ದೀದಿಗೆ ಮಗ್ಗುಲ ಮುಳ್ಳಾದರಾ ಓವೈಸಿ..? ಈ 10 ಕ್ಷೇತ್ರಗಳಲ್ಲಿ ಅಡಗಿದೆಯಂತೆ ಮಮತಾ ಅಧಿಕಾರದ ಭವಿಷ್ಯ..ಸಮೀಕ್ಷೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ! | Matrize Survey

Matrize Survey | ಈ 10 ಕ್ಷೇತ್ರಗಳಲ್ಲಿ ಅಡಗಿದೆಯಂತೆ ಮಮತಾ ಅಧಿಕಾರದ ಭವಿಷ್ಯ..ಸಮೀಕ್ಷೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ!
Matrize Survey | ಈ 10 ಕ್ಷೇತ್ರಗಳಲ್ಲಿ ಅಡಗಿದೆಯಂತೆ ಮಮತಾ ಅಧಿಕಾರದ ಭವಿಷ್ಯ..ಸಮೀಕ್ಷೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ!
Published on
Matrize Survey: ಮುಂಬರುವ ವಿಧಾನಸಭಾ ಚುನಾವಣೆಗೆ ಪಶ್ಚಿಮ ಬಂಗಾಳದ ರಾಜಕೀಯ ಅಖಾಡ ಸಜ್ಜಾಗುತ್ತಿದ್ದು, ಇದು ಹಣಾಹಣಿ ಇಡೀ ದೇಶದ ಗಮನ ಸೆಳೆಯುತ್ತಿದೆ. ರಾಜ್ಯದ ರಾಜಕೀಯ ನಾಡಿಮಿಡಿತವನ್ನು ಅರಿಯಲು ಮ್ಯಾಟ್ರಿಜ್ ನಡೆಸಿದ ಇತ್ತೀಚಿನ ಓಪಿನಿಯನ್​ ಪೋಲ್​ ಭವಿಷ್ಯ ಎಲ್ಲರನ್ನು ಅಚ್ಚರಿಗೆ ದೂಡಿದೆ.
ಈ ಬಾರಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಡುವೆ ಹಿಂದೆಂದೂ ಕಾಣದಂತಹ ನಿಕಟ ಸ್ಪರ್ಧೆ ಏರ್ಪಡಲಿದೆ ಎಂದು ಮ್ಯಾಟ್ರಿಜ್ ಭವಿಷ್ಯ ನುಡಿದಿದ್ದು, ಬಂಗಾಳದ ಗದ್ದುಗೆಯನ್ನು ಉಳಿಸಿಕೊಳ್ಳಲು ಟಿಎಂಸಿ ಹರಸಾಹಸ ಪಡುತ್ತಿದ್ದರೆ, ಮಮತಾ ಬ್ಯಾನರ್ಜಿಯವರ 15 ವರ್ಷಗಳ ಆಡಳಿತಕ್ಕೆ ಅಂತ್ಯ ಹಾಡಿ ಅಧಿಕಾರ ಹಿಡಿಯಲು ಬಿಜೆಪಿ ಭರ್ಜರಿ ತಯಾರಿ ನಡೆಸುತ್ತಿದೆ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ.

ಯಾರಿಗೆ ಎಷ್ಟು ಸ್ಥಾನ..?

ಸಮೀಕ್ಷೆಯ ಅಂಕಿಅಂಶಗಳ ಪ್ರಕಾರ, 294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಆಡಳಿತಾರೂಢ ಟಿಎಂಸಿ 140 ರಿಂದ 160 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಇದಕ್ಕೆ ತೀವ್ರ ಪೈಪೋಟಿ ನೀಡಲಿರುವ ಬಿಜೆಪಿ 130 ರಿಂದ 150 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದ್ದು, ಉಭಯ ಪಕ್ಷಗಳ ನಡುವೆ ಕೇವಲ ಬೆರಳೆಣಿಕೆಯಷ್ಟು ಸ್ಥಾನಗಳ ಅಂತರವಿರಲಿದೆ. ಇತರ ಸಣ್ಣ ಪಕ್ಷಗಳು 8 ರಿಂದ 16 ಸ್ಥಾನಗಳನ್ನು ಗೆಲ್ಲಬಹುದು ಎಂದು ತಿಳಿದುಬಂದಿದೆ. ಮತ ಹಂಚಿಕೆಯಲ್ಲೂ ತೀವ್ರ ಪೈಪೋಟಿ ಕಂಡುಬಂದಿದ್ದು, ಟಿಎಂಸಿ ಶೇ. 43 ರಷ್ಟು ಮತಗಳನ್ನು ಪಡೆಯುವ ಸಾಧ್ಯತೆಯಿದ್ದರೆ, ಬಿಜೆಪಿ ಶೇ. 41 ರಷ್ಟು ಮತಗಳನ್ನು ತನ್ನದಾಗಿಸಿಕೊಳ್ಳಬಹುದು. ಉಳಿದ ಶೇ. 16 ರಷ್ಟು ಮತಗಳು ಇತರ ಪಕ್ಷಗಳ ಪಾಲಾಗಲಿವೆ.

ಪ್ರಾದೇಶಿಕ ಚಿತ್ರಣ

ಪ್ರಾದೇಶಿಕವಾಗಿ ಬಂಗಾಳದ ಚಿತ್ರಣ ಭಿನ್ನವಾಗಿದ್ದು, ಉತ್ತರ ಬಂಗಾಳದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಮುಂದುವರಿಸುವ ಲಕ್ಷಣಗಳಿವೆ. ಇಲ್ಲಿ ಬಿಜೆಪಿ 30-33 ಸ್ಥಾನಗಳನ್ನು ಗೆಲ್ಲುವ ಮುನ್ಸೂಚನೆ ಇದ್ದರೆ, ಟಿಎಂಸಿ 17-20 ಸ್ಥಾನಗಳಿಗೆ ಸೀಮಿತವಾಗಬಹುದು. ಆದರೆ, ದಕ್ಷಿಣ ಬಂಗಾಳವು ಟಿಎಂಸಿಯ ಭದ್ರಕೋಟೆಯಾಗಿಯೇ ಉಳಿಯುವ ಸಾಧ್ಯತೆಯಿದ್ದು, ಅಲ್ಲಿ ಆಡಳಿತ ಪಕ್ಷ 95-100 ಸ್ಥಾನಗಳನ್ನು ಮತ್ತು ಬಿಜೆಪಿ 75-80 ಸ್ಥಾನಗಳನ್ನು ಪಡೆಯಬಹುದು. ಬರ್ಧಮಾನ್-ಬಿರ್ಭುಮ್ ಭಾಗದಲ್ಲಿ ಟಿಎಂಸಿ 37-40 ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಹಿಡಿತ ಸಾಧಿಸಬಹುದು, ಇಲ್ಲಿ ಬಿಜೆಪಿ 17-20 ಸ್ಥಾನಗಳಿಗೆ ತೃಪ್ತಿಪಡಬೇಕಾಗಬಹುದು.

ಹಿಂದಿನ ಚುನಾವಣೆಗಳ ಫಲಿತಾಂಶದ ವರದಿ

ರಾಜಕೀಯ ಸಮೀಕರಣಗಳ ಕುರಿತು ಹೇಳುವುದಾದರೆ, 2011 ರಿಂದ ಅಧಿಕಾರದಲ್ಲಿರುವ ಟಿಎಂಸಿಯನ್ನು ಎದುರಿಸಲು ಬಿಜೆಪಿ ದಶಕಗಳಿಂದ ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತಾ ಬಂದಿದ್ದು, 2016ರಲ್ಲಿ ಕೇವಲ 3 ಸ್ಥಾನ ಗೆದ್ದಿದ್ದ ಬಿಜೆಪಿ, 2021ರಲ್ಲಿ 77 ಸ್ಥಾನಗಳೊಂದಿಗೆ ಪ್ರಬಲ ವಿರೋಧ ಪಕ್ಷವಾಗಿ ಹೊರಹೊಮ್ಮಿತ್ತು. ಈ ಬಾರಿ ಎಐಎಂಐಎಂ (AIMIM) ಪಕ್ಷವು ಮಾಜಿ ಟಿಎಂಸಿ ನಾಯಕ ಹುಮಾಯೂನ್ ಕಬೀರ್​ರ ಎಜೆಯುಪಿ (AJUP) ಜೊತೆ ಮೈತ್ರಿ ಮಾಡಿಕೊಂಡಿದ್ದು, ಇದು ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಟಿಎಂಸಿಯ ಮತ ಬ್ಯಾಂಕ್ ಮೇಲೆ ಪ್ರಭಾವ ಬೀರಿದರು ಅಚ್ಚರಿ ಪಡಬೇಕಿಲ್ಲ.
ಪಶ್ಚಿಮ ಬಂಗಾಳದಲ್ಲಿ ಈ ಮಹತ್ವದ ಚುನಾವಣೆ ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಉತ್ತರ ಬಂಗಾಳ ಮತ್ತು ಪಶ್ಚಿಮ ಜಿಲ್ಲೆಗಳು ಸೇರಿದಂತೆ ಹಲವು ಭಾಗಗಳಲ್ಲಿ ಮತದಾನ ನಡೆದರೆ, ಎರಡನೇ ಹಂತದಲ್ಲಿ ಕೋಲ್ಕತ್ತಾ, ನಾಡಿಯಾ ಮತ್ತು 24 ಪರಗಣಗಳಂತಹ ಪ್ರಮುಖ ಜಿಲ್ಲೆಗಳಲ್ಲಿ ಚುನಾವಣೆ ನಡೆಯಲಿದೆ. ಮೇ 4 ರಂದು ಹೊರಬೀಳಲಿರುವ ಫಲಿತಾಂಶವು ಬಂಗಾಳದ ಮುಂದಿನ ಐದು ವರ್ಷಗಳ ಭವಿಷ್ಯವನ್ನು ನಿರ್ಧರಿಸಲಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net