ಎಸ್​ಬಿಐ ಪ್ರೊಬೇಷನರಿ ಅಧಿಕಾರಿಯ ಒಂದು ತಿಂಗಳ ಸಂಬಳ ಕೇಳಿ ಹೌಹಾರಿದ ನೆಟ್ಟಿಗರು: ನಿಜಕ್ಕೂ ನಂಬಲಸಾಧ್ಯ​! SBI Probationary Officer

ಶ್ವೇತಾ ಉಪ್ಪಳ್​
ಶ್ವೇತಾ ಉಪ್ಪಳ್​
Published on

ಪ್ರಮುಖ ಮುಖ್ಯಾಂಶಗಳು

  • ಯುವತಿಯೊಬ್ಬಳು ತನ್ನ ಒಂದು ತಿಂಗಳ ಸಂಬಳದ ಕುರಿತು ಹಂಚಿಕೊಂಡಿರುವ ವಿಡಿಯೋ ವೈರಲ್​
  • ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ ಪ್ರೊಬೇಷನರಿ ಆಫೀಸರ್​ ಆಗಿ ಕೆಲಸ ಮಾಡುತ್ತಿರುವ ಯುವತಿ
  • ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ಬೆನ್ನಲ್ಲೇ ಡಿಲೀಟ್​ ಮಾಡಿದ ಯುವತಿ
ನವದೆಹಲಿ: ದೇಶದ ಪ್ರತಿಷ್ಠಿತ ಬ್ಯಾಂಕ್​ಗಳಲ್ಲಿ ಒಂದಾದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ ಪ್ರೊಬೇಷನರಿ ಆಫೀಸರ್​ ( SBI Probationary Officer ) ಆಗಿ ಕೆಲಸ ಮಾಡುತ್ತಿರುವ ಯುವತಿಯೊಬ್ಬಳು ತನ್ನ ಒಂದು ತಿಂಗಳ ಸಂಬಳದ ಕುರಿತು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದೆ. ಆದರೆ, ವಿಡಿಯೋ ವೈರಲ್ ಆದ ಬೆನ್ನಲ್ಲೇ ಯುವತಿ ಅದನ್ನು ಡಿಲೀಟ್​ ಮಾಡಿದ್ದಾಳೆ.
ವಿಡಿಯೋ ಹರಿಬಿಟ್ಟ ಯುವತಿಯನ್ನು ಶ್ವೇತಾ ಉಪ್ಪಳ್​ ಎಂದು ಗುರುತಿಸಲಾಗಿದೆ @bankerstrick ಹೆಸರಿನ ಇನ್​ಸ್ಟಾಗ್ರಾಂ ಖಾತೆಯಿಂದ ವಿಡಿಯೋ ಹರಿಬಿಟ್ಟು, ಇದೀಗ ಡಿಲೀಟ್​ ಮಾಡಿದ್ದಾಳೆ. ಆದರೆ, ಅಷ್ಟರಲ್ಲಾಗಲೇ ವಿಡಿಯೋ ವೈರಲ್​ ಆಗಿ, ಅನೇಕ ನ್ಯೂಸ್​ ವೆಬ್​ಸೈಟ್​ಗಳು ಶ್ವೇತಾ ಉಪ್ಪಳ್​ ಕುರಿತು ಸುದ್ದಿಗಳನ್ನು ಪ್ರಕಟಿಸಿವೆ.​ ತನ್ನ 2.5 ವರ್ಷದ ಸೇವೆಯಲ್ಲಿ 5 ಇಂಕ್ರಿಮೆಂಟ್​ ಸೇರಿ, 95 ಸಾವಿರ ರೂಪಾಯಿ ಸಂಬಳವನ್ನು ಇನ್​ ಹ್ಯಾಂಡ್​ ಪಡೆಯುತ್ತಿರುವುದಾಗಿ ಶ್ವೇತಾ ಅವರು ಹೇಳಿಕೊಂಡಿದ್ದಾರೆ.
2022ರಲ್ಲಿ ಐಪಿಪಿಎಸ್​ ಪ್ರೊಬೇಷನರಿ ಆಫೀಸರ್​ (ಪಿಒ) ಪರೀಕ್ಷೆಯನ್ನು ಪೂರ್ಣಗೊಳಿಸಿ, ಎಸ್​ಬಿಐನಲ್ಲಿ ಹುದ್ದೆ ಪಡೆದಿದ್ದಾಗಿ ಹೇಳಿಕೊಂಡಿದ್ದಾರೆ. ಕಳೆದ ಎರಡೂವರೆ ವರ್ಷಗಳಿಂದ ಎಸ್​ಬಿಐ ಪಿಒ ಆಗಿ ಕೆಲಸ ಮಾಡುತ್ತಿದ್ದಾರೆ. ತಿಂಗಳಿಗೆ 95 ಸಾವಿರ ರೂಪಾಯಿ ಸಂಬಳ ಪಡೆಯುವ ಶ್ವೇತಾ, ಹೆಚ್ಚುವರಿಯಾಗಿ ಅನೇಕ ಲಾಭಗಳನ್ನು ಸಹ ಪಡೆಯುತ್ತಿದ್ದಾರೆ. ಅದರಲ್ಲಿ ಬಾಡಿಗೆ ಭತ್ಯೆ 18 ಸಾವಿರ ರೂ. ಹಾಗೂ ಇತರೆ ಭತ್ಯೆಯಾಗಿ 11 ಸಾವಿರ ರೂ. ಪಡೆಯುತ್ತಿದ್ದಾರೆ. ಒಟ್ಟಾರೆಯಾಗಿ ಒಂದು ತಿಂಗಳಿಗೆ 1 ಲಕ್ಷಕ್ಕೂ ಅಧಿಕ ಸಂಬಳವನ್ನು ಪಡೆಯುತ್ತಿದ್ದಾರೆ.
JAIIB (ಜೂನಿಯರ್ ಅಸೋಸಿಯೇಟ್ ಆಫ್ ದಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕರ್ಸ್) ಮತ್ತು CAIIB (ಸರ್ಟಿಫೈಡ್ ಅಸೋಸಿಯೇಟ್ ಆಫ್ ದಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕರ್ಸ್) ನಂತಹ ವೃತ್ತಿಪರ ಬ್ಯಾಂಕಿಂಗ್ ಪ್ರಮಾಣ ಪತ್ರಗಳ ಮಹತ್ವವನ್ನು ಇದೇ ಸಂದರ್ಭದಲ್ಲಿ ಶ್ವೇತಾ ಅವರು ಎತ್ತಿ ತೋರಿಸಿದ್ದಾರೆ. ಈ ಪರೀಕ್ಷೆಗಳನ್ನು ಪಾಸ್​ ಮಾಡಿದವರಿಗೆ ಅನೇಕ ಬ್ಯಾಂಕುಗಳು ಹೆಚ್ಚುವರಿ ಸಂಬಳ ಭತ್ಯೆಗಳನ್ನು ಆಫರ್​ ಮಾಡುತ್ತವೆ ಎಂದು ಶ್ವೇತಾ ಹೇಳಿದ್ದಾರೆ.
ನಿಮ್ಮ ವೃತ್ತಿಯಲ್ಲಿನ ನಿಮ್ಮ ಬೆಳವಣಿಗೆ ಮತ್ತು ಅದಕ್ಕೆ ಪೂರಕವಾದ ಪ್ರಮಾಣ ಪತ್ರಗಳಿದ್ದಲ್ಲಿ ಎಸ್​ಬಿಐ ಪಿಒಗೆ ನೀಡುವ ಆರಂಭಿಕ ಆಫರ್​ಗಳಿಂದ ಹೆಚ್ಚು ಗಳಿಕೆ ಮಾಡಬಹುದು ಎಂಬುದನ್ನು ಶ್ವೇತಾ ಅವರು ಹಂಚಿಕೊಂಡಿರುವ ವಿಡಿಯೋ ಎತ್ತಿ ತೋರಿಸುತ್ತದೆ. ವಿಡಿಯೋ ವೈರಲ್​ ಆಗುತ್ತಿದ್ದಂತೆ ನಾನಾ ಚರ್ಚೆಯಾಗುತ್ತಿದೆ. ಕೆಲವರು ಶ್ವೇತಾ ಹೇಳಿದ ಮಾತನ್ನು ಒಪ್ಪಲು ತಯಾರಿಲ್ಲ. ಆದರೆ, ಕೆಲವರು ಶ್ವೇತಾರ ಮಾತನ್ನು ಸ್ಫೂರ್ತಿಯಾಗಿ ತೆಗೆದುಕೊಂಡಿದ್ದಾರೆ.
ಹೀಗೆ ಮುಂದುವರಿಯಿರಿ ಶ್ವೇತಾ, ನೀವು ಇತರರಿಗೆ ಸ್ಫೂರ್ತಿ ನೀಡಲು ಕಠಿಣ ಪರಿಶ್ರಮ ಹಾಕಿದ್ದೀರಿ ಮತ್ತು ನೀವು ಒಳ್ಳೆಯದನ್ನೇ ಮಾಡುತ್ತಿದ್ದೀರಿ ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ. ತಿಂಗಳಿಗೆ 95 ಸಾವಿರ ರೂ. ಇನ್​ಹ್ಯಾಂಡ್​ ಬರುತ್ತಿದೆಯಾ? ಅದು ಕೂಡ ಎಸ್‌ಬಿಐ ಪಿಒಗೆ? ನನ್ನ ಸ್ನೇಹಿತ ಕೂಡ ಪಿಒ. ಆದರೆ, ಆತ ಅಷ್ಟು ಹಣ ಬರುವುದಿಲ್ಲ ಎಂದು ಹೇಳುತ್ತಿರುತ್ತಾನೆ. ಪಿಒಗೂ ವಿಭಿನ್ನ ವೇತನ ಮಾಪಕಗಳಿವೆಯೇ? ಎಂದು ನೆಟ್ಟಿಗರೊಬ್ಬರು ವಿಚಾರಣೆ ಮಾಡಿದ್ದಾರೆ.

ಪ್ರೊಬೇಷನರಿ ಅಧಿಕಾರಿ ಕೆಲಸ ಏನು?

ಬ್ಯಾಂಕಿನಲ್ಲಿ ಪ್ರೊಬೇಷನರಿ ಅಧಿಕಾರಿ (PO) ಓರ್ವ ಆರಂಭಿಕ ಹಂತದ ವ್ಯವಸ್ಥಾಪಕರಾಗಿದ್ದು, ಅವರು ಗ್ರಾಹಕ ಸೇವೆ, ದೈನಂದಿನ ಕಾರ್ಯಾಚರಣೆ ಮತ್ತು ಖಾತೆಗಳನ್ನು ನಿರ್ವಹಿಸುವುದು, ನಗದು, ಸಾಲಗಳು ಮತ್ತು ವಹಿವಾಟುಗಳು ಸೇರಿದಂತೆ ಬ್ಯಾಂಕಿಂಗ್‌ನ ಎಲ್ಲಾ ಅಂಶಗಳನ್ನು ಕಲಿಯುತ್ತಾರೆ. ಅವರು ಸಿಬ್ಬಂದಿಯನ್ನು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ನಿಯಮಗಳು ಮತ್ತು ನಿಬಂಧನೆಗಳ ಸರಿಯಾಗಿ ಅನುಸರಿಸಲಾಗುತ್ತಿದೆಯೇ ಎಂಬುದನ್ನು ನೋಡಿಕೊಳ್ಳುತ್ತಾರೆ. ವೈಯಕ್ತಿಕ ಬ್ಯಾಂಕಿಂಗ್‌ನಿಂದ ಗ್ರಾಮೀಣ ಬ್ಯಾಂಕಿಂಗ್, ಕ್ರೆಡಿಟ್, ಫಾರೆಕ್ಸ್, ಖಜಾನೆವರೆಗೆ ಎಸ್‌ಬಿಐನ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವ ಅವಕಾಶಗಳು ಇದರಲ್ಲಿ ಸೇರಿವೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net