ಮಾಲ್ಡಾ ಘಟನೆ ಕೋರ್ಟ್ ಅಧಿಕಾರಕ್ಕೆ ನೀಡಿದ ಸವಾಲ್!... ದೇಶದ ಯಾವುದೇ ಮೂಲೆಯಿಂದಲಾದರೂ ಕೇಂದ್ರ ಪಡೆ ತನ್ನಿ ಎಂದು ಸುಪ್ರೀಂ ಖಡಕ್ ಆದೇಶ! | Malda Violence

Malda Violence | ಎಸ್​ಐಆರ್​ ಪ್ರಕ್ರಿಯೆ ಹಳಿತಪ್ಪಿಸಲು ಸ್ಕೆಚ್..? ನ್ಯಾಯಾಂಗ ಅಧಿಕಾರಿಗಳನ್ನೇ ಒತ್ತೆಯಾಳಾಗಿಸಿದ ದುರುಳರು!..ಕೇಂದ್ರ ಪಡೆ ನಿಯೋಜನೆಗೆ ಸುಪ್ರೀಂ ಆರ್ಡರ್ | Malda Violence
Malda Violence | ಎಸ್​ಐಆರ್​ ಪ್ರಕ್ರಿಯೆ ಹಳಿತಪ್ಪಿಸಲು ಸ್ಕೆಚ್..? ನ್ಯಾಯಾಂಗ ಅಧಿಕಾರಿಗಳನ್ನೇ ಒತ್ತೆಯಾಳಾಗಿಸಿದ ದುರುಳರು!..ಕೇಂದ್ರ ಪಡೆ ನಿಯೋಜನೆಗೆ ಸುಪ್ರೀಂ ಆರ್ಡರ್ | Malda Violence
Published on
ನವದೆಹಲಿ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿನ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿದ್ದ ಮೂವರು ಮಹಿಳೆಯರು ಸೇರಿದಂತೆ ಏಳು ನ್ಯಾಯಾಂಗ ಅಧಿಕಾರಿಗಳನ್ನು ಒತ್ತೆಯಾಳಾಗಿ ಇರಿಸಿಕೊಂಡ ಘಟನೆಯನ್ನು(Malda Violence) ಸುಪ್ರೀಂ ಕೋರ್ಟ್ ಅತ್ಯಂತ ಕಠಿಣ ಪದಗಳಲ್ಲಿ ಖಂಡಿಸಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು, ಬಂಗಾಳವನ್ನು ಅತ್ಯಂತ ಧ್ರುವೀಕರಣಗೊಂಡ ರಾಜ್ಯ ಎಂದು ಟೀಕಿಸಿದ್ದು, ಈ ಘಟನೆಯು ನ್ಯಾಯಾಂಗದ ಆಡಳಿತಕ್ಕೆ ಅಡ್ಡಿಪಡಿಸುವ ಉದ್ದೇಶಪೂರ್ವಕ ಮತ್ತು ಲಜ್ಜೆಗೆಟ್ಟ ಪ್ರಯತ್ನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಅಧಿಕಾರಿಗಳಿಗೆ ನೋಟಿಸ್​

ಮಾಲ್ಡಾದ ಕಲಿಯಾಚಕ್ II ಬ್ಲಾಕ್ ಕಚೇರಿಯಲ್ಲಿ ಬುಧವಾರ ಸಂಜೆ 4 ಗಂಟೆಯಿಂದ ನಡೆದ ಈ ಹೈಡ್ರಾಮಾದಲ್ಲಿ, ಅಧಿಕಾರಿಗಳಿಗೆ ಕನಿಷ್ಠ ಪಕ್ಷ ಆಹಾರ ಅಥವಾ ನೀರು ಇಲ್ಲದಂತೆ ಸುಮಾರು ಒಂಬತ್ತು ಗಂಟೆಗಳ ಕಾಲ ದಿಗ್ಬಂಧನ ವಿಧಿಸಲಾಗಿತ್ತು. ಪೂರ್ವ ಸೂಚನೆ ನೀಡಿದ್ದರೂ ಸಹ ರಾಜ್ಯದ ಅಧಿಕಾರಿಗಳು ತ್ವರಿತವಾಗಿ ಕಾರ್ಯನಿರ್ವಹಿಸಲು ವಿಫಲರಾಗಿದ್ದಕ್ಕೆ ನ್ಯಾಯಾಲಯ ತೀವ್ರ ನಿರಾಶೆ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು, ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ನಡವಳಿಕೆಯು ಅತ್ಯಂತ ಶೋಚನೀಯವಾಗಿದೆ ಎಂದು ಹೇಳಿದ ಪೀಠವು, ನಿಷ್ಕ್ರಿಯತೆಗಾಗಿ ಎಲ್ಲರಿಗೂ ಶೋಕಾಸ್ ನೋಟಿಸ್‌ಗಳನ್ನು ಜಾರಿಗೊಳಿಸಿದೆ.

ಇದು ಆಕಸ್ಮಿಕವಲ್ಲ..

ಇದು ಆಕಸ್ಮಿಕ ಪ್ರತಿಭಟನೆಯಲ್ಲ, ಬದಲಿಗೆ ಚುನಾವಣಾ ಪ್ರಕ್ರಿಯೆಯನ್ನು ಹಳಿತಪ್ಪಿಸಲು ಮತ್ತು ನ್ಯಾಯಾಂಗ ಅಧಿಕಾರಿಗಳ ನೈತಿಕತೆಯನ್ನು ಕುಗ್ಗಿಸಲು ನಡೆಸಿದ ಪೂರ್ವ ಯೋಜಿತ ಸಂಚಾಗಿದೆ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್​, ಯಾವುದೇ ವ್ಯಕ್ತಿ ಅಥವಾ ಗುಂಪು ಕಾನೂನನ್ನು ಕೈಗೆ ತೆಗೆದುಕೊಳ್ಳಲು ಅಥವಾ ನ್ಯಾಯಾಂಗ ಅಧಿಕಾರಿಗಳ ಮನಸ್ಸಿನಲ್ಲಿ ಮಾನಸಿಕ ಭಯ ಸೃಷ್ಟಿಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆ. ಈ ನಡವಳಿಕೆಯು ನ್ಯಾಯಾಲಯದ ಕ್ರಿಮಿನಲ್ ತಿರಸ್ಕಾರಕ್ಕೆ ಸಮಾನವಾಗಿದೆ ಎಂದು ಸಿಜೆಐ ಕಿಡಿಕಾರಿದ್ದಾರೆ.

ಕೇಂದ್ರ ಪಡೆಗಳ ನಿಯೋಜನೆಗೆ ಆರ್ಡರ್​

ಅಧಿಕಾರಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ದೇಶದ ಎಲ್ಲಿಂದಲಾದರೂ ತಕ್ಷಣವೇ ಕೇಂದ್ರ ಪಡೆಗಳನ್ನು ನಿಯೋಜಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಬಂಗಾಳದಾದ್ಯಂತ ಎಸ್‌ಐಆರ್ ಪ್ರಕ್ರಿಯೆ ನಡೆಯುವ ಎಲ್ಲಾ ಸ್ಥಳಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಸಾರ್ವಜನಿಕ ಪ್ರವೇಶವನ್ನು ಸೀಮಿತಗೊಳಿಸಬೇಕು ಎಂದು ಆದೇಶಿಸಲಾಗಿದೆ. ನ್ಯಾಯಾಂಗ ಅಧಿಕಾರಿಗಳು, ಅವರ ಕುಟುಂಬ ಸದಸ್ಯರು ಮತ್ತು ಆಸ್ತಿಯ ರಕ್ಷಣೆಯನ್ನು ಖಾತರಿಪಡಿಸುವುದು ನ್ಯಾಯಾಲಯದ ಜವಾಬ್ದಾರಿಯಾಗಿದೆ ಎಂದು ಪುನರುಚ್ಚರಿಸಿದ ಪೀಠವು, ಮುಂದಿನ ವಿಚಾರಣೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಾಸ್ತವ ಉಪಸ್ಥಿತಿ ಮತ್ತು ವರದಿಯನ್ನು ಕಡ್ಡಾಯಗೊಳಿಸಿದೆ.

ಘಟನೆಯ ಹಿನ್ನಲೆ

ಮಾಲ್ಡಾ ಜಿಲ್ಲೆಯ ಕಲಿಯಾಚಕ್ II ಬ್ಲಾಕ್ ಅಭಿವೃದ್ಧಿ ಕಚೇರಿ ಹೊರಗೆ ಬುಧವಾರ ಈ ಗದ್ದಲ ಆರಂಭವಾಗಿದ್ದು, ಎಸ್​ಐಆರ್​​ ಪ್ರಕ್ರಿಯೆಯ ಭಾಗವಾಗಿ ಮತದಾರರ ಪಟ್ಟಿಯಿಂದ ಲಕ್ಷಾಂತರ ಹೆಸರುಗಳನ್ನು ಅಳಿಸಿಹಾಕುತ್ತಿರುವುದನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ಭುಗಿಲೆದ್ದಿತು. ಪ್ರತಿಭಟನಾಕಾರರು ಮೊದಲು ನ್ಯಾಯಾಂಗ ಅಧಿಕಾರಿಗಳೊಂದಿಗೆ ಚರ್ಚಿಸಲು ಸಭೆ ಕೋರಿದ್ದರು. 
ಅಧಿಕಾರಿಗಳು ಇದಕ್ಕೆ ಒಪ್ಪದಿದ್ದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಸಂಜೆ 4 ಗಂಟೆ ಸುಮಾರಿಗೆ ಬಿಡಿಒ ಕಚೇರಿಗೆ ಮುತ್ತಿಗೆ ಹಾಕಿದ ಗುಂಪು, ಅಧಿಕಾರಿಗಳನ್ನು ಹೊರಬರದಂತೆ ತಡೆದು ಒತ್ತೆಯಾಳಾಗಿ ಇರಿಸಿಕೊಂಡಿತು ಎನ್ನಲಾಗಿದೆ. ಅಂತಿಮವಾಗಿ ಬುಧವಾರ ತಡರಾತ್ರಿ 1 ಗಂಟೆ ಸುಮಾರಿಗೆ ಪೊಲೀಸ್ ತಂಡವೊಂದು ಭಾರಿ ಹರಸಾಹಸ ಪಟ್ಟು ಅಧಿಕಾರಿಗಳನ್ನು ಸುರಕ್ಷಿತವಾಗಿ ರಕ್ಷಿಸಿದೆ.
ಅಧಿಕಾರಿಗಳ ರಕ್ಷಣೆಯ ನಂತರವೂ ಹಿಂಸಾಚಾರ ನಿಲ್ಲದೆ ಹತ್ತಿರದ ಪ್ರದೇಶಗಳಿಗೂ ಹರಡಿದ್ದು, ಪ್ರತಿಭಟನಾಕಾರರು ಬಿದಿರು ಮತ್ತು ಪೀಠೋಪಕರಣಗಳನ್ನು ಬಳಸಿ ರಾಷ್ಟ್ರೀಯ ಹೆದ್ದಾರಿ 12 (NH 12) ಅನ್ನು ತಡೆದರು ಮತ್ತು ರಸ್ತೆಯ ಮಧ್ಯೆ ಟೈರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ದೀರ್ಘಕಾಲದವರೆಗೆ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿತ್ತು ಎಂದು ತಿಳಿದುಬಂದಿದೆ.

ಎಸ್‌ಐಆರ್ ವಿವಾದ

ಬಂಗಾಳ ಚುನಾವಣೆಗೆ ಮುನ್ನ ಚುನಾವಣಾ ಆಯೋಗ ನಡೆಸುತ್ತಿರುವ ಈ ಎಸ್‌ಐಆರ್ ಪ್ರಕ್ರಿಯೆ ಭಾರಿ ಚರ್ಚೆಗೆ ನಾಂದಿ ಹಾಡಿದೆ. ಅಂತಿಮ ಮತದಾರರ ಪಟ್ಟಿಯಲ್ಲಿ ಬರೋಬ್ಬರಿ 63 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಅಳಿಸಿಹಾಕಲಾಗಿದೆ. ಇನ್ನೂ 60 ಲಕ್ಷಕ್ಕೂ ಹೆಚ್ಚು ಮತದಾರರನ್ನು ತೀರ್ಪಿನ ಅಡಿಯಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದ್ದು, ಘೇರಾವ್ ಮಾಡಲ್ಪಟ್ಟ ನ್ಯಾಯಾಂಗ ಅಧಿಕಾರಿಗಳು ಈ 60 ಲಕ್ಷ ಮತದಾರರ ಭವಿಷ್ಯವನ್ನು ನಿರ್ಧರಿಸುವ ಜವಾಬ್ದಾರಿ ಹೊತ್ತಿದ್ದರು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net