೇಮಾ ಮಾಲಿನಿ ಪ್ರತಿಕ್ರಿಯೆ! | Hema Malini

 Hema Malini | ಬಿಜೆಪಿ ಸಂಸದೆ ಹೇಮಾ ಮಾಲಿನಿ
Hema Malini | ಬಿಜೆಪಿ ಸಂಸದೆ ಹೇಮಾ ಮಾಲಿನಿ
Published on
ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವೇ ಪ್ರತಿಭಟನೆಯ ಬಿಸಿ ಬೀದಿಗೆ ತಟ್ಟಿದ್ದು, ಮಧ್ಯ ದೆಹಲಿಯಲ್ಲಿ ವಾತಾವರಣ ಉದ್ವಿಗ್ನಗೊಂಡಿದೆ. ಕಾಕ್ರೋಚ್ ಜನತಾ ಪಾರ್ಟಿ ಹಮ್ಮಿಕೊಂಡಿದ್ದ ಸಂಸದ್ ಚಲೋ ಪಾದಯಾತ್ರೆಯ ವೇಳೆ ಪ್ರತಿಭಟನಾಕಾರರು ಹಾಗೂ ಭದ್ರತಾ ಸಿಬ್ಬಂದಿಯ ನಡುವೆ ತೀವ್ರ ಘರ್ಷಣೆ ಸಂಭವಿಸಿದೆ. ಈ ಪ್ರತಿಭಟನೆಗಳ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದೆ ಹಾಗೂ ನಟಿ ಹೇಮಾ ಮಾಲಿನಿ (Hema Malini), ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವುದರಿಂದ ಪ್ರತಿಭಟನಾಕಾರರಿಗೆ ಏನು ಸಿಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಇಂತಹ ವಿಷಯಗಳನ್ನು ಪ್ರತಿಭಟನೆಗಳ ಮೂಲಕ ಬಗೆಹರಿಸುವ ಬದಲು ಮಾತುಕತೆಯ ಮೂಲಕ ಇತ್ಯರ್ಥಪಡಿಸಿಕೊಳ್ಳಬೇಕು ಎಂದ ಅವರು, ಈ ವಿಷಯದ ಬಗ್ಗೆ ನಾನು ಹೆಚ್ಚು ಮಾತನಾಡಲು ಬಯಸುವುದಿಲ್ಲ, ಇದಕ್ಕೆ ಸಂಬಂಧಿಸಿದಂತೆ ಏನು ನಿಲುವು ತಳೆಯಬೇಕೋ ಅದನ್ನು ನಮ್ಮ ಸರ್ಕಾರ ಸರಿಯಾಗಿಯೇ ತಗೆದುಕೊಳ್ಳುತ್ತದೆ ಎಂದು ಸಂಸದೆ ಹೇಮಾ ಮಾಲಿನಿ ಹೇಳಿದರು.
ಇದೇ ವೇಳೆ ಅಯೋಧ್ಯೆ ರಾಮಮಂದಿರದ ಕಳವು ಪ್ರಕರಣದ ಕುರಿತು ಮಾತನಾಡಿದ ಬಿಜೆಪಿ ಸಂಸದೆ, ತಪ್ಪು ಮಾಡಿದವರು ಯಾರೇ ಆಗಿದ್ದರೂ ಅವರಿಗೆ ಶಿಕ್ಷೆಯಾಗಲಿದೆ ಎಂದರು. ಈಗಾಗಲೇ ಹಲವರನ್ನು ಜೈಲಿಗೆ ಕಳುಹಿಸಲಾಗಿದ್ದು, ನ್ಯಾಯ ಸಿಗುವಂತೆ ಸರ್ಕಾರ ನೋಡಿಕೊಳ್ಳಲಿದೆ ಎಂದರು.

ಸಿಜೆಪಿಯ ಸಂಸದ್ ಚಲೋ ಪ್ರತಿಭಟನೆಯ ಹಿನ್ನೆಲೆ

ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರಬೇಕು ಹಾಗೂ ನೀಟ್ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಸಿಜೆಪಿ ಪಕ್ಷವು ಜಂತರ್ ಮಂತರ್‌ನಿಂದ ಸಂಸತ್ತಿನವರೆಗೆ ಪಾದಯಾತ್ರೆಗೆ ಕರೆ ನೀಡಿತ್ತು. ಮುಂಗಾರು ಅಧಿವೇಶನದ ಮೊದಲ ದಿನದಂದೇ ಈ ಪ್ರತಿಭಟನೆ ನಡೆದಿದ್ದರಿಂದ, ಮಧ್ಯ ದೆಹಲಿ ಹಾಗೂ ಸಂಸತ್ತಿನ ಸಂಕೀರ್ಣದ ಸುತ್ತಲೂ ಭದ್ರತೆಯನ್ನು ತೀವ್ರಗೊಳಿಸಲಾಗಿತ್ತು. ಪ್ರತಿಭಟನಾಕಾರರು ಬ್ಯಾರಿಕೇಡ್ ಮುರಿದು ಮುನ್ನುಗ್ಗಲು ಯತ್ನಿಸಿದಾಗ ಪೊಲೀಸರು ಮತ್ತು ಹೋರಾಟಗಾರರ ನಡುವೆ ಪದೇ ಪದೇ ಘರ್ಷಣೆ ಉಂಟಾಯಿತು. ಸ್ಥಿತಿಯನ್ನು ಹತೋಟಿಗೆ ತರಲು ಭದ್ರತಾ ಪಡೆಗಳು ಅಶ್ರುವಾಯ ಪ್ರಯೋಗಿಸಿದವು, ಲಾಠಿಚಾರ್ಜ್ ನಡೆಸಿದವು ಹಾಗೂ ಗಲಭೆ ನಿಗ್ರಹ ವಾಹನಗಳನ್ನು ಸ್ಥಳದಲ್ಲಿ ನಿಯೋಜಿಸಿದವು.

ಅಭಿಜೀತ್ ದೀಪ್ಕೆ ಪೊಲೀಸ್ ವಶಕ್ಕೆ!

ಸಿಜೆಪಿ ಪಕ್ಷವು ಆಯೋಜಿಸಿದ್ದ ಬೃಹತ್ ಸಂಸದ್ ಚಲೋ ಪ್ರತಿಭಟನಾ ಮೆರವಣಿಗೆಯ ವೇಳೆ ರಾಜಧಾನಿ ದೆಹಲಿಯಲ್ಲಿ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಪಕ್ಷದ ಅಧಿಕೃತ ವಕ್ತಾರ ಸೌರವ್ ದಾಸ್ ತಿಳಿಸಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ಮನಬಂದಂತೆ ಹಲ್ಲೆ ನಡೆಸುತ್ತಿದ್ದಾರೆ. ಆದಾಗ್ಯೂ, ರಸ್ತೆಗಿಳಿದು ಹೋರಾಡುತ್ತಿರುವ ವಿದ್ಯಾರ್ಥಿಗಳ ಪರವಾಗಿ ಧ್ವನಿಯೆತ್ತಲು ಮತ್ತು ಬೆಂಬಲವಾಗಿ ನಿಲ್ಲುವಂತೆ ದಾಸ್ ಸಂಸದರಿಗೆ ಮನವಿ ಮಾಡಿದ್ದಾರೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net