ಪಶ್ಚಿಮ ಬಂಗಾಳ ಚುನಾವಣೆ: ಮತದಾನದ ವೇಳೆ ಮುರ್ಷಿದಾಬಾದ್‌ನಲ್ಲಿ ಬಾಂಬ್ ದಾಳಿ... ಭದ್ರತೆ ಹೆಚ್ಚಿಸಿದ ಚುನಾವಣಾ ಆಯೋಗ | West Bengal Elections

West Bengal Elections | ಮತದಾನದ ವೇಳೆ ಮುರ್ಷಿದಾಬಾದ್‌ನಲ್ಲಿ ಬಾಂಬ್ ದಾಳಿ.
West Bengal Elections | ಮತದಾನದ ವೇಳೆ ಮುರ್ಷಿದಾಬಾದ್‌ನಲ್ಲಿ ಬಾಂಬ್ ದಾಳಿ.
Published on
West Bengal Elections: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಗುರುವಾರ ಮೊದಲ ಹಂತದ ಮತದಾನ ನಡೆಯುತ್ತಿರುವಂತೆಯೇ ಭೀಕರ ಹಿಂಸಾಚಾರ ವರದಿಯಾಗಿದೆ. ಜಿಲ್ಲೆಯ ನೌಡಾದಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳು ಕಚ್ಚಾ ಬಾಂಬ್ ಎಸೆದ ಪರಿಣಾಮ ಹಲವಾರು ಜನರು ಗಾಯಗೊಂಡಿದ್ದು, ಸ್ಥಳೀಯರಲ್ಲಿ ತೀವ್ರ ಭೀತಿ ಉಂಟಾಗಿದೆ.
ಈ ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದು, ಅವರು ನಮ್ಮನ್ನು ನಿಂದಿಸುತ್ತಿದ್ದರು, ನಾವು ಯಾರಿಗೂ ತೊಂದರೆ ಕೊಟ್ಟಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.

ಭದ್ರತೆ ಹೆಚ್ಚಳ ಮತ್ತು ಚುನಾವಣಾ ಆಯೋಗದ ಕ್ರಮ

ಹಿಂಸಾಚಾರದಿಂದ ಹಾನಿಗೊಳಗಾಗಿರುವ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಘಟನೆಯ ಬಳಿಕ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದ್ದು, ಪ್ರಸ್ತುತ ಈ ಜಿಲ್ಲೆಯು ಕೇಂದ್ರ ಚುನಾವಣಾ ಆಯೋಗದ (ECI) ಕಟ್ಟುನಿಟ್ಟಿನ ಕಣ್ಗಾವಲಿನಲ್ಲಿದೆ. ಘಟನೆಯ ಬಗ್ಗೆ ವರದಿ ಕೇಳಲಾಗಿದ್ದು, ತಪ್ಪಿತಸ್ಥರ ವಿರುದ್ಧ ಬಲವಾದ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಅಗರ್ವಾಲ್ ತಿಳಿಸಿದ್ದಾರೆ.

ಟಿಎಂಸಿ Vs ಹುಮಾಯೂನ್ ಕಬೀರ್

ಹಿಂಸಾಚಾರದ ಬೆನ್ನಲ್ಲೇ ಮುರ್ಷಿದಾಬಾದ್‌ನಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರು ಮತ್ತು ಆಮ್ ಜನತಾ ಉನ್ನಯನ್ ಪಕ್ಷದ (ಎಯುಜೆಪಿ) ಸಂಸ್ಥಾಪಕ ಹುಮಾಯೂನ್ ಕಬೀರ್ ನಡುವೆ ಘರ್ಷಣೆ ನಡೆದಿದೆ. ತೃಣಮೂಲ ಪಕ್ಷದಿಂದ ಉಚ್ಚಾಟಿತರಾಗಿರುವ ಕಬೀರ್ ಬಾಂಬ್ ದಾಳಿ ನಡೆದ ಸ್ಥಳಕ್ಕೆ ಭೇಟಿ ನೀಡಲು ಪ್ರಯತ್ನಿಸಿದಾಗ, ಟಿಎಂಸಿ ಕಾರ್ಯಕರ್ತರು ಅವರನ್ನು ತಡೆದಿದ್ದಾರೆ. ಇದು ಪರಿಸ್ಥಿತಿ ಮತ್ತಷ್ಟು ಬಿಗುಡಾಯಿಸಲು ಕಾರಣವಾಯಿತು.
ಈ ಘರ್ಷಣೆಯ ವಿಡಿಯೋವನ್ನು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಘಟನೆ ಕುರಿತು ಮಾತನಾಡಿದ ಕಬೀರ್, ನೌಡಾ, ರೆಜಿನಗರ ಮತ್ತು ಮುರ್ಷಿದಾಬಾದ್‌ನ 22 ಸ್ಥಾನಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದ್ದರೂ, ನೌಡಾದ 9 ಮತ್ತು 10ನೇ ಸಂಖ್ಯೆಯ ಬೂತ್‌ಗಳಲ್ಲಿ ರಾತ್ರಿಯಿಡೀ ಅಹಿತಕರ ಘಟನೆಗಳು ನಡೆದಿವೆ. ಕಿಡಿಗೇಡಿಗಳು ಸ್ಥಳೀಯ ಪೊಲೀಸರ ಬ್ಯಾಗ್‌ಗಳನ್ನು ಕಸಿದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇವಿಎಂ ದೋಷ ಮತ್ತು ಮತದಾರರಿಗೆ ಬೆದರಿಕೆ

ಮತದಾನದ ಪ್ರಕ್ರಿಯೆಯಲ್ಲೂ ಹಲವು ಅಡೆತಡೆಗಳು ಕಂಡುಬಂದಿದ್ದು, ಬೆಲ್ದಂಗಾ ವಿಧಾನಸಭಾ ಕ್ಷೇತ್ರದ ಬೂತ್ ಸಂಖ್ಯೆ 156 ಮತ್ತು ಸಂಶೇರ್‌ಗಂಜ್ ವಿಧಾನಸಭಾ ಕ್ಷೇತ್ರದ ಬೂತ್ ಸಂಖ್ಯೆ 212 ರಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ (ಇವಿಎಂ) ದೋಷ ಕಂಡುಬಂದ ಹಿನ್ನೆಲೆಯಲ್ಲಿ ಮತದಾನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.
ಡೊಮ್ಕಲ್‌ನಲ್ಲಿ ಮತದಾರರನ್ನು ಬೆದರಿಸುತ್ತಿರುವ ಆರೋಪಗಳು ಕೇಳಿಬಂದಿದ್ದು, ಮತದಾರರು ಮತಗಟ್ಟೆಗೆ ಬರದಂತೆ ತಡೆಯಲಾಗುತ್ತಿದೆ ಎಂದು ವರದಿಯಾಗಿದೆ. ಆರಂಭದಲ್ಲಿ ಸ್ಥಳೀಯ ಪೊಲೀಸರು ಅಥವಾ ಕೇಂದ್ರ ಪಡೆಗಳು ಕಾಣಿಸಲಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಇದಾದ ಬಳಿಕ ಕೇಂದ್ರ ಪಡೆಗಳೊಂದಿಗೆ ದೊಡ್ಡ ಪೊಲೀಸ್ ತುಕಡಿ ಡೊಮ್ಕಲ್‌ನ ರಾಯ್‌ಪುರ ಗ್ರಾಮಕ್ಕೆ ಆಗಮಿಸಿ, ಬಿಗಿ ಭದ್ರತೆಯಲ್ಲಿ ಮತದಾರರನ್ನು ಮತಗಟ್ಟೆಗಳಿಗೆ ಕರೆತಂದ ನಂತರ ಪರಿಸ್ಥಿತಿ ಸುಧಾರಿಸಿತು(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net