ನೀವು ಒಂಟಿಯಲ್ಲ, ನಾವಿದ್ದೇವೆ!...ವಿದ್ಯಾರ್ಥಿಗಳಿಗೆ ರಾಹುಲ್ ಅಭಯ; ಗಾಂಧಿ ಸ್ಮೃತಿಗೆ ಇಂಡಿಯಾ ನಾಯಕರ ಜಂಟಿ ಜಾಥಾ | Rahul Gandhi

 Rahul Gandhi | ನೀವು ಒಂಟಿಯಲ್ಲ, ನಾವಿದ್ದೇವೆ!...ವಿದ್ಯಾರ್ಥಿಗಳಿಗೆ ರಾಹುಲ್ ಅಭಯ; ಗಾಂಧಿ ಸ್ಮೃತಿಗೆ ಇಂಡಿಯಾ ನಾಯಕರ ಜಂಟಿ ಜಾಥಾ
Rahul Gandhi | ನೀವು ಒಂಟಿಯಲ್ಲ, ನಾವಿದ್ದೇವೆ!...ವಿದ್ಯಾರ್ಥಿಗಳಿಗೆ ರಾಹುಲ್ ಅಭಯ; ಗಾಂಧಿ ಸ್ಮೃತಿಗೆ ಇಂಡಿಯಾ ನಾಯಕರ ಜಂಟಿ ಜಾಥಾ
Published on
ನವದೆಹಲಿ: ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳನ್ನು ಖಂಡಿಸಿ ದೆಹಲಿಯ ಹೃದಯಭಾಗದಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದ್ದು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಸೇರಿದಂತೆ ಇಂಡಿಯಾ ಮೈತ್ರಿಕೂಟದ ಸಂಸದರು, ನೀಟ್​ ಪೇಪರ್ ಲೀಕ್‌ನಿಂದಾಗಿ ಪ್ರಾಣ ಕಳೆದುಕೊಂಡ ಹಾಗೂ ಪ್ರತಿಭಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳ ಸ್ಮರಣಾರ್ಥ ತೀಸ್ ಜನವರಿ ಮಾರ್ಗದಲ್ಲಿರುವ ಗಾಂಧಿ ಸ್ಮೃತಿಯತ್ತ ತೆರಳುತ್ತಿದ್ದಾರೆ.
ಗುರುವಾರ ಮಧ್ಯಾಹ್ನ ವಿರೋಧ ಪಕ್ಷದ ಸಂಸದರು ಸಭೆಗಾಗಿ ರಾಹುಲ್ ಗಾಂಧಿ ಅವರ ನಿವಾಸಕ್ಕೆ ಆಗಮಿಸಿದ ನಂತರ, ಅವರ ಮನೆಯ ಹೊರಭಾಗದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಸಭೆ ಮುಕ್ತಾಯಗೊಂಡ ತಕ್ಷಣವೇ, ತಮ್ಮ ನಿವಾಸದಿಂದ ಒಂದು ಕಿಲೋಮೀಟರ್‌ಗಿಂತಲೂ ಕಡಿಮೆ ದೂರದಲ್ಲಿರುವ ಗಾಂಧಿ ಸ್ಮೃತಿಗೆ ಭೇಟಿ ನೀಡುವ ಯೋಜನೆಯನ್ನು ಕಾಂಗ್ರೆಸ್ ನಾಯಕ ಪ್ರಕಟಿಸಿದರು.

ನಾವು ವಿದ್ಯಾರ್ಥಿಗಳ ಪರವಾಗಿದ್ದೇವೆ ಎಂದ ರಾಹುಲ್ ಗಾಂಧಿ

ಈ ಕುರಿತಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ರಾಹುಲ್ ಗಾಂಧಿ, ಪ್ರಸ್ತುತ, ಇಂಡಿಯಾ ಮೈತ್ರಿಕೂಟದ ಸಂಸದರು ಮತ್ತು ನಾಯಕರು ಶಾಂತಿಯುತವಾಗಿ ತೀಸ್ ಜನವರಿ ಮಾರ್ಗದಲ್ಲಿರುವ ಗಾಂಧಿ ಸ್ಮೃತಿಯತ್ತ ಸಾಗುತ್ತಿದ್ದಾರೆ. ನೀಟ್​ ಪೇಪರ್ ಲೀಕ್ ನಂತರ ಆತ್ಮಹತ್ಯೆಗೆ ಶರಣಾದ ನಮ್ಮ ಮಕ್ಕಳನ್ನು ಸ್ಮರಿಸಲು ನಾವು ಹೊರಟಿದ್ದೇವೆ. ಶಾಂತಿಯುತವಾಗಿ ನ್ಯಾಯ ಮತ್ತು ಹೊಣೆಗಾರಿಕೆಯನ್ನು ಆಗ್ರಹಿಸಿದಾಗ ಹಲ್ಲೆಗೊಳಗಾಗಿ, ಇಂದು ಗಾಯಗೊಂಡು ಬಿದ್ದಿರುವ ವಿದ್ಯಾರ್ಥಿಗಳ ಪರವಾಗಿ ನಿಲ್ಲಲು ನಾವು ಹೋಗುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಭಾರತದ ವಿದ್ಯಾರ್ಥಿಗಳು ಒಂಟಿಯಲ್ಲ ಮತ್ತು ಇಡೀ ವಿರೋಧ ಪಕ್ಷವು ಅವರ ಜೊತೆಗೆ ಹಾಗೂ ಅವರ ಬೇಡಿಕೆಗಳ ಪರವಾಗಿ ನಿಂತಿದೆ ಎಂದು ಗಾಂಧಿ ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಕಾಂಗ್ರೆಸ್ ಪಕ್ಷವು ನಿರಂತರವಾಗಿ ಮಂಡಿಸುತ್ತಾ ಬಂದಿದೆ. ಎರಡು ದಿನಗಳ ಹಿಂದೆಯಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದ ಹೊರಭಾಗದಲ್ಲಿ ನಡೆದ ಬೃಹತ್ ಪ್ರತಿಭಟನೆಯ ವೇಳೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದರು.

ಈ ವಿದ್ಯಾರ್ಥಿಗಳೇನು ಭಯೋತ್ಪಾದಕರೇ...? ಪ್ರಿಯಾಂಕಾ ಗಾಂಧಿ ಪ್ರಶ್ನೆ

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ, ನೀಟ್​ ಪೇಪರ್ ಲೀಕ್ ಪ್ರಕರಣ ಹಾಗೂ ದೆಹಲಿಯಲ್ಲಿ ಧರಣಿ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಕಾರ್ಯಾಚರಣೆಯ ಹೊಣೆಗಾರಿಕೆಯನ್ನು ಈವರೆಗೆ ಏಕೆ ನಿಗದಿಪಡಿಸಿಲ್ಲ, ಲಾಠಿ ಪ್ರಹಾರ ನಡೆಸಿದ್ದೇಕೆ..? ಎಂದು ನೀವು ಅಮಿತ್ ಶಾ ಅವರನ್ನು ಕೇಳಿದಿರಾ? ಮಕ್ಕಳು ಆಸ್ಪತ್ರೆಯಲ್ಲಿ ಏಕೆ ಇದ್ದಾರೆ? ಈ ವಿದ್ಯಾರ್ಥಿಗಳೇನು ಭಯೋತ್ಪಾದಕರೇ..? ಎಂದು ಅವರು ಖಾರವಾಗಿ ಪ್ರಶ್ನಿಸಿದರು. ಸಂಸತ್ತಿನ ಕಲಾಪಗಳ ಅಡಚಣೆಗೆ ಕೇಂದ್ರ ಸರ್ಕಾರವೇ ಹೊಣೆ ಎಂದು ಆರೋಪಿಸಿದ ಕಾಂಗ್ರೇಸ್ ನಾಯಕಿ, ಸಂಬಂಧಪಟ್ಟ ಸಚಿವರು ಯಾವಾಗ ರಾಜೀನಾಮೆ ನೀಡುತ್ತಾರೆ ಮತ್ತು ಈ ವಿವಾದದ ಜವಾಬ್ದಾರಿಯನ್ನು ಯಾರು ವಹಿಸಿಕೊಳ್ಳುತ್ತಾರೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net